ಭಾನುವಾರ, ಜೂಲೈ 12, 2020
22 °C

ಮರೆತ ಟ್ಯಾಗೋರರ ಮುನ್ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರೆತ ಟ್ಯಾಗೋರರ ಮುನ್ಸೂಚನೆ

ಬೆಂಗಳೂರು:  ‘ಅಣೆಕಟ್ಟುಗಳು ಹಾಗೂ ವಿದ್ಯುತ್‌ಜಾಲಗಳನ್ನು ನಿರ್ಮಿಸುವುದರ ಹಿಂದಿನ ಅಪಾಯದ ಬಗ್ಗೆ ಕವಿ ರವೀಂದ್ರನಾಥ ಟ್ಯಾಗೋರರು ಶತಮಾನದ ಹಿಂದೆಯೇ ಅರಿವು ಮೂಡಿಸಿದ್ದರು. ಆದರೂ ನಮ್ಮ ನಾಡು ಇನ್ನೂ ಎಚ್ಚೆತ್ತಿಲ್ಲ’ ಎಂದು ಹಿರಿಯ ಕವಿ ಪ್ರೊ. ಜಿ.ಎಸ್.ಸಿದ್ದಲಿಂಗಯ್ಯ ವಿಷಾದ ವ್ಯಕ್ತಪಡಿಸಿದರು. ‘ಶೂದ್ರ’ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪತ್ರಿಕೆಯ 38ನೇ ವರ್ಷಾಚರಣೆ ಅಂಗವಾಗಿ ನಗರದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಮಾಜಿ ಪ್ರಧಾನಿ ನೆಹರೂ ಅವರು ಬಾಕ್ರಾ ನಂಗಲ್‌ನಂತಹ ಅಣೆಕಟ್ಟುಗಳನ್ನು ಆಧುನಿಕ ದೇವಾಲಯಗಳು ಎಂದು ಕರೆದರು. ಆದರೆ ರವೀಂದ್ರರು ಅದಕ್ಕೂ ಮುನ್ನವೇ ಅಣೆಕಟ್ಟುಗಳು ಹಾಗೂ ವಿದ್ಯುತ್ ಜಾಲಗಳಿಂದ ಉಂಟಾಗುವ ಅಪಾಯವನ್ನು ಮನಗಂಡಿದ್ದರು. ಈ ಬಗ್ಗೆ ಅವರ ನಾಟಕವೊಂದರಲ್ಲಿ ಉಲ್ಲೇಖವಿದೆ. ಆದರೆ ಈ ಹಾನಿಯ ಬಗ್ಗೆ ಇನ್ನೂ ಅರಿವು ಮೂಡಿಲ್ಲ ಎಂಬುದಕ್ಕೆ ಜಪಾನ್ ಅಣು ವಿಕಿರಣ ದುರಂತವೇ ಸಾಕ್ಷಿಯಾಗಿದೆ’ ಎಂದು ಅವರು ಹೇಳಿದರು.ರವೀಂದ್ರನಾಥ ಟ್ಯಾಗೋರರ 150ನೇ ವರ್ಷದ ನೆನಪಿನ ಭಾವಚಿತ್ರ ಅನಾವರಣ ಮಾಡಿ ಮಾತನಾಡಿದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ‘ನಾಡಿನ ಅನೇಕ ಬರಹಗಾರರನ್ನು ಶೂದ್ರ ಪತ್ರಿಕೆ ಬೆಳೆಸಿದೆ. ನಾಡಿನ ಅನೇಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪಲ್ಲಟಗಳಿಗೆ ದನಿಯಾಗಿದೆ. ಇದು ಕೇವಲ ಪತ್ರಿಕೆಯಾಗಿರದೇ ಒಂದು ಮನೋಧರ್ಮವಾಗಿ ರೂಪುಗೊಂಡಿದೆ’ ಎಂದು ಅವರು ತಿಳಿಸಿದರು.‘ಸಂಪಾದಕ ಶೂದ್ರ ಶ್ರೀನಿವಾಸ್ ಅವರು ಪತ್ರಿಕೆಯಲ್ಲಿ ಬರೆದ ಕನಸಿಗೊಂದು ಕಣ್ಣು ಬರಹ ಇಡೀ ಪತ್ರಿಕೆಯ ವಿಶೇಷ ಭಾಗವಾಗಿದೆ. ಈ ಪತ್ರಿಕೆ ಇನ್ನು ಮುಂದೆಯೂ ಕರ್ನಾಟಕದ ಸಾಂಸ್ಕೃತಿಕ ಬದುಕನ್ನು ಶ್ರೀಮಂತಗೊಳಿಸಲಿ’ ಎಂದರು. ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಮಾತನಾಡಿ ‘ಸೂಕ್ಷ್ಮ ಸಂವೇದನೆಯ ಸಾಹಿತಿ ಮಾತ್ರವಲ್ಲದೇ ಶೂದ್ರ ಶ್ರೀನಿವಾಸ್ ತಾನು ನಂಬಿದ ಆದರ್ಶಗಳ ಪರವಾಗಿ ಹೋರಾಡುವ ಸಾಮಾಜಿಕ ಕಾರ್ಯಕರ್ತ ಕೂಡ ಆಗಿದ್ದಾರೆ. ಅವರೊಬ್ಬ ಛಲವಾದಿಯಾಗದೇ ಇದ್ದರೆ  38 ವರ್ಷಗಳಷ್ಟು ದೀರ್ಘಕಾಲ ಅಷ್ಟೇನೂ ಜನಪ್ರಿಯವಲ್ಲದ ಲಾಭದಾಯಕವಲ್ಲದ ಗಂಭೀರ ಸಾಹಿತ್ಯ ಪತ್ರಿಕೆಯನ್ನು ನಡೆಸಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಹೇಳಿದರು.ಶೂದ್ರ ಸಾಹಿತ್ಯ ಪತ್ರಿಕೆ ಪ್ರಾಯೋಜಿಸಿರುವ 2008 ಹಾಗೂ 2009ರ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಗೌರವ ಕಾವ್ಯಸ್ಪರ್ಧೆಯ ಪ್ರಶಸ್ತಿಗಳನ್ನು ಕ್ರಮವಾಗಿ ಕವಿಗಳಾದ ಪ್ರೊ.ಟಿ.ಯಲ್ಲಪ್ಪ ಹಾಗೂ ಎಲ್.ಎನ್. ಮುಕುಂದರಾಜ್ ಅವರಿಗೆ ಪ್ರದಾನ ಮಾಡಲಾಯಿತು. ಪತ್ರಿಕೆಯ ಸಂಪಾದಕ ಶೂದ್ರ ಶ್ರೀನಿವಾಸ್, ರಂಗಭೂಮಿ ಕಲಾವಿದ ಜನ್ನಿ, ಉಪನ್ಯಾಸಕ ಜಯಶಂಕರ ಹಲಗೂರು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.