ಶನಿವಾರ, ಮೇ 28, 2022
27 °C

ಮರ ಬೆಳೆಸಿ, ಮಾಲಿನ್ಯ ನಿಯಂತ್ರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಪರಿಸರ ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಪ್ರತಿ ಕುಟುಂಬವೂ ಎರಡು ಗಿಡಗಳನ್ನು ನೆಟ್ಟು ಪೋಷಿಸುವುದು ಇಂದಿನ ಸಂದರ್ಭದಲ್ಲಿ ಅತ್ಯಗತ್ಯ ಎಂದು  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಶಾಂತಪ್ಪ ಅಭಿಪ್ರಾಯಪಟ್ಟರು.‘ಪರಿಸರ ನಿರ್ವಹಣೆ’ ಕುರಿತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಬೆಂಗಳೂರಿನ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ, ಜಿಲ್ಲಾ ಪಂಚಾಯತಿಯ ಸಹಯೋಗದಲ್ಲಿ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತಾನಾಡಿದರು.ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ವಿಜಯಾ ಕಾರ್ತಿಕೇಯನ್ ಮಾತನಾಡಿ, ಆಧುನಿಕ ವಸ್ತುಗಳ ಉಪಯೋಗದಿಂದ ತ್ಯಾಜ್ಯವೂ ಕೂಡ ಹೆಚ್ಚಾಗುತ್ತಿದೆ. ಅದರ ನಿರ್ವಹಣೆಯನ್ನು ಕಾನೂನಿನಿಂದ ಮಾತ್ರವೇ ಮಾಡಲು ಅಸಾಧ್ಯ.  ಪ್ರತಿಯೊಬ್ಬರೂ ಉತ್ತಮ ಪರಿಸರ ಪ್ರಜ್ಞೆಯನ್ನು ರೂಢಿಸಿಕೊಂಡು ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದರು.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಂಜನಪ್ಪ ಮಾತನಾಡಿ, ಪರಿಸರ ಸಂರಕ್ಷಣೆಯ ಮಹತ್ವನ್ನು ಮನೆ ಮನೆಗೂ ತಿಳಿಸಿ ಜನಾಂದೋಲನವನ್ನಾಗಿ ರೂಪಿಸಿದಾಗ ಮಾತ್ರ ಅರಣ್ಯ ಸಂರಕ್ಷಣೆಯಾಗುತ್ತದೆ ಎಂದರು.ಸಂಪನ್ಮೂಲ ವ್ಯಕ್ತಿ, ಚಿತ್ರದುರ್ಗದ ಫಾರ್ಮಸಿ ಕಾಲೇಜಿನ ಎಚ್.ಕೆ.ಎಸ್.ಸ್ವಾಮಿ, ಗಾಂಧಿ ಮಾರ್ಗದಲ್ಲಿ ಪರಿಸರ ಸ್ನೇಹಿ ಚಟುವಟಿಕೆಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು.ತರಬೇತಿ ಮುಖ್ಯಸ್ಥ ಮೋಹನ್ ಮೈದರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತರಬೇತಿಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಯುತ್ತಿದೆ. ಮೊದಲನೆಯ ದಿನ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ, ಎರಡನೆಯ ದಿನ ಆಯ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರಿಗೆ ಹಾಗೂ ಮೂರನೆಯ ದಿನ ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ತರಬೇತಿ ನೀಡಲಾಗುವುದು ಎಂದರು.

 

ಸಿಪಿಆರ್ ಪರಿಸರ ಶಿಕ್ಷಣ ಕೇಂದ್ರದ ಯೋಜನಾಧಿಕಾರಿ ಎಸ್.ರವಿಶಂಕರ್, ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಭಟ್,  ಬಿಇಒ  ಕೆ.ಎಸ್.ನಾಗರಾಜಗೌಡ ಉಪಸ್ಥಿತರಿದ್ದರು. ನಿರ್ಮಲಾ ಪ್ರಾರ್ಥಿಸಿ, ಸಹತರಬೇತಿದಾರರಾದ ಕವಿತ.ಬಿ.ಎಸ್ ಸ್ವಾಗತಿಸಿ, ಸಾಕ್ಷರತಾ ಸಮನ್ವಯ ಅಧಿಕಾರಿ ಎ.ಎಂ.ಶ್ರೀರಾಮ್ ವಂದಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿಯ ಉಪಪರಿಸರ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.