ಮಂಗಳವಾರ, ಮೇ 17, 2022
25 °C

ಮಳೆ: ಕೃಷಿ ಚಟುವಟಿಕೆ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲ್ಹಾರ: ಪಟ್ಟಣ ಸೇರಿದಂತೆ ಹೋಬಳಿಯ ಸುತ್ತಮುತ್ತಲಿನ ಬಳೂತಿ, ಹಣಮಾಪುರ, ಮಟ್ಟಿಹಾಳ, ತೆಲಗಿ, ಆಸಂಗಿ, ಕುರುಬರದಿನ್ನಿ, ರೋಣಿಹಾಳ, ಕುಪಕಡ್ಡಿ ಹಲವು ಗ್ರಾಮಗಳಲ್ಲಿ ಗುರುವಾರ ಮಧ್ಯಾಹ್ನ ಸುಮಾರು ಎರಡು ಗಂಟೆಗಳ ಕಾಲ ಉತ್ತಮ ಮಳೆ ಸುರಿಯಿತು.ಮಧ್ಯಾಹ್ನ 1. 30ಕ್ಕೆ  ಆರಂಭವಾದ ರಭಸವಾದ ಮಳೆ ಮೂರು ಗಂಟೆಯಾದರೂ ಸುರಿಯುತ್ತಲೇ ಇತ್ತು. ಇದರಿಂದಾಗಿ ರಸ್ತೆಗಳಲ್ಲಿ ನೀರು ಹರಿದಾಡಿ, ಚರಂಡಿಗಳೆಲ್ಲ ತುಂಬಿದ್ದಲ್ಲದೇ ಹೊಲದ ಬದಿಯ ಒಡ್ಡುಗಳಲ್ಲಿ ನೀರು ನಿಂತಿತ್ತು.ಕಳೆದ ಒಂದು ತಿಂಗಳಿನಿಂದ ಈ ಪ್ರದೇಶದಲ್ಲಿ ಕೇವಲ ರಭಸ ಗಾಳಿ ಮಾತ್ರ ಬೀಸುತ್ತಿದ್ದು, ಉತ್ತಮ ಮಳೆಯಾ

ಗದೇ ಇದ್ದುದರಿಂದ ರೈತರೆಲ್ಲ ಕೃಷಿ ಚಟುವಟಿಕೆಗಳನ್ನು ಮಾಡದೇ ತಲೆ ಮೇಲೆ ಕೈಹೊತ್ತು, ಆಕಾಶ ನೋಡುತ್ತಾ ಕಾಲ ಕಳೆಯುತ್ತಿದ್ದರು. ಈಗ ಮುಂಗಾರು ಬಿತ್ತನೆ ತಡವಾಗಿಯಾದರೂ ಉತ್ತಮ ಮಳೆಯಾದ್ದರಿಂದ ಕೃಷಿಕರು ಬಿತ್ತನೆ ಕೆಲಸದಲ್ಲಿ ತೊಡಗಲು ಅನುಕೂಲವಾಗಿದೆ. ಹೊಲವನ್ನು ತಯಾರು ಮಾಡಿಕೊಂಡು  ಕೂಡಿಟ್ಟುಕೊಂಡಿದ್ದ ಬಿತ್ತನೆ ಬೀಜಗಳನ್ನು ಬಿತ್ತಲು ಮಳೆರಾಯ ಅವಕಾಶ ಮಾಡಿಕೊಟ್ಟಿರುವುದರಿಂದ ರೈತರಲ್ಲಿ ಮತ್ತೆ ಆಶಾವಾದ ಮೂಡಿದೆ.ಈ ಬಾರಿ ಮುಂಗಾರು ಹಂಗಾಮಿನಲ್ಲಿ ರೋಹಿಣಿ ಮಳೆ ಮಾತ್ರ ಈ ಭಾಗದಲ್ಲಿ ಸ್ವಲ್ಪ ಸುರಿದಿತ್ತು. ಇದರಿಂದ ರೈತರು ಬಿತ್ತನೆ ಕೆಲಸಕ್ಕಾಗಿ ಹೊಲಗಳನ್ನು ತಯಾರಿಯಲ್ಲಿ ಇಟ್ಟಿದ್ದರು. ಆದರೆ ಒಂದು ತಿಂಗಳುಗಳ ಕಾಲ ಉತ್ತಮ ಮಳೆಯಾಗಿರಲಿಲ್ಲ. ಈಗ ಪುನರ್ವಸು ಮಳೆ ಕೈಹಿಡಿಯುವ ಭರವಸೆ ಮೂಡಿಸಿದಂತೆ ಉತ್ತಮವಾಗಿ ಸುರಿಯುತ್ತಿದ್ದಂತೆಯೇ ಖುಷಿಯಾಗಿ ಹೊಲ-ಗದ್ದೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ರೈತರ ಮೊಗದಲ್ಲಿ ಹರ್ಷ

ಸಿಂದಗಿ:ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಗುರುವಾರ ಸಂಜೆಯವರೆಗೂ ಉತ್ತಮ ಮಳೆ ಸುರಿದಿದೆ.ನಗರದಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಪ್ರಾರಂಭಗೊಂಡ ಮಳೆ ಎರಡು ಗಂಟೆಗಳ ಕಾಲ ಧಾರಾಕಾರವಾಗಿ ಸುರಿದಿದೆ. ಈ ವರ್ಷದ ಎರಡನೇ ಉತ್ತಮ ಮಳೆ ಇದಾಗಿದೆ. ಕಳೆದ ಜೂನ್ 1 ರಂದು ಸಿಂದಗಿಯಲ್ಲಿ 47.7ಮಿ.ಮೀ ನಷ್ಟು ದಾಖಲೆ ಮಳೆ ಆಗಿತ್ತು. ಅದಾದ ನಂತರ ಆದ ಉತ್ತಮ ಮಳೆ ಇದಾಗಿದೆ. ಸುಮಾರು ದಿನಗಳಿಂದ ಅಲ್ಲಲ್ಲಿ ಚದುರಿದ ಜಿಟಿ ಜಿಟಿ ಮಳೆಯಾಗಿತ್ತು. ಆದರೆ ಗುರುವಾರ ತಾಲ್ಲೂಕಿನಾದ್ಯಂತ ಉತ್ತಮ ಮಳೆ ಆಗಿದೆ.ಕಲಕೇರಿ ಹೋಬಳಿ, ಆಲಮೇಲ ಹೋಬಳಿಯಲ್ಲೂ ಉತ್ತಮ ಮಳೆಯಾಗಿದೆ. ತಾಲೂಕಿನಲ್ಲಿ 27 ಮಿ.ಮೀನಷ್ಟು ಎಂದು ಕೃಷಿ ಸಹಾಯಕ ನಿರ್ದೇಶಕ ಎಚ್.ವೈ. ಸಿಂಗೆಗೋಳ ತಿಳಿಸಿದ್ದಾರೆ. ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ರೈತರ ಮುಖದಲ್ಲಿ ಹರ್ಷ ಮೂಡಿದೆ. ಕಾಲುವೆಗೆ ನೀರು: ಆಲಮಟ್ಟಿ ಜಲಾಶಯದಿಂದ ಶುಕ್ರವಾರದಿಂದ ಕೃಷ್ಣಾ ಮೇಲ್ದಂಡೆ ಕಾಲುವೆ ಮತ್ತು ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿದು ಬರಲಿದೆ.ಸಿಂದಗಿ ತಾಲ್ಲೂಕಿನ ಕಾಲುವೆಗಳಿಗೆ ನೀರು ಹರಿದು ಬರಲು ಇನ್ನೂ ಮೂರು ದಿನಗಳು ಬೇಕಾಗಬಹುದು ಎಂದು ಶಾಸಕ ರಮೇಶ ಭೂಸನೂರ ತಿಳಿಸಿದರು. ಅಗತ್ಯ ಸಮಯದಲ್ಲಿ ಕಾಲುವೆಗೆ ನೀರು ಹರಿದು ಬರುವುದು ಸಂತಸದ ವಿಷಯ. ಸಿಂದಗಿ ನಗರ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಶಾಸಕರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.