ಮಂಗಳವಾರ, ಮೇ 24, 2022
31 °C
`ಮಣ್ಣಿನ ಫಲವತ್ತತೆ ಉಳಿಸಿಕೊಳ್ಳುವುದೇ ಕೃಷಿ'

`ಮಣ್ಣಿನ ಫಲವತ್ತತೆ ಉಳಿಸಿಕೊಳ್ಳುವುದೇ ಕೃಷಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: `ನಿನಗೆ, ನಿನ್ನ ಮಕ್ಕಳಿಗೆ, ಮುಂದಿನ ಪೀಳಿಗೆಗೆ ಮತ್ತೆ ಆಹಾರ ಪದಾರ್ಥ ದೊರೆಯುವಂತೆ ಮಾಡುವುದು ಹಾಗೂ ಮಣ್ಣಿನ ಫಲವತ್ತತೆ ಉಳಿಸಿಕೊಳ್ಳುವುದೇ ನಿಜವಾದ ಕೃಷಿ'.-ನಿವೃತ್ತ ವಿಜ್ಞಾನಿ ಡಾ.ಎಸ್.ಖಾದರ್ ಅವರು ಕೃಷಿಗೆ ನೀಡಿದ ಹೊಸ ವ್ಯಾಖ್ಯಾನವಿದು.ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಸಹಯೋಗದಲ್ಲಿ `ಭಾರತೀಯ ಕೃಷಿ ಕ್ಷೇತ್ರದ ಪ್ರಸ್ತತ ಸಮಸ್ಯೆಗಳು ಮತ್ತು ಅವುಗಳ ನಿರ್ವಹಣೆ' ಕುರಿತು ಸೋಮವಾರ ಏರ್ಪಡಿಸಿದ್ದ ರೈತರ-ಕೃಷಿ ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕೃಷಿ ಆಹಾರಕ್ಕಾಗಿ ಇಲ್ಲ; ಮತ್ತ್ಯಾವುದಕ್ಕೋ ಇದೆ ಎಂಬ ನಿಟ್ಟಿನಲ್ಲಿ ನಾವು ಕೃಷಿ ಮಾಡುತ್ತಿದ್ದೇವೆ. ಬದಲಾದ ರೀತಿ ರಿವಾಜುಗಳು, ಬಂದ ಕಂಪೆನಿಗಳು ಕೃಷಿ ವ್ಯವಸ್ಥೆಯನ್ನೇ ಹಾಳು ಮಾಡಿವೆ. ಕಳೆದ 18 ವರ್ಷಗಳಲ್ಲಿ ಶೇ 25ರಷ್ಟು ಬರಡು ಭೂಮಿ ಮಾಡಿದ್ದೇವೆ. ಫಲವತ್ತತೆ ಹೆಚ್ಚಿಸುವುದಕ್ಕೆ ಗಮನ ಕೊಡುತ್ತಿಲ್ಲ ಎಂದು ವಿಷಾದಿಸಿದರು.ಹತ್ತು ವರ್ಷ ಕೃಷಿ ಕೈಗೊಂಡರೂ ಭೂಮಿಯ ಫಲವತ್ತತೆ ಹೆಚ್ಚಾಗುವಂತಹ ಕೃಷಿ ಪದ್ಧತಿಗಳನ್ನು ಅನುಸರಿಸಬೇಕು. ಅಸಹಜ ವ್ಯವಸಾಯಕ್ಕೆ ಇತಿಶ್ರೀ ಹಾಡಬೇಕು. ಅರಣ್ಯ ಕೃಷಿಯ ಮೂಲ ಸಿದ್ಧಾಂತ ಅರಿತು ವೈವಿಧ್ಯಮಯ, ಜೀವವೈವಿಧ್ಯದ ಸುಧಾರಿತ ಕೃಷಿ ಮಾಡಬೇಕು ಎಂದು ಸಲಹೆ ನೀಡಿದರು.`50 ವರ್ಷಗಳ ಹಿಂದೆ ಭೂಮಿಯ ಇಂಗಾಲಾಮ್ಲದ ಅಂಶ 250 `ಪಿಪಿಎಂ' (ಪಾರ್ಟ್ಸ್ ಫರ್ ಮಿಲಿಯನ್) ಇತ್ತು. ಗಿಡ ಮರಗಳು ಪರಿಸರದಲ್ಲಿ ಸಮತೋಲನ ಕಾಪಾಡಿಕೊಂಡಿದ್ದವು. ಆದರೆ, ಈಗ ಇಂಗಾಲಾಮ್ಲದ ಪ್ರಮಾಣ 400 `ಪಿಪಿಎಂ'ಗೆ ಏರಿಕೆಯಾಗಿದೆ. ಸಮತೋಲನ ಕಾಪಾಡಿಕೊಂಡು ಬರುತ್ತಿದ್ದ ವ್ಯವಸ್ಥೆಯನ್ನು ನಾವು 50 ವರ್ಷಗಳಲ್ಲಿ ಹಾಳು ಮಾಡಿದ್ದೇವೆ. ಇಂಗಾಲಾಮ್ಲ ಹೀರಿಕೊಳ್ಳುವ ವ್ಯವಸ್ಥೆಯನ್ನು ನಿರ್ಣಾಮ ಮಾಡಿದ್ದೇವೆ. ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ 400 ಪಿಪಿಎಂ ಇರುವ ಇಂಗಾಲಾಮ್ಲದ ಅಂಶವನ್ನು 250ಕ್ಕೆ ಇಳಿಸುವುದೇ ಈಗಿರುವ ದೊಡ್ಡ ಸವಾಲು. ಇಲ್ಲವಾದಲ್ಲಿ ಭಯಾನಕ ದಿನಗಳಿಗೆ ನಾವು ಸಾಕ್ಷಿ ಆಗಬೇಕಾಗುತ್ತದೆ' ಎಂದು ಎಚ್ಚರಿಸಿದರು.ಶೇ 33ರಷ್ಟು ಅರಣ್ಯ ಪ್ರದೇಶವಿತ್ತು. ಇದೀಗ, ಸರ್ಕಾರದ ಅಂಕಿ ಅಂಶದ ಪ್ರಕಾರವೇ ಶೇ 12ಕ್ಕೆ ಕುಸಿದಿದೆ. ಇದರಿಂದ ಕೃಷಿ, ಜೀವನ ಮತ್ತು ಉಳಿವಿದೆ ಹೊಸ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವ ಅಗತ್ಯ ಎದುರಾಗಿದೆ. ಇಂಗಾಲಾಮ್ಲ ಕಡಿಮೆ ಮಾಡುವ ಕೆಲಸ ಎಲ್ಲೆಡೆಯಿಂದ ನಡೆಯಬೇಕು. ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.ಬದಲಾದ ಜೀವನ

`50 ವರ್ಷಗಳಲ್ಲಿ ನಮ್ಮ ಆಹಾರ ಪದಾರ್ಥದಲ್ಲಿ ಬಹಳಷ್ಟು ಬದಲಾಗಿದೆ. ನಾರಿನಂಶ ಆಧಾರಿತ ಆಹಾರದಿಂದ ದೂರ ಸರಿದಿದ್ದೇವೆ. ಅದರೂ `ನಾವು ಸುಧಾರಿಸುತ್ತಿದ್ದೇವೆ' ಎಂದು ಬೀಗುತ್ತಿದ್ದೇವೆ. ನಮ್ಮ ಕೃಷಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿಲ್ಲ. ಮಕ್ಕಳಿಗೆ ಮಧುಮೇಹ ಕಾಣಿಸಿಕೊಳ್ಳುತ್ತಿದೆ. ನಿಸರ್ಗದಿಂದ ದೂರಾಗಿ ಅಸಹಜ ಜೀವನ ನಡೆಸುತ್ತಿದ್ದೇವೆ. ಇದು ಸರಿಯಲ್ಲ' ಎಂದರು.ಅಕ್ಕಿ, ಗೋಧಿ, ಸಕ್ಕರೆ, ಡಾಲ್ಡಾ, ಮಾಂಸ, ಮೊಟ್ಟೆ ಬದಲಿಗೆ ನವಣೆ, ಸಜ್ಜೆ, ತರಕಾರಿ ಸೇವಿಸಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು ಎಂದು ಸಲಹೆ ನೀಡಿದರು.ಮಾಜಿ ಶಾಸಕ ಟಿ.ಗುರುಸಿದ್ದನಗೌಡ ಉದ್ಘಾಟಿಸಿದರು. ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ, ನಿವೃತ್ತ ಕೃಷಿ ವಿಜ್ಞಾನಿ ಡಾ.ಎಂ.ಕೆ.ರೇಣುಕಾರ್ಯ ಹಾಜರಿದ್ದರು.ಬಿ.ಒ.ಮಲ್ಲಿಕಾರ್ಜುನ ಸ್ವಾಗತಿಸಿದರು. ಎಂ.ಜಿ.ಬಸವನಗೌಡ ಕಾರ್ಯಕ್ರಮ ನಿರೂಪಿಸಿದರು. ಎನ್.ಪ್ರಸನ್ನಕುಮಾರ್ ವಂದಿಸಿದರು.ಕೃಷಿ ನೀತಿ ಅಗತ್ಯ

ರೈತರ ಸಂಕಷ್ಟ ನಿವಾರಣೆಗಾಗಿ ದೇಶದಲ್ಲಿ ಕೃಷಿ ನೀತಿ ಜಾರಿಗೊಳಿಸುವ ಅಗತ್ಯವಿದೆ ಎಂದು ಮಾಜಿ ಶಾಸಕ ಟಿ.ಗುರುಸಿದ್ದನಗೌಡ ಅಭಿಪ್ರಾಯ ಪಟ್ಟರು.ಸಂವಾದ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದ ಅವರು ಕೃಷಿ ಎನ್ನುವುದನ್ನು ಉದ್ಯಮ ಎಂದು ಪರಿಗಣಿಸದೇ ಇರುವುದರಿಂದ ಪ್ರಸ್ತುತ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಶೇ 65ರಷ್ಟು ಉದ್ಯೋಗ ನೀಡುವ ಕೃಷಿ ಕ್ಷೇತ್ರಕ್ಕೆ ಸ್ಪಷ್ಟ ನೀತಿ ಹಾಗೂ ಜಲನೀತಿ ಇಲ್ಲದಿರುವ ದೇಶವಿದ್ದರೆ ಅದು ಭಾರತವೇ ಇರಬೇಕು ಎಂದರು.ಏನೇ ಆದರೂ ತಮ್ಮ ಕಾಯಕ ಬಿಡದಿರುವವರೆಂದರೆ ರೈತರು. ಎಲ್ಲಿ ಏನೇ ನಡೆದರೂ, ಉಳುವ ಕಾಯಕವನ್ನು ಬಿಡುವುದಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ನಮಗೆ ಗೌರವ ಇಲ್ಲ ಎಂಬ ಭಾವನೆ ರೈತರಿಗೆ ಬಂದುಬಿಟ್ಟಿದೆ. ಕೃಷಿ ಪವಿತ್ರವಾದುದು ಎಂಬ ಭಾವನೆ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.ಜಾತಿ ವ್ಯವಸ್ಥೆ ಇಂದು ಕೃಷಿಗೆ ಮಾರಕವಾಗಿದೆ. ಹೀಗಾಗಿ, ಅದು ಸಂಘಟಿತ ವಲಯವಾಗಿ ರೂಪಗೊಂಡಿಲ್ಲ. ದೇಶದಲ್ಲಿ, ರೈತರ ಸಮಸ್ಯೆ ಅರಿತು ಪರಿಹರಿಸುವ ನಾಯಕತ್ವ ಇಂದು ಇಲ್ಲದಂತಾಗಿದೆ ಎಂದು ದೂರಿದರು.ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ. ಯಾರೂ ಹಸಿವಿನಿಂದ ಸಾಯಬಾರದು ಎಂಬ ಉದ್ದೇಶ ಒಳ್ಳೆಯದು. ಆದರೆ, ರೈತರಿಗೆ ಭದ್ರತೆ ಇಲ್ಲವಲ್ಲ? ಇದನ್ನು ಯಾರು ತಿಳಿಸಿಕೊಡಬೇಕು ಎಂದು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.