ಗುರುವಾರ , ಜೂನ್ 17, 2021
21 °C

ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿಕೊಳ್ಳಿ

ಬೆಂಗಳೂರು: `ಮಳೆ ನೀರು ಸಂಗ್ರಹ ಪದ್ಧತಿಯನ್ನು ನೀರು ಪೂರೈಕೆಗೆ ಪರ್ಯಾಯ ಆಗುವಂತೆ ಅಭಿವೃದ್ಧಿಪಡಿಸಿ ನೀರಿನ ಸಮಸ್ಯೆ ನೀಗಿಸಬೇಕು~ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ (ಆರ್‌ಡಿಪಿಆರ್) ಪ್ರಧಾನ ಕಾರ್ಯದರ್ಶಿ ಡಾ.ಅಮಿತಾ ಪ್ರಸಾದ್ ಹೇಳಿದರು.ಗ್ರಾಮೀಣ ಮೂಲ ಸೌಕರ್ಯ ಮತ್ತು ಅಭಿವೃದ್ಧಿ ನಿಗಮವು ನಗರದಲ್ಲಿ ಬುಧವಾರ ಏರ್ಪಡಿಸಿದ್ದ `ಸುಸ್ಥಿರ ಮಳೆ ನೀರು ಸಂಗ್ರಹ ಮತ್ತು ನಗರ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಪುನಶ್ಚೇತನ~ ವಿಷಯ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.`ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಕೋಲಾರದ 16, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 94, ಚಿತ್ರದುರ್ಗದ 18 ಗ್ರಾಮ ಹಾಗೂ ವಿವಿಧ ತಾಲ್ಲೂಕುಗಳಲ್ಲಿ ನೀರಿನ ಸಮಸ್ಯೆ ಇದೆ. 40 ಕೋಟಿ ರೂಪಾಯಿ ವೆಚ್ಚದಲ್ಲಿ ನೀರು ಪೂರೈಕೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಆದರೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಮುಖ್ಯವಾಗಿದೆ. ಚೆನ್ನೈನಲ್ಲಿ ಹತ್ತು ವರ್ಷದ ಹಿಂದೆಯೇ ಮಳೆ ನೀರು ಸಂಗ್ರಹ ಪದ್ಧತಿಯನ್ನು ಜಾರಿಗೆ ತರಲಾಗಿದ್ದು, ಅದೀಗ ಯಶಸ್ವಿಯಾಗಿದೆ.`ರಾಜ್ಯದಲ್ಲಿ 2.20 ಲಕ್ಷ ಕೊಳವೆ ಬಾವಿಗಳಿವೆ. ಆದರೆ ಅಂತರ್ಜಲ ಮಟ್ಟವೇ ಕುಸಿದಿದೆ. ಆದ್ದರಿಂದ ನೀರಿನ ನಿರ್ವಹಣೆ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ನೀರಿನ ಬಗ್ಗೆ ಜಾಗೃತಿ ಮೂಡಿಸಬೇಕು. ಇದರಲ್ಲಿ ಸಮುದಾಯದ ಪಾತ್ರವೂ ಮುಖ್ಯವಾಗಿದೆ.ಸಿಬ್ಬಂದಿ ತಾವು ಮಾಡುವ ಕೆಲಸದ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿರಬೇಕು. ತಾಂತ್ರಿಕ ಅಂಶಗಳನ್ನು ತಿಳಿದುಕೊಂಡಿರಬೇಕು. ಇದಕ್ಕಾಗಿ ಎಲ್ಲರೂ ಕಡ್ಡಾಯವಾಗಿ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಅವರು ತಿಳಿಸಿದರು.`ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ಜಲಾಶಯದಲ್ಲೂ ನೀರಿಲ್ಲ. ಆದ್ದರಿಂದ ಬೇಡಿಕೆಗೆ ತಕ್ಕಂತೆ ನೀರು ಪೂರೈಸಲು ಆಗುತ್ತಿಲ್ಲ. ಮಳೆ ನೀರು ಸಂಗ್ರಹ ಪದ್ಧತಿ ಮೂಲಕ ಸಮಸ್ಯೆ ನೀಗಿಸಬಹುದಾಗಿದೆ ~ ಎಂದು ಕೆಆರ್‌ಐಡಿಎಲ್‌ನ ಪ್ರಧಾನ ವ್ಯವಸ್ಥಾಪಕ ಎಸ್.ವಿ.ವೆಂಕಟೇಶ್‌ಮೂರ್ತಿ ಹೇಳಿದರು.`ನೀರನ್ನು ಈಗ ಸರಕು ಎಂದು ಪರಿಗಣಿಸಲಾಗುತ್ತಿದ್ದು, ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಣೆ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅಂತರ್ಜಲ ಮಟ್ಟವನ್ನು ಅಭಿವೃದ್ಧಿ ಮಾಡಲು ಹಲವು ಅವಕಾಶಗಳಿವೆ~ ಎಂದು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್‌ನ (ಕೆಎಸ್‌ಸಿಎಸ್‌ಟಿ) ಕಾರ್ಯಕಾರಿ ಕಾರ್ಯದರ್ಶಿ ಡಾ.ಎಂ.ಪೃಥ್ವಿರಾಜ್ ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.