ಬುಧವಾರ, ಜೂನ್ 16, 2021
28 °C

ಮತ್ತೆ ಮತ್ತೆ ಗಾಂಧಿ

ಸಂದರ್ಶನ: ಉಮಾ ಅನಂತ್ Updated:

ಅಕ್ಷರ ಗಾತ್ರ : | |

ಈ ಸಲದ ಅತ್ಯುತ್ತಮ ಪ್ರಾದೇಶಿಕ ಚಿತ್ರಕ್ಕೆ ರಜತ ಕಮಲ ಪ್ರಶಸ್ತಿ ಬಂದ ಚಿತ್ರ `ಕೂರ್ಮಾವತಾರ~. ಪ್ರಶಸ್ತಿ ಪ್ರಕಟವಾದ ಮರುದಿನ ಎಲ್ಲ ಪತ್ರಿಕೆಗಳಲ್ಲಿ ಕುಳಿತಿರುವ ಭಂಗಿಯಲ್ಲಿರುವ ಗಾಂಧಿಯ ಚಿತ್ರ ಪ್ರಕಟವಾಯಿತು.ಗಿರೀಶ್ ಕಾಸರವಳ್ಳಿ ನಿರ್ದೇಶನದ ಈ ಚಿತ್ರದಲ್ಲಿ `ಗಾಂಧಿ~ ಪಾತ್ರ ಮಾಡಿದ್ದು ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾಗಿರುವ ಡಾ. ಶಿಕಾರಿಪುರ ಕೃಷ್ಣಮೂರ್ತಿ.ಸಿನಿಮಾದ ಬಗ್ಗೆ ಗೀಳು, ಆಸಕ್ತಿ ಏನೂ ಇಲ್ಲದೆ, ಬರೀ ಕಲಾತ್ಮಕ ಚಿತ್ರಗಳನ್ನಷ್ಟೇ ಇಷ್ಟಪಡುವ ಈ `ಗಾಂಧಿ~ ಸಿನಿಮಾ ಕ್ಯಾಮೆರಾ ಎದುರಿಸಿದ್ದು ಹೇಗೆ? ಪಾತ್ರವನ್ನು ನಿಭಾಯಿಸಿದ್ದು ಹೇಗೆ? ಶೂಟಿಂಗ್ ಅನುಭವ, ನಿರ್ದೇಶಕರೊಂದಿಗಿನ ಒಡನಾಟ ಮುಂತಾದ ವಿಷಯಗಳನ್ನು ಡಾ. ಕೃಷ್ಣಮೂರ್ತಿ `ಸಿನಿಮಾ ರಂಜನೆ~ ಜೊತೆ ಹಂಚಿಕೊಂಡಿದ್ದಾರೆ.

ಸಿನಿಮಾದಲ್ಲಿ ಅಭಿನಯಿಸಲು ಆಸಕ್ತಿ ಮೂಡಿದ್ದು ಹೇಗೆ?

ನನ್ನ ಮಗಳು ವಾಣಿ, ಗಿರೀಶ್ ಕಾಸರವಳ್ಳಿ ನಿರ್ದೇಶನದ `ಹಸೀನಾ~ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ಲು. ಆಗ ಅವರ ಪರಿಚಯ ಆಗಿತ್ತು. ಅದಾಗಿ ನಾನು ನನ್ನ ಸ್ನೇಹಿತ ನಾ.ದಾಮೋದರ ಶೆಟ್ಟಿ ಬೆಂಗಳೂರಿನಲ್ಲಿ ಭೇಟಿ ಆದಾಗ ಇವರೂ ಸಿಕ್ಕಿದ್ರು.ಆಗ ನನ್ನ ಹೊಸ ಸಿನಿಮಾದಲ್ಲಿ ಒಂದು ಪಾತ್ರ ಇದೆ. ಅದು ನಿಮಗೆ ಸರೀ ಹೊಂದುತ್ತೆ, ಮಾಡ್ತೀರಾ ಅಂತ ಕೇಳಿದ್ರು. ನನಗೆ ಆಗಲ್ಲ, ಆಸಕ್ತಿ ಇಲ್ಲ ಅಂದೆ. ಅದಾಗಿ ಸ್ವಲ್ಪ ದಿನದ ನಂತರ ಬೆಂಗಳೂರಿನಲ್ಲಿ ಒಂದು ಮೀಟಿಂಗ್‌ಗೆ ಕರೆಸಿಕೊಂಡ್ರು. ಒತ್ತಾಯ ಮಾಡಿ, ಅದು ಗಾಂಧಿ ಪಾತ್ರ; ನೀವು ಗಾಂಧಿ ತರನೇ ಕಾಣ್ತೀರಿ, ನೀವೇ ಸರಿಯಾದ ವ್ಯಕ್ತಿ ಎಂದು ಹೇಳಿದ್ರು. ಹೀಗಾಗಿ ಒಪ್ಪಿಕೊಂಡೆ.

ಮೊದಲ ಬಾರಿಗೆ ಸಿನಿಮಾದಲ್ಲಿ ಅಭಿನಯಿಸಿದ್ರಿ, ಏನಾದರೂ ಪೂರ್ವತಯಾರಿ ಮಾಡ್ಕೊಂಡಿದ್ರಾ..?

ಒಪ್ಪಿಕೊಂಡ ಮೇಲೆ ಮಾಡಿದ ಮೊದಲ ಕೆಲಸ ಅಂದ್ರೆ ಇಂಗ್ಲಿಷ್‌ನಲ್ಲಿ ಬಂದಿದ್ದ ಗಾಂಧಿ ಸಿನಿಮಾ ನೋಡಿದ್ದು. ನಂತರ ಗಾಂಧೀಜಿ ಆತ್ಮಕಥನ `ನನ್ನ ಸತ್ಯಾನ್ವೇಷಣೆ~ (ಕನ್ನಡಕ್ಕೆ: ಗೊರೂರು ರಾಮಸ್ವಾಮಿ ಅಯ್ಯಂಗಾರ್) ಪುಸ್ತಕವನ್ನು ಮನನ ಮಾಡಿಕೊಂಡು ಅನುಭವಿಸಿ ಓದಿ ಗಾಂಧಿ ಬಗ್ಗೆ ಸರಿಯಾಗಿ ತಿಳಿದುಕೊಂಡೆ.ಗಾಂಧೀಜಿಯ ಆದರ್ಶ, ತತ್ವಗಳು ನನಗೆ ತುಂಬಾ ಇಷ್ಟವಾದ್ದರಿಂದ, ಗಾಂಧಿತತ್ವವನ್ನು ನಾನೂ ಜೀವನದಲ್ಲಿ ಕೊಂಚ ಮಟ್ಟಿಗೆ ಪಾಲಿಸಿಕೊಂಡು ಬಂದಿದ್ದರಿಂದ ನನಗೆ ಕಷ್ಟ ಅನಿಸಲಿಲ್ಲ.

ಗಾಂಧೀಜಿಯ ಯಾವ ಆದರ್ಶ ನಿಮಗೆ ಇಷ್ಟ?

`ನುಡಿದಂತೆ ನಡೆ~ ಎನ್ನುವ ತತ್ವ. ಸರಳ ಜೀವನ. ಶಿಸ್ತು, ಆತ್ಮ ಕಠೋರತೆ. ನಾನೂ ಜೀವನದಲ್ಲಿ ಇದನ್ನೇ ಅಳವಡಿಸಿಕೊಂಡು ಬಂದಿದ್ದೇನೆ. ಸರಳ ಉಡುಪು, ಹೀಗಾಗಿ ಸಿನಿಮಾದಲ್ಲೂ ಕಾಸ್ಟ್ಯೂಮ್ಸ ನನಗೆ ಅಪರಿಚಿತ ಮತ್ತು ಮನಸ್ಸಿಗೆ ಅಹಿತ ಎಂದು ಯಾವತ್ತೂ ಅನಿಸಿಯೇ ಇಲ್ಲ.

 

ಶೂಟಿಂಗ್ ಅನುಭವ ಹೇಗಿತ್ತು?

ಒಟ್ಟು 60 ದಿನ ಶೂಟಿಂಗ್ ನಡೀತು. ಬೆಳಿಗ್ಗೆ 6 ಗಂಟೆಗೆ ಹೋದ್ರೆ ರಾತ್ರಿ 3 ಗಂಟೆಗೆ ವಾಪಸ್ ಬಂದದ್ದೂ ಇದೆ. ತುಂಬಾ ಹಾರ್ಡ್‌ವರ್ಕ್ ಬೇಕು. ಆ ದಿನದ ಶೂಟಿಂಗ್‌ಗೆ ಬೇಕಾದ ರೋಲ್ ಅನ್ನು ಅರ್ಧ ಗಂಟೆ ವಿವರಿಸಿ ಹೇಳ್ತಾಇದ್ರು. ಒಂದು ಮೂಡ್‌ಗೆ ಬಂದ ಮೇಲೆ ಶೂಟಿಂಗ್ ಶುರು. ಕೆಲವು ಸಲ 50 ನಿಮಿಷ ಪ್ರಿಪರೇಷನ್ ಮಾಡಿ 50 ಸೆಕೆಂಡ್‌ಗಳಲ್ಲಿ ಶೂಟಿಂಗ್ ಮುಗಿದು ಹೋದದ್ದೂ ಇದೆ.

 

ಈ ಸಿನಿಮಾ ಪ್ರಪಂಚದೊಳಗೆ ಹೊಕ್ಕಾಗ ಆದ ಅಚ್ಚರಿ ಇದು. ಉದಾ: ಒಂದು ಸಣ್ಣ ಸೀನ್. ಗಾಂಧಿ ಕುಳಿತ ಹಾಗೇ ಕುಳಿತುಕೊಳ್ಳುವ ಭಂಗಿ. ಅರ್ಧ ಗಂಟೆ ಒಂದೇ ಪೋಸ್‌ನಲ್ಲಿ ಕುಳಿತಿರಬೇಕಾಗಿತ್ತು. ಇದು ತ್ರಾಸದಾಯಕವಾಗಿದ್ದರೂ ರೋಚಕ ಅನುಭವ. ಶೂಟಿಂಗ್ ಉದ್ದಕ್ಕೂ ಕಾಸರವಳ್ಳಿ ಅವರು ನೀಡುತ್ತಿದ್ದ ಸ್ಫೂರ್ತಿ, ಸಲಹೆಗಳೂ ನನಗೆ ಪಾತ್ರಕ್ಕೆ ಜೀವ ತುಂಬುವಲ್ಲಿ ಬಹಳಷ್ಟು ಸಹಕಾರಿಯಾಯಿತು.

 

ಹಿರಿಯ ನಟಿ ಜಯಂತಿ ಜತೆ ಅಭಿನಯಿಸಿದ್ದು ಕೂಡ ಖುಷಿ ಕೊಟ್ಟ ವಿಚಾರವೇ. ನಮ್ಮ ಕ್ಯಾಮೆರಾಮನ್ ಕೂಡ ಬಹಳ ಒಳ್ಳೆಯ ಮನುಷ್ಯ. ಭಾಸ್ಕರ್ ಅಂತ, 20 ವರ್ಷ ಹಿಂದೆ ಬಂದಿದ್ದ ಗಾಂಧಿ ಸಿನಿಮಾಕ್ಕೂ ಇವರೇ ಕ್ಯಾಮೆರಾಮನ್ ಆಗಿದ್ದರು. ಬಹಳ ಅನುಭವಿ.

`ಕೂರ್ಮಾವತಾರ~ ಚಿತ್ರ ಯಾವ ಬಗೆಯದು?

ಕೂರ್ಮಾವತಾರ ಒಂದು ವೈಚಾರಿಕ ಚಿತ್ರ. ಇದರಲ್ಲಿ ಷೇರು ವ್ಯವಹಾರದ ಒಂದು ಸೀನ್ ಇದೆ. ಇದು ಸ್ವಲ್ಪ ಕಮರ್ಷಿಯಲ್ ಚಿತ್ರದಂತೆ ಕಂಡರೂ ಹಾಡು, ಕುಣಿತ, ಅಸಂಗತ ವಿಚಾರಗಳಿಲ್ಲದ ವಾಸ್ತವಿಕ ಚಿತ್ರ ಇದು. ಹೀಗಾಗಿ ಸಿನಿಮಾ ತುಂಬಾ ಇಷ್ಟ ಆಗಿದೆ.ಸಿನಿಮಾದಲ್ಲಿ ಅಣ್ಣಾಹಜಾರೆ ಚಳವಳಿ ಬಗ್ಗೆ ಸೂಚ್ಯವಾಗಿ ಬರುವ ಸಂಗತಿಗಳಿವೆ. ದೇಶದಲ್ಲಿ ಮುಗಿಲು ಮುಟ್ಟಿರುವ ಭ್ರಷ್ಟಾಚಾರ ಹೋಗಿಸಲು ಮೇಲ್ಮಟ್ಟದಲ್ಲಿ ಚಳವಳಿ ಮಾಡಿದರೆ ಖಂಡಿತಾ ಪ್ರಯೋಜನವಿಲ್ಲ. ಏಕೆಂದರೆ ಭ್ರಷ್ಟಾಚಾರ ಇರುವುದು ಬೇರು ಮಟ್ಟದಲ್ಲಿ.ಸಿನಿಮಾದ ಗಾಂಧಿ ಪಾತ್ರಧಾರಿ ಇದನ್ನು ಇಷ್ಟಪಡುವುದಿಲ್ಲ. ಇನ್ನೊಂದು ಪ್ರಮುಖ ವಿಚಾರ ಎಂದರೆ ಮಧ್ಯಮ ವರ್ಗದ ಜನರ ಆರ್ಥಿಕ ಮತ್ತು ಕೌಟುಂಬಿಕ ಸಂಘರ್ಷದ ಸಂದರ್ಭ. ಲಂಚ ಕೊಡುವ ಪ್ರಸಂಗ, ಕೊನೆಯಲ್ಲಿ ಬರುವ ಹಿಂದೂ ಮುಸ್ಲಿಂ ಮಧ್ಯೆ ಗಲಾಟೆ. ಗೋಡ್ಸೆ ಪಾತ್ರ... ನಿಜ ಜೀವನದಲ್ಲಿ ಅತ್ಯಂತ ತತ್ವಬದ್ಧರಾಗಿ ಬದುಕುವುದು ಕಷ್ಟ ಎಂಬುದನ್ನು ಬಿಂಬಿಸಿದರೂ ಒಟ್ಟಾರೆ ಚಿತ್ರ ಅತ್ಯಂತ ಕುತೂಹಲಕಾರಿಯಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.