ಮಂಗಳವಾರ, ಏಪ್ರಿಲ್ 20, 2021
32 °C

ಮತ್ತೊಂದು ಚತುಷ್ಪಥ ರಸ್ತೆಗೆ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಗಬ್ಬೂರ ಬೈಪಾಸ್‌ದಿಂದ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದವರೆಗೆ ಚತುಷ್ಪಥ ರಸ್ತೆ ಹಾಗೂ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ’ ಎಂದು ಶಾಸಕ ವೀರಭದ್ರಪ್ಪ ಹಾಲಹರವಿ ತಿಳಿಸಿದರು. ‘ಒಟ್ಟು ರೂ. 50 ಕೋಟಿ ವೆಚ್ಚದಲ್ಲಿ ಎರಡೂವರೆ ಕಿ.ಮೀ. ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ತಾತ್ವಿಕ ಒಪ್ಪಿಗೆ ನೀಡಿದ್ದಾರೆ’ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.‘ನಗರದ ಸಿಬಿಟಿ ಬಸ್‌ನಿಲ್ದಾಣವನ್ನು ಬೆಂಗಳೂರಿನ ಶಿವಾಜಿನಗರದ ಬಸ್‌ನಿಲ್ದಾಣ ಮಾದರಿಯಲ್ಲಿ ಹೈಟೆಕ್ ಆಗಿ ಪರಿವರ್ತಿಸಬೇಕೆಂದು ಒತ್ತಾಯಿಸಲಾಗಿದೆ. ಈಗಾಗಲೇ ಎಂಟು ಕೋಟಿ ರೂಪಾಯಿಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ’ ಎಂದು ಅವರು ಹೇಳಿದರು. ‘ನಗರದಲ್ಲಿಯ ನಿವೇಶನರಹಿತರಿಗೆ 10 ಸಾವಿರ ಮನೆ ಕಟ್ಟಿಸುವ ಯೋಜನೆಯಿದೆ. ಬಿಡ್ನಾಳ ಹಾಗೂ ಯಲ್ಲಾಪುರದಲ್ಲಿ ಜಾಗಗಳನ್ನು ಪರಿಶೀಲಿಸಲಾಗಿದೆ. ಬೀಡಿ ಕಾರ್ಮಿಕರಿಗೆ 400 ಮನೆಗಳನ್ನು ನಿರ್ಮಿಸಲಾಗುತ್ತದೆ.ಇದರೊಂದಿಗೆ ಹಳೇಹುಬ್ಬಳ್ಳಿ ಹಾಗೂ ಗಣೇಶಪೇಟೆ ಮಾಂಸ ಮಾರುಕಟ್ಟೆಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅವರು ಭರವಸೆ ನೀಡಿದರು. ‘ಕೊಳೆಗೇರಿಗಳಿಗೆ ಮೂಲ ಸೌಲಭ್ಯ ಸಲುವಾಗಿ ಹಣಕಾಸಿನ ನೆರವು ಕೊಡುತ್ತೇವೆಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದರೊಂದಿಗೆ ಕೊಳೆಗೇರಿ ಪ್ರದೇಶಗಳನ್ನು ಸಕ್ರಮಗೊಳಿಸಲು ಸರ್ಕಾರಕ್ಕೆ ಕೋರಲಾಗಿದೆ’ ಎಂದರು.ಸುಳ್ಳು ಆಪಾದನೆ: ಫಾಲಾಕ್ಷ ಕೊಲೆ ಪ್ರಕರಣದಲ್ಲಿ ನನ್ನ ಪಾತ್ರವಿದೆ ಹಾಗೂ ರಜನಿ ಬಿಜವಾಡ ಮತ್ತು ದುರ್ಗಪ್ಪ ಬಿಜವಾಡ ಅವರನ್ನು ನಗರದ ಜೈಲಿನಿಂದ ಬೇರೆಡೆ ವರ್ಗಾಯಿಸಲು ನಾನು ಕಾರಣವೆಂದು ಮಹಾನಗರ ಪಾಲಿಕೆ ಸದಸ್ಯೆ ಲಕ್ಷ್ಮಿ  ಬಿಜವಾಡ ಅವರು ಆಪಾದಿಸಿದ್ದಾರೆ. ಇದು ಆಧಾರರಹಿತವಾದುದು. ನನಗೆ ಯಾರೂ ಶತ್ರುಗಳಿಲ್ಲ. ಇದು ರಾಜಕೀಯ ಪ್ರೇರಿತವಾದ ಆಪಾದನೆ. ಕಾಂಗ್ರೆಸ್‌ನವರು ನನ್ನ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಎಸ್‌ಟಿ ಮೋರ್ಚಾ ಕಾರ್ಯದರ್ಶಿ ವೆಂಕಟೇಶ ಹುಬ್ಬಳ್ಳಿ, ಮಹಾನಗರ ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷ ವಿಠಲ ಬ್ಯಾಹಟ್ಟಿ, ಮಹಾನಗರ ಜಿಲ್ಲಾ ಎಸ್‌ಸಿ ಮೊರ್ಚಾ ಅಧ್ಯಕ್ಷ ರಂಗನಾಯಕ, ಹನುಮಂತಪ್ಪ ದೊಡ್ಡಮನಿ, ಪರಶುರಾಮ ಪೂಜಾರ, ಗಂಗಣ್ಣ ಸುಣ್ಣದ ಮೊದಲಾದವರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.