ಗುರುವಾರ , ಮೇ 26, 2022
30 °C

ಮಧ್ಯವರ್ತಿಗಳ ಹಾವಳಿ: ರೈತರಿಗೆ ಸಂಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಧ್ಯವರ್ತಿಗಳ ಹಾವಳಿ: ರೈತರಿಗೆ ಸಂಕಷ್ಟ

ಕನಕಪುರ: `ಕಷ್ಟದ ನಡುವೆಯೂ ಕೃಷಿ ಚಟುವಟಿಕೆ ಮುಂದುವರಿಸುತ್ತಿರುವ ರೈತರಿಗೆ ಮಧ್ಯವರ್ತಿಗಳ ಹಾವಳಿಯಿಂದ ಸೂಕ್ತ ನ್ಯಾಯ ದೊರಕದಂತಾಗಿದೆ~ ಎಂದು ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ  ಕುಲಪತಿ ಡಾ.ಕೆ.ನಾರಾಯಣಗೌಡ ವಿಷಾದಿಸಿದರು. ತಾಲ್ಲೂಕಿನ ಕಸಬಾ ಹೋಬಳಿ ಉದಾರಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ತೋಟಗಾರಿಕೆ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ಏರ್ಪಡಿಸಿದ್ದ ಅಂಗಾಂಶ ಕೃಷಿ ಬಾಳೆ ಬೇಸಾಯ ಹಾಗೂ ಮಾರುಕಟ್ಟೆ ಕುರಿತ ವಿಚಾರ ಸಂಕಿರಣದಲ್ಲಿ ಅಂಗಾಂಶ ಕೃಷಿ ಬಾಳೆ ಬೇಸಾಯ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.  `ಸಾವಿರಾರು ಸವಾಲುಗಳ ನಡುವೆ ರೈತರು ವ್ಯವಸಾಯ ಮುಂದುವರಿಸಿದ್ದಾರೆ. ಆದರೆ ಶ್ರಮವಹಿಸಿ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಪೂರ್ಣ ಪ್ರಮಾಣದ ಲಾಭ ದೊರೆಯದೆ ಮಧ್ಯವರ್ತಿಗಳ ಪಾಲಾಗುತ್ತಿದೆ~ ಎಂದು ವಿಷಾದ ವ್ಯಕ್ತಪಡಿಸಿದರು.  ಎಲ್ಲಾ ಸಂದರ್ಭಗಳಲ್ಲೂ ಒಗ್ಗಟ್ಟು ಪ್ರದರ್ಶಿಸುವ ರೈತರು, ಬೆಳೆಯ ಮಾರಾಟ ಸಂದರ್ಭದಲ್ಲಿ ನಿರುತ್ಸಾಹ ತೋರುತ್ತಾರೆ. ಮಾರುಕಟ್ಟೆಯವರೆಗೂ ಬಾರದೇ ಮಧ್ಯವರ್ತಿಗಳ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡಿಕೊಳ್ಳುವ ಮೂಲಕ ತನಗೆ ತಾನೆ ವಂಚಿಸಿಕೊಳ್ಳುತ್ತಿದ್ದಾರೆ~ ಎಂದರು.  ಇಲಾಖೆಯಿಂದ 154 ಯೋಜನೆಗಳಿದ್ದು ಅವು ರೈತರ ಕೈಸೇರುತ್ತಿಲ್ಲ, ಇಲಾಖೆಯ ಅಧಿಕಾರಿಗಳು ಹಳ್ಳಿಗಳಿಗೆ ಯೋಜನೆಗಳನ್ನು ತಲುಪಿಸಬೇಕೆಂದು ಅವರು ಸಲಹೆ ನೀಡಿದರು. ಬಾಳೆ ಬೇಸಾಯವು ಇತ್ತೀಚಿನ ದಿನಗಳಲ್ಲಿ ತುಂಬ ಲಾಭದಾಯಕವಾಗಿದ್ದು ಹೆಚ್ಚು ಹೆಚ್ಚು ರೈತರು ಬಾಳೆ ಬೇಸಾಯವನ್ನು ಮಾಡುವುದರ ಜೊತೆಗೆ ಅಂಗಾಂಶ ಕೃಷಿ ಬಾಳೆ ಬೇಸಾಯ ಪದ್ದತಿಯನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.  ಕೃಷಿ ಪ್ರಶಸ್ತಿ ವಿಜೇತ ಹೊನ್ನಿಗನಹಳ್ಳಿ ಶ್ರಿಕಂಠು ಮಾತನಾಡಿ, ರೈತರು ಬೇಸಾಯ ಮಾಡುವ ಮುನ್ನ ಭೂಮಿಯನ್ನು ಸಮತಟ್ಟು ಮಾಡಬೇಕು. ಫಲವತ್ತಾದ ಮಣ್ಣನ್ನು ಹೊರ ಹಾಕಬಾರದು. ಹನಿ ನಿರಾವರಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕೆಂದರು.  ರೈತರು ಆರ್ಥಿಕವಾಗಿ ಅಭಿವೃದ್ದಿಯಾಗಬೇಕಾದರೆ ರೇಷ್ಮೆ, ತೆಂಗು ಸೇರಿದಂತೆ ಬಾಳೆ ಬೇಸಾಯ ಪ್ರಮುಖವಾಗಿದ್ದು ಮಾರುಕಟ್ಟೆಗೆ ಅನುಗುಣ ವಾಗಿ ಕೃಷಿ ಚಟುವಟಿಕೆ ಕೈಗೊಳ್ಳಬೇಕು. ಅಂಗಾಂಶ ಕೃಷಿ ಪದ್ಧತಿಯಲ್ಲಿ ಬಾಳೆ ಬೇಸಾಯ ಮಾಡಬೇಕು. ಕೃಷಿ ಚಟುವಟಿಕೆಯಲ್ಲಿ ಶ್ರಮವಹಿಸುವ ರೈತರು ಅದರ ಮಾರಾಟದಲ್ಲೂ ಶ್ರಮವಹಿಸಿ ಉತ್ತಮ ಲಾಭ ಪಡೆಯುವಂತೆ ಕರೆ ನೀಡಿದರು. ಕೃಷಿ ವಿಶ್ವ ವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಎಚ್.ಶಿವಣ್ಣ, ಹಾಪ್‌ಕಾಮ್ಸನ ವ್ಯವಸ್ಥಾಪಕ ನಿರ್ದೇಶಕ ಡಾ.ಪರಶಿವಮೂರ್ತಿ ಸೇರಿದಂತೆ ಕೃಷಿ ತಜ್ಞರು ವಿಚಾರ ಸಂಕಿರಣದಲ್ಲಿ ಮಾತನಾಡಿ, ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳುವ ಮೂಲಕ ರೈತರು ಆರ್ಥಿಕವಾಗಿ ಸದೃಢವಾಗಬೇಕೆಂದು ತಿಳಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸವಿತ ಸುರೇಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ನಳಿನಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಮು, ತಾಲ್ಲೂಕು ಪಂಚಾಯಿತಿ ಸದಸ್ಯೆ ಸರೋಜಮ್ಮ, ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕ ಡಾ.ಕೃಷ್ಣ, ತಾಲ್ಲೂಕು ಹಿರಿಯ ಸಹಾಯಕ ನಿರ್ದೇಶಕ ಬಿ.ರಘು ಸೇರಿದಂತೆ ಅನೇಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.`ಕೃಷಿ ಬಿಡಬೇಡಿ~

ದೇಶದ ಜನಸಂಖ್ಯೆಯಲ್ಲಿ ಶೇಕಡ 70 ರಷ್ಟು ಬೇಸಾಯದಿಂದ ವಿಮುಖರಾಗುತ್ತಿದ್ದಾರೆ. ರೈತರ ಮಕ್ಕಳು ಜಮೀನು ಬಿಟ್ಟು ಕಾರ್ಖಾನೆ ಸೇರುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಆಹಾರದ ಅಸಮತೋಲನ ಎದುರಾಗುತ್ತದೆ. ಕೃಷಿಗೆ ಬಹಳ ಪ್ರಾಮುಖ್ಯತೆ ಬರುತ್ತದೆ. ಆದ್ದರಿಂದ ಯಾವುದೆ ಕಾರಣಕ್ಕೂ ಕೃಷಿ ಚಟುವಟಿಕೆಯನ್ನು ಕೈಬಿಡದಂತೆ ರೈತ ಶ್ರೀಕಂಠು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.