ಬುಧವಾರ, ಏಪ್ರಿಲ್ 21, 2021
27 °C

ಮಡಿಕೇರಿಗೆ ಸುಸಜ್ಜಿತ ಒಳಚರಂಡಿ ವ್ಯವಸ್ಥೆ

ಪ್ರಜಾವಾಣಿ ವಾರ್ತೆ/ ಶ್ರೀಕಾಂತ್ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಮಡಿಕೇರಿ: ಮಂಜಿನ ನಗರಿ ಮಡಿಕೇರಿಯ ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿದ್ದ ಉತ್ತಮ ಒಳ ಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ. ಸುಮಾರು 62.20 ಕೋಟಿ ರೂಪಾಯಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.ಅತ್ಯಂತ ದೂರ ದೃಷ್ಟಿಯಿಂದ ರೂಪಿಸಲಾಗಿರುವ ಈ ಯೋಜನೆಯು ಸುಮಾರು 55 ಸಾವಿರ ಜನ ಸಂಖ್ಯೆಗೆ ಅನುಗುಣವಾಗಿ ರಚಿತವಾಗಿದೆ. ಸದ್ಯಕ್ಕೆ ನಗರದ ಜನಸಂಖ್ಯೆಯು 32 ಸಾವಿರ ಇದ್ದು, ಮುಂದಿನ 30 ವರ್ಷಗಳಲ್ಲಿ 55 ಸಾವಿರಕ್ಕೆ ತಲುಪುವ ನಿರೀಕ್ಷೆ ಇದೆ. ಅಂದರೆ 30 ವರ್ಷಗಳ ದೂರ ದೃಷ್ಟಿಯಿಂದ ಈ ಯೋಜನೆಯನ್ನು ರಚಿಸಲಾಗಿದೆ.ಕರ್ನಾಟಕ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆಗೆ ಈಗ ಆಡಳಿತಾತ್ಮಕ ಹಾಗೂ ತಾಂತ್ರಿಕ ಅನುಮೋದನೆ ದೊರೆಯುವ ಮೂಲಕ ಎರಡು ಪ್ರಮುಖ ಹಂತಗಳು ಪೂರ್ಣಗೊಂಡಿವೆ. ಇನ್ನು ಮುಂದೆ ಚರಂಡಿ ನೀರನ್ನು ಶುದ್ಧೀಕರಿಸಲು ಶುದ್ಧೀಕರಣ ಘಟಕ ಹಾಗೂ ನಾಲ್ಕು ಸೆಪ್ಟಿಕ್ ಟ್ಯಾಂಕ್‌ಗಳನ್ನು ನಿರ್ಮಿಸಲು ಬೇಕಾಗಿರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಕೆಲಸ ಇನ್ನಷ್ಟೇ ಆರಂಭವಾಗಬೇಕಾಗಿದೆ.ಶುದ್ಧೀಕರಣ ಘಟಕ:

ನಗರದ ಗಾಲ್ಫ್ ಮೈದಾನದ ಬಳಿ ಶುದ್ಧೀಕರಣ ಘಟಕ ನಿರ್ಮಿಸಲು 4.78 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಇದರ ಜೊತೆಗೆ ನಗರದ ವಿವಿಧ ಭಾಗಗಳಲ್ಲಿ ನಾಲ್ಕು ಕಡೆ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಬೇಕಾಗಿದೆ. ನಗರದ ಒಳ ಚರಂಡಿ ನೀರು ಈ ಸೆಪ್ಟಿಕ್ ಟ್ಯಾಂಕ್‌ಗಳಲ್ಲಿ ಬಂದು ಸಂಗ್ರಹವಾಗುತ್ತದೆ. ನಂತರ ಇದನ್ನು ಶುದ್ಧೀಕರಣ ಘಟಕ್ಕೆ ರವಾನಿಸಿ ಅಲ್ಲಿ ಕಲ್ಮಶ ನೀರನ್ನು ಶುದ್ಧೀಕರಿಸಿ ಹೊರ ಬಿಡಲಾಗುವುದು.ಈ ಯೋಜನೆಗಾಗಿ ನಗರದ ವಿವಿಧ ಭಾಗ ಗಳಲ್ಲಿ 4134 ಮ್ಯಾನ್ ಹೋಲ್‌ಗಳನ್ನು ನಿರ್ಮಿಸಲಾಗುವುದು. ಇವುಗಳ ವಿಸ್ತೀರ್ಣವು 1.2 ಮೀಟರ್ ಆಳ, 1.5 ಮೀಟರ್ ವ್ಯಾಸ ಹೊಂದಿರುತ್ತವೆ.ಶುದ್ಧೀಕರಣ ಘಟಕ ಹಾಗೂ ಸೆಪ್ಟಿಕ್ ಟ್ಯಾಂಕ್‌ಗಳ ನಿರ್ಮಾಣಕ್ಕಾಗಿ ಅಗತ್ಯವಿರುವ ಭೂಮಿಯನ್ನು ಜಿಲ್ಲಾಡಳಿತ ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ. ಯೋಜನೆಗೆ ರಾಜ್ಯ ಸಂಪುಟದ ಒಪ್ಪಿಗೆ ದೊರೆತ ತಕ್ಷಣವೇ ಭೂ ಸ್ವಾಧೀನ ಪ್ರಕ್ರಿಯೆಯನ್ನು ಪ್ರಾರಂಭಿಸುವುದಾಗಿ ಕಳೆದ ವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಶಿವಶಂಕರ್ ಅವರು ತಮಗೆ ಭರವಸೆ ನೀಡಿದ್ದಾರೆ ಎಂದು ನಗರ ಸಭೆ ಆಯುಕ್ತ ಶಶಿಕುಮಾರ್ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.