ಗುರುವಾರ , ಮೇ 19, 2022
20 °C

ಮಲ್ಟಿಪಲ್ ಮೈಲೋಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲ್ಟಿಪಲ್ ಮೈಲೋಮಾ

ತಮಗೆ ಬರಬಹುದಾದ ಅನೇಕ ಕ್ಯಾನ್ಸರ್‌ಗಳ ಬಗ್ಗೆ ಜನಸಾಮಾನ್ಯರಿಗೆ ಅರಿವಿರುವುದಿಲ್ಲ. ಬೆನ್ನು ನೋವು, ರಕ್ತ ಹೀನತೆ ಸಮಸ್ಯೆಗಳ ಬಗ್ಗೆ ಜನತೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. 65 ವರ್ಷ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಈ ಲಕ್ಷಣಗಳು ಸಾಮಾನ್ಯ. ಆದರೆ ಇದನ್ನು ನಿರ್ಲಕ್ಷಿಸಿಬಿಡುತ್ತಾರೆ. ಹೀಗಾಗಿ ಆರಂಭಿಕ ಹಂತದಲ್ಲಿ ಈ ಕ್ಯಾನ್ಸರ್ ಪತ್ತೆಯಾಗುವುದಿಲ್ಲ.`ಮಲ್ಟಿಪಲ್ ಮೈಲೋಮಾ~ದಿಂದ ಮೂಳೆಗಳ ಮೇಲಾಗುವ ಪರಿಣಾಮ?

ಮಲ್ಟಿಪಲ್ ಮೈಲೋಮಾ ಎಂದರೆ ಪ್ಲಾಸ್ಮಾ ಸೆಲ್‌ಗಳ ಕ್ಯಾನ್ಸರ್. ಮಜ್ಜೆಯಲ್ಲಿ (ಬೋನ್ ಮ್ಯೋರೋ) ಕಾಣಸಿಗುವ ಸಾಮಾನ್ಯ ಪ್ಲಾಸ್ಮಾ ಸೆಲ್‌ಗಳು, ಪ್ರತಿರಕ್ಷಕ ವ್ಯವಸ್ಥೆಯ ಅತಿ ಮುಖ್ಯ ಅಂಗಗಳಾಗಿವೆ. ಆದರೆ ಇಲ್ಲಿ ಪ್ಲಾಸ್ಮಾ ಕಣಗಳು ಕ್ಯಾನ್ಸರ್‌ಗೆ ತುತ್ತಾಗಿ ನಿಯಂತ್ರಣ ಮೀರಿ ಬೆಳೆಯುತ್ತವೆ. ಈ ವೇಳೆ ಅವು ಪ್ಲಾಸ್ಮಾಸೈಟೋಮ ಎಂಬ ದುರ್ಮಾಂಸ ಉತ್ಪತ್ತಿ ಮಾಡುತ್ತವೆ.ಸಾಮಾನ್ಯವಾಗಿ ಮೂಳೆಗಳಲ್ಲಿ ಉತ್ಪತ್ತಿಯಾಗುವ ಈ ದುರ್ಮಾಂಸ, ಇತರ ಅಂಗಾಂಶಗಳಲ್ಲೂ ವ್ಯಾಪಿಸಲು ಆರಂಭಿಸುತ್ತದೆ. ಈ ಸಂದರ್ಭದಲ್ಲಿ  ಎಲ್ಲ ಮೂಳೆಗಳೂ ಇದರ ಪರಿಣಾಮಕ್ಕೆ ಒಳಗಾಗುತ್ತವೆ. ಆದರೆ ಬೆನ್ನು ಹಾಗೂ ನಿತಂಬದಲ್ಲಿ  ಹೆಚ್ಚಿನ ನೋವು ಕಾಣಿಸಿಕೊಳ್ಳುವುದು ಈ ರೋಗದ ಪ್ರಮುಖ ಲಕ್ಷಣ.ಈ ಬದಲಾವಣೆಗಳು ಮೂಳೆ ಮುರಿತಕ್ಕೂ ಕಾರಣವಾಗಬಹುದು. ಮಲ್ಟಿಪಲ್ ಮೈಲೋಮಾದಲ್ಲಿ ಮೂಳೆಗಳು ಸೂಕ್ಷ್ಮವಾಗಲಿದ್ದು, ಸಣ್ಣ ಒತ್ತಡ ಬಿದ್ದಾಗಲೂ ಮುರಿದುಬಿಡಬಹುದು. ಮೈಲೋಮಾ ಕಣಗಳು ಜೀವಕೋಶಗಳೊಂದಿಗೆ ಸೇರುವ ಮೂಲಕ ಮೂಳೆಯನ್ನು ಗಟ್ಟಿಗೊಳಿಸುತ್ತವೆ.ಮಲ್ಟಿಪಲ್ ಮೈಲೋಮಾದಲ್ಲಿ ಕಿಡ್ನಿ ತೊಂದರೆ ಹೇಗಾಗುತ್ತದೆ?

ಆರಂಭದಲ್ಲಿ ಯಾವುದೇ ಸುಳಿವು ದೊರೆಯುವುದಿಲ್ಲ. ಆದರೆ ರಕ್ತ ಪರೀಕ್ಷೆಯಿಂದ ಪತ್ತೆಹಚ್ಚಬಹುದಾಗಿದೆ. ಕಿಡ್ನಿಗಳು ವಿಫಲವಾದಂತೆಲ್ಲಾ ಹೆಚ್ಚುವರಿ ಉಪ್ಪು, ದ್ರವ ಮತ್ತು ದೇಹದ ವೇಸ್ಟ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಇದರಿಂದಾಗಿ ಬಲಹೀನತೆ ಮತ್ತು ಕಾಲುಗಳ ಊದುವಿಕೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮೈಲೋಮಾ ಕಣಗಳು ರೂಪಿಸಿದ ಆ್ಯಂಟಿಬಾಡಿ ಅಥವಾ ಪ್ರತಿಜೀವಗಳು ಕಿಡ್ನಿಯನ್ನು ಘಾಸಿಗೊಳಿಸಬಲ್ಲವು.ಮಲ್ಟಿಪಲ್ ಮೈಲೋಮಾವನ್ನು ಹೇಗೆ ಪತ್ತೆ ಮಾಡಬಹುದು?

ಮಲ್ಟಿಪಲ್ ಮೈಲೋಮಾವನ್ನು  ಬೋನ್ ಮ್ಯೋರೋ ಬಯೋಪ್ಸಿ, ಮೂಳೆಯ ಎಕ್ಸ್-ರೇ ಮತ್ತು ರಕ್ತ ಪರೀಕ್ಷೆಯಿಂದ ಪತ್ತೆಹಚ್ಚಬಹುದು. ಮಲ್ಟಿಪಲ್ ಮೈಲೋಮಾ ಹೊಂದಿರುವ ವ್ಯಕ್ತಿಗಳ ಮೂಳೆಯ ಮಜ್ಜೆಯಲ್ಲಿ(ಮ್ಯೋರೊ) ಮಿತಿ ಮೀರಿದ ಪ್ಲಾಸ್ಮಾ ಸೆಲ್‌ಗಳು ಇರುತ್ತದೆ. ಹೀಗಾಗಿ ರೋಗ ಅಥವಾ ಸಮಸ್ಯೆಯನ್ನು ಪತ್ತೆಹಚ್ಚಲು ಬೋನ್ ಮ್ಯೋರೋ ಬಯೋಪ್ಸಿ ನೆರವಾಗುತ್ತದೆ.ಮೈಲೋಮಾ ಜೀವಕೋಶಗಳಿಂದ ಉಂಟಾಗುವ ಮೂಳೆಯ ನಾಶವವನ್ನು ಎಕ್ಸ್-ರೇ ಮೂಲಕ ಕಂಡುಹಿಡಿಯಬಹುದಾಗಿದೆ. ವೈದ್ಯರು ಆಗಾಗ್ಗೆ ಬಹುತೇಕ ಮೂಳೆಗಳನ್ನು ಒಳಗೊಂಡಂತೆ ನಿರಂತರವಾಗಿ ಎಕ್ಸ್-ರೇ ತೆಗೆಯುತ್ತಾರೆ. ಇದನ್ನು ಬೋನ್ ಸರ್ವೆ ಅಥವಾ ಸ್ಕೆಲೆಟಲ್ ಸರ್ವೆ ಎಂದು ಕರೆಯುತ್ತಾರೆ.ಚಿಕಿತ್ಸೆಯ ವಿವರ


ಕಿಮೊಥೆರಪಿ , ಕ್ಯಾನ್ಸರ್ ಕಣಗಳನ್ನು ನಿಯಂತ್ರಿಸಲು ಅಥವಾ ನಾಶಗೊಳಿಸಲು ಔಷಧಗಳನ್ನು ಬಳಸುವ ಒಂದು ವಿಧಾನವಾಗಿದೆ. ಈ ಔಷಧಗಳನ್ನು ನುಂಗಿಸುವ ಮೂಲಕ ಅಥವಾ ರಕ್ತ ನಾಳದ ಮೂಲಕ ಇಂಜೆಕ್ಟ್ ಮಾಡಲಾಗುತ್ತದೆ. ಔಷಧವು ರಕ್ತ ನಾಳ ಪ್ರವೇಶಿಸಿ ದೇಹದ ಎಲ್ಲ ಪ್ರದೇಶಗಳನ್ನೂ ತಲುಪುವ ಮೂಲಕ ಮಲ್ಟಿಪಲ್ ಮೈಲೋಮಾದಂತಹ ಕ್ಯಾನ್ಸರ್‌ಗೆ ನೀಡುವ ಚಿಕಿತ್ಸೆಯನ್ನು ಪ್ರಯೋಜನಕಾರಿಯಾಗಿಸುತ್ತದೆ.ರೇಡಿಯೇಷನ್ ಥೆರಪಿ:
ಹೈ-ಎನರ್ಜಿ ಎಕ್ಸ್-ರೇ ಅಥವಾ ದೇಹದಲ್ಲಿನ ಅಂಗಾಂಶವನ್ನು ಭೇದಿಸಿಕೊಂಡು ಒಳನುಗ್ಗಿ, ಕ್ಯಾನ್ಸರ್‌ಕಾರಕ ಜೀವಕೋಶಗಳನ್ನು ನಾಶಪಡಿಸುವಂತಹ ಸೂಕ್ಷ್ಮ ಅಂಶಗಳನ್ನು ರೇಡಿಯೇಷನ್ ಥೆರಪಿಯಲ್ಲಿ ಬಳಸಲಾಗುತ್ತದೆ.ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟ್: ಅತ್ಯುತ್ತಮ ಆರೋಗ್ಯಕ್ಕಾಗಿ ಚಿಕ್ಕ ವಯಸ್ಸಿನ ಮೈಲೋಮಾ ರೋಗಿಗಳಿಗೆ ನೀಡುವ ಉತ್ತಮ ದರ್ಜೆಯ ಚಿಕಿತ್ಸೆಯಾಗಿ ಇದು ಗುರುತಿಸಿಕೊಂಡಿದೆ. ಹಾಗೆಯೇ ಬಹುತೇಕ ಆಸ್ಪತ್ರೆಗಳಲ್ಲಿ  ಈ ಚಿಕಿತ್ಸೆಯನ್ನು ವಯಸ್ಸಾದವರಿಗೂ ನೀಡಲಾಗುತ್ತದೆ. ಸ್ಟ್ಯಾಂಡರ್ಡ್ ಕಿಮೊಥೆರಪಿಗೆ ಹೋಲಿಸಿದರೆ ಈ ಚಿಕಿತ್ಸೆಯು ಬದುಕುಳಿಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂಬುದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ.ಸರ್ಜರಿ: ಕೆಲವೊಮ್ಮೆ ಸಿಂಗಲ್ ಪ್ಲಾಸ್ಮಾಸೈತಮ್‌ಗಳನ್ನು (plasmacytomas)  ತೊಡೆದುಹಾಕಲು ಸರ್ಜರಿ ಬಳಕೆಯಾಗುತ್ತದೆ. ಮಲ್ಟಿಪಲ್ ಮೈಲೋಮಾಗೆ ಚಿಕಿತ್ಸೆ ನೀಡುವಾಗ ಸರ್ಜರಿಯ ಬಳಕೆ ತೀರಾ ವಿರಳ.

 

ಸ್ಪೈನಲ್ ಕಾರ್ಡ್ ಕಂಪ್ರೆಷನ್ ಪ್ಯಾರಾಲಿಸಿಸ್‌ಗೆ ಕಾರಣವಾದಾಗ, ತೀವ್ರ ಸ್ನಾಯು ದೌರ್ಬಲ್ಯ ಅಥವಾ ನಂಬ್‌ನೆಸ್ (ಜೋವು) ಸಂದರ್ಭಗಳಲ್ಲಿ ತುರ್ತು ಸರ್ಜರಿಯ ಅಗತ್ಯವಿರುತ್ತದೆ. ಮೂಳೆಯ ಹಾನಿ ತಡೆಯಲು ಮತ್ತು ದುರ್ಬಲಗೊಂಡ ಮೂಳೆಗಳಿಗೆ ಆಧಾರ ನೀಡಲು ರಾಡ್ ಅಥವಾ ಮೆಟಲ್ ಪ್ಲೇಟ್‌ಗಳನ್ನು ಹಾಕಲು ನಾನ್-ಎಮರ್ಜೆನ್ಸಿ (ಆಯ್ದ) ಸರ್ಜರಿಯನ್ನು ಮಾಡಬಹುದು.

 

ಇತರ ಔಷಧಗಳಾದ Thalidomide and Lenalidomide ಗಳನ್ನು ಪರಿಚಯಿಸಲಾಗಿದ್ದು, ಕೂದಲು ಉದುರುವಿಕೆ, ಪಿತ್ತೋದ್ರೇಕ (ಹೊಟ್ಟೆ ತೊಳೆಸುವಿಕೆ) ಮತ್ತಿತರ ಚಿಕ್ಕ ತೊಂದರೆಗಳು ಕಾಣಿಸಿಕೊಂಡಾಗ ಈ ಔಷಧಗಳನ್ನು ಓರಲ್ ಆಗಿ ತೆಗೆದುಕೊಳ್ಳಬಹುದಾಗಿದೆ.ಈ ಔಷಧಗಳನ್ನು ತೆಗೆದುಕೊಳ್ಳಲು ಆರಂಭಿಸಿದ ತರುವಾಯ ಈ ಚಿಕಿತ್ಸೆಯಲ್ಲಿ ರೋಗಿ ಸ್ವಲ್ಪ ಕಾಲವಾದರೂ ಆಸ್ಪತ್ರೆ ಸೇರಬೇಕಾಗುತ್ತದೆ. ಹೀಗೆ ಮಾಡಿದಾಗ ಕಿಮೊ ಮತ್ತು ರೇಡಿಯೇಷನ್ ಥೆರಪಿಯಿಂದಾಗುವ ಆಯಾಸ ಅಥವಾ ಅಸೌಖ್ಯತೆಯನ್ನು ಕಡಿಮೆ ಮಾಡಬಹುದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.