ಗುರುವಾರ , ಫೆಬ್ರವರಿ 25, 2021
31 °C

ಮಟ್ಟಿ ಅಖಾಡದಿಂದ ‘ರಾಷ್ಟ್ರೀಯ’ ಚಿನ್ನದವರೆಗೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಟ್ಟಿ ಅಖಾಡದಿಂದ ‘ರಾಷ್ಟ್ರೀಯ’ ಚಿನ್ನದವರೆಗೆ...

ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಶಾಲಾ ವಿದ್ಯಾರ್ಥಿಗಳ ಕುಸ್ತಿ ಚಾಂಪಿಯನ್‌ಷಿಪ್‌ನ ಸಂದರ್ಭ. ವ್ಯವಸ್ಥಿತವಾಗಿ ಕುಸ್ತಿ ಅಭ್ಯಾಸ ಮಾಡಿದ ಕ್ರೀಡಾ ನಿಲಯದ ಹುಡುಗನ ವಿರುದ್ಧ ಸೆಣಸಾಡಿದ ದಾವಣಗೆರೆಯ ಬಾಲಕನೊಬ್ಬ, 46 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ. ಮಣ್ಣಿನ ಅಖಾಡದಲ್ಲಿ ಆಡಿ ಕಲಿತ ಆತನ ಪಾಲಿಗೆ ಇದು ದೊಡ್ಡ ಸಾಧನೆಯೇ ಆಗಿತ್ತು.ಹೀಗಾಗಿ ನಿರಾಸೆ ಆಗಲಿಲ್ಲ. ಆದರೆ ಆತನ ಭವಿಷ್ಯ ಬೆಳಗುವ ಜ್ಯೋತಿಯೊಂದು ಅಲ್ಲಿ ಬೆಳಗಿತ್ತು. ಅಂದು ಸ್ಪರ್ಧೆಯ ನಂತರ ವಿಶ್ರಾಂತಿ ಪಡೆಯುತ್ತಿದ್ದ ಆತನ ಬಳಿಗೆ ಬಂದ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಧಾರವಾಡ ಕೇಂದ್ರದ ಕುಸ್ತಿ ಕೋಚ್‌ ಬಿ.ಶಂಕರಪ್ಪ ‘ಕುಸ್ತಿ ಕಲಿಯಲು ಧಾರವಾಡಕ್ಕೆ ಬರುತ್ತೀಯಾ’ ಎಂದು ಕೇಳಿದರು. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಜತೆಗೆ ಕುಸ್ತಿಯ ಮೇಲೆ ಅಪಾರ ಪ್ರೀತಿ ಇದ್ದ ಆತ ಇಲ್ಲ ಎನ್ನಲಿಲ್ಲ. 

 

ಕರ್ನಾಟಕದ ಭರವಸೆಯ ಕುಸ್ತಿಪಟುವೊಬ್ಬನ ಯಶಸ್ಸಿನ ಹಾದಿ ಅಂದು ತೆರೆದುಕೊಂಡಿತು. ಆ ಹುಡುಗನ ಹೆಸರು ನಾಗರಾಜ ಮಾರಪ್ಪ. ದಾವಣಗೆರೆ ಇಂದಿರಾ ನಗರ ನಿವಾಸಿ, ಸಾಯ್‌ ಧಾರವಾಡ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಜೆಎಸ್ಎಸ್ ಕಾಲೇಜು ವಿದ್ಯಾರ್ಥಿ. 21 ವರ್ಷ ಹರೆಯದ ನಾಗರಾಜ ಐದನೇ ತರಗತಿಯಿಂದಲೇ ಕುಸ್ತಿ ಅಭ್ಯಾಸ ಮಾಡುತ್ತಿದ್ದರೂ ಅದಕ್ಕೆ ವ್ಯವಸ್ಥಿತ ರೂಪ ಸಿಕ್ಕಿದ್ದು ಏಳನೇ ತರಗತಿಯ ನಂತರ. ಅಲ್ಲಿಂದ ಇಲ್ಲಿಯ ವರೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪದಕಗಳನ್ನು ಬೇಟೆಯಾಡು ತ್ತಿರುವ ಇವರು ಜನವರಿ ಮೊದಲ ವಾರದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕುಸ್ತಿ ಪಂದ್ಯಾವಳಿಯಲ್ಲಿ ಚಿನ್ನಕ್ಕೆ ಮುತ್ತು ನೀಡಿ ಧಾರವಾಡ ಭಾಗದಲ್ಲಿ ಸಂಚಲನ ಸೃಷ್ಟಿಸಿದರು. ಯಾಕೆಂದರೆ ಇದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕುಸ್ತಿಯಲ್ಲಿ 40 ವರ್ಷಗಳ ನಂತರ ಸಿಕ್ಕಿದ ಚಿನ್ನವಾಗಿತ್ತು!ತಂದೆ ತಾಯಿ ಇಬ್ಬರೂ ಕೂಲಿ ಮಾಡಿ ಸಂಸಾರವನ್ನು ಸಾಗಿಸುತ್ತಿದ್ದ ಕಾಲ ಅದು. ಈ ದಂಪತಿಗೆ ಏಳು ಮಂದಿ ಮಕ್ಕಳು. ಕೊನೆಯವ ನಾಗರಾಜ. ಇಬ್ಬರು ಅಣ್ಣಂದಿರು. ಉಳಿದವರೆಲ್ಲ ಅಕ್ಕಂದಿರು. ನಾಗರಾಜ ಎರಡನೇ ತರಗತಿಯಲ್ಲಿ ಓದುತ್ತಿದ್ದಾಗ ತಂದೆ ತೀರಿಕೊಂಡರು. ನಂತರ ಸಂಸಾರದ ಭಾರ ಅಣ್ಣಂದಿರ ಹೆಗಲ ಮೇಲೆ ಬಿತ್ತು. ಅವರು ಕುಸ್ತಿ ಅಭ್ಯಾಸ ಮಾಡುತ್ತಿದ್ದರು.ಇದನ್ನು ಕಂಡು ತಾನೂ ಅಖಾಡಕ್ಕೆ ಇಳಿದ ನಾಗರಾಜ ಶಾಲೆಯಲ್ಲಿ ಮಿಂಚಿದರು. ಆರನೇ ತರಗತಿಯ ಲ್ಲಿದ್ದಾಗ ಜಿಲ್ಲಾ ಮಟ್ಟದ ಚಾಂಪಿಯನ್‌ ಆಗಿ ರಾಜ್ಯಮಟ್ಟದ ಸ್ಪರ್ಧೆಗೆ ಧಾರವಾಡಕ್ಕೆ ಬಂದಿದ್ದರು. ಶಂಕರಪ್ಪ ಅವರ ಕರೆಯನ್ನು ಗೌರವಿಸಿ ಧಾರವಾಡಕ್ಕೆ ಬಂದು ಶಾಲೆ ಸೇರಿಕೊಂಡ ನಾಗರಾಜ ಮೊದಲ ವರ್ಷದಲ್ಲೇ ಭರವಸೆಯನ್ನು ಉಳಿಸಿದರು.ದೆಹಲಿಯಲ್ಲಿ ನಡೆದ ಶಾಲಾ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು. ಹೈಸ್ಕೂಲ್‌ ಮುಗಿಸುವಷ್ಟರಲ್ಲಿ ಶಾಲಾ ಚಾಂಪಿ ಯನ್‌ ಷಿಪ್‌ಗಳಲ್ಲಿ ಒಂದು ಬೆಳ್ಳಿ ಸೇರಿದಂತೆ ನಾಲ್ಕು ಪದಕ ಕೊರಳಿಗೇರಿಸಿಕೊಂಡರು. ಮುಕ್ತ ವಿಭಾಗ ಗಳಲ್ಲೂ ಪ್ರಶಸ್ತಿ ಗೆದ್ದುಕೊಂಡರು. ಪಟಿಯಾಲದಲ್ಲಿ ನಡೆದ ಸಬ್‌ ಜೂನಿಯರ್‌ ವಿಭಾಗದ ರಾಷ್ಟ್ರೀಯ ತಂಡದ ಆಯ್ಕೆ ಶಿಬಿರದಲ್ಲೂ ಪಾಲ್ಗೊಂಡರು.ಮೊದಲ ಚಿನ್ನದ ಸಂಭ್ರಮ:

ನಾಗರಾಜ ಅವರ ಪಿಯುಸಿ ಪದಾರ್ಪಣೆ ಶುಭಕರವಾಗಿರಲಿಲ್ಲ. ಧಾರವಾಡದ ಅಂಜುಮನ್‌ ಕಾಲೇಜಿನಲ್ಲಿ ಸೀಟು ಸಿಕ್ಕಿದರೂ ಅಭ್ಯಾಸದ ಸಂದರ್ಭ ದಲ್ಲಿ ಮೊಣಕಾಲಿನಲ್ಲಿ ನೋವು ಕಾಣಿಸಿಕೊಂಡ ಕಾರಣ ಮೂರು ತಿಂಗಳು ವಿಶ್ರಾಂತಿ ಪಡೆಯಬೇಕಾಯಿತು.ನಂತರ ಅಭ್ಯಾಸ ಮುಂದುವರಿಸಿ ಪಿಯು ಮಂಡಳಿ ಮತ್ತು ಮುಕ್ತ ಚಾಂಪಿಯನ್‌ಷಿಪ್‌ಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ನಾಗರಾಜ ಮೊದಲ ಬಾರಿ ಚಿನ್ನದ ಸವಿ ಉಂಡದ್ದು ಮೈಸೂರಿ ನಲ್ಲಿ. 2010ರ ದಸರಾ ಕುಸ್ತಿ ಸ್ಪರ್ಧೆಯ 60 ಕೆಜಿ ವಿಭಾಗದಲ್ಲಿ ಗದೆ ಗೆದ್ದ ಅವರು ಸತತ ಮೂರು ವರ್ಷ  ‘ದಸರಾ ಕುಮಾರ’ನಾಗಿ ಮೆರೆದರು. ಈ ಹ್ಯಾಟ್ರಿಕ್‌ ಸಾಧನೆ ಅವರ ಆತ್ಮವಿಶ್ವಾಸ ಹೆಚ್ಚಿಸಿತು.ಕಳೆದ ವರ್ಷ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದ ಅಂತರ ವಿವಿ ಚಾಂಪಿಯನ್‌ಷಿಪ್‌ನಲ್ಲಿ ಐದನೇ ಸ್ಥಾನ ಗಳಿಸಿದ ನಾಗರಾಜ್‌ ಈ ಬಾರಿ ಪಟ್ಟು ಬಿಡಲಿಲ್ಲ. ಮೀರತ್‌ನ ಚೌಧರಿ ಚರಣ್‌ ಸಿಂಗ್‌ ವಿವಿ ಆವರಣದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಅದೇ ವಿವಿಯ ಕೃಷ್ಣ ಕುಮಾರ್‌ ಅವರನ್ನು ಸೋಲಿಸಿ ಚಿನ್ನ ಕೊರಳಿಗೇರಿಸಿಕೊಂಡರು.ಲೆಗ್‌ ಅಟ್ಯಾಕ್‌ ಪರಿಣಿತ

ಆಕ್ರಮಣಕಾರಿ ಕುಸ್ತಿಪಟು ಆಗಿರುವ ನಾಗರಾಜ ಲೆಗ್ ಅಟ್ಯಾಕ್‌ ತಂತ್ರವನ್ನು ಹೆಚ್ಚಾಗಿ ಬಳಸುತ್ತಾರೆ. ‘ಸಣ್ಣವನಿದ್ದಾಗ ನೋಡಿದ ಕುಸ್ತಿಯಲ್ಲೆಲ್ಲ ಈ ತಂತ್ರವೇ ನನ್ನನ್ನು ಹೆಚ್ಚು ಸೆಳೆಯುತ್ತಿತ್ತು. ಅದನ್ನೇ ನನ್ನ ಮುಖ್ಯ ಅಸ್ತ್ರವಾಗಿ ಬಳಸಿಕೊಂಡೆ’ ಎಂದು ಹೇಳುವ ಈ 21ರ ಹರೆಯದ ಅಪ್ಪಟ ಗ್ರಾಮೀಣ ಪ್ರತಿಭೆಗೆ ಅಂತರರಾಷ್ಟ್ರೀಯ ಕುಸ್ತಿಪಟುಗಳಾದ ಸುಶೀಲ್‌ ಕುಮಾರ್‌ ಮತ್ತು ಯೋಗೇಶ್ವರ ದತ್‌ ಅವರಂತೆ ಆಗುವ, ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಆಸೆ.‘ಬಿ. ಶಂಕರಪ್ಪ ಅವರ ಕಣ್ಣಿಗೆ ಬೀಳದೇ ಇದ್ದರೆ ಇಲ್ಲಿಯ ವರೆಗೆ ಬರುವ ಅವಕಾಶ ಸಿಗುತ್ತಿರಲಿಲ್ಲ. ಧಾರವಾಡದಕ್ಕೆ ಬಂದ ನಂತರ ಸಚಿನ್‌ ಪಡತರೆ, ಸಂಜು ಮಾನೆ, ಅನಿಲ್‌ ಘೋರ್ಪಡೆ, ಪಾಂಡುರಂಗ ಮತ್ತಿತರರು ಸಹೋದರನಂತೆ ಕಂಡು ಸಲಹಿದರು. ಈಗ ವಿವಿ ಕುಸ್ತಿ ಕೋಚ್‌ ಬಿ.ಎಂ.ಪಾಟೀಲ, ಸಾಯ್‌ ಕೋಚ್‌ಗಳಾದ ಶಂಕರಪ್ಪ ಮತ್ತು ಕೆ.ಶ್ರೀನಿವಾಸಗೌಡ  ಅವರ ಮಾರ್ಗದರ್ಶನದಲ್ಲಿ ಮುಂದುವರಿಯುತ್ತಿದ್ದೇನೆ.ಮಣ್ಣಿನಲ್ಲಿ ಆಡಿ ಬೆಳೆದ ನನಗೆ ನೆಲದ ಸೊಗಡಿನ ಈ ಆಟ ಸಾಕಷ್ಟು ತೃಪ್ತಿ ನೀಡಿದೆ’ ಎನ್ನುತ್ತಾರೆ ನಾಗರಾಜ್‌. ಜೆಎಸ್ಎಸ್‌ ಕಾಲೇಜಿನ ದ್ವಿತೀಯ ಬಿಎ ವಿದ್ಯಾರ್ಥಿಯಾಗಿರುವ ಅವರು ಈಗ ಅಂತರ ರಾಷ್ಟ್ರೀಯ ವಿವಿ ಚಾಂಪಿಯನ್‌ಷಿಪ್‌ಗೆ ಹೋಗುವ ಸಿದ್ಧತೆಯಲ್ಲಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.