ಶನಿವಾರ, ಜನವರಿ 25, 2020
18 °C

ಮಲೆನಾಡಿನ ಗದ್ದೆಗಳಲ್ಲಿ ಇಟಲಿ ತರುಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಜನಿಸಿದ್ದು, ಬೆಳೆದದ್ದು ಇಟಲಿಯ ವಿಸೆನ್ಸಾ ಎಂಬ ಪ್ರದೇಶದಲ್ಲಿ. ಮಲೆನಾಡಿಗೆ ಬಂದಿರುವ ಇಪ್ಪತ್ತರ ಯುವತಿ ಸ್ಟಿಫಾನಿಯಾ ಕೂಡ ಅದೇ ಪ್ರಾಂತದವರು. ಆರು ಅಡಿ ಎತ್ತರದ ಗುಲಾಬಿಗಿಂತಲೂ ಕೆಂಪಿರುವ ಈಕೆ ಇಲ್ಲಿಯ ಸಾಂಪ್ರದಾಯಿಕ ಕೃಷಿ ಮತ್ತು ಕಲೆಯ ಅಭ್ಯಾಸಕ್ಕಾಗಿ ಸಹ್ಯಾದ್ರಿ ಶ್ರೇಣಿಯ ತಪ್ಪಲಿನಲ್ಲಿರುವ ಹಳ್ಳಿಗಳಿಗೆ ಭೇಟಿ ಕೊಡುತ್ತಿದ್ದಾರೆ. ಇದಕ್ಕೆ ಅವರಿಗೆ ಮಹಾತ್ಮ ಗಾಂಧೀಜಿಯವರ ಗ್ರಾಮ ಪರಿಕಲ್ಪನೆಯೇ ಪ್ರೇರಣೆ.ದಿನಚರಿ

ಸಾಗರ ಸಮೀಪ ಹೊಸಗುಂದದ ಶಾಸ್ತ್ರಿಯವರ ಎಸ್ಟೇಟಿನಲ್ಲಿ ವಾಸ್ತವ್ಯ. ಬೆಳಿಗ್ಗೆ 5 ಗಂಟೆಗೇ ಎದ್ದು ಚಹಾ ಕುಡಿದು ಕೆಲಸಕ್ಕೆ ಹೊರಡುತ್ತಾರೆ. ಕೆಲಸವೆಂದರೆ `ಹುಲ್ಲು ಹೊರೆ ಹೊತ್ತು ಹಾಕುವುದು, ಭತ್ತ ಬಡಿಯುವುದು, ಅರಿಶಿನ ಕೀಳುವುದು, ಅಡಿಕೆ ಬೇಯಿಸುವುದು, ಹೆಕ್ಕುವುದು, ಬಣ್ಣ ಹಾಕುವುದು~ ಇತ್ಯಾದಿ. ಇದರಲ್ಲಿ ನಮ್ಮ ಗಂಡಾಳು ಮತ್ತು ಹೆಣ್ಣಾಳು ಎರಡನ್ನೂ ಮೀರಿಸುತ್ತಾರೆ. ವಿದೇಶಿ ತರುಣಿಯೊಬ್ಬಳು ಗದ್ದೆ ಹಾಡಿಯಲ್ಲಿ ಹೊರಟರೆಂದರೆ ಹೊಲಗದ್ದೆಗಳಲ್ಲಿ ಕೆಲಸ ಮಾಡುವವರೆಲ್ಲರಿಗೂ ಒಂದು ಹುರುಪು.ಎಲ್ಲಾ ಕೆಲಸಗಾರರ ಜೊತೆ ಬೆಳಗಿನಿಂದ ಸಂಜೆವರೆಗೂ ಸ್ಟಿಫಾನಿಯಾ ಹೊಲಗದ್ದೆಗಳಲ್ಲಿ ದುಡಿಯುತ್ತಾರೆ. ಖುಷಿಯಿಂದ ಒಟ್ಟಿಗೇ ಊಟ ಮಾಡುತ್ತಾರೆ. ಸಂಜೆ ಅವರ ಮನೆಗಳಿಗೆ ಭೇಟಿ ಕೊಟ್ಟು ಜೀವನ ಪದ್ಧತಿ ಗಮನಿಸುತ್ತಾರೆ. ಸುತ್ತಲಿನ ಹೊಸಗುಂದ, ಜಂಬೇಕೊಪ್ಪ, ಮಾದರಸನಕೊಪ್ಪ, ಹೊಸೂರು ಹೀಗೆ ವಿವಿಧ ಹಳ್ಳಿಗಳಲ್ಲಿ ಸುತ್ತಾಡಿದ್ದಾರೆ. ಅಲ್ಲಿನ ಮನೆಗಳಲ್ಲಿ ನಡೆಯುವ ನಾಮಕರಣ, ಹುಟ್ಟುಹಬ್ಬಗಳಲ್ಲಿ ಭಾಗವಹಿಸುತ್ತಾರೆ. ಆ ಸಂದರ್ಭದಲ್ಲಿ ಮಲೆನಾಡಿನ ಸಾಂಪ್ರದಾಯಿಕ ಉಡುಗೆ ತೊಡುತ್ತಾರೆ ಎನ್ನುವುದು ವಿಶೇಷ. 

ಅಪರೂಪದ ಪದ್ಧತಿ

ಭಾರತದ ಕೃಷಿ ಪದ್ಧತಿ ಬಹು ಅಪರೂಪದ್ದು. ಇಲ್ಲಿ ಯಂತ್ರಗಳಿಲ್ಲದೆ ನಡೆಸುವ ವ್ಯವಸಾಯವೇ ಹೆಚ್ಚು. ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ. ಸಾವಯವ ಕೃಷಿ ಜನಪ್ರಿಯವಾಗಿದೆ ಎನ್ನುವ ಸ್ಟಿಫಾನಿಯಾ, `ಇಟಲಿಯ ಕೃಷಿಗಿಂತ ಭಾರತದ್ದು ಉತ್ತಮ ಮತ್ತು ಮಣ್ಣಿನ ಫಲವತ್ತತೆ ಕಾಪಾಡುತ್ತದೆ~ ಎನ್ನುತ್ತಾರೆ. `ಇಲ್ಲಿಯ ಕೃಷಿ ಕಾರ್ಮಿಕರ ಬದುಕು ಉತ್ತಮವಾಗಿದೆ. ಆದರೆ ಜಾತಿಯಿಂದ ಜನರನ್ನು ಗುರುತಿಸುವ ಪರಿಪಾಠ ಹೋಗಬೇಕು.ಏಕೆಂದರೆ ನಾನು ಇಲ್ಲಿ ಶ್ರಮಜೀವಿಗಳೊಂದಿಗೆ ಕೆಲಸ ಮಾಡುವಾಗ ಅವರು ನನ್ನನ್ನು ಕೇಳಿದ್ದು ನೀನು ಯಾವ ಜಾತಿ ಎಂದು. ಅದಕ್ಕೆ ನಾನು ಮನುಷ್ಯ ಜಾತಿ ಎಂದುತ್ತರಿಸಿದೆ~ ಎನ್ನುತ್ತ ನಗುತ್ತಾರೆ.

ಸಾಮರಸ್ಯ

ಸಂಜೆಯಾದರೆ ಸಾಕು. ಈಕೆ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಇಂಗ್ಲಿಷ್‌ನಿಂದ ಕನ್ನಡ ಕಲಿಯುವ ಪುಸ್ತಕವೊಂದನ್ನು ತೆರೆದಿಟ್ಟುಕೊಂಡು ಅಧ್ಯಯನ ಮಾಡುತ್ತಾರೆ.ಹೊಲಗದ್ದೆಗಳಲ್ಲಿ ಕೆಲಸ ಮಾಡುವ ಅಯ್ಯ, ಶ್ರುತಿ, ಸುನೀತಾ, ಗೌರಮ್ಮ, ಭಾನುಮತಿ ಮತ್ತಿತರರ ಜತೆ ಅಲ್ಪಸ್ವಲ್ಪ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುತ್ತಾರೆ.ಕಷ್ಟವಾದರೆ ಸದಾ ಜೊತೆಗಿರುವ ದಿನೇಶ ಮತ್ತು ವಿನಾಯಕ ಭಟ್ ಸಹಾಯ ಮಾಡುತ್ತಾರೆ.ಸದಾ ಏನಾದರೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಸ್ಟಿಫಾನಿಯಾ ಇಲ್ಲಿಯ ಮನೆಗಳು, ಮನೆ ಮುಂದೆ ಹೆಣ್ಣುಮಕ್ಕಳು ಹಾಕಿರುವ ರಂಗವಲ್ಲಿ, ಪುರಾತನ ದೇವಾಲಯಗಳು ಎಲ್ಲದರ ಚಿತ್ರ ಬರೆಯುತ್ತಾರೆ.ಎಷ್ಟೋ ಜನ ಪ್ರವಾಸಿಗರು ನಮ್ಮ ದೇಶಕ್ಕೆ ಬರುತ್ತಾರೆ, ಹೋಗುತ್ತಾರೆ. ಆದರೆ ಮಲೆನಾಡಿನ ಹೊಲಗದ್ದೆಗಳ ಅಧ್ಯಯನಕ್ಕೆ ಬಂದಿರುವ ಸ್ಟಿಫಾನಿಯಾ ಇವರೆಲ್ಲರಿಗಿಂತ ಭಿನ್ನ. `ಸ್ವತಃ ಕೆಲಸ ಮಾಡಿದರೆ ಮಾತ್ರ ಅನುಭವ; ಬರೀ ಪುಸ್ತಕದ ಅಧ್ಯಯನದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ~ ಎನ್ನುತ್ತಾರೆ.ಅಧ್ಯಯನದಲ್ಲಿ ಇವರಿಗೆ ಜೊತೆಯಾಗಿದ್ದಾರೆ ಬೆಂಗಳೂರಿನ ಫಲದಾ ಆಗ್ರೋ ರಿಸರ್ಚ್ ಫೌಂಡೇಶನ್‌ನ ಮುಖ್ಯಸ್ಥರಾದ ಸಿ.ಎಂ. ನಾರಾಯಣಶಾಸ್ತ್ರಿ ಮತ್ತು ಶೋಭಾ ಶಾಸ್ತ್ರಿ.ಮಲೆನಾಡಿನ ಹಳ್ಳಿಗಳಲ್ಲಿ ವಾಸ್ತವ್ಯ ಹೂಡಿರುವ ಸ್ಟಿಫಾನಿಯಾ ಮಲೆನಾಡಿಗರ ಮನ ಗೆದ್ದಿದ್ದಾರೆ ಎಂಬುದಂತೂ ಸತ್ಯ. 

ಪ್ರತಿಕ್ರಿಯಿಸಿ (+)