ಸೋಮವಾರ, ಮೇ 10, 2021
28 °C

ಮನೆಗೆ ನುಗ್ಗಿ ಚಿನ್ನಾಭರಣ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮನೆಗೆ ನುಗ್ಗಿದ ಕಳ್ಳರು ಕಬ್ಬಿಣದ ಕಪಾಟಿನ ಲಾಕರ್‌ನಲ್ಲಿ ಇಟ್ಟಿದ್ದ 80 ಗ್ರಾಂ ತೂಕದ ರೂ 90 ಸಾವಿರ ಮೌಲ್ಯದ ಚಿನ್ನಾಭರಣ ಕದ್ದೊಯ್ದ ಘಟನೆ ಮಯೂರಿ ಬಡಾವಣೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.ಬಡಾವಣೆಯ ಬೀಳಗಿ ಪ್ಲಾಟ್ ನಂ. 24ರಲ್ಲಿ ವಾಸವಾಗಿರುವ ಪ್ರೇಮನಾಥ ಮಿಶ್ರಾ ಅವರ ಮನೆಯಲ್ಲಿ ಈ ಕಳವು ನಡೆದಿದೆ. ಪ್ರೇಮನಾಥ ಅವರ ಪತ್ನಿ ಅಪರ್ಣಾ ಅವರು ಹಾಲು ತರಲು ಮನೆಯ ಬಾಗಿಲು ಹಾಕಿಕೊಂಡು ಹೋಗಿ 6.15ಕ್ಕೆ ಮರಳಿ ಬಂದು ಮನೆಯ ಮುಂಬಾಗಿಲು ತೆರೆಯಲು ಯತ್ನಿಸಿದ್ದರು. ಅದು ತೆರೆದುಕೊಳ್ಳದೇ ಇದ್ದುದರಿಂದ ಒಳಗಿನಿಂದ ಲಾಕ್ ಆಗಿರಬಹುದು ಎಂದು ಪತಿಗೆ ಕರೆ ಮಾಡಿದ್ದರು. ಪತಿ ಬಂದು ಯತ್ನಿಸಿದರೂ ಬಾಗಿಲು ತೆರೆಯಲಾಗದೆ, ಹಿಂಬದಿಗೆ ಹೋಗಿ ನೋಡಿದರೆ ಅಲ್ಲಿ ಬಾಗಿಲು ತೆರೆದುಕೊಂಡಿತ್ತು. ಕಳ್ಳರು ಹಿಂಬಾಗಿಲಿನಿಂದ ಒಳಗೆ ಪ್ರವೇಶಿಸಿ, ಮುಂಬಾಗಿಲಿನ ಚಿಲಕವನ್ನು ಒಳಗಿನಿಂದ ಹಾಕಿ ಕಳವು ನಡೆಸಿದ್ದಾರೆ ಎಂದು  ಪ್ರೇಮನಾಥ ಅವರು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಲ್ಯಾಪ್‌ಟಾಪ್ ಕಳವು: ದೂರು

ಹುಬ್ಬಳ್ಳಿ: ಮುಂಬೈಗೆ ಹೋಗಲು ಖಾಸಗಿ ಬಸ್ ಏರಿ ಸೀಟಿನ ಬಳಿ ಇರಿಸಿದ್ದ ಕೆಲವೇ ಕ್ಷಣಗಳಲ್ಲಿ ಲ್ಯಾಪ್‌ಟಾಪ್ ಕಳವು ಆಗಿದೆ ಎಂದು ಪ್ರಯಾಣಿಕರೊಬ್ಬರು ಉಪನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ನಗರ ಐಟಿ ಪಾರ್ಕ್ ಬಳಿ ಈ ಕೃತ್ಯ ನಡೆದಿದೆ. `ನಾನು ಮತ್ತು ಮಗ ಬಸ್ಸಿನ ಸೀಟಿನ ಬಳಿ ಇಟ್ಟಿದ್ದ ಲಾಪ್‌ಟಾಪ್‌ನ್ನು ಕಳವು ಮಾಡಲಾಗಿದೆ' ಎಂದು ಸಂಜೀವ್‌ವಕೀಲ ಎಂಬವರು ದೂರಿನಲ್ಲಿ ತಿಳಿಸಿದ್ದಾರೆ.ಶಾಲಾ ವಿದ್ಯಾರ್ಥಿನಿ ಆತ್ಮಹತ್ಯೆ

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಶಾಲಾ ವಿದ್ಯಾರ್ಥಿನಿ ಮನೆಯ ಮಲಗುವ ಕೊಠಡಿಯಲ್ಲಿದ್ದ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ ಘಟನೆ ಅಮರನಗರ ಬಳಿ ಶುಕ್ರವಾರ ರಾತ್ರಿ ನಡೆದಿದೆ.ಸ್ಥಳೀಯ ನಿವಾಸಿ, ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ವಿದ್ಯಾವತಿ ಭಜಂತ್ರಿ (14) ಆತ್ಮಹತ್ಯೆ ಮಾಡಿಕೊಂಡವಳು. ಹಠ ಮಾರಿ ಸ್ವಭಾವ ಹೊಂದಿದ್ದ ವಿದ್ಯಾವತಿ, ಕೇಳಿದ ಪುಸ್ತಕವನ್ನು ಅಕ್ಕ ನೀಡಲಿಲ್ಲ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಬಾಲಕಿಯ ತಂದೆ ಶಿವಾನಂದ ಭಜಂತ್ರಿ ಶಿಕ್ಷಕರಾಗಿದ್ದು, ತಾಯಿ ಪೊಲೀಸ್ ಕಾನ್‌ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಂಗಳಸೂತ್ರ ಕಳವು

ಹುಬ್ಬಳ್ಳಿ: ಮನೆಗೆ ನುಗ್ಗಿದ ಕಳ್ಳರು ಮಲಗುವ ಕೊಠಡಿ ಯಲ್ಲಿದ್ದ 15 ಗ್ರಾಂ ತೂಕದ ಚಿನ್ನದ ಮಂಗಳಸೂತ್ರ ಕಳವು ಮಾಡಿದ ಘಟನೆ ಮಧುರಾ ಎಸ್ಟೇಟ್‌ನಲ್ಲಿ ನಡೆದಿದೆ.ಶನಿವಾರ ಬೆಳಗ್ಗೆ 5.30ರ ಸುಮಾರಿಗೆ ಮಗಳನ್ನು ಟ್ಯೂಷನ್ ಕ್ಲಾಸಿಗೆ ಬಿಟ್ಟು ಮರಳಿ ಬರುವಷ್ಟರಲ್ಲಿ ಈ ಕಳವು ನಡೆದಿದೆ ಎಂದು ಗುರುನಾಥ ಕಾಂಬಳೆ ಎಂಬವರು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಸಾಲದ ಬಾಧೆ ತಾಳಲಾರದೇ ಆತ್ಮಹತ್ಯೆ

ಧಾರವಾಡ: ಸಾಲದ ಬಾಧೆ ತಾಳಲಾರದೇ ತಾಲ್ಲೂಕಿನ ಮಾದನಭಾವಿ ಗ್ರಾಮದ ಫಕ್ಕೀರಪ್ಪ ರೇಣಕಿ (70) ಎಂಬುವವರು ಶನಿವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇವರು ನಾಲ್ಕೈದು ವರ್ಷಗಳ ಹಿಂದೆ ತಡಕೋಡ ಗ್ರಾಮದ ಬ್ಯಾಂಕ್‌ನಲ್ಲಿ 20 ಸಾವಿರ ರೂಪಾಯಿ ಬೆಳೆ ಸಾಲ ಪಡೆದಿದ್ದರು. ಪಡೆದ ಸಾಲವನ್ನು ಈ ವರ್ಷ ಮರುಪಾವತಿ ಮಾಡಲಾಗದೇ ಮನನೊಂದು ಮಾದನಭಾವಿ ಗ್ರಾಮದ ಊರ ಹೊರಭಾಗದ ಹೊಲವೊಂದರಲ್ಲಿ ಇದ್ದ ಹುಣಸೆ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೆಲಗೇರಿ ಕೆರೆಯಲ್ಲಿ ಬಿದ್ದು ವ್ಯಕ್ತಿ ಸಾವು

ಧಾರವಾಡ: ಇಲ್ಲಿಯ ಬನಶಂಕರಿ ನಗರದ ನಿವಾಸಿ ರಮೇಶ ಪಂಡಿತ್ (57) ಎಂಬುವವರು ಶುಕ್ರವಾರ ಕೆಲಗೇರಿಯಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ. ರಮೇಶ ಲಾರಿ ಚಾಲಕರಾಗಿದ್ದರು, ಕಳೆದ ಮೂರು ವರ್ಷಗಳ ಹಿಂದೆ ಆಗಿದ್ದ ಅಪಘಾತದಲ್ಲಿ ಅವರ ಕಾಲಿಗೆ ಪೆಟ್ಟು ಬಿದ್ದಿತ್ತು. ಕಳೆದ 20ರಂದು ರಮೇಶ ವಾಯು ವಿಹಾರಕ್ಕೆಂದು ಕೆಲಗೇರಿಗೆ ತೆರಳಿದ್ದರು. ವಾಕಿಂಗ್ ಮಾಡುವ ಸಂದರ್ಭದಲ್ಲಿ ಆಯತಪ್ಪಿ ನೀರಿನಲ್ಲಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ರಮೇಶ ಅವರ ಪುತ್ರ ಅಮಿತ್ ಪಂಡಿತ್ ಅವರು ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತದೇಹ ಶನಿವಾರ ಬೆಳಗಿನಜಾವ ಮೇಲೆ ಕಾಣಿಸಿದ್ದರಿಂದ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.