ಶನಿವಾರ, ಮೇ 15, 2021
26 °C

ಮರಳು ಗಣಿಗಾರಿಕೆ ವಿರುದ್ಧ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ:  `ತಾಲ್ಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳು ದಂಧೆ ಮಾಫಿಯಾಕ್ಕೆ ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಮುದ್ದನಾಯಕನಹಳ್ಳಿ ರಮೇಶ್ ಹಾಗೂ ಇತರರು ಲೋಕಾಯುಕ್ತರಿಗೆ ದೂರು ಸಲ್ಲಿಸಿದರು.ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ಲೋಕಾಯುಕ್ತರು ನಡೆಸಿದ ಜನಸಂಪರ್ಕ ಸಭೆಯಲ್ಲಿ ದೂರು ಸಲ್ಲಿಸಿದ ನಂತರ ಮಾತನಾಡಿದ ಅವರು, `ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಅಕ್ರಮ ಮರಳು ದಂಧೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಒಮ್ಮೆ ಮಾತ್ರ ತಹಶೀಲ್ದಾರ್ ನೇತೃತ್ವದಲ್ಲಿ ಅಕ್ರಮ ಗಣಿ ಅಡ್ಡೆಯ ಮೇಲೆ ದಾಳಿ ಮಾಡಲಾಗಿತ್ತು. ಇದರ ಹೊರತಾಗಿ ಮರಳು ದಂಧೆಯ ಕಡಿವಾಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಆರೋಪಿಸಿದರು.`ತಾಲ್ಲೂಕಿನಲ್ಲಿ ಎಲ್ಲೆಲ್ಲಿ ಮರಳು ಮಾಫಿಯಾ ನಡೆಯುತ್ತಿದೆ ಎಂಬ ಕುರಿತು ದೊಡ್ಡಬಳ್ಳಾಪುರ ವಿಭಾಗದ ಡಿವೈಎಸ್ಪಿ ಅವರಿಗೆ ಛಾಯಾಚಿತ್ರ ಸಮೇತ ದೂರು ನೀಡಲಾಗಿತ್ತು. ಆದರೆ ಅವರು ಸ್ಥಳ ಪರಿಶೀಲನೆಯನ್ನೇ ನಡೆಸದೆ `ಅಲ್ಲಿ ಸರ್ಕಾರದಿಂದ ಅನುಮತಿ ಪಡೆದು ಬಂಡೆ ಕೆಲಸ ಮಾಡಲಾಗುತ್ತಿದೆ. ಅಲ್ಲಿ ಅಕ್ರಮ ಮರಳು ಘಟಕವಿಲ್ಲ' ಎಂದು ಹಿಂಬರಹ ನೀಡಿದ್ದಾರೆ. ಆದರೆ ಕಲ್ಲು ಗಣಿಗಾರಿಕೆ ಬಗ್ಗೆ ಭೂ ಮತ್ತು ವಿಜ್ಞಾನ ಇಲಾಖೆಗೆ ಈ ಕುರಿತು ದೂರು ನೀಡಿದಾಗ ಬಂಡೆ ಅಥವಾ ಕಲ್ಲು ಗಣಿಕಾರಿಕೆಗೆ ಆ ಸ್ಥಳದಲ್ಲಿ ಅನುಮತಿ ನೀಡಿಲ್ಲ ಎಂದು ತಿಳಿಸಿದ್ದಾರೆ ಎಂದರು.ಮರಳು ಗಣಿಗಾರಿಕೆಯಿಂದ ಗ್ರಾಮದಲ್ಲಿ ಹಲವು ಸಮಸ್ಯೆಗಳು ಎದುರಾಗಿವೆ. ಕೊಳವೆ ಬಾವಿಗಳು ಬತ್ತಿವೆ. ಮರಳು ಮತ್ತು ಕಲ್ಲು ಗಣಿ ತ್ಯಾಜ್ಯದಿಂದ ವಾತಾವರಣ ಕಲುಷಿತವಾಗುತ್ತಿದೆ. ಕೂಡಲೇ ಮರಳು ದಂಧೆಯ ಕಡಿವಾಣಕ್ಕೆ ಕ್ರಮ ಕೈಗೊಳ್ಳಬೇಕು. ವಿಳಂಬವಾದರೆ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.ಮರಳು ಮಾಫಿಯಾದ ಹಿಂದೆ ಅನೇಕ ಹಿರಿಯ ಅಧಿಕಾರಿಗಳ ಬೆಂಬಲವಿದೆ. ಅಧಿಕಾರಿಗಳು ಒಂದು ಲಾರಿ ಲೋಡ್ ಮರಳಿಗೆ ರೂ.8 ರಿಂದ 10 ಸಾವಿರ ಹಣ ಪಡೆಯುತ್ತಾರೆ ಎಂಬ ಗುಮಾನಿ ಇದೆ ಎಂದು ಅವರು ಶಂಕೆ ವ್ಯಕ್ತಪಡಿಸಿದರು.ದೂರು ಸ್ವೀಕರಿಸಿ ಮಾತನಾಡಿದ ಜಿಲ್ಲಾ ಲೋಕಾಯುಕ್ತ ಇನ್‌ಸ್ಪೆಕ್ಟರ್ ರವಿ ಹಾಗೂ ಗೌತಮ್, `ಸಾರ್ವಜನಿಕ ಸ್ಥಳಗಳಲ್ಲಿ ಸುರಿದಿರುವ ಗಣಿ ತ್ಯಾಜ್ಯವನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಸ್ಥಳದಲ್ಲಿದ್ದ ಕಂದಾಯ ಅಧಿಕಾರಿಗಳಿಗೆ ತಾಕೀತು ಮಾಡಿದರು.ಶಿಥಿಲಗೊಂಡಿರುವ ವಿದ್ಯುತ್ ಕಂಬವನ್ನು ತೆರವುಗೊಳಿಸುವಂತೆ ಲೋಕಾಯುಕ್ತರಿಗೆ ಗ್ರಾ.ಪಂ.ಸದಸ್ಯ ರಾಮಪ್ಪ ದೂರು ಸಲ್ಲಿಸಿದರು. ಎರಡು ವರ್ಷದಿಂದ ದೂರು ನೀಡುತ್ತಿದ್ದರೂ ಕಂಬಗಳನ್ನು ಸ್ಥಳಾಂತರಗೊಳಿಸಿಲ್ಲ. ಬೆಸ್ಕಾಂ ಬೇಜವಾಬ್ದಾರಿಯಿಂದ ಜನರಿಗೆ ಸಮಸ್ಯೆಯಾಗಿದೆ. ಕಂಬದ ತೆರವಿಗೆ ಅನೇಕ ಬಾರಿ ಮನವಿ ಮಾಡಿದರೂ ಸಂಬಂಧಪಟ್ಟವರು ಸ್ಪಂದಿಸುತ್ತಿಲ್ಲ ಎಂದು ಅವರು ದೂರಿದರು.ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಇನ್‌ಸ್ಪೆಕ್ಟರ್, ಇದು ಗ್ರಾಮದ ಸಮಸ್ಯೆ ಯಾರ ವೈಯಕ್ತಿಕ ಸಮಸ್ಯೆ ಅಲ್ಲ. ಒಂದು ವಾರದಲ್ಲಿ ಕಂಬ ಸ್ಥಳಾಂತರ ಮಾಡಬೇಕು. ಅವಘಡ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳುವುದು ಅಗತ್ಯ ಎಂದರು.ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ನಿಗದಿ ಪಡಿಸಿರುವ ಶುಲ್ಕಕ್ಕಿಂತ ಹೆಚ್ಚು ಹಣವನ್ನು ವಸೂಲಿ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಪ್ರವೇಶಕ್ಕೆ ಮತ್ತು ವರ್ಗಾವಣೆ ಪ್ರಮಾಣ ಪತ್ರಕ್ಕೆ ಯಾವುದೇ ರಸೀದಿ ನೀಡದೆ ರೂ. 210 ರಿಂದ 320 ವಸೂಲಿ ಮಾಡಲಾಗುತ್ತಿದೆ ಎಂದು ಎಂ.ಶಿವಪ್ಪ ಲೋಕಾಯುಕ್ತರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಧಿಕಾರಿಗಳಿಗೆ ದೂರು ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.