ಶನಿವಾರ, ಜನವರಿ 18, 2020
21 °C

ಮತ್ತೆ ಬಿಎಫ್‌ಸಿ ಪಾರಮ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): ನಾಯಕ ಸುನಿಲ್‌ ಚೆಟ್ರಿ ಅವರ ಅಮೋಘ ಪ್ರದರ್ಶನದ ನೆರವಿನಿಂದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದವರು ಐ–ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ತಮ್ಮ ಪಾರಮ್ಯ ಮುಂದುವರಿಸಿದ್ದಾರೆ.ಬುಧವಾರ ಇಲ್ಲಿನ ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ನಡೆದ 13ನೇ ಸುತ್ತಿನ ಪಂದ್ಯದಲ್ಲಿ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ತಂಡದವರು 3–2 ಗೋಲುಗಳಿಂದ ಮಹಮ್ಮಡನ್‌ ಸ್ಪೋರ್ಟಿಂಗ್‌ ತಂಡವನ್ನು ಮಣಿಸಿದರು. ಈ ವರ್ಷವಷ್ಟೇ ಐ ಲೀಗ್‌ಗೆ ಪದಾರ್ಪಣೆ ಮಾಡಿರುವ ಬಿಎಫ್‌ಸಿ ತಂಡ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಎರಡನೇ ಸ್ಥಾನದಲ್ಲಿರುವ ಸ್ಪೋರ್ಟಿಂಗ್‌ ಕ್ಲಬ್‌ ಡೆ ಗೋವಾ ತಂಡಕ್ಕಿಂತ ಆರು ಪಾಯಿಂಟ್‌ ಹೆಚ್ಚು ಹೊಂದಿದೆ.ಬಿಎಫ್‌ಸಿ ತಂಡದ ಜಾನ್‌ ಮೆನೊಯಿಂಗರ್‌ 21ನೇ  ನಿಮಿಷದಲ್ಲಿಯೇ ಗೋಲು ಗಳಿಸಿ 1–0 ಮುನ್ನಡೆಗೆ ಕಾರಣರಾದರು. ಆದರೆ ಮಹಮ್ಮಡನ್‌ ತಂಡದ ಜೋಶಿಮರ್‌ ಡಿಸಿಲ್ವಾ ಮಾರ್ಟಿನ್‌ (45+1)  ತಂದಿತ್ತ ಗೋಲು 1–1 ಸಮಬಲಕ್ಕೆ ಕಾರಣವಾಯಿತು. ಬಿಎಫ್‌ಸಿ ತಂಡದ ಗೋಲ್‌ ಕೀಪರ್‌ ಪವನ್‌ ಕುಮಾರ್‌ ಎಡವಿದ್ದೇ ಇದಕ್ಕೆ ಕಾರಣ.ಆಗ ನೆರವಿಗೆ ಬಂದಿದ್ದು ಭಾರತ ತಂಡದ ನಾಯಕ ಚೆಟ್ರಿ ಅವರ ಕಾಲ್ಚಳಕ. 48ನೇ ನಿಮಿಷದಲ್ಲಿ ಅವರು ಗಳಿಸಿದ ಅಮೋಘ ಗೋಲಿನಿಂದಾಗಿ ಬಿಎಫ್‌ಸಿ ತಂಡ ಮತ್ತೆ ಮುನ್ನಡೆ ಸಾಧಿಸಿತು. ಅದಾಗಿ 9 ನಿಮಿಷ ಕಳೆಯುವಷ್ಟರಲ್ಲಿ ಸ್ಪೋರ್ಟಿಂಗ್‌ನ ಮಾರ್ಟಿನ್‌ (57ನೇ ನಿ.) ಮತ್ತೊಂದು ಗೋಲು ಗಳಿಸಿದ್ದು 2–2 ಸಮಬಲಕ್ಕೆ ಕಾರಣವಾಯಿತು.ಆದರೆ ಚೆಟ್ರಿ 71ನೇ ನಿಮಿಷದಲ್ಲಿ ಗಳಿಸಿದ ಗೋಲು ಬಿಎಫ್‌ಸಿಗೆ ಮತ್ತೆ ಮುನ್ನಡೆ ತಂದುಕೊಟ್ಟಿತು. ನಂತರ ಮಹಮ್ಮಡನ್‌ ನಡೆಸಿದ ಯಾವುದೇ ಪ್ರಯತ್ನ ಸಫಲವಾಗಲಿಲ್ಲ. ಈ ಮೂಲಕ ಬಿಎಫ್‌ಸಿ ಸತತ  ನಾಲ್ಕನೇ ಗೆಲುವು ಸಾಧಿಸಿತು. ಹಾಗೇ, ಚೆಟ್ರಿ ಸತತ ಮೂರನೇ ಪಂದ್ಯದಲ್ಲಿ ಎರಡು ಗೋಲು ಗಳಿಸಿದ ಖ್ಯಾತಿ ಪಡೆದರು. ಅವರೀಗ ಈ ಬಾರಿಯ ಐ ಲೀಗ್‌ನಲ್ಲಿ ಒಟ್ಟು ಎಂಟು ಗೋಲು ಗಳಿಸಿದ್ದಾರೆ.ಬೆಂಗಳೂರಿನಲ್ಲಿ ನಡೆದಿದ್ದ ಉಭಯ ತಂಡಗಳ ಹಣಾಹಣಿಯಲ್ಲಿ ಆ್ಯಷ್ಟೆ ವೆಸ್ಟ್‌ವುಡ್‌ ಮಾರ್ಗದರ್ಶನದ ಬಿಎಫ್‌ಸಿ 2–1 ಗೋಲುಗಳಿಂದ ಮಹಮ್ಮಡ್‌ ತಂಡವನ್ನು ಮಣಿಸಿತ್ತು.

ಪ್ರತಿಕ್ರಿಯಿಸಿ (+)