ಭಾನುವಾರ, ಆಗಸ್ಟ್ 9, 2020
21 °C

ಮರದಡಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ

ಪ್ರಜಾವಾಣಿ ವಾರ್ತೆ/ ಮಾಡಾಳು ಶಿವಲಿಂಗಪ್ಪ Updated:

ಅಕ್ಷರ ಗಾತ್ರ : | |

ಮರದಡಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ

ಅರಸೀಕೆರೆ: ಗುತ್ತಿಗೆದಾರ ಹಾಗೂ ಪ್ರಾಂಶುಪಾಲರ ನಡುವೆ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ನೂತನವಾಗಿ ನಿರ್ಮಿಸಿರುವ ಕಾಲೇಜು ಕೊಠಡಿ ಉದ್ಘಾಟನೆ ನೆನೆಗುದಿಗೆ ಬಿದ್ದಿದ್ದು, ವಿದ್ಯಾರ್ಥಿಗಳು ಮರದ  ಕೆಳಗೆ ಕುಳಿತು ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.ತಾಲ್ಲೂಕಿನ ಬಾಳೇನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಲವು ದಿನಗಳಿಂದ ಇಂತಹ ಸಮಸ್ಯೆ ಎದುರಿಸುತ್ತಿದ್ದಾರೆ.ಕಾಲೇಜಿನಲ್ಲಿರುವ ಕೊಠಡಿ ಕೊರತೆಯನ್ನು ಪರಿಹರಿಸಲು ಸರ್ಕಾರ ಎರಡು ವರ್ಷಗಳ ಹಿಂದೆ 15.94 ಲಕ್ಷ ರೂಪಾಯಿ ಬಿಡುಗಡೆ ಮಾಡಿತ್ತು. ಈ ಅನುದಾನದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದ್ದು, ಮಳೆಯಿಂದ ಅದು ಸೋರುತ್ತಿದೆ. ಹೀಗಾಗಿ ಕಟ್ಟಡವನ್ನು ತಮ್ಮ ಸುಪರ್ದಿಗೆ ವಹಿಸಿಕೊಳ್ಳಲು ಪ್ರಾಂಶುಪಾಲರು ನಿರಾಕರಿಸಿದ್ದಾರೆ. ಈ ನಡುವೆ ಕಟ್ಟಡ ಗುತ್ತಿಗೆದಾರ ತಮಗೆ ಸಂಪೂರ್ಣ ಹಣ ಪಾವತಿಯಾಗಿಲ್ಲ ಎಂಬ ವಾದ ಇಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಮರದ ನೆರಳಲ್ಲಿ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.ಅರಸೀಕೆರೆ- ಮೈಸೂರು ರಸ್ತೆ ಬದಿಯಿರುವ ಕಾಲೇಜು ಪ್ರಶಾಂತ ವಾತಾವರಣದಲ್ಲಿದೆ. ಆದರೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಉದಾಸೀನತೆಯಿಂದ ವಿದ್ಯಾರ್ಥಿಗಳು ಮಾತ್ರ ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಗ್ರಾಮಸ್ಥರು ದೂರುತ್ತಾರೆ.ಆಧುನಿಕ ಕಾಲದಲ್ಲೂ ಮರಗಳ ನೆರಳಿನಲ್ಲಿ ಕಾಲೇಜು ನಡೆಯುತ್ತಿರುವುದು ಮಾತ್ರ ಶೋಚನೀಯ ಸಂಗತಿ. ಹಳೆಯ ಕಾಲೇಜು ಕಟ್ಟಡದಲ್ಲಿ ಪ್ರೌಢಶಾಲೆಯೂ ನಡೆಯುತ್ತಿದೆ. ಇರುವ 5 ಕೊಠಡಿಗಳಲ್ಲಿ ಕಂಪೂಟರ್ ಶಿಕ್ಷಣಕ್ಕೆ ಒಂದು ಕೊಠಡಿಯನ್ನು ಬಳಸಲಾಗುತ್ತಿದೆ. ಇನ್ನೊಂದು ಶಿಕ್ಷಕರ ಕಾರ್ಯಾಲಯವಾಗಿದೆ. ಇನ್ನುಳಿದ ಮೂರು ಕೊಠಡಿಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಕಾಲೇಜು ಆರಂಭವಾದರೆ ನಂತರ 10.30 ಗಂಟೆಗೆ ಪ್ರೌಢ ಶಾಲಾ ತರಗತಿಗಳು ಶುರುವಾಗುತ್ತವೆ. ಈ ವೇಳೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿರುವ ಹಿಪ್ಪೆ ಹಾಗೂ ಮಾವಿನ ಮರಗಳ ಕೆಳಗೆ ಕುಳಿತು ಪಾಠ ಕೇಳಬೇಕಿದೆ.ಬಿಸಿಲು- ಮಳೆ ಬಂದರೆ ನಿಲ್ಲಲೂ ಕೂಡಾ ಸಾಧ್ಯವಿಲ್ಲ. ಆದರೆ ಕಾಲೇಜು ಪಕ್ಕದಲ್ಲಿರುವ ಪಶು ಆಸ್ಪತ್ರೆಯ ಎರಡು ಸಣ್ಣ ಕೊಠಡಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಒಳಗೆ ಕುಳಿತು ಪಾಠ ಕೇಳೋಣ ಎಂದರೆ ಸ್ಥಳಾವಕಾಶ ಇಲ್ಲ ಎಂದು ವಿದ್ಯಾರ್ಥಿಗಳು ನೋವನ್ನು ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.