ಸೋಮವಾರ, ಜೂನ್ 21, 2021
30 °C
ಬೆಂಗಳೂರು ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಮದನಿ

ಮದನಿ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನಾ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಅಬ್ದುಲ್‌ ನಾಸರ್‌ ಮದನಿ ಅವರನ್ನು ಶೀಘ್ರವೇ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಮಾನವ ಹಕ್ಕು­ಗಳು ಹಾಗೂ ನ್ಯಾಯ ರಕ್ಷಣಾ ಸಂಘ­ಟನೆ (ಎಪಿಎಚ್‌ಆರ್‌ಜೆ) ಸದ­ಸ್ಯರು ನಗರದಲ್ಲಿ ಶನಿವಾರ ಪ್ರತಿಭಟನಾ ಸಭೆ ನಡೆಸಿದರು.ಸಭೆಯಲ್ಲಿ ಮಾತನಾಡಿದ ಕೇರಳದ ಮಾಜಿ ಸಂಸದ ಡಾ.ಸೆಬಾಸ್ಟಿಯನ್‌ ಪಾಲ್‌, ‘ಪ್ರಕರಣದ ಆರೋಪಿಯೊಬ್ಬ ನೀಡಿದ ಹೇಳಿಕೆಯ ಆಧಾರದ ಮೇಲೆ ಮದನಿ ಅವರನ್ನು ಬಂಧಿಸಲಾಗಿದೆಯೇ ಹೊರತು ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಹೀಗಿದ್ದೂ 2010­ರಿಂದ ಅವರು ಕಾರಾಗೃಹ ವಾಸ ಅನುಭವಿಸು­ವಂತಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಅವರನ್ನು ಬಿಡುಗ­ಡೆ­ಗೊಳಿಸಬೇಕು’ ಎಂದು ಒತ್ತಾಯಿಸಿದರು.ಸಂಸತ್ ಮೇಲಿನ ದಾಳಿ ಪ್ರಕರಣದ ಆರೋಪಿಯಾಗಿದ್ದ ದೆಹಲಿ ವಿಶ್ವವಿ­ದ್ಯಾಲ­ಯದ ಪ್ರಾಧ್ಯಾಪಕ ಎಸ್.ಎ.­ಆರ್.­ಗಿಲಾನಿ ಮಾತನಾಡಿ, ‘ಕೊಯ­ಮತ್ತೂರು ಬಾಂಬ್‌ ಸ್ಫೋಟ ಪ್ರಕರಣ­ದಲ್ಲಿ ಒಂಬತ್ತೂವರೆ ವರ್ಷಗಳ ಕಾಲ ಜೈಲು­ವಾಸ ಅನುಭವಿಸಿದ್ದ ಮದನಿ ನಿರ­ಪ­ರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿತು. ಅವರು ಬಿಡುಗಡೆಯಾಗುತ್ತಿ­ದ್ದಂತೆ ಬೆಂಗಳೂರು ಪೊಲೀಸರು ಅವರ ಬೆನ್ನು ಬಿದ್ದರು. ಅಮಾಯಕ ಮದನಿ ಅವರನ್ನು ವಿನಾಕಾರಣ ಹಿಂಸಿಸ­ಲಾಗು­ತ್ತಿದೆ’ ಎಂದರು.ಪೀಪಲ್ಸ್‌ ಡೆಮಾಕ್ರೆಟಿಕ್‌ ಫೋರಂನ (ಪಿಡಿಎಫ್‌) ಅಧ್ಯಕ್ಷ ಪ್ರೊ.ನಗರಿ ಬಾಬಯ್ಯ ಮಾತನಾಡಿ, ‘ಆರೋಗ್ಯ ಸಮಸ್ಯೆ­ಯಿಂದ ಬಳಲುತ್ತಿರುವ ಮದನಿ ಅವ­ರಿಗೆ ಸೂಕ್ತ ಚಿಕಿತ್ಸೆಯ ಅಗತ್ಯವಿದೆ. ಆದರೆ, ಪರಪ್ಪನ ಅಗ್ರಹಾರ ಕೇಂದ್ರ ಕಾರಾ­ಗೃಹದ ಆಸ್ಪತ್ರೆಯ ವೈದ್ಯರು ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಮದನಿ ಅವರೊಂದಿಗೆ ಮಾನವೀಯ­ವಾಗಿ ನಡೆದುಕೊಳ್ಳ­ಬೇಕು. ಯಾವುದೆ ಸಾಕ್ಷ್ಯಾಧಾರಗಳಿಲ್ಲದ ಅವರನ್ನು ಬಿಡು­ಗಡೆ­ಗೊಳಿ­ಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.ಅನಾರೋಗ್ಯದಿಂದಾಗಿ ಪ್ರತಿಭಟನೆ­ಯಲ್ಲಿ ಪಾಲ್ಗೊಳ್ಳಲು ಸಾಧ್ಯವಾ­ಗದ ಕಾರಣ ಸಂದೇಶ ಕಳಿಸಿದ್ದ ಹಿರಿಯ ಸಾಹಿತಿ ಡಾ.ಯು.ಆರ್‌.­ಅನಂತ­ಮೂರ್ತಿ ಅವರ ಧ್ವನಿಮುದ್ರಿಕೆಯನ್ನು ಕಾರ್ಯ­­ಕ್ರಮದಲ್ಲಿ ಪ್ರಸಾರ ಮಾಡಲಾಯಿತು.‘ಮದನಿ ಸಂವಿಧಾನ ವಿರೋಧಿ­ಯಲ್ಲ, ಅಪರಾಧಿಯೂ ಅಲ್ಲ. ಸಾಕ್ಷ್ಯಾ­ಧಾರ­­ಗಳಿಲ್ಲದಿದ್ದರೂ ಅವರನ್ನು ಬಂಧಿಸಿ­ಟ್ಟಿ­ರುವುದು ನಾಚಿಕೆಗೇಡಿನ ವಿಷಯ. ಮದನಿ ಅವರು ಮಾತನಾಡಲು ಅವ­ಕಾಶ ನೀಡಬೇಕು. ಅವರನ್ನು ಬಿಡುಗಡೆ­ಗೊಳಿ­ಸಲು ಸರ್ಕಾರ ಮುಂದಾಗಬೇಕು. ಈ ವಿಚಾರವಾಗಿ ನಾನು ರಾಷ್ಟ್ರಪತಿಯ­ವರಿಗೆ ಪತ್ರ ಬರೆಯುತ್ತೇನೆ’ ಎಂದು ಅವರು ಹೇಳಿದ್ದಾರೆ.‘ಮದನಿ ಅವರಿಗೆ ಅನ್ನಿಸಿದ್ದನ್ನು ಹೇಳಿ­ಕೊಳ್ಳಲು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆಮ್‌ ಆದ್ಮಿ ಪಕ್ಷದ ಕೆಲವರು ದೇಶದ ಕಾನೂನುಗಳನ್ನು ಪ್ರಶ್ನಿಸುತ್ತಿದ್ದಾರೆ. ಇದು ತಪ್ಪಲ್ಲ. ಸಂವಿಧಾನವನ್ನು ಪ್ರಶ್ನಿಸಿ­ದರೆ ಮಾತ್ರ ತಪ್ಪಾಗುತ್ತದೆ’ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.