ಬುಧವಾರ, ಮೇ 12, 2021
26 °C

ಮದ್ಯದಂಗಡಿಗಳಿಗೆ ಅನುಮತಿ: ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ:  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ನೂತನ ಮದ್ಯದಂಗಡಿಗಳನ್ನು ಆರಂಭಿಸುವ ಕುರಿತಂತೆ ನೀಡಿದ ಹೇಳಿಕೆಯನ್ನು ವಿರೋಧಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿವೈಒ) ಹಾಗೂ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್)ಗಳ ಸಹಯೋಗದಲ್ಲಿ ನಗರದ ವಿವೇಕಾನಂದ ವೃತ್ತದಲ್ಲಿ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.`ರಾಜ್ಯ ಬಜೆಟ್ ಮಂಡನೆಗೆ ಮುಂಚಿತವಾಗಿ ಸರ್ಕಾರದ ವತಿಯಿಂದ ಹೊರಬಿದ್ದಿರುವ ಮದ್ಯ ಮಾರಾಟ ಅಂಗಡಿಗಳಿಗೆ (ವೈನ್ ಶಾಪ್)ಗಳಿಗೆ ಹೊಸದಾಗಿ ಪರವಾನಗಿ ನೀಡಬೇಕೆನ್ನುವ ಪ್ರಸ್ತಾಪವು ರಾಜ್ಯದ ಎಲ್ಲ ಪ್ರಜ್ಞಾವಂತರಲ್ಲಿ ದಿಗ್ಭ್ರಮೆ ಮೂಡಿಸಿದೆ. ಸರ್ಕಾರವು ಈ ಕ್ರಮವನ್ನು ಕೈಗೊಂಡಲ್ಲಿ ಕುಡಿತದ ವ್ಯಸನವು ಸಮಾಜವನ್ನು ಮತ್ತಷ್ಟು ಆವರಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಆದಾಯದ ಮೂಲವನ್ನು ವಿಸ್ತರಿಸಲು ಎಂದೋ, 1997ರಿಂದ ಯಾವುದೇ ಹೊಸ ಪರವಾನಗಿ ನೀಡಿಯೇ ಇಲ್ಲ ಎಂದೋ, ಸರ್ಕಾರವು ನೀಡುತ್ತಿರುವ ಸಮರ್ಥನೆಗಳು ಎಳ್ಳಷ್ಟೂ ಒಪ್ಪತಕ್ಕವಲ್ಲ' ಎಂದು ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಎಐಡಿವೈಓ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ ಜಡಗನ್ನವರ ಟೀಕಿಸಿದರು.`ಸಮಾಜದ ಅಂಚಿನಲ್ಲಿರುವ ಬಡ, ದಲಿತ ಮತ್ತು ಹಿಂದುಳಿದ ಜನರನ್ನು ಬಲಿ ತೆಗೆದುಕೊಳ್ಳುವ ಕುಡಿತದ ವ್ಯಸನವು ಸಮಾಜದಿಂದ ಮೂಲೋತ್ಪಾಟನೆಯಾಗ ಬೇಕೆಂಬುದು ಎಲ್ಲ ಸುಚಿಂತಕರ ಒಮ್ಮತಾಭಿಪ್ರಾಯ! ತಮ್ಮ ವರಮಾನದ ಬಹುಪಾಲನ್ನು ಈ ದುಶ್ಚಟದ ಮೇಲೆ ಸುರಿದು ಸಂಸಾರವನ್ನು ಬೀದಿಗೆ ತಳ್ಳುವ ಸತ್ಯವು ಕಣ್ಣಿಗೆ ರಾಚುತ್ತಿರುವಾಗ ಕುಡಿತದ ಪ್ರಮಾಣವನ್ನು ಕಡಿಮೆ ಮಾಡುವುದು ಬಿಟ್ಟು ಹೆಚ್ಚಿಸುವ ಮಾತನ್ನು ಸರ್ಕಾರವು ಆಡುವುದು ಆಘಾತಕಾರಿಯಾಗಿದೆ. ಮುಖ್ಯಮಂತ್ರಿಗಳು ತಮ್ಮ ನಿರ್ಧಾರವನ್ನು ಕೂಡಲೇ ವಾಪಸ್ ತೆಗೆದುಕೊಳ್ಳಬೇಕು' ಎಂದು ಒತ್ತಾಯಿಸಿದರು.ಎಐಎಂಎಸ್‌ಎಸ್ ಜಿಲ್ಲಾ ಸಂಚಾಲಕಿ ಪ್ರಭಾವತಿ ಗೂಗಲ್, `ಹಿಂದಿನ ಬಿಜೆಪಿ ಸರ್ಕಾರವು ಅಬಕಾರಿ ಯನ್ನೇ ಬಹು ದೊಡ್ಡ ಆದಾಯ ತರುವ ಇಲಾಖೆಯನ್ನಾಗಿ ಮಾಡಿಕೊಂಡು ಪ್ರತಿ ವರ್ಷವೂ ಅಬಕಾರಿ ಸಂಗ್ರಹವನ್ನು ಹೆಚ್ಚಿಸಿಕೊಳ್ಳುತ್ತಲೇ ಹೋಯಿತು. ಕುಡಿತದಿಂದಾಗಿ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಲೇ ನಡೆದಿವೆ. ಮದ್ಯಪಾನ ನಿಷೇಧಿಸಿ ಕುಟುಂಬ ಕಲಹಗಳು ನಿಲ್ಲುವಂತೆ ಕ್ರಮ ಕೈಗೊಳ್ಳುವ ಬದಲು ಸರ್ಕಾರ ಮತ್ತಷ್ಟು ಮದ್ಯದಂಗಡಿಗಳನ್ನು ತೆರೆಯಲು ಹೊರಟಿರುವುದು ವಿಷಾದನೀಯ' ಎಂದರು.

ಪ್ರತಿಭಟನೆಯಲ್ಲಿ ಎಐಡಿವೈಓ ಸಂಘಟನಾಕಾರ ರಮೇಶ ಹೊಸಮನಿ, ಎಐಎಂಎಸ್‌ನ ಶಶಿಕಲಾ ಹಾಗೂ ಯುವಜನ, ಮಹಿಳೆಯರು ಭಾಗವಹಿಸಿದ್ದರು.ನಂತರ ನಿಯೋಗವೊಂದು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.