ಭಾನುವಾರ, ಜನವರಿ 26, 2020
18 °C
ಐದನೇ ದಿನಕ್ಕೆ ಕಾಲಿಟ್ಟ ಲಾರಿ ಮುಷ್ಕರ

ಮರಳು ಅಭಾವ: ನಿರ್ಮಾಣ ಕಾಮಗಾರಿ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರದ ನೂತನ ಮರಳು ನೀತಿಯನ್ನು ವಿರೋಧಿಸಿ ಲಾರಿ ಮಾಲೀಕರು ಡಿ.20ರಿಂದ ರಾಜ್ಯದಾ­ದ್ಯಂತ ಆರಂಭಿಸಿರುವ ಅನಿರ್ದಿಷ್ಟಾವಧಿ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ಮುಷ್ಕರದಿಂದಾಗಿ ಮರಳು ಸಾಗಣೆ ಲಾರಿಗಳ ಸೇವೆ ಸಂಪೂರ್ಣ ಸ್ಥಗಿತ­ಗೊಂಡಿದ್ದು, ಕಟ್ಟಡ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿ­ಯಾಗಿದೆ.ರಾಜ್ಯದಲ್ಲಿ 25 ಸಾವಿರ ಮರಳು ಸಾಗಣೆ ಲಾರಿಗಳಿದ್ದು, ಮುಷ್ಕರಕ್ಕೂ ಮುನ್ನ ಪ್ರತಿನಿತ್ಯ ಸುಮಾರು 15 ಸಾವಿರ ಲೋಡ್ ಮರಳು ಸಾಗಣೆ­ಯಾಗುತ್ತಿತ್ತು. ನಗರಕ್ಕೆ ಮೂರು ಸಾವಿರ ಲೋಡ್‌ ಮರಳು ಬರುತ್ತಿತ್ತು. ಆದರೆ, ಮುಷ್ಕರದ ಭಾಗವಾಗಿ ಮರಳು ಪೂರೈಕೆಯಾಗುತ್ತಿಲ್ಲ. ಹಲವೆಡೆ ಈ ಹಿಂದೆಯೇ ದಾಸ್ತಾನು ಮಾಡಿದ್ದ ಮರಳನ್ನೇ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ.ಮತ್ತೊಂದೆಡೆ ಫಿಲ್ಟರ್ ಮರಳನ್ನೇ ಮಾರಾಟ ಮಾಡಲಾಗುತ್ತಿದೆ. ಕೆಲ ವ್ಯಾಪಾರಿ­ಗಳು ನೆರೆಯ ತಮಿಳು­ನಾಡಿನಿಂದ ರಾತ್ರಿ ವೇಳೆ ಅಕ್ರಮವಾಗಿ ಮರಳು ಸಾಗಿಸಿ ತಂದು ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ. ದಿನ ಕಳೆದಂತೆ ಲಾರಿ ಚಾಲಕರು, ಕೂಲಿ ಕಾರ್ಮಿಕರು ಮತ್ತು ಕಟ್ಟಡ ಕಾರ್ಮಿಕರಿಗೂ ಮುಷ್ಕರದ ಬಿಸಿ ತಟ್ಟಲಾರಂಭಿಸಿದೆ.  ಚಾಲಕರಿಗೆ ಹಾಗೂ ಕಾರ್ಮಿಕರಿಗೆ ದುಡಿಮೆ ಇಲ್ಲದೆ ಜೀವನ ನಿರ್ವಹಣೆಗೆ ತೊಂದರೆ­ಯಾ­ಗಿದೆ. ಇದರಿಂದಾಗಿ ಅವರು ಕುಟುಂಬ ಸದಸ್ಯರೊಂದಿಗೆ ಸ್ವಂತ ಊರುಗಳಿಗೆ ಮರಳುತ್ತಿದ್ದಾರೆ.‘ತಿಂಗಳಲ್ಲಿ ಸುಮಾರು 20 ಲೋಡ್ ಮರಳು ಸಾಗಿಸಿ ₨ 10 ಸಾವಿರದಿಂದ 15 ಸಾವಿರ ಸಂಪಾದನೆ ಮಾಡುತ್ತಿದ್ದೆ. ಮುಷ್ಕರದಿಂದ ಕೆಲಸ ಇಲ್ಲದಂತಾಗಿದೆ. ಸಂಪಾ­ದನೆಯೂ ಶೂನ್ಯ­ವಾಗಿದೆ. ಇದರಿಂದ ಜೀವನ ನಿರ್ವ­ಹಣೆಗೆ ತೊಂದರೆ­ಯಾಗಿದೆ’ ಎಂದು ಲಾರಿ ಚಾಲಕ ಲೋಕೇಶ್‌ ಅಳಲು ತೋಡಿ­ಕೊಂಡರು.ಮರಳು ದರ ಏರಿಕೆ: ‘ಮುಷ್ಕರ­ದಿಂದ ಮರಳಿನ ದರದಲ್ಲಿ ಏರಿಕೆಯಾಗಿದೆ. ಮುಷ್ಕರಕ್ಕೂ ಮುನ್ನ ₨ 20 ಸಾವಿರ­ದಿಂದ 25 ಸಾವಿರ ಇದ್ದ ಒಂದು ಲಾರಿ ಲೋಡ್ ಮರಳಿನ ಬೆಲೆ ಇದೀಗ ₨ 65 ಸಾವಿರಕ್ಕೆ ಏರಿಕೆಯಾಗಿದೆ. ಅಷ್ಟು ಹಣ ಕೊಟ್ಟರೂ ಗುಣಮಟ್ಟದ ಮರಳು ಸಿಗುತ್ತಿಲ್ಲ’ ಎಂದು ಸ್ಟೇಟ್‌ ಲ್ಯಾಂಡ್‌ ಡೆವಲಪರ್‌್ಸ ಮತ್ತು ಬಿಲ್ಡರ್‌್ಸ ಅಸೋಸಿ­ಯೇಷನ್‌ನ ಸಂಘಟನಾ ಕಾರ್ಯ­ದರ್ಶಿ ವಿ.ಕೃಷ್ಣಮೂರ್ತಿ ‘ಪ್ರಜಾ­ವಾಣಿ’ಗೆ ತಿಳಿಸಿದರು. ‘ಮುಷ್ಕರ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ. ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ತೋರದೆ ಬೇಗನೆ ಸಮಸ್ಯೆ ಬಗೆಹರಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಮುಷ್ಕರ ತೀವ್ರ

ಮುಷ್ಕರ ಆರಂಭವಾಗಿ ಐದು ದಿನ ಕಳೆದರೂ ಸರ್ಕಾರ ಮಾತುಕತೆಗೆ ಕರೆದಿಲ್ಲ. ಬೇಡಿಕೆ­ಗಳನ್ನು ಈಡೇರಿಸುವ ಸಂಬಂಧ ಮೂರ್ನಾಲ್ಕು ದಿನಗಳಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ಇಟ್ಟಿಗೆ, ಜಲ್ಲಿ ಕಲ್ಲು, ಸಿಮೆಂಟ್ ಮತ್ತಿತರ ಕಟ್ಟಡ ನಿರ್ಮಾಣ ಸಾಮಗ್ರಿಗಳ ಸಾಗಣೆ ಸೇವೆ­ಯನ್ನೂ ಸ್ಥಗಿತಗೊಳಿಸಿ ಮುಷ್ಕರ­ವನ್ನು ತೀವ್ರ­ಗೊಳಿಸುತ್ತೇವೆ

- –ಜಿ.ಆರ್.ಷಣ್ಮುಗಪ್ಪ, ಅಧ್ಯಕ್ಷರು, ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ.ಪ್ರತಿಕೂಲ ಪರಿಣಾಮ


ಲಾರಿ ಮುಷ್ಕರ ಕಟ್ಟಡ ನಿರ್ಮಾಣ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹಲವೆಡೆ ನಿರ್ಮಾಣ ಕಾರ್ಯ ಚಟುವಟಿಕೆಗಳು ಸ್ಥಗಿತ­ಗೊಂಡಿದ್ದು, ಕೂಲಿ ಕಾರ್ಮಿಕರು ದುಡಿಮೆ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ

– ಕೆ.ವೀರಮಣಿ, ಅಧ್ಯಕ್ಷರು, ಸಿಐಟಿಯು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟ.

ಪ್ರತಿಕ್ರಿಯಿಸಿ (+)