ಗುರುವಾರ , ಏಪ್ರಿಲ್ 22, 2021
26 °C

ಮತಾಧೀಶರು ಹಾಗು ಪಥಾಧೀಶರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರ್ಮಿಕ ಕ್ಷೇತ್ರದಲ್ಲಿ ಸಾವಿರಾರು ಮಠಗಳು. ಮಠಗಳ ಹೊಣೆಗಾರಿಕೆಯೆಂದರೆ, ಧರ್ಮ ಪ್ರಸಾರ. ಸಮಾಜದಲ್ಲಿ ಧಾರ್ಮಿಕವಾದ ನಂಬುಗೆಯನ್ನು ಬೆಳೆಸುವ ದೃಷ್ಟಿಯಿಂದ ಇವುಗಳ ಸ್ಥಾಪನೆ. ಹಿಂದಿನಿಂದಲೂ ಈ ಕಾರ್ಯವನ್ನು ನೆರವೇರಿಸುತ್ತ ಬಂದಿದ್ದು, ಈಗಲೂ ಅದನ್ನೇ ಮುಂದುವರೆಸುತ್ತಿವೆ.

 

ಹಲವಾರು ಜಾತಿಗೆ ಸೇರಿದ ಮಠಗಳಿವೆ. ತಮ್ಮದೇ ಆದ ತತ್ವ-ಸಿದ್ಧಾಂತಗಳು. ಕುಲಕ್ಕೊಂದು ಕಸುಬು. ಜಾತಿಗೊಬ್ಬ ಜಗದ್ಗುರು. ಗುರುವಿಗೊಂದು ಗುರುದಾನಿ. ಮಠಗಳ ಕಲ್ಪನೆಯು ಸಮಂಜಸವಾದುದು. ಅದರಂತೆ ಅವುಗಳು ನಿರ್ವಹಿಸುವ ಕಾರ್ಯವು ಅನನ್ಯವಾದುದು. ಕ್ರಮೇಣ ಅವುಗಳ ಕಾರ್ಯಕ್ರಮದಲ್ಲಿ ಕೊಂಚ ಬದಲಾವಣೆ.ಆರಂಭದಲ್ಲಿ ಧರ್ಮಪ್ರಸಾರ. ನಂತರದ ದಿನಗಳಲ್ಲಿ ಧರ್ಮವು ಜಾತಿ-ಮತದ ಸ್ವರೂಪವನ್ನು ತಾಳಿದೆ. ತಮ್ಮತಮ್ಮ ಮತ ಪ್ರಸಾರದಲ್ಲಿ ತೊಡಗಿವೆ. ಮತಗಳು ಮಠಗಳಾದವು.ಮಠಗಳು ಮತಗಳಾದವು. ಅವು ಈಗ ಮತ(ವೋಟ್)ಗಳ ಕೇಂದ್ರಗಳಾಗುತ್ತಿವೆಯೆಂಬ ಆಪಾದನೆ ಕೇಳಿಬರುತ್ತಿದೆ. ಅವರವರ ನಿರ್ಧಾರದಂತೆ ಅವರವರ ಭವಿಷ್ಯ. ಅದೇನೇಯಿರಲಿ, ಈ ನಡುವೆ ಪ್ರಗತಿದಾಯಕವಾದ ಕಾರ್ಯವನ್ನು ಮಠಗಳು ಕೈಗೊಂಡಿದ್ದಂತೂ ನಿಜ.ಕ್ರಿಶ್ಚಿಯನ್ ಮಿಷನರಿಗಳು ಆರೋಗ್ಯ(ಹೆಲ್ತ್) ಮತ್ತು ಶಿಕ್ಷಣ (ಎಜ್ಯುಕೇಷನ್) ಎರಡು ಅಂಶಗಳನ್ನು ಕೈಗೆತ್ತಿಕೊಂಡು ಜನರ ಬಳಿಗೆ ಬಂದವು. ಮತಾಂತರವನ್ನು ವಿರೋಧಿಸುವವರ ಮಕ್ಕಳು ಕ್ರಿಶ್ಚಿಯನ್ ಮಿಷನರಿಗಳು ನಡೆಸುವ ಶಾಲಾ-ಕಾಲೇಜುಗಳಲ್ಲಿ ಇಂಗ್ಲಿಷ್ ಕಲಿತು ಉನ್ನತ ಸ್ಥಾನ-ಮಾನಗಳನ್ನು ಗಿಟ್ಟಿಸಿಕೊಂಡಿರುವುದು ಆಶ್ಚರ್ಯಕರವಾದರೂ ಸತ್ಯವಾಗಿದೆ.

 

ಕನ್ನಡಕ್ಕಾಗಿ ಹೋರಾಡುವವರ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದಂತೆ. ಮೊದಮೊದಲು ಧರ್ಮಪ್ರಸಾರಕ್ಕೆ ಸೀಮಿತಗೊಳಿಸಿಕೊಂಡಿದ್ದ ಮಠಗಳು ಶಿಕ್ಷಣದೆಡೆಗೆ ದೃಷ್ಟಿ ಹಾಯಿಸಿದವು. ನರ್ಸರಿಯಿಂದ ಉನ್ನತ ಶಿಕ್ಷಣದವರೆಗಿನ ಶಿಕ್ಷಣ ಸಂಸ್ಥೆಗಳನ್ನು ತೆರೆದು, ಅಕ್ಷರ ದಾಸೋಹ(ಸಂಸ್ಕತಿ) ಬೆಳೆಸಿದವು.ಈ ಭಾವನೆಯಿಟ್ಟುಕೊಂಡೇ ವಿವಿಧ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಪ್ರಸಾದ ನಿಲಯಗಳನ್ನು ತೆರೆದದ್ದು, ಮಠಗಳ ಇತಿಹಾಸದಲ್ಲೇ ಅದ್ಭುತವಾದ ಹೆಜ್ಜೆ.ಮಠಗಳನ್ನು ವಿರೋಧಿಸುವ ಯಾವೊಬ್ಬ ಬಂಡಾಯಗಾರನೂ ಇದನ್ನು ಒಪ್ಪಿಕೊಳ್ಳಬಲ್ಲ. ಆರಂಭಿಕ ದಿನಗಳಲ್ಲಿ ಧರ್ಮ ಪ್ರಸಾರಕ್ಕೆ ಆದ್ಯತೆ ನೀಡಿದ ಮಠಗಳೇ ಮುಂದೆ ದಾಸೋಹದೆಡೆಗೆ ತಿರುಗಿದ್ದು, ಮತ್ತೊಂದು ಮೈಲಿಗಲ್ಲು.

 

ಅದರಲ್ಲೂ ಲಿಂಗಾಯತ ಮಠಗಳ ಪ್ರಸಾದ ನಿಲಯಗಳಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ವಿವಿಧ ಹುದ್ದೆಗಳನ್ನು ಗಿಟ್ಟಿಸಿಕೊಂಡು, ಉತ್ತಮ ಸ್ಥಿತಿಯಲ್ಲಿ ಬದುಕುತ್ತಿದ್ದಾರೆಂದು ಹೇಳಲು ಹೆಮ್ಮೆ ಅನಿಸುತ್ತದೆ.ಜಾತಿಯ ಮೀಸಲಾತಿಯು ಆರಂಭವಾದ ನಂತರ ಅದರ ಪ್ರಭಾವ ಹೆಚ್ಚಾಗಿ, ಅನುಕೂಲತೆ ದೊರೆಯದ ಜಾತಿಗಳ ವಿದ್ಯಾರ್ಥಿಗಳಿಗೆ ಶಿಕ್ಷಣವು ಅನಿವಾರ್ಯವಾಯಿತು. ಕಷ್ಟಪಟ್ಟು ಓದಿದಾಗ, ಉದ್ಯೋಗದ ಅವಕಾಶ.ಇತ್ತೀಚೆಗೆ ಒಂದು ಮುಂಜಾನೆ ನಾನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದಾಗ, ವಿನಯಭಾವದಿಂದ ನಮಸ್ಕರಿಸಿ, ಮಾತಿಗೆ ತೊಡಗಿದ ಒಬ್ಬ ವ್ಯಕ್ತಿ. ಮಾತಿನ ಸಂದರ್ಭದಲ್ಲಿ ತಾನು ದಾವಣಗೆರೆ ಜಯದೇವ ಪ್ರಸಾದ ನಿಲಯದಲ್ಲಿ  ವ್ಯಾಸಂಗ ಮುಗಿಸಿದೆ.

 

ಅಲ್ಲಿ ನೀವು ಸಂಘಟಿಸುವ ಶರಣಸಂಗಮ, ಶರಣಸಂಸ್ಕತಿ ಉತ್ಸವದಲ್ಲಿ ಭಾಗವಹಿಸುತ್ತಿದ್ದೆನೆಂದು ಹೇಳುತ್ತಿದ್ದಾಗ, ಆತನ ಮುಖದಲ್ಲಿ ಧನ್ಯತಾಭಾವ. ಈಗ ಮಸ್ಕತ್‌ನಲ್ಲಿ ಕೆಲಸ ಮಾಡುತ್ತಿದ್ದೇನೆಂದು ಪರಿಚಯಿಸಿಕೊಂಡರು. ಇದು ಒಂದು ಉದಾಹರಣೆಯಷ್ಟೇ. ನಾನು ಅಂದು ಐವತ್ತೆರಡು ಜನರೊಡಗೂಡಿ ಕೈಲಾಸ ಮಾನಸ ಸರೋವರಕ್ಕೆ ಪ್ರಯಾಣಿಸುತ್ತಿದ್ದೆ.ಒಂದು ಸಂಸ್ಥೆ ಕಟ್ಟಿ, ಎಷ್ಟು ವರ್ಷವಾಯಿತೆಂಬುದು ಅಮುಖ್ಯ. ಆ ಸಂಸ್ಥೆಯು ಜನಸೇವೆಯಲ್ಲಿ ಹೇಗೆ ತೊಡಗಿಸಿಕೊಂಡಿದೆಯೆಂಬುದು ಮುಖ್ಯವಾಗಬೇಕು. ಜನಪರ ಕಾಳಜಿಯಿಲ್ಲದ ಮಠಗಳು ಮತ್ತು ಸಂಸ್ಥೆಗಳು ಕಾಲಾನಂತರದಲ್ಲಿ ಜೀವಂತಿಕೆಯನ್ನು ಕಳಕೊಳ್ಳುತ್ತವೆ. ಒಂದು ಧಾರ್ಮಿಕ ಸಂಸ್ಥೆಯನ್ನು ಜೀವಂತಗೊಳಿಸುವ ವಿಧಾನವೇ ಜೀವಪರ ಕಾಳಜಿಯಾಗಿದೆ.

 

ಅನ್ನ ದಾಸೋಹ ಮತ್ತು ಅಕ್ಷರ ದಾಸೋಹವನ್ನು ತಮ್ಮ ಪಾಲಿನ ಕರ್ತವ್ಯವೆಂದು ಭಾವಿಸಿದ ಮಠಗಳು ಕಾಲಧರ್ಮಕ್ಕೆ ಸ್ಪಂದಿಸುತ್ತಿವೆ. ಕಾಲಧರ್ಮವೆಂದರೆ, ಸಮಕಾಲೀನಧರ್ಮ. ಕಾಲವು ಯಾವ ಕಾರ್ಯವನ್ನು ಬಯಸುತ್ತದೋ ಅದನ್ನು ನೆರವೇರಿಸುತ್ತ ಹೋಗುವುದೇ ತಮ್ಮ ಪಾಲಿನ ಧರ್ಮವೆಂದು ಅರಿತವರೆಲ್ಲ ಕಾಲಚಕ್ರಕ್ಕೆ ಸಿಲುಕಿ, ಕಣ್ಮರೆ ಆಗುವುದಿಲ್ಲ.

 

ಇದರ ಹೊರತಾಗಿ ಅವರು ಎಲ್ಲ ಕಾಲಕ್ಕೂ ಅನುಗುಣವಾಗುತ್ತಾರೆ; ನೆನಪಿನಂಗಳದಲ್ಲಿ ಉಳಿಯುತ್ತಾರೆ. ಒಳ್ಳೆಯ ಕಾರ್ಯಕ್ಕೆ ಎಲ್ಲ ಕಾಲದಲ್ಲೂ ಟೀಕೆ-ಟಿಪ್ಪಣಿಗಳಿದ್ದೇ ಇರುತ್ತವೆ. ವಿನಾಕಾರಣ ಟೀಕಿಸುವವರು ಸಮಾಜಕ್ಕೆ ತಮ್ಮ ಕೊಡುಗೆಗಳೇನೆಂಬುದನ್ನು ಪರಾಮರ್ಶಿಸಬೇಕಾಗುತ್ತದೆ.ನಡೆಯುವವರೆಡುವುದು ಸಾಮಾನ್ಯ. ಸುಮ್ಮನೆ ಕುಳಿತವನು ಎಡವಲಾರ. ನಡೆದರೆ, ಎಡವಬೇಕಾಗುತ್ತದೆಂದು ಸುಮ್ಮನೆ ಕುಳಿತವರೇ ಬಹಳವೆನ್ನಿ. ಎಡವಿದರೂ ಅಡ್ಡಿಯಿಲ್ಲವೆಂದು ಒಂದಿಲ್ಲೊಂದು ಜನಸೇವೆಗೆ ತೊಡಗಿರುವವರು ಇದ್ದಾರೆ.ಅಂಥವರಿಂದಲೇ ಒಂದಷ್ಟು ನಿರೀಕ್ಷೆಗಳು. ಅವರೇ ಭವಿಷತ್ತಿನ ಭರವಸೆಗಳು. ಧರ್ಮಪ್ರಸಾರ, ಅನ್ನ ದಾಸೋಹ, ಅಕ್ಷರ ದಾಸೋಹ ಹಳೆಯದಾಯಿತು. ಪ್ರಸ್ತುತ ದಿನಮಾನಗಳಲ್ಲಿ ಸಮಾಜಸೇವಾ ಕ್ಷೇತ್ರಕ್ಕೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿರುವುದು ಒಂದು ಉತ್ತಮವಾದ ವಿದ್ಯಮಾನ.ಆಶ್ರಮವೆಂದರೆ, ಆಶ್ರಯ. ರೋಗಪೀಡಿತರು, ದೀನರು, ದುಃಖಿತರು, ಅನಾಥರು - ಅಬಲರು, ಅಲಕ್ಷಿತರು, ವೃದ್ಧರು, ಮತ್ತಿತರರತ್ತ ಅವುಗಳ ಕಾಳಜಿ. ಮೌಲ್ಯಗಳನ್ನು ಕುರಿತು ಮಾತನಾಡುವುದಕ್ಕಿಂತ ಮಾನವೀಯ ನೆಲೆಯಲ್ಲಿ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವುದೇ ನಿಜವಾದ ಮೌಲಿಕ ಜೀವನ.

 

ಇದುವೇ ನೈತಿಕ ಹೊಣೆಗಾರಿಕೆ. ಶಿಕ್ಷಣವು ವ್ಯಾಪಾರೀಕರಣಕ್ಕೆ ಒಳಗಾಗುತ್ತಿದೆಯೆಂಬ ಕೂಗು ಕೇಳಿಬರುತ್ತಿರುವಾಗ, ಅದರ ಮುಖಾಂತರ ಶೇಖರಣೆ ಆಗುತ್ತಿರುವ ಹಣವನ್ನು ಸಾಮಾಜಿಕ ತುಡಿತಗಳಿಗೆ ಹರಿಯಬಿಟ್ಟು, ಒಂದಷ್ಟು ಧನ್ಯತೆಯನ್ನು ಸಂಪಾದಿಸಬೇಕಾಗಿದೆ.

 

ಧನವು ಕೇಂದ್ರಿತವಾದ ಧಾರ್ಮಿಕ ಕೇಂದ್ರಗಳಲ್ಲಿ ಧನದಾಹ ಅಧಿಕಗೊಳ್ಳುತ್ತ ಹೋಗುತ್ತದೆ. ಅದು ಮುಂದಿನ ಎಲ್ಲ ಅನಾಹುತಗಳಿಗೆ ಕಾರಣವಾಗುತ್ತದೆ. ಅತಿಆಸೆಯಿಂದ ಅವಮಾನ. ಹೀಗಾಗಬಾರದೆಂಬ ಭಾವನೆಯುಳ್ಳವರು ಸತ್ಕಾರ್ಯಗಳಿಗೆ ತಮ್ಮ ಸಂಪಾದನೆಯನ್ನು ಸಲ್ಲಿಸಿ ಸತ್ಕೀರ್ತಿಯನ್ನು ಸಂಪಾದಿಸುತ್ತಾರೆ.ಜನ್ಮ ಜನ್ಮಕ್ಕೆ ಹೋಗಲೀಯದೆ,

`ಸೋಹಂ ಎಂದೆನಿಸದೆ ದಾಸೋಹಂ~ ಎಂದೆನಿಸಯ್ಯೊ.

ಲಿಂಗಜಂಗಮಪ್ರಸಾದದ ನಿಲವ ತೋರಿ ಬದುಕಿಸಯ್ಯೊ,

ಕೂಡಲಸಂಗಮದೇವಾ, ನಿಮ್ಮ ಧರ್ಮ.ಮಾನವ ಜನಾಂಗದ ಸದಸ್ಯರು ನಾವೆಲ್ಲ ಒಂದೇ ಎಂಬ ಅರಿವು ಮೂಡಿದರೆ, ಜಾತಿ-ಮತದ ಜಾಗದಲ್ಲಿ ವಿಶ್ವಪಥ ರಾರಾಜಿಸಿತು. ಮತಾ(ಠಾ)ಧೀಶರಾಗುವುದಕ್ಕಿಂತ ಪಥಾಧೀಶರಾಗುವುದು ಮೇಲು. ಜಾತಿ-ಮತವು ಜನಾಂಗಗಳಲ್ಲಿ ಹಗೆಯನ್ನು ಹುಟ್ಟುಹಾಕುತ್ತದೆ.

 

ಅದರ ತೀವ್ರತೆಯನ್ನು ತಗ್ಗಿಸುವ ಶಕ್ತಿಯು ಪಥಕ್ಕೆ. ಪಥಕ್ರಮಣವು ಯಾವ ಆಕ್ರಮಗಳಿಗೂ ಅವಕಾಶ ನೀಡುವುದಿಲ್ಲ. ಅಕ್ರಮಗಳು ನಡೆಯುವುದಿಲ್ಲ. ಪಥವೇ ಎಲ್ಲ ಸಮಸ್ಯೆಗಳಿಗೆ ಪರಿಹಾರ. ಅಂತಿಮವಾಗಿ ನಿಲ್ಲುವುದು ಅದೊಂದೇ.

 

ಜಾತಿ ಜಾತಿಗಳ ನಡುವೆ ಸಂಘರ್ಷದ ತೀವ್ರತೆ ಹೆಚ್ಚುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಒಂದು ನಿರ್ದಿಷ್ಟ ಪಥದ ಮೇಲೆ ಸಾಗುವುದು ಇಂದಿನ ಅನಿವಾರ್ಯ. ಪಥವು ಸಾರ್ವಕಾಲಿಕವಾದುದು. ಮತವು ಸೀಮಿತವಾದುದು. ಮತದ ಮಡುವಿನಲ್ಲಿ ಕೊಚ್ಚಿ ಹೋಗುವುದಕ್ಕಿಂತ, ಪಥದ ಪರಿಕ್ರಮಣದಲ್ಲಿದ್ದರೆ ಪರಮಾನುಭಾವ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.