ಗುರುವಾರ , ಮಾರ್ಚ್ 4, 2021
29 °C
ಗಡಿನಾಡ ಸಾಂಸ್ಕೃತಿಕ ಉತ್ಸವದಲ್ಲಿ ಮುರುಘಾ ಶರಣರ ಅಭಿಮತ

ಮಠಗಳು ನೊಂದವರಿಗೆ ಸಾಂತ್ವನ ಕೇಂದ್ರಗಳಾಗಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಠಗಳು ನೊಂದವರಿಗೆ ಸಾಂತ್ವನ ಕೇಂದ್ರಗಳಾಗಬೇಕು

ಮೊಳಕಾಲ್ಮುರು: ಆಧುನಿಕತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಮಾಜದಲ್ಲಿ ನಿತ್ಯ ಅಮಾಯಕರು ನೋವಿಗೆ ತುತ್ತಾಗುವುದು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಮಠಗಳು ನೆರವಿಗಾಗಿ ಸಾಂತ್ವನ ಕೇಂದ್ರಗಳಾಗಿ ಹೊರಹೊಮ್ಮಬೇಕಿದೆ ಎಂದು ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಶರಣರು ಹೇಳಿದರು.ತಾಲ್ಲೂಕಿನ ಸಿದ್ದಯ್ಯನಕೋಟೆ ವಿಜಯ ಮಹಾಂತೇಶ್ವರ ಮಠದಲ್ಲಿ ನಡೆಯುತ್ತಿರುವ ಗಡಿನಾಡ ಸಾಂಸ್ಕೃತಿಕ ಉತ್ಸವದಲ್ಲಿ ಶನಿವಾರ ಅವರು ಬಸವತತ್ವ ಸಮಾವೇಶದಲ್ಲಿ ಮಾತನಾಡಿದರು.ಅನೇಕ ಮಠಗಳು ಇಂದು ಮೌಢ್ಯ ಬಿತ್ತುವ ಕೇಂದ್ರಗಳಾಗಿವೆ. ಮಠಗಳು ಬೌದ್ಧಿಕವಾಗಿ ಮಾತ್ರ ಬೆಳೆದರೆ ಸಾಲದು, ಆಂತರಿಕವಾಗಿ ಅಭಿವೃದ್ಧಿ ಹೊಂದಬೇಕು. ಎಲ್ಲಾ ಜಾತಿಗಳ ಮಠಗಳಾಗಿ ಬೆಳೆಯುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಬೇಕು. ಕಷ್ಟದಲ್ಲಿರುವ ಜನರಿಗೆ ಸ್ಪಂದಿಸುವುದು 21ನೇ ಶತಮಾನದಲ್ಲಿ ಮಠಗಳ ಪ್ರಥಮ ಕರ್ತವ್ಯವಾಗಿದೆ ಎಂದರು.ಮೂಢನಂಬಿಕೆ ಹೆಸರಿನಲ್ಲಿ ಅಮಾಯಕರಿಗೆ ನಿತ್ಯ ಹಲವು ತೊಂದರೆಯಾಗುತ್ತಿದೆ. ಇದಕ್ಕಾಗಿ ಮಹಾರಾಷ್ಟ್ರ ಮಾದರಿಯಲ್ಲಿ ಇಲ್ಲಿಯೂ ಮೂಢನಂಬಿಕೆ ವಿರೋಧಿ ವಿಧೇಯಕ ಜಾರಿಗೆ ಸರ್ಕಾರ ಮುಂದಾಗಬೇಕು. ಎಂತಹ ವಿರೋಧ ಬಂದರೂ ಹಿಂದೇಟು ಹಾಕಬಾರದು ಎಂದರು.ಸಚಿವ ಎಚ್.ಆಂಜನೇಯ ಮಾತನಾಡಿ, ಮಠಗಳು ಕಾಯಕ ಸಂಸ್ಕೃತಿ ಮೈಗೂಡಿಸಿ ಕೊಂಡು ಸಮಾಜಮುಖಿ ಕೆಲಸ ಮಾಡಬೇಕು. ಸಮಾಜದ ಕೊಳಕು ತೊಳೆದು ಶಿಕ್ಷಣ ಹಾಗೂ ಸಮುದಾಯ ಜಾಗೃತಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಸಿದ್ದಯ್ಯನಕೋಟೆ ಶಾಖಾಮಠ ಕಾರ್ಯ ಶ್ಲಾಘನೀಯ ಎಂದರು.ಸಿದ್ದಯನಕೋಟೆ ಶಾಖಾಮಠಕ್ಕೆ ಸರ್ಕಾರದಿಂದ ಅನುದಾನ ಹಾಗೂ ಮಠದಿಂದ ನಡೆಯುತ್ತಿರುವ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.ಗಡಿ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಚಂದ್ರಕಾಂತ ಬೆಲ್ಲದ್‌ ಮಾತನಾಡಿ, ತಮ್ಮ ಅವಧಿಯಲ್ಲಿ ಸಿದ್ದಯ್ಯನಕೋಟೆ ಶಾಖಾ ಮಠದಲ್ಲಿ ಸಾಂಸ್ಕೃತಿಕ ಭವನಕ್ಕೆ ₨ 30 ಲಕ್ಷ ಅನುದಾನ ನೀಡಲಾಗಿತ್ತು ಎಂದು ಹೇಳಿದರು.ಶಾಸಕ ನೇರ್‍ಲಗುಂಟೆ ತಿಪ್ಪೇಸ್ವಾಮಿ, ಜಿಲ್ಲಾಪಂಚಾಯ್ತಿ ಸದಸ್ಯ ಎಚ್‌.ಟಿ. ನಾಗರೆಡ್ಡಿ, ಗಂಗಾವತಿಯ ಸಿ.ಎಚ್‌.ನಾರನಾಳ್‌ ಮಾತನಾಡಿದರು.ಇಳಕಲ್‌ ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ, ಆದಿಜಾಂಭವ ಮಠದ ಷಡಾಕ್ಷರಮುನಿ ಸ್ವಾಮೀಜಿ, ಗುರುಬಸವ ಸ್ವಾಮೀಜಿ, ಚಿತ್ರದುರ್ಗ ಕುಂಬಾರ ಗುರುಪೀಠದ ಕುಂಬಾರ ಗುಂಡಯ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.ಬಸವಲಿಂಗ ಸ್ವಾಮೀಜಿ, ದಾವಣಗೆರೆ ಬಸವ ಬಳಗದ ಎಚ್‌.ಎಂ.ಸ್ವಾಮಿ, ಪ.ಮ. ಗುರುಲಿಂಗಯ್ಯ ಉಪಸ್ಥಿತರಿದ್ದರು.ನೀರಿನ ಯೋಜನೆ ಜಾರಿ

ಮೊಳಕಾಲ್ಮುರು ತಾಲ್ಲೂಕಿಗೆ ತುಂಗಭದ್ರಾ ಹಿನ್ನೀರು ಮೂಲಕ ಕುಡಿಯುವ ನೀರು ತರುವ ಕಾರ್ಯ ಸರ್ಕಾರ ಮುಂದಿದೆ. ಈ ಬಗ್ಗೆ ಸಚಿವ ಎಚ್‌.ಕೆ. ಪಾಟೀಲ್‌ ಸಭೆಯನ್ನೂ ನಡೆಸಿದ್ದಾರೆ. ಮಾಜಿ ಶಾಸಕ ಎನ್‌.ವೈ. ಗೋಪಾಲಕೃಷ್ಣ ಅವರ ಪರಿಶ್ರಮ ಇದಕ್ಕೆ ಒತ್ತು ನೀಡಿದೆ. ಯೋಜನೆ ಜಾರಿಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ.

– ಎಚ್‌.ಆಂಜನೇಯ, ಸಚಿವ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.