ಶನಿವಾರ, ಮೇ 15, 2021
24 °C

ಮಲ್ಲಯ್ಯನಪುರ: ಕುಡಿಯುವ ನೀರಿಗೆ ಹಾಹಾಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ಎಲ್ಲೆಡೆ ಕಸದ ರಾಶಿ. ಕುಡಿಯುವ ನೀರಿಗೆ ಹಾಹಾಕಾರ. ಬೆಳಕು ಚೆಲ್ಲದ ಬೀದಿ ದೀಪ. ನಿರ್ಮಾಣವಾಗದ ಚರಂಡಿ. ರಸ್ತೆಯ ಮಧ್ಯ ಭಾಗದಲ್ಲಿ ಹರಿಯುವ ಚರಂಡಿ ನೀರು. ರಾತ್ರಿ ವೇಳೆ ಸೊಳ್ಳೆಗಳ ಕಾಟ.

-ಈ ಎಲ್ಲ ಸಮಸ್ಯೆಗಳ ತಾಣ ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮ.ತಾಲ್ಲೂಕಿನ ಕೇರಳ ರಸ್ತೆಯ ಭೀಮನಬೀಡು ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಮಲ್ಲಯ್ಯನಪುರ ಗ್ರಾಮದಲ್ಲಿ 600 ಕುಟುಂಬಗಳು ವಾಸಿಸುತ್ತಿವೆ. 2,500ಕ್ಕೂ ಹೆಚ್ಚು ಜನಸಂಖ್ಯೆ ಇಲ್ಲಿದೆ. ಮೂಲ ಸೌಕರ್ಯಗಳ ಕೊರತೆಯಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ಸರಿಯಾಗಿ ನಡೆದಿಲ್ಲ ಎಂಬುದು ಗ್ರಾ.ಪಂ. ಸದಸ್ಯ ಮಹಾದೇವೇಗೌಡ ಅವರ ದೂರು.ಕೃಷಿ ಈ ಗ್ರಾಮದಲ್ಲಿ ವಾಸಿಸುವ ಬಹುತೇಕ ಜನರ ಮುಖ್ಯ ಕಸುಬು. ಅರಿಶಿಣ, ಈರುಳ್ಳಿ, ಕಬ್ಬು ಹಾಗೂ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಬೆಲೆ ಕುಸಿತದಿಂದ ರೈತರಿಗೆ ಕಷ್ಟದ ಪರಿಸ್ಥಿತಿ ಎದುರಾಗಿದೆ.ಸಮೀಪದ ಕೇರಳಕ್ಕೆ ಕೂಲಿ ಕೆಲಸಕ್ಕೆ ಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಗ್ರಾಮ ಪಂಚಾಯಿತಿ ಆಡಳಿತ ಅಭಿವೃದ್ಧಿ ಬಗ್ಗೆ ನಿರಾಸಕ್ತಿ ಹೊಂದಿದೆ. ಕುಡಿಯುವ ನೀರಿನ ಸಮಸ್ಯೆಗೆ ಹಲವು ವೇಳೆ ಸ್ಪಂದಿಸುವುದಿಲ್ಲ. ಕಾರ್ಯದರ್ಶಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡುವುದಿಲ್ಲ ಎಂದು ಸ್ಥಳೀಯ ರಾಜು ಹೇಳುತ್ತಾರೆ.ವಿದ್ಯುತ್ ಕಡಿತದಿಂದ ರೈತರು ಕಷ್ಟ ಅನುಭವಿಸುತ್ತಿದ್ದಾರೆ. ಬೇಸಿಗೆಯಲ್ಲಿ ವಿದ್ಯುತ್ ನೀಡದ ಕಾರಣ ಬೆಳೆ ಒಣಗುತ್ತವೆ.ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮಕ್ಕೆ ಹೋಗಲು ಸುಮಾರು 3 ಕಿಮೀ ದೂರವಿದೆ. ರಸ್ತೆಯಿಲ್ಲದೆ ಹೊಲಗಳ ಮೇಲೆ ನಡೆದಾಡುವ ಸ್ಥಿತಿ ಇದೆ. ಕೂಡಲೇ ಕಾಲುದಾರಿಯನ್ನೇ ಪ್ರಮುಖ ರಸ್ತೆಯಾಗಿ ಮಾರ್ಪಡಿಸಬೇಕು ಎನ್ನುವುದು ಹಲವರ ಅಭಿಪ್ರಾಯ.ಗ್ರಾಮದ ಕೆರೆಯ ಅಭಿವೃದ್ಧಿ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ. ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ನಿರ್ಮಿಸಿದ್ದರೂ ಸರಿಯಾಗಿ ಬಳಕೆಯಾಗುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್‌ಗೆ ಗ್ರಾಮದಲ್ಲೇ ಉಳಿಯಲು ವಸತಿ ಗೃಹ ನೀಡಿದ್ದರೂ ಅವರು ಇಲ್ಲಿ ಉಳಿಯುತ್ತಿಲ್ಲ.ಇನ್ನಾದರೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಗ್ರಾಮಕ್ಕೆ ಬೇಕಾದ ಮೂಲಭೂತ ಸೌಕರ್ಯ ಒದಗಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.