ಗುರುವಾರ , ಏಪ್ರಿಲ್ 22, 2021
29 °C

ಮಡೆಸ್ನಾನ ಬೇಡ-ಎಡೆಸ್ನಾನ ಮಾಡಿ ಎರಡೂ ಒಂದೇ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಡೆಸ್ನಾನದಂಥ ಅನಿಷ್ಟ ಪದ್ಧತಿಯನ್ನು ನಿಷೇಧಿಸಬೇಕೆಂದು ಕೋರಿ ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ ನ್ಯಾಯಪೀಠ, ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ `ಮಡೆಸ್ನಾನ~ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಬ್ರಾಹ್ಮಣರು ಉಂಡುಬಿಟ್ಟ ಎಂಜಲೆಲೆಯ ಮೇಲೆ ಭಕ್ತರು ಉರುಳುವ ಘೋರ ಅಮಾನುಷ ಅನಾಗರಿಕ ಪದ್ಧತಿಯನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

 

ನ್ಯಾಯಪೀಠ ಮುಂದುವರಿದು ಗರ್ಭಗುಡಿಯಲ್ಲಿ ದೇವರಿಗೆ ಅನ್ನವನ್ನು ನೈವೇದ್ಯಮಾಡಿ, ನಂತರ ಆ ಪ್ರಸಾದವನ್ನು ಬೇರಾರೂ ಸೇವಿಸದಂತೆ ದೇವಸ್ಥಾನದ ಪ್ರಾಂಗಣದಲ್ಲಿ ಬಾಳೆಎಲೆಗಳಲ್ಲಿ ಪಂಕ್ತಿ ಎಡೆಮಾಡಿ ಅದರ ಮೇಲೆ ಸ್ವಯಂ ಪ್ರೇರಿತರಾಗಿ ಉರುಳುಸೇವೆ ಮಾಡುವ ಭಕ್ತರಿಗೆ `ಮಡೆಸ್ನಾನದ~ ಬದಲು `ಎಡೆಸ್ನಾನ~ ಮಾಡಲು ಅವಕಾಶ ಮಾಡಿಕೊಡಬೇಕೆಂದು ಸೂಚಿಸಿದೆ.



ಇದರ ಜೊತೆಗೆ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿಭೋಜನ. ಇತರರಿಗೆ ಬೇರೆ ಪಂಕ್ತಿ ಭೋಜನವನ್ನೂ ನಡೆಸಕೂಡದೆಂದು ಆದೇಶದಲ್ಲಿ ತಿಳಿಸಿದೆ.

ಆದರೆ ಈ `ಎಡೆಸ್ನಾನ~ವೂ ಮಡೆಸ್ನಾನದ  ಮತ್ತೊಂದು ರೂಪ ಅಷ್ಟೇ. ದೇವರಿಗೆ ಮಾಡಿದ ನೈವೇದ್ಯವನ್ನು ಬಿಡಿಸಿದ ಎಲೆಯ ಮೇಲೆ, ಭಕ್ತರು ಉರುಳುವುದೆಂದರೆ ಪವಿತ್ರವಾದ ಪ್ರಸಾದವನ್ನು ಅಪವಿತ್ರಗೊಳಿಸಿದಂತೆ.



ದೇವರ ನೈವೇದ್ಯವೆಂದರೆ ಪವಿತ್ರವಾದ ಪ್ರಸಾದವನ್ನು ಭಕ್ತರು ಕಣ್ಣಿಗೊತ್ತಿಕೊಂಡು ಅತ್ಯಂತ ಭಕ್ತಿಯಿಂದ ಕೆಳಗೆ ಒಂದು ಚೂರು (ಅಗುಳೂ) ಚೆಲ್ಲದಂತೆ ಸೇವಿಸುತ್ತಾರೆ. ಈ ಪ್ರಸಾದದ ಮೇಲೆ ಉರುಳುಸೇವೆ ಮಾಡಿದರೆ ಅದು ನೆಲದ ಮೇಲೆಲ್ಲಾ ಚೆಲ್ಲಾಡಿ, ಅದರ ಮೇಲೆ ತುಳಿದಾಡುವ ಸಂಭವವೂ ಇರುತ್ತದೆ. ಇದರಿಂದ ಭಕ್ತರ ಭಾವನೆಯನ್ನು ಘಾಸಿಗೊಳಿಸಿದಂತಾಗುತ್ತದೆ.



ಎರಡನೆಯದಾಗಿ ಈ ನಮ್ಮ ಬಡದೇಶದಲ್ಲಿ ಅನ್ನಾಹಾರವಿಲ್ಲದೆ ಹಸಿವಿನಿಂದ ನರಳುತ್ತಿರುವವರ ಸಂಖ್ಯೆ ಕಡಿಮೆ ಏನಿಲ್ಲ. ಇಂಥ ಪರಿಸ್ಥಿತಿಯಲ್ಲಿ ಅನ್ನದ ಅಪವ್ಯಯವಾಗುವುದು ಸರಿಯೇ? ನಂತರ ಉರುಳಾಡಿದ ಮೇಲೆ ಆ ಅನ್ನವನ್ನು ನದಿ ನೀರಿಗೋ ಅಥವಾ ಇನ್ನೆಲ್ಲಿಗೋ ಚೆಲ್ಲಿದಾಗ, ನೀರಿನ ಸ್ವಚ್ಛತೆ ಹಾಳಾಗಿ, ಪರಿಸರ ಮಾಲಿನ್ಯಕ್ಕೆ ಎಡೆಮಾಡಿಕೊಟ್ಟಂತಾಗುವುದಿಲ್ಲವೇ? ಆದ್ದರಿಂದ ಹೈಕೋರ್ಟ್ ನ್ಯಾಯಪೀಠ ಮಡೆಸ್ನಾನದ ಮತ್ತೊಂದು ರೂಪವಾದ `ಎಡೆಸ್ನಾನ~ವನ್ನೂ ನಿಷೇಧಿಸಿ ಇದರ ಮೂಲೋತ್ಪಾಟನೆ ಮಾಡಬೇಕಾದ ಅವಶ್ಯಕತೆ ಇದೆ.



ಮಡೆಸ್ನಾನದ ಪರವಾಗಿ ಮಾತನಾಡುವವರು ಬಹುವಾಗಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅರ್ಚಕರು. ಅವರ ಪ್ರಕಾರ ಇದು ಭಕ್ತರ ಭಾವನೆಗೆ ಸಂಬಂಧಿಸಿದ್ದು. ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಬ್ರಾಹ್ಮಣರು ವೇದಜ್ಞಾನ-ಸಂಪನ್ನರು. ಆದ್ದರಿಂದ ಅವರು ದೇವರಿಗೆ ಸಮಾನರು.

 

ಅವರು ತಿಂದುಬಿಟ್ಟ ಎಂಜಲೂ ಪವಿತ್ರವಾದುದು. ಅದರ ಮೇಲೆ ಉರುಳುಸೇವೆ ಮಾಡಿದರೆ, ಚರ್ಮರೋಗ ಮುಂತಾದುವು ವಾಸಿಯಾಗಿ ಒಳ್ಳೆಯದಾಗುತ್ತದೆಂಬ ನಂಬಿಕೆಯಿಂದ ಇದನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಇದನ್ನು ಆಚರಿಸುವಂತೆ ಯಾರನ್ನೂ ಬಲವಂತ ಮಾಡುವುದಿಲ್ಲ. ಸ್ವಯಂಪ್ರೇರಿತರಾಗಿ ಹರಕೆ ಹೊತ್ತು ಮಡೆಸ್ನಾನ ಮಾಡುತ್ತಾರೆ. ನಾವು ಇದನ್ನು ಮಾಡಿ ಎಂದೂ ಹೇಳುವುದಿಲ್ಲ.



ಮಾಡಬೇಡಿ ಎಂದೂ ಹೇಳುವುದಿಲ್ಲ. ಇದನ್ನು ನಿಲ್ಲಿಸಿದರೆ, ವಂಶಪಾರಂಪರಿಕವಾಗಿ ಈ ಸೇವೆ ಮಾಡಿಕೊಂಡು ಬರುತ್ತಿರುವ ಹಾಗೂ ತೇರು ಎಳೆಯುವ ಅಧಿಕಾರ ಹೊಂದಿರುವ ಮಲೆಕುಡಿಯರು, ತೇರು ಎಳೆಯದೆ ಮುಷ್ಕರ ಹೂಡುತ್ತಾರೆ ಎಂಬ ಕಾರಣಗಳನ್ನು ಕೊಟ್ಟು ಈ ಪದ್ಧತಿಯನ್ನು ಸಮರ್ಥಿಸಿಕೊಳ್ಳುತ್ತಾರೆ.



ಇದೇ ಕಾರಣಗಳನ್ನು ಹೈಕೋರ್ಟಿನಲ್ಲಿ ಮಲೆಕುಡಿಯರ ಪರ ವಕೀಲರು ತಮ್ಮ ವಾದದಲ್ಲಿ ಮಂಡಿಸಿದಾಗ, ನ್ಯಾಯಪೀಠವು, ಎಂಜಲು ಎಲೆಯ ಮೇಲೆ ಉರುಳುವುದರಿಂದ ತನಗೆ ಒಳ್ಳೆಯದಾಗುತ್ತದೆ ಎಂಬ ಭಾವನೆ ಮಲೆಕುಡಿಯರ ಸ್ವಇಚ್ಛೆಯಿಂದ ಆದುದಲ್ಲ. ಈ ರೀತಿಯ ಭಾವನೆಯನ್ನು ಯಾರೋ ಮೂಡಿಸಿರಬೇಕು ಎಂಬುದಾಗಿ ಹೇಳಿದೆ.



ಯಾರೋ ಎಂದರೆ ಇನ್ಯಾರು? ಇಷ್ಟು ಶತಮಾನಗಳ ಕಾಲ ಬಹುಸಂಖ್ಯಾತರನ್ನು ಶೋಷಿಸಿದ ಪುರೋಹಿತಶಾಹಿಯೇ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.

ಯಾವುದೇ ಧಾರ್ಮಿಕ ಸಂಪ್ರದಾಯ, ಪದ್ಧತಿ, ಆಚರಣೆಗಳು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂಬ ಒಂದೇ ಕಾರಣಕ್ಕೆ ವೈಜ್ಞಾನಿಕ ಹಾಗೂ ವೈಚಾರಿಕತೆಯ ಇಂದಿನ ನಾಗರಿಕ ಸಮಾಜದ ಕಾಲಘಟ್ಟದಲ್ಲೂ, ಅದನ್ನು ಯಥಾವತ್ತಾಗಿ ಮುಂದುವರಿಸಿಕೊಂಡು ಹೋಗಬೇಕೆನ್ನುವುದು ಅರ್ಥಹೀನ.



ಯಾವ ಸಂಗತಿಯೇ ಆಗಲಿ ಕಾಲಮಾನದ ಮೌಲ್ಯಗಳನ್ನು ಅನುಸರಿಸಿ, ಹೊಸ ಹೊಸ ವಿಚಾರಗಳನ್ನು ಕೂಡಿಕೊಂಡು ಬದಲಾಗುತ್ತಾ ಹೋಗಬೇಕು. ಆದರೆ ನಮ್ಮ ಧರ್ಮ, ಆಚರಣೆ, ಸಂಪ್ರದಾಯಗಳೆಲ್ಲಾ ಬಹುಪಾಲು ನಿಂತ ನೀರಿನಂತೆ ನಾರುತ್ತಿರುವುದರಿಂದಲೇ ಹಿಂದೂ-ಧರ್ಮ ಆಮೂಲಾಗ್ರವಾಗಿ ಪ್ರಶ್ನಾರ್ಹವಾಗಿದೆ.

 

ಇದರಿಂದಾಗಿ ಮತಾಂತರಗಳಾಗುತ್ತಿವೆ. ಈ ಹಿಂದೂಧರ್ಮದ ವಕ್ತಾರರೆನಿಸಿರುವ ಕೆಲ ಮಠಾಧೀಶರು, ದೇವಸ್ಥಾನದ ಅರ್ಚಕರು ಮಡೆಸ್ನಾನ ಪಂಕ್ತಿಭೇದದಂಥ ಅನಾಗರಿಕ ಪದ್ಧತಿಗಳನ್ನು ಸರ್ವ ವಿಧದಲ್ಲೂ ಪ್ರಯತ್ನಪೂರ್ವಕವಾಗಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.  



ಬ್ರಾಹ್ಮಣರು ಉಂಡುಬಿಟ್ಟ ಎಂಜಲಿನ ಮೇಲೆ ಉರುಳುಸೇವೆ ಮಾಡುವುದರ ಬದಲು, ದೇವರ ಪ್ರಸಾದದ ಮೇಲೆ ಉರುಳುಸೇವೆ ಮಾಡಲಿ ಎಂಬ ಸಲಹೆಯನ್ನು ಪೇಜಾವರ  ಶ್ರೀಗಳು ಕೊಟ್ಟರು. ಇದನ್ನೂ ವಿರೋಧಿಸಲಾಯಿತು. ಆದರೆ ಈಗ ಹೈಕೋರ್ಟ್ ನ್ಯಾಯಪೀಠ ಇದೇ ಸಲಹೆಯನ್ನು `ಎಡೆಸ್ನಾನ~ಎಂದು ಶಬ್ದೀಕರಿಸಿ ತೀರ್ಪು ನೀಡಿದೆ.



ಇನ್ನು ಪಂಕ್ತಿಭೇದ ವಿಚಾರಕ್ಕೆ ಬಂದರೆ ಪಶ್ಚಿಮಘಟ್ಟ ಹಾಗೂ ಅಲ್ಲಿನ ಕರಾವಳಿ ತೀರದ ದೇವಾಲಯಗಳಲ್ಲಿ ಕಟ್ಟುನಿಟ್ಟಾಗಿ ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಪಂಕ್ತಿಭೇದವನ್ನು ಎಗ್ಗು-ಹೇಸಿಗೆ ಇಲ್ಲದೆ ರಾಜಾರೋಷವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ದೇವಸ್ಥಾನಕ್ಕೆ ಭೇಟಿ ಕೊಡುವ ಸ್ವತಃ ಬ್ರಾಹ್ಮಣರಿಗೇನೂ ಈ ವ್ಯವಸ್ಥೆ ಬೇಕಿಲ್ಲ.



ನಾನೇ ಸ್ವತಃ ನೋಡಿದಂತೆ, ಈ ವ್ಯವಸ್ಥೆಯ ಅರಿವಿಲ್ಲದವರು ಇತರರೆಲ್ಲರೊಂದಿಗೆ ಕೂತು ಊಟ ಮಾಡಿದವರು, ಸಂಜೆ ಹೊತ್ತಿಗೆ ತಮಗೆ ಪ್ರತ್ಯೇಕ ವ್ಯವಸ್ಥೆ ಇದೆ ಎಂಬುದು ಅದು ಹೇಗೋ ತಿಳಿದು ರಾತ್ರಿ ಬ್ರಾಹ್ಮಣರ ಪಂಕ್ತಿಯಲ್ಲಿ ಕೂತು ಊಟ ಮಾಡುತ್ತಾರೆ. ತಮಗೆ ಬೇಕಿಲ್ಲದಿದ್ದರೂ ದೇವಸ್ಥಾನದಲ್ಲಿ ತಮಗೆ ಬೇರೆ ವ್ಯವಸ್ಥೆ ಇದೆ ಎಂಬುದಕ್ಕೋಸ್ಕರ ಇದಕ್ಕೆ ಬ್ರಾಹ್ಮಣರು ಒಳಗಾಗುತ್ತಾರೆ. ಇ



ದನ್ನು ನಾನು ಆ ದೇವಸ್ಥಾನಕ್ಕೆ ಹೋದಾಗಲೆಲ್ಲಾ  ಗಮನಿಸಿದ್ದೇನೆ. ಈ ರೀತಿ ಒಳಗಾಗುವುದಕ್ಕೆ ಅವರಿಗೆ ಇನ್ನೊಂದು ಆಮಿಷವೂ ಇದೆ. ದೇವಸ್ಥಾನದ ಹಿಂದುಗಡೆ ಕಳ್ಳದಾರಿಯ ಮೂಲಕ ವಿಶೇಷ ಭಕ್ಷಗಳನ್ನೊಳಗೊಂಡ ಭೋಜನ ಇವರಿಗಾಗಿ ಮೀಸಲಾಗಿರುತ್ತದೆ. ಷರ್ಟು ಬಿಚ್ಚಿ, ಜನಿವಾರ ಧರಿಸಿದ ಬ್ರಾಹ್ಮಣರಾಗಿರಬೇಕು ಅಷ್ಟೇ.

 

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಇನ್ನು ಕೆಲವು ಕಡೆ, ಯಾರಾದರೂ ಈ ಬಗ್ಗೆ ಪ್ರಶ್ನೆ ಮಾಡಿದರೆ ಅವರೆಲ್ಲಾ ವಿಶೇಷ ಪೂಜಾ ಸೇವಾಕರ್ತರು. ಆದ್ದರಿಂದ ಅವರಿಗೆ ಪ್ರತ್ಯೇಕ ವ್ಯವಸ್ಥೆ ಎಂಬ ಸಿದ್ದ ಉತ್ತರ ಕಾದಿರುತ್ತದೆ. ಆದರೆ ಈಗ ಹೈಕೋರ್ಟ್ ನ್ಯಾಯಪೀಠ ಈ ಜಾತಿ ಆಧಾರದ ಪಂಕ್ತಿಭೇದವನ್ನು ನಿಷೇಧಿಸಿ ಆದೇಶ ನೀಡಿದೆ. ಇದು ಯಾವ ರೀತಿ ಜಾರಿಯಾಗುತ್ತದೆಂದು ಕಾದು ನೋಡಬೇಕು.



ಜನರ ಮೌಢ್ಯ-ಮೂಢನಂಬಿಕೆಗಳೇ ಪೂಜಾರಿಗಳ ಆದಾಯದ ಮೂಲ. ಇವರು ಹೇಳುವ ಮತ್ತೊಂದು ನೆವ ಮಲೆಕುಡಿಯರ ವಿರೋಧ. ಅವರು ರಥ ಎಳೆಯದಿದ್ದರೆ ಬೇಡ. ಬೇರೆ ದೇವಸ್ಥಾನದ ಸಿಬ್ಬಂದಿಯವರೇ ಒಮ್ಮೆ ಪೊಲೀಸ್ ಭದ್ರತೆಯಲ್ಲಿ ಈ ಕೆಲಸ ನಿರ್ವಹಿಸಲಿ, ಮುಂದೆ ಎಲ್ಲವೂ ಸಲೀಸಾಗುತ್ತದೆ.



ಈಗ ಸರ್ಕಾರ ಕಟ್ಟುನಿಟ್ಟಾದ ಕಾನೂನಿನ ಮೂಲಕ ಮಡೆಸ್ನಾನ-ಎಡೆಸ್ನಾನ ಮತ್ತು ಪಂಕ್ತಿ ಭೇದವನ್ನು ನಿಷೇಧಿಸಬೇಕು. ಇದಕ್ಕೆ ಪೂರಕವಾಗಿ ದೇವಸ್ಥಾನದಲ್ಲೂ ಈ ಪದ್ಧತಿಯನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು. ಈ ಧಾರ್ಮಿಕ ಪದ್ಧತಿಗಳನ್ನು ಕಾನೂನಿನ ಮೂಲಕ ನಿಲ್ಲಿಸಲು ಸಾಧ್ಯವಿಲ್ಲ. ಈ ಕೆಟ್ಟ ಪದ್ಧತಿ ತಮಗೆ ಅವಮಾನಕರವಾದುದೆಂಬ ಅರಿವು ಮೂಡಿಸುವುದರಿಂದ ಮಾತ್ರ ತಡೆಗಟ್ಟಬಹುದೆಂಬುದು, ಸರ್ಕಾರದ ಇಚ್ಛಾಶಕ್ತಿ ಇಲ್ಲದ ಪಲಾಯನವಾದವಷ್ಟೇ ಅಲ್ಲ.



ಸಾಮಾಜಿಕ ನ್ಯಾಯದ ಬದ್ಧತೆ ಇಲ್ಲದ ಕರ್ತವ್ಯ ಭ್ರಷ್ಟತೆಯನ್ನು ತೋರಿಸುತ್ತದೆ. ಹೀಗೆ ಅಂದುಕೊಂಡು ಕಾನೂನಿನ ಮೂಲಕ ನಿಷೇಧಿಸದಿದ್ದರೆ, ದೇವರು ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಸತಿಪದ್ಧತಿ, ಬಾಲ್ಯವಿವಾಹ, ನರಬಲಿ, ಪಶುಬಲಿಗಳಂಥ ಅಮಾನುಷ ಕ್ರೂರ ಪದ್ಧತಿಗಳು ಹಾಗೆಯೇ ಉಳಿಯುತ್ತಿದ್ದವು. ಆದುದರಿಂದ ಕಾನೂನಿನ ಮೂಲಕವೇ ಮನುಷ್ಯ ವಿರೋಧಿಯಾದ ಇಂಥ ಮೂಢ ಪದ್ಧತಿಯನ್ನು ನಿಗ್ರಹಿಸುವುದೊಂದೇ ನಮ್ಮ ಮುಂದಿರುವ ದಾರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.