ಮಳೆಯಾದರೆ ಕೆಳ ಸೇತುವೆ ಸಂಚಾರವೇ ರದ್ದು!

ಸವಣೂರ: ತಾಲ್ಲೂಕಿನ ಮೂಲಕವಾಗಿ ಹಾದುಹೋಗುವ ಪಾಳಾ-ಬಾದಾಮಿ ರಾಜ್ಯ ಹೆದ್ದಾರಿಗೆ (ನಂ-17) ಜಲಕಂಟಕ ಎದುರಾಗಿದೆ. ಯಲವಿಗಿ ಗ್ರಾಮದ ರೈಲ್ವೆ ಕ್ರಾಸಿಂಗ್ ಬಳಿ ನಿರ್ಮಿ ಸಲಾಗಿರುವ ಕೆಳಹಂತದ ಸೇತುವೆಯಲ್ಲಿ ವರ್ಷದ ಮೊದಲ ಮಳೆಗೆ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದೆ. ಪರಿಣಾಮ, ಹಾವೇರಿ-ಗದಗ ರಸ್ತೆ ಸಂಪರ್ಕ ಅಸ್ಯವ್ಯಸ್ತಗೊಂಡಿದೆ.
ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ಈ ಕೆಳಸೇತುವೆಯನ್ನು ಈಚೆಗೆ ನಿರ್ಮಾಣಗೊಳಿಸಲಾಗಿದೆ. ರೈಲ್ವೆ ಕ್ರಾಸಿಂಗ್ಗೆ ಮೇಲ್ಸೆತುವೆ ನಿರ್ಮಿಸಿ ಎಂಬ ಸ್ಥಳೀಯರ ಬೇಡಿಕೆಯನ್ನು ಕಡೆಗಣಿಸಲಾಗಿದೆ. ಅತ್ಯಂತ ಅವೈಜ್ಞಾನಿಕವಾದ ರೀತಿಯಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿದೆ. ಸೇತುವೆಯ ಎರಡೂ ಬದಿಗಳಲ್ಲಿ ಕಡಿದಾದ ಏರಿಕೆ ಇದೆ. ಈ ಸೇತುವೆಯಲ್ಲಿ ಸಂಗ್ರಹವಾಗುವ ನೀರನ್ನು ತೆರವು ಗೊಳಿಸುವ ಮಾರ್ಗವನ್ನೂ ( ಔಟ್ಲೆಟ್) ಕಲ್ಪಿಸಲಾಗಿಲ್ಲ ಎಂದು ಯಲವಿಗಿ ರೈಲು ಪ್ರಯಾಣಿಕರ ಸಂಘದ ಪದಾಧಿಕಾರಿಗಳಾದ ಡಾ.ಪ್ರಸನ್ನ ರಾಯಚೂರ ಆಕ್ಷೇಪಿಸಿದ್ದಾರೆ.
ಈ ಸೇತುವೆಯ ಸ್ವರೂಪದಲ್ಲಿಯೇ (ಪ್ಲಾನಿಂಗ್) ದೋಷವಿದೆ. ನೆಲ ಮಟ್ಟಕ್ಕಿಂತ 15 ಅಡಿ ಆಳದಲ್ಲಿ ಸೇತುವೆ ಹಾಯ್ದುಹೋಗುತ್ತದೆ. ಮೊದಲು ಹಳ್ಳದ ನೀರು ಹರಿಯುತ್ತಿದ್ದ ಸ್ಥಳದಲ್ಲಿ ಈ ಕೆಳಹಂತದ ಸೇತುವೆ ನಿರ್ಮಾಣ ಮಾಡಲಾಗಿದೆ. ಇದರಿಂದ ಸುತ್ತಮುತ್ತ ಲಿನ 150 ಎಕರೆ ಪ್ರದೇಶದ ಮಳೆ ನೀರು ಸರಾಗವಾಗಿ ಹರಿದು ಹೋಗಲು ತಡೆಯಾಗಿದೆ.
ಗ್ರಾಮದ ಧರ್ಮದ ಕೆರೆಗೆ ಸೇರುತ್ತಿದ್ದ ಮಳೆ ನೀರು, ಸೇತುವೆಯಲ್ಲಿ ಸಂಗ್ರಹವಾಗುತ್ತಿದೆ. ಸುಮಾರು 1.5 ಕಿ.ಮೀ ದೂರದ ನೀರೂ ಇಲ್ಲಿಗೆ ಹರಿದು ಬರುತ್ತದೆ ಎಂದು ಡಾ. ರಾಯಚೂರ ತಿಳಿಸಿದ್ದಾರೆ.
ಸೇತುವೆಯ ದುರವಸ್ಥೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಲವಿಗಿ ಗ್ರಾಮದ ಪ್ರಮುಖರಾದ ರಾಜಶೇಖರ ಕಾತರಕಿ, ಈ ಸೇತುವೆಯ ಅವ್ಯವಸ್ಥೆ ಯಿಂದ ಪ್ರಾಣಹಾನಿಯಾದಲ್ಲಿ ಅದಕ್ಕೆ ಸಂಬಂಧಿಸಿದ ಇಲಾಖೆ ಹೊಣೆಯಾಗಲಿದೆ.
ಸೇತುವೆಯ ತೊಂದರೆಯನ್ನು ಸರಿಪಡಿಸದಿದ್ದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದಿದ್ದಾರೆ. ರೈಲ್ವೆ ಕ್ರಾಸಿಂಗ್ನಲ್ಲಿ ಮೇಲ್ಸೆತುವೆ ನಿರ್ಮಿಸದೆ, ಕೆಳಸೇತುವೆ ನಿರ್ಮಾಣಗೊಳಿಸಲಾಗಿರುವ ಬಗ್ಗೆಯೂ ಗ್ರಾಮಸ್ಥರಲ್ಲಿ ಅಸಮಾಧಾನ ಇದೆ. ಈ ಸೇತುವೆಯ ಸ್ಥಳದಿಂದ 1.5ಕಿ.ಮೀ ದೂರದವರೆಗೂ ಪೈಪ್ಲೈನ್ ನಿರ್ಮಾಣ ಮಾಡಿದಲ್ಲಿ ಮಾತ್ರ ಇಲ್ಲಿನ ನೀರು ಹರಿದುಹೋಗುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಕಾಲಿಕ ಮಳೆಯಿಂದ ಸೇತುವೆಯ ಎಲ್ಲ ದೋಷಗಳು ಬಹಿರಂಗ ಗೊಂಡಿದ್ದು, ಮುಂದಿನ ಮಳೆಯ ಒಳಗಾಗಿ ಅದನ್ನು ಸರಿಪಡಿಸಬೇಕಾದ ಅನಿವಾರ್ಯತೆ ಇದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.