ಸೋಮವಾರ, ಜನವರಿ 20, 2020
17 °C

ಮತ್ತೆ ಬಂದ ಸುಪ್ಪಾಂಡಿ 48

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಥೆಗಳಿಗೆ ಮಕ್ಕಳ ಕಲ್ಪನಾಶಕ್ತಿಯನ್ನು ಹೆಚ್ಚಿಸುವ ಶಕ್ತಿ ಇದೆ. ಮಕ್ಕಳು ತಮ್ಮ ವಯೋಸಹಜ ಹಾಗೂ ಮನೋಸಹಜ ಕಲ್ಪನೆಗೆ ಅನುಗುಣವಾಗಿ ಕಥೆಯಲ್ಲಿ ಬರುವ ಪಾತ್ರಗಳಿಗೆ ಮನಸ್ಸಿನಲ್ಲಿಯೇ ಒಂದು ಅಮೂರ್ತ ರೂಪ ಕೊಟ್ಟುಕೊಂಡು ಅದನ್ನು ಅನುಭವಿಸುತ್ತಾರೆ.ಖುಷಿ ಪಡುತ್ತಾರೆ. ಕಥೆಗಳು ಕೇವಲ ಸಂತೋಷ, ಭಯ, ಕೌತುಕ, ರೋಮಾಂಚನ ಹುಟ್ಟಿಸುವುದಷ್ಟೇ ಅಲ್ಲ. ಜತೆಗೆ ಮಕ್ಕಳಿಗೆ ಒಳ್ಳೆಯದು, ಕೆಟ್ಟದ್ದರ ನಡುವಿನ ವ್ಯತ್ಯಾಸವನ್ನು ತಿಳಿಸಿಕೊಡುತ್ತದೆ. ಇದಲ್ಲದೆ ಕಲ್ಪನಾ ಶಕ್ತಿ, ನೈತಿಕ ಮೌಲ್ಯ ಬೆಳೆಸಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ದಾರಿ ತೋರಿಸುತ್ತದೆ. ಈ ಕಾರಣಕ್ಕೇ ಇರಬೇಕು, ಅಜ್ಜಿ ಮೊಮ್ಮಕ್ಕಳನ್ನೆಲ್ಲಾ ಕೂರಿಸಿಕೊಂಡು ಕಥೆಗಳನ್ನು ಹೇಳುತ್ತಿದ್ದುದು.ಮಗು ತನ್ನ ಭಾವನೆ, ಸಂವೇದನೆಗಳನ್ನು ಇತರರೊಂದಿಗೆ ಸಮರ್ಥವಾಗಿ ಹಂಚಿಕೊಳ್ಳಬೇಕೆಂದರೆ ಭಾಷೆ ತುಂಬಾ ಮುಖ್ಯ. ಮಾತೃಭಾಷೆಯಲ್ಲಿಯೇ ಸಂವಹನ ಪ್ರಕ್ರಿಯೆ ನಡೆದಾಗ ಮಾತ್ರ ಅದು ಪರಿಣಾಮಕಾರಿಯಾಗಿರುತ್ತದೆ. ನಗರೀಕರಣದಿಂದಾಗಿ ಕೂಡು ಕುಟುಂಬಗಳು ಕಣ್ಮರೆಯಾದಂತೆ ಮಕ್ಕಳು ಅಜ್ಜಿಕಥೆಗಳನ್ನು ಕೇಳುವ ಅವಕಾಶದಿಂದ ವಂಚಿತರಾದರು. ಆಗ ಹುಟ್ಟಿಕೊಂಡಿದ್ದೇ ಚಂದಮಾಮ, ಬಾಲಮಂಗಳ ಹಾಗೂ ಇನ್ನಿತರ ಬಗೆಯ ಕಾಮಿಕ್ಸ್ ಪುಸ್ತಕಗಳು. ಇವು ಅಜ್ಜಿಯ ಅನುಪಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ತುಂಬಿದವು.ಈ ವಿಭಾಗಕ್ಕೀಗ ಮತ್ತೊಂದು ಸೇರ್ಪಡೆ `ಸುಪ್ಪಾಂಡಿ 48~. ಇದು ಮಕ್ಕಳಿಗೆ ಭರಪೂರ ಮನರಂಜನೆ ಒದಗಿಸುವಂತಹ ಕಾಮಿಕ್ಸ್ ಸರಣಿಗಳನ್ನು ಒಳಗೊಂಡಿದೆ. ಅಂದಹಾಗೇ ಇದು ಮಕ್ಕಳಿಗೆಂದೇ ವಿಶೇಷವಾಗಿ ತಯಾರಿಸಿರುವ ನಿಯತಕಾಲಿಕೆ.ಆಯತಾಕಾರದ ತಲೆ, ಉದ್ದ ಮೂಗು ಮತ್ತು ತಲೆಮೇಲೆ ಮೂರು ಜುಟ್ಟು ಹೊಂದಿರುವ ಸುಪ್ಪಾಂಡಿ ಅತಿ ವಿಶಿಷ್ಟ ವ್ಯಕ್ತಿ. ಬಾಲಮಂಗಳದಲ್ಲಿ ಬರುತ್ತಿದ್ದ ಡಿಂಗನಂತೆ ಈತ ಕೂಡ ಅಪ್ರತಿಮ ಶೂರ. ಜನಪ್ರಿಯ ಮಕ್ಕಳ ನಿಯತಕಾಲಿಕೆ ಟಿಂಕಲ್‌ನಲ್ಲಿ ಈ ಪಾತ್ರವನ್ನು ಮೂರು ದಶಕಗಳ ಹಿಂದೆಯೇ ಪರಿಚಯಿಸಲಾಗಿತ್ತು. ಆಗ ಈ ಪಾತ್ರ ಮಕ್ಕಳನ್ನು ತುಂಬಾ ಆಕರ್ಷಿಸಿತ್ತು. ಈಗ ಸುಪ್ಪಾಂಡಿ 48ರ ಮೂಲಕ ಈತ ಮತ್ತೆ ಮರುಜನ್ಮ ಪಡೆದುಕೊಂಡಿದ್ದಾನೆ. ಅಂದಹಾಗೇ ಇದು 48 ಪುಟಗಳ ತ್ರೈಮಾಸಿಕ ನಿಯತಕಾಲಿಕೆ.ಸುಪ್ಪಾಂಡಿಯ ಹೊಸ ಬೆಳವಣಿಗೆ ಏನು? ಇವನು ಸುಪ್ಪಾಂಡಿಯೇ ಅಥವಾ ಇವನು ಬೇರೆ ವ್ಯಕ್ತಿಯೇ? ಇವನು ಮತ್ತೆ ಯಾವ ಹೊಸ ಗೊಂದಲವನ್ನು ಸೃಷ್ಟಿಸುತ್ತಾನೆ? ತನ್ನ ಸಂಗಡಿಗರ ಜೊತೆ ಸಾಹಸ ಕ್ರೀಡೆಗಳಲ್ಲಿ ಹೇಗೆ ತೊಡಗುತ್ತಾನೆ ಎಂಬ ಸಂಗತಿಗಳನ್ನು ಸುಪ್ಪಾಂಡಿ 48 ತನ್ನ ಒಡಲಲ್ಲಿ ತುಂಬಿಕೊಂಡಿದೆ.ಸುಪ್ಪಾಂಡಿ ಆರನೇ ಸಂಚಿಕೆಯು ಸಾಹಸಕಾರಿ ಕಿಡ್ನಾಪ್ ದೃಶ್ಯ ಒಳಗೊಂಡಿದೆ. ಸೂಪರ್ ಸುಪ್ಪಾಂಡಿ (ಸುಪ್ಪಾಂಡಿಯ ಮುಂದುವರಿದ ಪಾತ್ರ) ತನ್ನ ವೇಷಭೂಷಣ ಬದಲಾಯಿಸಿಕೊಂಡಿದ್ದಾನೆ. ಇವನ ಸಾಹಸಗಳು ಬಾಲಿವುಡ್ ಹೀರೋಗಳನ್ನು ನೆನಪಿಸುತ್ತದೆ. ಅಲ್ಲದೇ ಡೈನೋಸಾರ್, ಮಾತಾಡುವ ತಲೆ ಮತ್ತಿತರ ಕುತೂಹಲಕಾರಿ ಕಥೆಗಳು ಸುಪ್ಪಾಂಡಿ 48ರಲ್ಲಿವೆ. ಬೆಲೆ ರೂ. 40. 

 

ಪ್ರತಿಕ್ರಿಯಿಸಿ (+)