ಮಳೆಗಾಲ ಪ್ರಾರಂಭ: ಮುನ್ನಚ್ಚೆರಿಕೆ ಕ್ರಮಕ್ಕೆ ಸಿದ್ಧತೆ
ಮಡಿಕೇರಿ: ಜಿಲ್ಲೆಯಲ್ಲಿ ಪ್ರಸಕ್ತ ಮಳೆಗಾಲದಲ್ಲಿ ಅತಿವೃಷ್ಠಿಯಿಂದ ಉಂಟಾಗಬಹುದಾದ ಹಾನಿ ಮತ್ತು ಅನಾಹುತಗಳ ನಿಯಂತ್ರಣಕ್ಕೆ ಎಲ್ಲಾ ಇಲಾಖೆಗಳು ಸಿದ್ಧರಾಗಿ ಕಾರ್ಯ ಪ್ರವೃತ್ತವಾಗುವಂತೆ ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಪ್ರವಾಹ ಮುನ್ನೆಚ್ಚರಿಕೆ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ವರ್ಷಧಾರೆ ಹೆಚ್ಚಾದ ಸಂದರ್ಭದಲ್ಲಿ ಪ್ರವಾಹ, ಬರೆ ಕುಸಿತ, ಜನ, ಜಾನುವಾರು ಪ್ರಾಣಹಾನಿ, ವಾಸದ ಮನೆ ಹಾನಿ ಹಾಗೂ ಸಾರ್ವಜನಿಕ ಆಸ್ತಿ ಹಾನಿಯಾಗುವ ಸಾಧ್ಯತೆಗಳಿದ್ದು ಅಂತಹ ವೇಳೆ ತಕ್ಷಣವೇ ಸಂಬಂಧಪಟ್ಟ ಎಲ್ಲಾ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಮಡಿಕೇರಿ ತಾಲ್ಲೂಕಿನ ಭಾಗಮಂಡಲ, ಅಯ್ಯಂಗೇರಿ, ನಾಪೋಕ್ಲು, ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು, ದುಬಾರೆ ಮತ್ತು ಲಕ್ಷ್ಮಣತೀರ್ಥ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಗುಹ್ಯ, ಕಣಿವೆ, ನೆಲ್ಲಿಹುದಿಕೇರಿ ಇನ್ನು ಹಲವು ಕಡೆ ರಸ್ತೆ ಸಣ್ಣ ಪುಟ್ಟ ಭೂ ಪ್ರದೇಶಗಳು ತಾತ್ಕಾಲಿಕವಾಗಿ ಜಲಾವೃತವಾಗುತ್ತವೆ. ಇಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದರು.
ನಗರಸಭೆ ವ್ಯಾಪ್ತಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಬರೆಗಳ ಕೆಳಗೆ ವಾಸಮಾಡುತ್ತಿರುವ ಜನರಿಗೆ ಮುನ್ನೆಚ್ಚರಿಕೆ ನೀಡಿ ತಾತ್ಕಾಲಿಕ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ನಗರಸಭಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಸಭೆ ಕಚೇರಿ, ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ಇಂಜಿನಿಯರಿಂಗ್ ವಿಭಾಗ, ಲೋಕೋಪಯೋಗಿ ಇಲಾಖೆ, ಚೆಸ್ಕಾಂ ಇಲಾಖೆ ಕಚೇರಿಗಳಲ್ಲಿ ರಜಾ ದಿನಗಳಲ್ಲಿ ಹಾಗೂ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಲು ಸಭೆಯಲ್ಲಿ ಸೂಚಿಸಿದರು.
ಮಳೆಗಾಲದಲ್ಲಿ ದೂರವಾಣಿ ಸಂಪರ್ಕ ಕಡಿತಗೊಂಡಾಗ ಮಾಹಿತಿಗಳು ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುವುದು ಕಷ್ಟವಾಗಿರುವುದರಿಂದ ನಗರಸಭೆ ಕಚೇರಿ ಹಾಗೂ ಪ್ರತೀ ತಾಲ್ಲೂಕು ಕಚೇರಿಗಳಿಗೆ ಒಂದರಂತೆ ಮತ್ತು ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಮ್ಗಳಲ್ಲಿ ವಯರ್ಲೆಸ್ ಬೇಸ್ಸೆಟ್ ನೀಡಿದ್ದು ಅದರ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಕಂಟ್ರೋಲ್ ರೂಂ ಕರ್ತವ್ಯಕ್ಕೆ ಕೆಲವು ಇಲಾಖಾ ಮುಖ್ಯಸ್ಥರುಗಳು ತಮ್ಮ ಸಿಬ್ಬಂದಿಗಳನ್ನು ಸರಿಯಾಗಿ ನಿಯೋಜಿಸುತ್ತಿರುವುದಿಲ್ಲ. ಅಲ್ಲದೆ ಬಡ್ತಿಯಿಂದ, ವರ್ಗಾವಣೆಗೊಂಡ ನೌಕರರುಗಳ ವಿವರಗಳನ್ನು ಕೂಡ ಜಿಲ್ಲಾಧಿಕಾರಿ, ತಹಶೀಲ್ದಾರ್ ಕಚೇರಿಗೆ ಕಳುಹಿಸುತ್ತಿಲ್ಲ. ಇದರಿಂದ ಕಂಟ್ರೋಲ್ ರೂಂ ಕರ್ತವ್ಯದಲ್ಲಿ ಅವ್ಯವಸ್ಥೆ ಉಂಟಾಗುತ್ತಿದೆ ಎಂದು ಅವರು ಹೇಳಿದರು.
ಅಪರ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ ಅವರು ಮಾತನಾಡಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ 24ಗಂಟೆ ಸಹಾಯವಾಣಿ ತೆರೆಯಲಾಗಿದ್ದು, ಯಾವುದೇ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು ಅತಿವೃಷ್ಠಿಯಿಂದ ಉಂಟಾಗುವ ಹಾನಿಯ ಬಗ್ಗೆ ದೂರವಾಣಿ ಸಂಖ್ಯೆ:1077ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದರು.
ಎಸ್ಪಿ ಮಂಜುನಾಥ ಅಣ್ಣಿಗೇರಿ, ಎಸಿ ಡಾ.ಎಂ.ಆರ್.ರವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶಿವಕುಮಾರ್, ಇತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.