ಭಾನುವಾರ, ಜೂನ್ 20, 2021
20 °C

ಮರಳೆಂದರೆ ಬರಿ ಮರಳಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಸಲ್ಮೇರ್. `ಚಿನ್ನದ ನಗರ~ ಎಂದೇ ಪ್ರಸಿದ್ಧಿ. ಥಾರ್ ಮರುಭೂಮಿಯ ಮಡಿಲಲ್ಲಿರುವ ಈ ನಗರದಲ್ಲಿ ಅಲೆಅಲೆಯಾಗಿ ಹರಡಿರುವ ಹೊಂಬಣ್ಣದ ಮರಳು, ಹಳದಿ ಬಣ್ಣದ ಕಲ್ಲಿನಿಂದ ಕಡೆದ ದೇವಾಲಯಗಳು, ಹವೇಲಿಗಳು, ಅರಮನೆ, ದ್ವಾರ ಮತ್ತು ಬೃಹದಾಕಾರದ ಮನೆಗಳಿವೆ. ಆ ಕಾರಣದಿಂದಲೇ ಜೈಸಲ್ಮೇರ್‌ಗೆ `ಚಿನ್ನದ ನಗರ~ ಎನ್ನುವ ವಿಶೇಷಣ.ಚೀನಾ, ಭಾರತ, ಈಜಿಪ್ಟ್, ಪರ್ಷಿಯಾ, ಅರೇಬಿಯಾ ಮತ್ತು ರೋಮ್ ದೇಶಗಳ ಸಂಪರ್ಕ ಕೊಂಡಿಯಾಗಿ `ಸಿಲ್ಕ್ ರೂಟ್~ ಎನ್ನುವ ವಿಶೇಷಣವೂ ಈ ನಗರಕ್ಕಿತ್ತು. ಮಳೆಗೆ ಕೊರೆಯಾದರೇನು; ವ್ಯಾಪಾರೀ ಮಾರ್ಗದ ದೆಸೆಯಿಂದ ಇಲ್ಲಿ ಆರ್ಥಿಕ ಅಭಿವೃದ್ಧಿ ಸಾಕಷ್ಟಾಯಿತು. ಹಲವರು ವ್ಯಾಪಾರಿಗಳನ್ನು ದೋಚಿಯೇ ಸಿರಿವಂತರಾದರು!ಹಡಗಿನ ಮೂಲಕ ವ್ಯಾಪಾರ ಬೆಳೆದಂತೆ ಈ ನಗರ ತನ್ನ ಹೊಳಪು ಕಳೆದುಕೊಳ್ಳತೊಡಗಿತು. ಭಾರತ-ಪಾಕಿಸ್ತಾನ ವಿಭಜನೆಯ ನಂತರ ವ್ಯಾಪಾರದ ಮಾರ್ಗ ತುಂಡಾಯಿತು. ನೀರಿನ ಕೊರತೆಯೂ ಈ ನಗರದ ಅವಸಾನಕ್ಕೆ ಕಾರಣವಾಯಿತು. ಆದರೆ ಭಾರತ-ಪಾಕ್ ಯುದ್ಧಗಳಿಂದ ಇದೊಂದು ಪ್ರಮುಖ ಸೇನಾನೆಲೆಯಾಯಿತು. ಇಂದಿರಾ ಗಾಂಧಿ ನಾಲೆಯು ಬಂದ ಮೇಲೆ ಮರುಭೂಮಿಗೆ ಜೀವಜಲ ಸಿಕ್ಕಿತು. ಈಗ ಪ್ರವಾಸಿಗರಿಂದಾಗಿ ಈ ನಗರಕ್ಕೆ ಜೀವಕಳೆ.`ಜೈಸಲ್ಮೇರಿಗೆ ಪ್ರವಾಸಿಗರು ಬರುವುದು ಹೆಚ್ಚೆಂದರೆ ಆರು ತಿಂಗಳು ಮಾತ್ರ. ಆಗ ಮಾತ್ರ ಇಲ್ಲಿ ವ್ಯಾಪಾರ -ವಹಿವಾಟು. ಮರುಭೂಮಿಯ ಮರಳು, ರಾಜಸ್ತಾನದ ಸೊಗಡು - ಸಂಸ್ಕೃತಿ ಕಣ್ತುಂಬಿಕೊಳ್ಳಲು ಪ್ರವಾಸಿಗರು ಬರುತ್ತಾರೆ.ಜೈಸಲ್ಮೇರಿನ ಪ್ರಮುಖ ಆಕರ್ಷಣೆ ಒಂಟೆ ಮತ್ತು ಮರಳು. ಒಂಟೆಯ ಮೇಲೆ ಕುಳಿತು ಮರುಭೂಮಿಯಲ್ಲಿ ಸುತ್ತಾಡಲು ಪ್ರವಾಸಿಗರು ಬರುತ್ತಾರೆ. ಶಾರುಕ್ ಖಾನ್, ಮೈಕೆಲ್ ಜಾಕ್ಸನ್, ರಾಕೆಟ್- ಇವೆಲ್ಲ ಇಲ್ಲಿನ ಒಂಟೆಗಳ ಹೆಸರು! `50 ರೂಪಾಯಿ ಕೊಡಿ, ಸುತ್ತೊಡೆಸುತ್ತೇವೆ, 100 ರೂಪಾಯಿ ಕೊಡಿ, ಸೂರ್ಯಾಸ್ತ ತೋರಿಸುತ್ತೇವೆ~ ಎಂದು ಒಂಟೆಯ ಒಡೆಯರು ಪ್ರಲೋಭನೆ ಒಡ್ಡುತ್ತಾರೆ.ಮರುಭೂಮಿ ಈಗ ಮರಳಿನ ಗುಡ್ಡಗಳಾಗಿ ಉಳಿದಿಲ್ಲ. ಮರಳು ದಿಬ್ಬದ ಮೇಲೆ ಎಲ್ಲೆಲ್ಲೂ ಮೂಡಿರುವ ಹೆಜ್ಜೆ ಗುರುತುಗಳು ಸಂತೆಯ ಗಿಜಿಗಿಜಿ ನೆನಪಾಗಿಸುತ್ತದೆ. ಒಂದಷ್ಟು ದೂರ ಒಂಟೆಯ ಮೇಲೆ ಕುಳಿತು, ಮರಳಿನ ಮೇಲೆ ಸಾಗಿ, `ನಿಲ್ಲಿಸಪ್ಪಾ~ ಎಂದು ಸುತ್ತಲಿನ ಥಾರ್ ಮರುಭೂಮಿಯನ್ನು ಕಣ್ಣುತುಂಬಿಕೊಳ್ಳುವಷ್ಟರಲ್ಲಿ ಹಾಡು ಕೇಳಿಸುತ್ತದೆ! ಹೌದು. ಒಂಟೆಯ ಮಾಲೀಕರಾದ ಯುವಕರ ಮೊಬೈಲ್‌ನಿಂದ ಹೊಮ್ಮುತ್ತದೆ ಹಾಡು. ಸಂಜೆಯ ಇಳಿ ಬಿಸಿಲು ಬಿದ್ದು ಬಂಗಾರದ ಬಣ್ಣದಿಂದಿರುವ ಮರಳನ್ನು ಕಂಡು ನೀರು ನೆನಪಾಗುತ್ತದೆ. `ಡರ್ ಕೆ ಆಗೆ ಜೀತ್ ಹೈ, ಪೀಲೋ~ ಎಂದೊಬ್ಬ ತಂಪು ಪಾನೀಯ ಹಿಡಿದು ಮುಂದೆ ನಿಂತಿರುತ್ತಾನೆ.

ನಾವು ಒಂಟೆಯ ಮೇಲೆ ಸಾಗಿ ಬಂದಷ್ಟು ದೂರ ಅವನು ಹೊಟ್ಟೆಪಾಡಿಗಾಗಿ ತಂಪುಪಾನೀಯಗಳನ್ನು ಹೊತ್ತು ತಂದಿರುವುದನ್ನು ನೆನಪಿಸಿಕೊಂಡರೆ, ಬೇಡವೆನ್ನಲು ಮನಸ್ಸಾಗುವುದಿಲ್ಲ.`ರಾಜಸ್ತಾನಿ ನೃತ್ಯ ಪ್ರದರ್ಶಿಸುವ ಜನಪದರು ಹಿಂದೆ ಅಲೆಮಾರಿಗಳಾಗಿದ್ದರು. ಈಗ ನಮ್ಮ ರೆಸಾರ್ಟಿನಲ್ಲಿ ಅವರಿಗೆ ಸಂಬಳ ಕೊಡುತ್ತೇವೆ. ಪ್ರತಿ ಸಂಜೆ ರಾಜಸ್ತಾನಿ ಜಾನಪದ ನೃತ್ಯ ಸಂಗೀತವನ್ನು ನಡೆಸಿಕೊಡುತ್ತಾರೆ. ಪ್ರವಾಸಿಗರು ಖುಷಿಯಿಂದ ಬಕ್ಷೀಸು ಕೊಡುತ್ತಾರೆ. ಹಾಗಾಗಿ ಅವರು ಸ್ವಂತ ಮನೆಯನ್ನು ಕಟ್ಟಿಕೊಂಡಿದ್ದಾರೆ. ಜಂಗಮರು ಸ್ಥಾವರರಾಗಿದ್ದಾರೆ~. ಇದು ಮರುಳುಗಾಡಿನ ಪರಿಸರದಲ್ಲಿನ ಕಾಲಪಲ್ಲಟದ ಕುರಿತು `ಮೆಹರ್ ರೆಸಾರ್ಟ್~ನ ಅಕ್ರಂಭಾಯ್ ವಿಶ್ಲೇಷಣೆ.ಜೈಸಲ್ಮೇರ್ ಕೋಟೆ, ಮಹಾರಾಜರ ಮಹಲ್, ಜೈನ ಮಂದಿರಗಳು, ಹಿಂದೂ ದೇಗುಲಗಳು, ಪುರಾತನ ಹವೇಲಿಗಳು, ಗಡೀ ಸಾಗರ್ ಸರೋವರ, ವ್ಯಾಸ ಛತ್ರಿ, ಸಂಗ್ರಹಾಲಯ, ಸಮ್ ಮತ್ತು ಕುರಿ ಮರಳಿನ ಪ್ರದೇಶ ಇಲ್ಲಿನ ಪ್ರವಾಸಿ ತಾಣಗಳು.ಕಚ್ಚೆ ಪಂಚೆ, ವಿವಿಧ ಬಣ್ಣಗಳ ಪಗಡಿ ಧರಿಸಿ ಚೂಪು ಮೀಸೆ ತೀಡುವ ಗಂಡಸು, ಕೆಂಪು, ಹಸಿರು, ಹಳದಿ, ನೀಲಿ ಬಣ್ಣಗಳ ದಿರಿಸು ಧರಿಸಿರುವ ಮಹಿಳೆ, ಅವರ ವೈವಿಧ್ಯಮಯ ಒಡವೆಗಳು, ರಾಜಸ್ತಾನಿ ಸಂಗೀತ, ಸಿಹಿ ಖಾದ್ಯ, ಅವರ ಹಸನ್ಮುಖ ಮತ್ತು ಆತ್ಮೀಯತೆ- ಮತ್ತೆ ಮತ್ತೆ ಕರೆಯುತ್ತದೆ ಜೈಸಲ್ಮೇರ್, ರಾಜಸ್ತಾನ.

ಮರಳೆಂದರೆ ಬರಿ ಮರಳಲ್ಲ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.