ಭಾನುವಾರ, ಏಪ್ರಿಲ್ 18, 2021
33 °C

ಮತ್ತೆ ಯಶಸ್ಸಿನತ್ತ ಇಸ್ರೋ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂದ್ರಯಾನ-1 ಬಾಹ್ಯಾಕಾಶ ಯೋಜನೆಯ  ನಂತರ ಸತತವಾಗಿ ಎರಡು ಉಪಗ್ರಹ ಉಡಾವಣೆಗಳು ವಿಫಲಗೊಂಡವು. ಈ ವೈಫಲ್ಯದಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು, ಬುಧವಾರ ಎರಡು ವಿದೇಶಿ ಉಪಗ್ರಹಗಳು ಸೇರಿದಂತೆ ಒಟ್ಟು ಮೂರು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಮತ್ತೆ ಆತ್ಮಸ್ಥೈರ್ಯವನ್ನು ಗಳಿಸಿಕೊಂಡಿದ್ದಾರೆ.ಭೂಮಿಯಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಅಧ್ಯಯನ ಮತ್ತು ನಿರ್ವಹಣೆ ಕಾರ್ಯದ ಬಗೆಗೆ ನಿಖರವಾದ ಮಾಹಿತಿ ಕಳುಹಿಸಿಕೊಡುವ ‘ರಿಸೋರ್ಸ್ ಸ್ಯಾಟ್-2’ನಿಂದಾಗಿ ನಮ್ಮ ಕೃಷಿ, ಅರಣ್ಯ ಮತ್ತು ನೀರಾವರಿ ಯೋಜನೆಗಳನ್ನು ರೂಪಿಸಲು ಹಾಗೂ ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಅನುಕೂಲವಾಗಲಿದೆ ಎಂಬುದು ಇಸ್ರೋ ವಿಜ್ಞಾನಿಗಳ ನಂಬಿಕೆ. ಇಸ್ರೋ ವಿಜ್ಞಾನಿಗಳಿಗೆ ಈ ವರ್ಷ ಕೈತುಂಬ ಕೆಲಸ.ಪಿಎಸ್‌ಎಲ್‌ವಿ-ಸಿ17 ಮತ್ತು ಪಿಎಸ್‌ಎಲ್‌ವಿ-ಸಿ 18 ಉಪಗ್ರಹಗಳನ್ನು ಬರಲಿರುವ ಜೂನ್‌ನಲ್ಲಿ ಉಡಾವಣೆ ಮಾಡುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಫ್ರಾನ್ಸ್ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಸಿದ್ಧಗೊಳ್ಳುತ್ತಿರುವ ಪಿಎಸ್‌ಎಲ್‌ವಿ-ಸಿ19ನ್ನು ಆಗಸ್ಟ್‌ನಲ್ಲಿ ಉಡಾವಣೆ ಮಾಡುವ ಯೋಜನೆ ಹಾಕಿಕೊಂಡಿರುವುದರಿಂದ ಭಾರತೀಯ ಬಾಹ್ಯಾಕಾಶ ಯೋಜನೆಗಳ ಪಟ್ಟಿ ಬೆಳೆಯುತ್ತಾ ಹೋಗಿರುವುದು ಶ್ಲಾಘನೀಯಈ ಮಧ್ಯೆ ಮತ್ತೆ ಚಂದ್ರನತ್ತ ಚಂದ್ರಯಾನ-1 ಬಾಹ್ಯಾಕಾಶ ನೌಕೆಯನ್ನು ಕಳುಹಿಸಿ ಕೇವಲ ಹತ್ತು ತಿಂಗಳಲ್ಲೇ ವಿಫಲವಾದ ಯೋಜನೆಗೆ ಮತ್ತೆ ಮರುಜೀವ ತುಂಬುವ ಸಾಹಸಕ್ಕೆ ಇಸ್ರೋ ಕೈಹಾಕುತ್ತಿರುವುದು ಮೆಚ್ಚುಗೆಯ ಸಂಗತಿ. ಬಾಹ್ಯಾಕಾಶ ನೌಕೆಗಳ ಉಡಾವಣೆ ಮತ್ತು ಸಂಶೋಧನೆಯಲ್ಲಿ ಹಲವು ಮಹತ್ವದ ಸಾಧನೆ ಮಾಡಿರುವ ಅಮೆರಿಕದ ಪ್ರತಿಷ್ಠಿತ ‘ನಾಸಾ’ ಸಹಯೋಗವನ್ನು ಪಡೆಯುತ್ತಿರುವುದು ವಿವೇಚನೆಯ ಮಾರ್ಗ.ಈಗಾಗಲೇ ಚಂದ್ರಯಾನ-2 ಬಾಹ್ಯಾಕಾಶ ಪ್ರಯೋಗವನ್ನು ಕೈಗೆತ್ತಿಕೊಂಡು ಆ ದಿಕ್ಕಿನಲ್ಲಿ ಕಾರ್ಯೋನ್ಮುಖವಾಗಿದೆ ಇಸ್ರೋ. ಎರಡು ವರ್ಷಗಳ ಹಿಂದೆ ಚಂದ್ರನ ಕಕ್ಷೆಗೆ ಕಳುಹಿಸಲಾಗಿದ್ದ ಚಂದ್ರಯಾನ-1 ಉಪಗ್ರಹ ‘ಅಕಾಲ ಮೃತ್ಯು’ವಿಗೆ ಈಡಾಗಿತ್ತು.ಆದರೆ ಆ ವೇಳೆಗೆ ಅದರಿಂದ ನಿರೀಕ್ಷಿಸಿದ್ದ ಮಾಹಿತಿಯನ್ನೆಲ್ಲ ಪಡೆದುಕೊಳ್ಳಲಾಗಿದೆ ಎಂಬ ಸಮಾಧಾನವನ್ನು ಇಸ್ರೋ ವಿಜ್ಞಾನಿಗಳು ವ್ಯಕ್ತಪಡಿಸಿದ್ದರು. ಆದರೂ ಚಂದ್ರಯಾನ ಯೋಜನೆಯಂತೆ ಆ ಉಪಗ್ರಹ ಎರಡು  ವರ್ಷ ಚಂದ್ರನ ಸುತ್ತ ಸುತ್ತಿ ಮಹತ್ವದ ಮಾಹಿತಿಯನ್ನು ಕಳುಹಿಸಬೇಕಿತ್ತು.ರಷ್ಯ, ಅಮೆರಿಕ ಮತ್ತು ಚೀನಾ ಹಲವಾರು ವರ್ಷಗಳ ಹಿಂದೆಯೇ ಚಂದ್ರ ಗ್ರಹಕ್ಕೆ ಯಶಸ್ವಿಯಾಗಿ ಉಪಗ್ರಹಗಳಲ್ಲಿ ಮನುಷ್ಯರನ್ನೂ ಕಳುಹಿಸಿದ್ದವು. ‘ಚಂದ್ರನಿಂದ ಪಡೆಯಬೇಕಾದ ಮಾಹಿತಿಯನ್ನೆಲ್ಲ ಪಡೆಯಲಾಗಿದೆ, ಇನ್ನೇನೂ ಉಳಿದಿಲ್ಲ’ ಎಂದು ಆ ದೇಶಗಳು ಕೈಚೆಲ್ಲಿ ಕುಳಿತಿವೆ. ಬ್ರಹ್ಮಾಂಡದ ರಹಸ್ಯವನ್ನು ತಿಳಿಯಲು ಸದಾ ಪ್ರಯೋಗ ಮತ್ತು ಸಂಶೋಧನೆಗಳು ನಡೆಯುವುದರಲ್ಲಿ ತಪ್ಪೇನಿಲ್ಲ.

 

ಯಾವುದಕ್ಕೂ ಅಂತ್ಯ ಎನ್ನುವುದಿಲ್ಲ. ವೈಜ್ಞಾನಿಕ ಸಂಶೋಧನೆಗಳ ನಿಜವಾದ ಉದ್ದೇಶ ಮಾನವನ ಅಭಿವೃದ್ಧಿಗೇ ಬಳಕೆ ಮಾಡಿಕೊಳ್ಳಬೇಕೆನ್ನುವುದು. ಅಮೆರಿಕ ಮತ್ತು ರಷ್ಯಕ್ಕೆ ಸಿಗದ ರಹಸ್ಯಗಳು ಇನ್ನು ಮುಂದಾದರೂ ಸಿಗಬಹುದೆಂಬ ಆಶಯದೊಂದಿಗೆ ಚಂದ್ರಯಾನ-2 ಉಪಗ್ರಹ ಪ್ರಯೋಗ ನಡೆಸುವುದು ಭಾರತದಂತಹ ದೊಡ್ಡ ರಾಷ್ಟ್ರಕ್ಕೆ ಅವಶ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.