ಭಾನುವಾರ, ಏಪ್ರಿಲ್ 18, 2021
29 °C

ಮರ್ಯಾದೆ ವಿರೋಧಿ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರ್ಯಾದೆ ಹತ್ಯೆಗಳಿಗೆ ಪ್ರೇರಣೆ ನೀಡುವ ಮೂಲಕ ಕುಖ್ಯಾತಿ ಗಳಿಸಿರುವ ಖಾಪ್ ಪಂಚಾಯಿತಿಗಳು ಮತ್ತೆ ಸುದ್ದಿಯಲ್ಲಿವೆ. ಹೆಣ್ಣುಮಕ್ಕಳ ಸ್ವಾತಂತ್ರ್ಯ ನಿರ್ಬಂಧಿಸುವ ತಾಲಿಬಾನ್ ರೀತಿಯ ಆದೇಶಗಳು, ದಲಿತರಿಗೆ ದೇವಸ್ಥಾನ ಬಹಿಷ್ಕಾರದಂತಹ ಆದೇಶಗಳನ್ನು ಹೊರಡಿಸಿರುವ ಉತ್ತರ ಪ್ರದೇಶದ ಜಾತಿ ಪಂಚಾಯಿತಿಗಳು ರಾಷ್ಟ್ರದ ಸಾಂವಿಧಾನಿಕ ಮೌಲ್ಯಗಳಿಗೇ ಅಪಚಾರ ಎಸಗಿವೆ.ಈ ಬಗೆಯ ಊಳಿಗಮಾನ್ಯ ಮನಸ್ಥಿತಿಗಳು ಪ್ರಜಾಸತ್ತಾತ್ಮಕ ಆಧುನಿಕೋತ್ತರ ಭಾರತದಲ್ಲಿ ಕಂಡುಬರುತ್ತಿರುವುದು ಶೋಚನೀಯ. ಹೆಣ್ಣುಮಕ್ಕಳು ಸೆಲ್ ಫೋನ್ ಬಳಸಬಾರದು, ಒಬ್ಬರೇ ಮಾರುಕಟ್ಟೆ ಸ್ಥಳಗಳಿಗೆ ಹೋಗಬಾರದು, ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕು ಎಂಬಂತಹ ನಿಷೇಧಗಳನ್ನು ಈ ಪಂಚಾಯಿತಿಗಳು ಹೇರುವುದು ಹೇಗೆ ಸಾಧ್ಯ? ಆದರೆ   ಇಂತಹ ತಾಲಿಬಾನಿ ಆದೇಶಗಳನ್ನು ಉತ್ತರಪ್ರದೇಶದ ಬಾಗ್‌ಪತ್ ಜಿಲ್ಲೆಯ ಆಸ್ರಾ ಪಂಚಾಯಿತಿ ಹೊರಡಿಸಿದೆ.ಪ್ರೇಮವಿವಾಹಗಳನ್ನೂ ಈ ಪಂಚಾಯಿತಿ ನಿಷೇಧಿಸಿದೆ. ವಿಶೇಷವೆಂದರೆ ಆಸ್ರಾ ಗ್ರಾಮ ರಾಜಧಾನಿ ದೆಹಲಿಗೆ ಸಮೀಪದಲ್ಲೇ ಇದೆ. ಹೆಣ್ಣುಮಕ್ಕಳ ಆಯ್ಕೆ ಸ್ವಾತಂತ್ರ್ಯ, ಚಲನಶೀಲತೆಯನ್ನು ನಿಯಂತ್ರಿಸುವ ಈ ಶಕ್ತಿಗಳು ಸಂವಿಧಾನದಲ್ಲಿ ದತ್ತವಾಗಿರುವ ಮೂಲಭೂತ ಸ್ವಾತಂತ್ರ್ಯವನ್ನೇ ಹರಣ ಮಾಡುತ್ತಿವೆ.

 

ಈ ನಿಷೇಧಗಳಿಗೆ ಯುಪಿಎ ಅಂಗಪಕ್ಷವಾಗಿರುವ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ)ದ ಸಂಸತ್ ಸದಸ್ಯ ಹಾಗೂ ಆರ್‌ಎಲ್‌ಡಿ ಅಧ್ಯಕ್ಷ ಅಜಿತ್ ಸಿಂಗ್ ಪುತ್ರ ಜಯಂತ್ ಚೌಧರಿ ಬಹಿರಂಗವಾಗಿಯೇ ಬೆಂಬಲಿಸಿರುವುದಂತೂ ನಿರ್ಲಜ್ಜತನದ ಪರಮಾವಧಿ.ಮತಬ್ಯಾಂಕ್ ತುಷ್ಟೀಕರಣದ ಕ್ಷುಲ್ಲಕ ರಾಜಕಾರಣದ ಭರದಲ್ಲಿ ಸಾಮಾಜಿಕ ಹಿತವನ್ನೇ ಬಲಿ ಕೊಡುವುದು ಅಕ್ಷಮ್ಯ. ಇಂತಹ ನಿಷೇಧಗಳ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಠಿಣ ನಿಲುವುಗಳನ್ನು ತಳೆಯಬೇಕು. ಇಲ್ಲದಿದ್ದಲ್ಲಿ ಮುಂದೆ ಇವು ಸಮಾಜದಲ್ಲಿ ಅರಾಜಕತೆ ಸೃಷ್ಟಿಗೂ ಕಾರಣವಾಗಬಹುದು.ಅರಣ್ಯ ನ್ಯಾಯದ ದಂಡ ಬೀಸುವ ಬದಲಿಗೆ ನಿಜಕ್ಕೂ ಸಾಮಾಜಿಕ ಜಾಗೃತಿಯ ಕಾರ್ಯಗಳನ್ನು ಮಾಡುವುದೂ ಈ ಖಾಪ್ ಪಂಚಾಯಿತಿಗಳಿಗೆ ಸಾಧ್ಯವಿದೆ. ಇದಕ್ಕೆ ತಾಜಾ ಉದಾಹರಣೆ  ಹರಿಯಾಣದ ಜಿಂದ್ ಜಿಲ್ಲೆಯ ಬಿಬಿಪುರ ಗ್ರಾಮದಲ್ಲಿ ಕಳೆದ ಶನಿವಾರ ನಡೆದ ಮಹಾಖಾಪ್ ಪಂಚಾಯಿತಿ.ಈ ಪಂಚಾಯಿತಿಯಲ್ಲಿ ಮೊದಲ ಬಾರಿಗೆ ಸುಮಾರು 200 ಮಹಿಳೆಯರು ಪಾಲ್ಗೊಂಡ್ದ್ದಿದು ಐತಿಹಾಸಿಕ. ಹೆಣ್ಣು ಭ್ರೂಣ ಹತ್ಯೆಗೆ ಉತ್ತೇಜನ ನೀಡುವವರ ವಿರುದ್ಧ ಕೊಲೆ ಆರೋಪ ದಾಖಲಿಸಬೇಕೆಂಬ ನಿರ್ಣಯವನ್ನು ಈ ಪಂಚಾಯಿತಿ ಅನುಮೋದಿಸಿದೆ. ಹೆಣ್ಣುಭ್ರೂಣ ಹತ್ಯೆ ವಿರುದ್ಧ  ತೀವ್ರ ಪ್ರಚಾರಾಂದೋಲನ ಕೈಗೊಳ್ಳಲು ಈ ಪಂಚಾಯಿತಿ ನಿರ್ಧರಿಸಿರುವುದು ಮಹತ್ವದ ಅಂಶ.ಹೀಗೆಂದೇ  ಬಿಬಿಪುರ ಗ್ರಾಮದ ಅಭಿವೃದ್ಧಿಗೆ ರೂ 1ಕೋಟಿ ಬಹುಮಾನವನ್ನು  ಹರಿಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಘೋಷಿಸಿದ್ದಾರೆ. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವುದೂ ಖಾಪ್ ಪಂಚಾಯಿತಿಗಳಿಗೆ ಸಾಧ್ಯವಿದೆ ಎಂಬುದಕ್ಕೆ ಇದು ಮಾದರಿ.ಸಾಮಾಜಿಕ ಪಿಡುಗುಗಳ ವಿರುದ್ಧ ಇಂತಹದೇ ಹೋರಾಟಗಳನ್ನು ಕೈಗೊಳ್ಳಲು ಇತರ ಖಾಪ್ ಪಂಚಾಯಿತಿಗಳಿಗೂ ಇದು ಪ್ರೇರಣೆಯಾಗಬೇಕು. ವಿನಾಶಕಾರಿ ಹಾಗೂ ಸಮಕಾಲೀನ ಆಧುನಿಕ ಸಮಾಜಕ್ಕೆ ಸಲ್ಲದ ಫರ್ಮಾನುಗಳನ್ನು ಹೇರುವುದನ್ನು ಇನ್ನಾದರೂ ಖಾಪ್ ಪಂಚಾಯಿತಿಗಳು ನಿಲ್ಲಿಸಬೇಕು. ನೀತಿನಿಯಮಗಳ ಹೆಸರಲ್ಲಿ ನಿರ್ಬಂಧಗಳ ಹೇರುವಿಕೆ ಪ್ರಜಾತಂತ್ರ ವಿರೋಧಿ ಎಂಬುದನ್ನು  ಅವು ಮನಗಾಣಲಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.