ಶನಿವಾರ, ಮಾರ್ಚ್ 6, 2021
21 °C

ಮತ್ತೆ ಕಾಡಿದ ಉದ್ದೀಪನ ಮದ್ದು `ಭೂತ'

ಮಹಮ್ಮದ್ ನೂಮಾನ್ Updated:

ಅಕ್ಷರ ಗಾತ್ರ : | |

ಮತ್ತೆ ಕಾಡಿದ ಉದ್ದೀಪನ ಮದ್ದು `ಭೂತ'

ಮೈಕದ ಅಸಫಾ ಪೊವೆಲ್ ಮತ್ತು ಅಮೆರಿಕದ ಟೈಸನ್ ಗೇ ಉದ್ದೀಪನ ಮದ್ದು ವಿವಾದದಲ್ಲಿ ಸಿಲುಕಿರುವುದರಿಂದ ಆಥ್ಲೆಟಿಕ್ಸ್ ಜಗತ್ತಿನ ಮೇಲೆ ಕರಿನೆರಳು ಆವರಿಸಿದೆ. ಈ ಇಬ್ಬರು ಮಿಂಚಿನ ವೇಗದ ಓಟದಿಂದಾಗಿ ವಿಶ್ವದೆಲ್ಲೆಡೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಎಲ್ಲರೂ ಇವರ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ.ಜಮೈಕದ ಮಹಿಳಾ ಅಥ್ಲೀಟ್ ಶೆರೊನ್ ಸಿಂಪ್ಸನ್ ಕೂಡಾ ನಿಷೇಧಿತ ಮದ್ದು ಸೇವಿಸಿದ್ದು ಸಾಬೀತಾಗಿದೆ. ಪೊವೆಲ್ ಮತ್ತು ಸಿಂಪ್ಸನ್ ಜಮೈಕ ರಾಷ್ಟ್ರೀಯ ಟ್ರ್ಯಾಕ್ ಮತ್ತು ಫೀಲ್ಡ್ ಕೂಟದ ವೇಳೆ ನಡೆಸಿದ್ದ ಪರೀಕ್ಷೆಯಲ್ಲಿ ಉದ್ದೀಪನ ಮದ್ದು ಸೇವಿಸಿದ್ದು ದೃಢಪಟ್ಟರೆ, ಟೈಸನ್ ಗೇ ಅವರು ಅಮೆರಿಕ ಉದ್ದೀಪನ ಮದ್ದು ತಡೆ ಘಟಕ ನಡೆಸಿದ್ದ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ.ಕ್ರೀಡೆಗೆ ಅಂಟಿಕೊಂಡಿರುವ ಉದ್ದೀಪನ ಮದ್ದು ಎಂಬ `ಭೂತ'ವನ್ನು ಹೊಡೆದೋಡಿಸಲು ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ) ಪ್ರಯತ್ನಿಸುತ್ತಲೇ ಇದೆ. ಇದರ ಜೊತೆ ಎಲ್ಲ ದೇಶಗಳಲ್ಲಿ ಪ್ರತ್ಯೇಕ ಉದ್ದೀಪನ ಮದ್ದು ತಡೆ ಘಟಕಗಳೂ ಇವೆ. ಆದರೂ ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದು ಅಚ್ಚರಿಯ ಜೊತೆಗೆ ಆಘಾತಕ್ಕೆ ಎಡೆಮಾಡಿಕೊಟ್ಟಿದೆ.ಬೆನ್ ಜಾನ್ಸನ್ ಪ್ರಕರಣದ ಬಳಿಕ ಅಥ್ಲೆಟಿಕ್ಸ್ ನಲ್ಲಿ ಕಂಡುಬಂದ ಅತಿದೊಡ್ಡ `ಮದ್ದು ವಿವಾದ' ಇದಾಗಿದೆ. 1988ರ ಸೋಲ್ ಒಲಿಂಪಿಕ್ಸ್‌ನ 100 ಮೀ. ಓಟವನ್ನು 9.79 ಸೆಕೆಂಡ್‌ಗಳಲ್ಲಿ ಪೂರೈಸಿದ್ದ ಕೆನಡಾದ ಜಾನ್ಸನ್ ಎಲ್ಲರನ್ನು ಬೆರಗುಗೊಳಿಸಿದ್ದರು. ಆದರೆ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದ ಕೆಲವೇ ಗಂಟೆಗಳ ಬಳಿಕ ನಿಜ ಸಂಗತಿ ಬಯಲಾಗಿತ್ತು. ಅವರು ನಿಷೇಧಿತ ಮದ್ದು ಸೇವಿಸಿದ್ದು ಪರೀಕ್ಷೆಯಲ್ಲಿ ಸಾಬೀತಾಗಿತ್ತು. ಜಾನ್ಸನ್ ಗೆದ್ದಿದ್ದ ಪದಕವನ್ನು ಹಿಂಪಡೆಯಾಗಿತ್ತಲ್ಲದೆ, ನಾಲ್ಕು ವರ್ಷಗಳ ನಿಷೇಧ ಶಿಕ್ಷೆಯನ್ನೂ ಹೇರಲಾಗಿತ್ತು.ಪೊವೆಲ್ ಮತ್ತು ಟೈಸನ್ ಗೇ ಇತ್ತೀಚಿನ ಕೆಲ ವರ್ಷಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಅಥ್ಲೀಟ್‌ಗಳು. ಪೊವೆಲ್ 2005 ರಿಂದ 2008 ರ ವರೆಗೆ 100 ಮೀ. ಓಟದಲ್ಲಿ ಪ್ರಭುತ್ವ ಸಾಧಿಸಿದ್ದರು. ಈ ಅವಧಿಯಲ್ಲಿ ವಿಶ್ವದಾಖಲೆಯನ್ನೂ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದರು. 2005 ರಲ್ಲಿ 9.77 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಹೊಸ ದಾಖಲೆ ಸ್ಥಾಪಿಸಿದ್ದರು. ಈ ದಾಖಲೆಯನ್ನು ಉಸೇನ್ ಬೋಲ್ಟ್ 2008 ರಲ್ಲಿ ಮುರಿದಿದ್ದರು. ಪೊವೆಲ್ ಅವರ ವೈಯಕ್ತಿಕ ಶ್ರೇಷ್ಠ ಸಮಯ 9.72 ಸೆ. ಆಗಿದೆ. 2008 ರಲ್ಲಿ ಸ್ವಿಟ್ಜರ್‌ಲೆಂಡ್‌ನ ಲೂಸಾನ್‌ನಲ್ಲಿ ನಡೆದ ಕೂಟದಲ್ಲಿ ಈ ಸಾಧನೆ ಮಾಡಿದ್ದರು. ಉಸೇನ್ ಬೋಲ್ಟ್ ಬಳಿಕ ವಿಶ್ವದ ಎರಡನೇ ಅತಿವೇಗದ ಓಟಗಾರ ಎಂಬ ಖ್ಯಾತಿಯನ್ನು ಟೈಸನ್ ಗೇ ಹೊಂದಿದ್ದಾರೆ. 100 ಮೀ. ಓಟದಲ್ಲಿ ಅಮೆರಿಕದ ದಾಖಲೆ (ಶ್ರೇಷ್ಠ ಸಮಯ 9.69 ಸೆ.) ಇವರ ಹೆಸರಿನಲ್ಲಿದೆ. `ನಾನು ಉದ್ದೇಶಪೂರ್ವಕವಾಗಿ ಯಾವುದೇ ನಿಷೇಧಿತ ಮದ್ದು ಸೇವಿಸಿಲ್ಲ' ಎಂದು ಪೊವೆಲ್ ಹೇಳಿದ್ದಾರೆ. ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಸಂದರ್ಭ ಹೆಚ್ಚಿನ ಕ್ರೀಡಾಪಟುಗಳು ಇದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ.ಪೊವೆಲ್ ಮತ್ತು ಸಿಂಪ್ಸನ್ ತಮ್ಮ ಫಿಸಿಯೊ ಕ್ರಿಸ್ಟೋಫರ್ ಕ್ಸುರೆಬ್ ಮೇಲೆ ಆರೋಪ ಹೊರಿಸಿದ್ದಾರೆ. ಫಿಸಿಯೊ ನೀಡಿದ್ದ ಆಹಾರ ಅಥವಾ ಇನ್ನಿತರ ಔಷಧಿಗಳ ಮೂಲಕ ನಿಷೇಧಿತ ಮದ್ದು ದೇಹವನ್ನು ಸೇರಿರುವ ಸಾಧ್ಯತೆಯಿದೆ ಎಂದಿದ್ದಾರೆ. ಆದರೆ ಇದನ್ನು ಕ್ಸುರೆಬ್ ಅಲ್ಲಗಳೆದಿದ್ದಾರೆ. `ನಿಷೇಧಿತ ಮದ್ದಿನ ಅಂಶ ಇಲ್ಲದ ಆಹಾರವನ್ನೇ ನಾನು ಸೂಚಿಸುತ್ತೇನೆ. ಆದರೆ ಅಥ್ಲೀಟ್‌ಗಳು ನನ್ನ ಗಮನಕ್ಕೆ ತರದೆಯೇ ಔಷಧಿ ಸೇವಿಸಿರುವ ಸಾಧ್ಯತೆಯಿದೆ' ಎಂಬುದು ಅವರ ಹೇಳಿಕೆ. ಹೀಗೆ ಪರಸ್ಪರ ಆರೋಪ, ಪ್ರತ್ಯಾರೋಪ ನಡೆಯುತ್ತಿದೆ.ಉದ್ದೀಪನ ಮದ್ದು ಪರೀಕ್ಷೆ ಎಲ್ಲ ಕಡೆಯೂ ಇರುತ್ತದೆ ಎಂಬುದು ಅಥ್ಲೀಟ್‌ಗಳಿಗೆ ತಿಳಿದ ವಿಚಾರ. ಈ ಸತ್ಯವನ್ನು ತಿಳಿದಿದ್ದರೂ ಉದ್ದೇಶಪೂರ್ವಕವಾಗಿ ಮದ್ದನ್ನು ಏಕೆ ಸೇವಿಸುವರು ಎಂಬ ಪ್ರಶ್ನೆ ಇಲ್ಲಿ ಏಳುತ್ತದೆ. ಪೊವೆಲ್ ಮತ್ತು ಟೈಸನ್ ಗೇ ಉದ್ದೇಶಪೂರ್ವಕವಾಗಿ ಮದ್ದು ಸೇವಿಸಿದ್ದಾರೆಯೇ ಎಂಬುದು ಯಾರಿಗೂ ತಿಳಿದಿಲ್ಲ. ಆದರೆ ಈ ಘಟನೆ ಅವರ ವೃತ್ತಿಜೀವನದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದುಕೊಳ್ಳಲಿದೆ.ಬೋಲ್ಟ್ ಹಾದಿ ಸುಗಮ: ಮುಂದಿನ ತಿಂಗಳು ಮಾಸ್ಕೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಟೈಸನ್ ಗೇ ಹೇಳಿದ್ದಾರೆ. ಪೊವೆಲ್ ಕೂಡಾ ಹಿಂದೆ ಸರಿಯುವುದು ಅನಿವಾರ್ಯ. ಈ ಕಾರಣದಿಂದ ಇಲ್ಲಿ ಬೋಲ್ಟ್ ಗೆಲುವಿನ ಹಾದಿ ಸುಗಮವಾಗಿದೆ.100 ಮೀ. ಓಟದಲ್ಲಿ ವಿಶ್ವದಾಖಲೆ (9.58 ಸೆ.) ಹೊಂದಿರುವ ಬೋಲ್ಟ್ ಒಮ್ಮೆಯೂ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿಲ್ಲ. `ಕ್ಲೀನ್ ಅಥ್ಲೀಟ್' ಎಂಬ ಹೆಸರನ್ನು ಇದುವರೆಗೆ ಕಾಪಾಡಿಕೊಂಡಿದ್ದಾರೆ.ಯಾವುದೇ ವಿವಾದದಲ್ಲಿ ಸಿಲುಕದೆ ಬೋಲ್ಟ್ ತಮ್ಮ ವೃತ್ತಿ ಜೀವನಕ್ಕೆ ತೆರೆ ಎಳೆದರೆ ಅದೊಂದು ಅದ್ಭುತ ಎನಿಸಲಿದೆ. ಏಕೆಂದರೆ 100 ಮೀ. ಓಟವನ್ನು 10 ಸೆಕೆಂಡ್‌ಗಳ  ಒಳಗೆ ಕ್ರಮಿಸಿರುವ ಹೆಚ್ಚಿನ ಅಥ್ಲೀಟ್‌ಗಳು ತಮ್ಮ ವೃತ್ತಿಜೀವನದ ಒಂದಲ್ಲ ಒಂದು ಸಂದರ್ಭದಲ್ಲಿ  ವಿವಾದದಲ್ಲಿ ಸಿಲುಕಿದ್ದಾರೆ.ಹಿಂದೆ ಬಿದ್ದಿರುವ ಭಾರತ: ವೇಗದ ಓಟದಲ್ಲಿ ಭಾರತದ ಅಥ್ಲೀಟ್‌ಗಳು ತುಂಬಾ ಹಿಂದೆ ಉಳಿದುಕೊಂಡಿದ್ದಾರೆ. ವಿಶ್ವದ ಘಟಾನುಘಟಿಗಳಿಗೆ ಪೈಪೋಟಿ ನೀಡಲು ಇಲ್ಲಿನ ಅಥ್ಲೀಟ್‌ಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಆದ್ದರಿಂದ ಭಾರತದ ವೇಗದ ಓಟಗಾರರು ಉದ್ದೀಪನ ಮದ್ದು ವಿವಾದದಲ್ಲಿ ಕಾಣಿಸಿಕೊಂಡಿಲ್ಲ.ಅನಿಲ್ ಕುಮಾರ್ ಪ್ರಕಾಶ್ ಭಾರತದ ಅತಿವೇಗದ ಓಟಗಾರ ಎಂಬ ಗೌರವ ಹೊಂದಿದ್ದಾರೆ. ಕೇರಳದ ಈ ಅಥ್ಲೀಟ್ 2005 ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ರಾಷ್ಟ್ರೀಯ ಅಥ್ಲೆಟಿಕ್ ಕೂಟದಲ್ಲಿ 10.30 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು.ಆದರೆ ವಿಶ್ವಮಟ್ಟದಲ್ಲಿ ಈ ಸಮಯ ಏನೇನೂ ಅಲ್ಲ. ಕೆನಡಾದ ಪೆರ್ಸಿ ವಿಲಿಯಮ್ಸ 1930 ರಲ್ಲೇ ಈ ಸಮಯ ಕಂಡುಕೊಂಡಿದ್ದರು (ಆದರೆ ಅಂದು ಎಲೆಕ್ಟ್ರಾನಿಕ್ ಟೈಮಿಂಗ್ ಇರಲಿಲ್ಲ). ಭಾರತದ ಅಥ್ಲೀಟ್ ಒಬ್ಬನಿಗೆ ಈ ಸಮಯ ಕಂಡುಕೊಳ್ಳಲು ಏಳು ದಶಕಗಳೇ ಬೇಕಾದವು. 10 ಸೆಕೆಂಡ್‌ಗಳ ಒಳಗೆ 100 ಮೀ. ಓಟ ಪೂರೈಸುವ ಅಥ್ಲೀಟ್‌ಗಾಗಿ ಭಾರತ ಇನ್ನೆಷ್ಟು ವರ್ಷ ಕಾಯಬೇಕೋ?

ಒಂಬತ್ತು ವೇಗಿಗಳು ಮತ್ತು ಉದ್ದೀಪನ ಮದ್ದು...

ಬೆನ್ ಜಾನ್ಸನ್ 1988 ರಲ್ಲಿ 100 ಮೀ. ಓಟವನ್ನು 9.79 ಸೆಕೆಂಡ್‌ಗಳಲ್ಲಿ ಪೂರೈಸಿದ್ದರು. ಅವರನ್ನೊಳಗೊಂಡಂತೆ ಇದುವರೆಗೆ ಒಟ್ಟು ಒಂಬತ್ತು ಸ್ಪ್ರಿಂಟರ್‌ಗಳು 9.8 ಸೆಕೆಂಡ್‌ಗಳ ಒಳಗೆ 100 ಮೀ. ದೂರ ಕ್ರಮಿಸುವಲ್ಲಿ ಯಶ ಕಂಡಿದ್ದಾರೆ. ಇದರಲ್ಲಿ ಆರು ಮಂದಿಯೂ ಉದ್ದೀಪನ ಮದ್ದು ವಿವಾದಲ್ಲಿ ಸಿಕ್ಕಿಬಿದ್ದಿದ್ದಾರೆ.ಜಸ್ಟಿನ್ ಗ್ಯಾಟ್ಲಿನ್ (9.79): ಅಮೆರಿಕದ ಗ್ಯಾಟ್ಲಿನ್ 2004 ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದರು. 2001 ರಲ್ಲಿ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದು ಎರಡು ವರ್ಷಗಳ ನಿಷೇಧ ಶಿಕ್ಷೆ ಅನುಭವಿಸಿದ್ದ ಅವರು 2006 ರಲ್ಲಿ ಮತ್ತೆ ಇದೇ ತಪ್ಪು ಮಾಡಿ ನಾಲ್ಕು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದರು.ಟಿಮ್ ಮಾಂಟ್‌ಗೊಮರಿ (9.78): ಅಮೆರಿಕದ ಮಾಂಟ್‌ಗೊಮರಿ 2002 ರಲ್ಲಿ 9.78 ಸೆಕೆಂಡ್‌ಗಳೊಂದಿಗೆ ವಿಶ್ವದಾಖಲೆ ನಿರ್ಮಿಸಿದ್ದರು. ಆದರೆ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ಎರಡು ವರ್ಷ ನಿಷೇಧಕ್ಕೆ ಒಳಗಾಗಿದ್ದರು.ಯೋಹಾನ್ ಬ್ಲೇಕ್ (9.69): ಜಮೈಕದ ಬ್ಲೇಕ್ 2009 ರ ವಿಶ್ವಚಾಂಪಿಯನ್‌ಷಿಪ್ ಸಂದರ್ಭ ಸಿಕ್ಕಿಬಿದ್ದಿದ್ದರು. ಆದರೆ ಇವರ ದೇಹದಲ್ಲಿ ಪತ್ತೆಯಾದ ಉದ್ದೀಪನ ಮದ್ದಿನ ಅಂಶ ವಾಡಾದ `ನಿಷೇಧಿತ ಮದ್ದು' ಪಟ್ಟಿಯಲ್ಲಿ ಇರಲಿಲ್ಲ. ಜಮೈಕ ಅಥ್ಲೆಟಿಕ್ ಸಂಸ್ಥೆ ಇವರ ಮೇಲೆ ಮೂರು ತಿಂಗಳ ನಿಷೇಧ ಹೇರಿತ್ತು.ಅಸಫಾ ಪೊವೆಲ್ (9.72) ಮತ್ತು ಟೈಸನ್ ಗೇ (9.69) ಇದೀಗ ವಿವಾದದಲ್ಲಿ ಸಿಲುಕಿದ್ದರೆ, ಮಾರಿಸ್ ಗ್ರೀನ್ (9.79 ಸೆ.), ನೆಸ್ಟಾ ಕಾರ್ಟರ್ (9.78) ಮತ್ತು ಉಸೇನ್ ಬೋಲ್ಟ್ (9.58) ಮಾತ್ರ ಒಮ್ಮೆಯೂ ಉದ್ದೀಪನ ಮದ್ದು ವಿವಾದದಲ್ಲಿ ಕಾಣಿಸಿಕೊಂಡಿಲ್ಲ.

-ಮಹಮ್ಮದ್ ನೂಮಾನ್ .

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.