ಬುಧವಾರ, ಜನವರಿ 22, 2020
24 °C

ಮಡಿಕೇರಿ ಸಮ್ಮೇಳನ: ವಸತಿ ಕಲ್ಪಿಸುವುದೇ ಸವಾಲು

ಶ್ರೀಕಾಂತ ಕಲ್ಲಮ್ಮನವರ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ನಗರದಲ್ಲಿ ಜನವರಿ ಏಳ­ರಿಂದ ಮೂರು ದಿನಗಳ ಕಾಲ ನಡೆಯ­ಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ನಡೆಯುತ್ತಿದ್ದು, ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರಿಗೆ ಹಾಗೂ ಸಾರ್ವ­ಜನಿಕರಿಗೆ ವಸತಿ ವ್ಯವಸ್ಥೆ ದೊರೆ­ಯು­ವುದು ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ.ಬೆಟ್ಟ ಗುಡ್ಡ, ಗಿರಿ ಕಂದರಗಳ ಮಧ್ಯೆದಲ್ಲಿ ಅರಳಿ ನಿಂತಿರುವ ಈ ಪುಟ್ಟ ನಗರದಲ್ಲಿ ಹಿಂದೆಂದೂ ಕೇಳರಿಯದಷ್ಟು ಜನರು ಬರುವ ನಿರೀಕ್ಷೆಯಿದೆ. ಸುಮಾರು 8,500 ಪರಿಷತ್ತಿನ ಪ್ರತಿನಿಧಿಗಳು, 1,000 ಅತಿಥಿ ಗಣ್ಯರು, 1,000 ಜನ ಕಾರ್ಯ­ಕ್ರಮ ನೀಡುವವರು ಬರಲಿದ್ದಾರೆ. ಇದರ ಹೊರ­ತಾಗಿ ಸಮ್ಮೇಳನ ವೀಕ್ಷಿಸಲು ಪ್ರತಿದಿನ 30,000 ಜನರು ಬರುವ ನಿರೀಕ್ಷೆಯಿದೆ. ಮೂರು ದಿನಗಳ ಲೆಕ್ಕ ಹಾಕಿದರೆ ಒಂದು ಲಕ್ಷಕ್ಕಿಂತ ಹೆಚ್ಚು ಜನರು ಬರಬಹುದು.ಇವರಿಗೆಲ್ಲ ಸೂಕ್ತ ವಸತಿ ಕಲ್ಪಿಸುವುದು ಸವಾಲಿನ ಕೆಲಸವಾಗಿದೆ. ಪರಿಷತ್ತಿನಲ್ಲಿ ನೋಂದಾ­ಯಿಸಿ­ಕೊಂಡ ಸಮ್ಮೇಳನದ ಪ್ರತಿನಿಧಿಗಳಿಗೆ ಹಾಗೂ ಗಣ್ಯರಿಗೆ ವಸತಿ ಕಲ್ಪಿಸುವ ವ್ಯವಸ್ಥೆ­ಯನ್ನು ಸಂಘಟಕರು ವಹಿಸಿಕೊಂಡಿದ್ದಾರೆ. ಮಡಿಕೇರಿ­ಯಲ್ಲಿ ಸುಮಾರು 32ರಿಂದ 35 ಲಾಡ್ಜ್‌ಗಳಿದ್ದು, ಇವುಗಳಲ್ಲಿ ಇರುವ ಅರ್ಧದಷ್ಟು ರೂಮುಗಳನ್ನು ಪರಿಷತ್ತಿಗೆ ಬಿಟ್ಟುಕೊಡಲಾಗಿದೆ. ಬಾಕಿ ಇರುವ ರೂಮುಗಳನ್ನು ಸಾರ್ವಜನಿಕ­ರಿಗೆ ನೀಡಲು ಹೋಟೆಲ್‌ ಮಾಲೀಕರ ಸಂಘವು ನಿರ್ಧರಿಸಿದೆ.ಮಡಿಕೇರಿ ಹಾಗೂ ಸುತ್ತಮುತ್ತ ಸುಮಾರು 500ರಿಂದ 600 ಹೋಂ ಸ್ಟೇಗಳಿವೆ. ಇವುಗಳ­ಲ್ಲಿಯೂ ಪರಿಷತ್‌ ಕೋಣೆಗಳನ್ನು ಕಾಯ್ದಿರಿಸುವ ವ್ಯವಸ್ಥೆ ಮಾಡಿಕೊಂಡಿದೆ. ಬಾಕಿ ಉಳಿಯುವ ಕೋಣೆಗಳನ್ನು ಹೋಂ ಸ್ಟೇ ಮಾಲೀಕರು ನೇರವಾಗಿ ಸಾರ್ವ­ಜನಿಕ­ರಿಗೆ ನೀಡಬಹುದಾಗಿದೆ.

ಮಡಿಕೇರಿಯಲ್ಲಿ ವಸತಿಗೆ ಸ್ಥಳಾವಕಾಶದ ಕೊರತೆ ಎದುರಾದರೆ ನಗರದಿಂದ 25 ಕಿ.ಮೀ. ದೂರವಿರುವ ಕುಶಾಲನಗರದಲ್ಲಿಯೂ ಲಾಡ್ಜ್‌­ಗಳನ್ನು ಕಾಯ್ದಿರಿಸಲಾಗಿದೆ. ಇಲ್ಲಿ ಸುಮಾರು 29 ಲಾಡ್ಜ್‌ಗಳಿವೆ. ಇವುಗಳಲ್ಲಿ ಕೂಡ ಪರಿಷತ್ತು ಕೆಲವು ಕೋಣೆಗಳನ್ನು ಕಾಯ್ದಿರಿಸಿದೆ. ‘ಪ್ರತಿ ಲಾಡ್ಜ್‌ಗಳಿಂದ ಎರಡು ರೂಮುಗಳನ್ನು ಪರಿಷತ್‌ಗೆ ಉಚಿತ­ವಾಗಿ ನೀಡಲಾಗುತ್ತದೆ. ಬಾಕಿ ಉಳಿ­ಯುವ ಅರ್ಧದಷ್ಟು ರೂಮು­ಗಳನ್ನು ಶೇ 30ರಷ್ಟು ರಿಯಾಯಿತಿ ದರದಲ್ಲಿ ಪರಿಷತ್‌ಗೆ ನೀಡಲಾಗಿದೆ. ಇನ್ನುಳಿಯುವ ಅರ್ಧದಷ್ಟು ರೂಮು­­­­ಗಳನ್ನು ಲಾಡ್ಜ್‌ ಮಾಲೀಕರು ತಮ್ಮ ಇಚ್ಛೆಯಂತೆ ಸಾರ್ವಜನಿಕರಿಗೆ ನೀಡ­ಬಹುದಾಗಿದೆ’ ಎಂದು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್‌ ತಿಳಿಸಿದರು.

ಹೊರಜಿಲ್ಲೆಗಳ ಜನರು ಈಗಾಗಲೇ ರೂಮು­ಗಳ ಬಗ್ಗೆ ವಿಚಾರಿಸುತ್ತಿದ್ದಾರೆ. ಹಲವು ಲಾಡ್ಜ್‌­ಗಳಲ್ಲಿ ರೂಮುಗಳು ಸಿಗುತ್ತಿಲ್ಲ. ಇನ್ನೂ ಕೆಲ ಹೋಟೆಲ್‌­ಗಳ ವಿಪರೀತ ದರವನ್ನು ಕೇಳಿ ಜನರು ಹಿಂಜರಿಯುತ್ತಿದ್ದಾರೆ.ದಲೈಲಾಮಾ ಆಗಮನ: ಈ ನಡುವೆ ಬೌದ್ಧ ಧರ್ಮಗುರು ದಲೈಲಾಮಾ ಅವರು ಕುಶಾಲನಗರ ಬಳಿಯಿರುವ ಬೈಲುಕುಪ್ಪೆ ಕ್ಯಾಂಪಿನಲ್ಲಿ ಡಿ. 23 ರಿಂದ ಜ. 4ರವರೆಗೆ ವಾಸ್ತವ್ಯ ಹೂಡಲಿದ್ದಾರೆ. ಇದರಿಂದ ಕುಶಾಲ­ನಗರದಲ್ಲಿ­ನ ಎಲ್ಲ ಲಾಡ್ಜ್‌ಗಳು ಹಾಗೂ ರೆಸಾರ್ಟ್‌ಗಳನ್ನು ಅವರ ಅನುಯಾಯಿ­ಗಳು ಈಗಾಗಲೇ ಬುಕ್‌ ಮಾಡಿದ್ದಾರೆ.ಒಂದು ವೇಳೆ ದಲೈಲಾಮಾ ಅವರು ತಮ್ಮ ವಾಸ್ತವ್ಯವನ್ನು ಇನ್ನಷ್ಟು ದಿನ ಮುಂದುವರಿಸಿದರೆ ಈ ರೂಮುಗಳು ದೊರೆಯುವುದು ಕಷ್ಟ ಎಂದು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್‌ ಆತಂಕ ವ್ಯಕ್ತಪಡಿಸಿದರು.ಪ್ರತಿನಿಧಿಗಳಿಗೆ ಆದ್ಯತೆ: ‘ಸಮ್ಮೇಳನಕ್ಕೆ ರೂ 300 ಶುಲ್ಕ ಪಾವತಿಸಿ ಪ್ರತಿನಿಧಿಯಾಗಿ ಬರುತ್ತಿರುವ­ವರಿಗೆ ವಸತಿ ಕಲ್ಪಿಸಲು ಆದ್ಯತೆ ನೀಡುತ್ತಿದ್ದೇವೆ. ಅಂದಾಜು 8,500 ಜನರು ಬರಬಹುದು. ಇವರ ಜೊತೆ ಅತಿಥಿಗಳಿಗೆ, ಗಣ್ಯರಿಗೆ ಹಾಗೂ ಕಲಾವಿದ-­ರಿಗೆ ಕೂಡ ವಸತಿ ವ್ಯವಸ್ಥೆ ಮಾಡುತ್ತಿದ್ದೇವೆ’ ಎಂದು ಸಮ್ಮೇಳನದ ವಸತಿ ಸಮಿತಿಯ ಸಂಚಾಲಕ ಮೊಹಿದ್ದೀನ್‌ ಹೇಳಿದರು.‘ಸಮ್ಮೇಳನ ನಡೆಯುವ ಮೂರು ದಿನ­ಗಳವರೆಗೂ ಸಾಹಿತ್ಯಾಸಕ್ತರಿಗೆ, ಸಾರ್ವಜನಿ­ಕರಿಗೆ ಉಚಿತ­ವಾಗಿ ಊಟದ ವ್ಯವಸ್ಥೆ ಕಲ್ಪಿಸ­ಲಾಗು­ವುದು. ವಸತಿ ವ್ಯವಸ್ಥೆಯನ್ನು ಪರಿಷತ್ತಿನ ಪ್ರತಿನಿಧಿ­ಗಳಿಗೆ, ಗಣ್ಯರಿಗೆ ಹಾಗೂ ಅತಿಥಿಗಳಿಗೆ ಮಾತ್ರ ಕಲ್ಪಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ವಸತಿ ವ್ಯವಸ್ಥೆಯನ್ನು ಸ್ವತಃ ಮಾಡಿಕೊಳ್ಳುವುದು ಒಳಿತು. ಮಡಿಕೇರಿ ಹೊರವಲಯದಲ್ಲಿ ಹಾಗೂ ಸುತ್ತ­ಮುತ್ತ ಊರುಗಳಲ್ಲಿ ಹೋಂ ಸ್ಟೇಗಳು, ಹೋಟೆಲ್‌­ಗಳಿದ್ದು ಅಲ್ಲಿ ಅವರು ವಾಸ್ತವ್ಯ ಹೂಡಬಹುದು ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)