ಸೋಮವಾರ, ಜೂನ್ 21, 2021
20 °C

ಮಳೆ ಬಾರದಿದ್ದರೆ ನೀರಿಗೆ ಹಾಹಾಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮಂಗಳೂರು ನಗರಕ್ಕೆ ನೀರು ಪೂರೈಸುತ್ತಿರುವ ತುಂಬೆ ಅಣೆಕಟ್ಟೆಯಲ್ಲಿ ಈ ಬಾರಿ ನೀರಿನ ಸಂಗ್ರಹ ತೀರಾ ಕಡಿಮೆಯಾಗಿದ್ದು, ಇನ್ನೊಂದು ವಾರದೊಳಗೆ ನೇತ್ರಾವತಿ ನದಿಯ ಅಚ್ಚುಕಟ್ಟು ಪ್ರದೇಶಗಳಲ್ಲಿ ಮಳೆ ಬೀಳದಿದ್ದರೆ ನೀರಿಗೆ ಹಾಹಾಕಾರ ಉಂಟಾಗುವುದು ನಿಶ್ಚಿತವಾಗಿದೆ.ತುಂಬೆ ಅಣೆಕಟ್ಟೆಯಲ್ಲಿ ಕಳೆದ ವರ್ಷ ಇದೇ ದಿನ (ಮಾರ್ಚ್ 26) 12 ಅಡಿಯಷ್ಟು ನೀರಿನ ಸಂಗ್ರಹ ಇದ್ದಿದ್ದರೆ, ಈ ಬಾರಿ 8.9 ಅಡಿಗೆ ಕುಸಿದಿದೆ. ಹೀಗಾಗಿ ಆತಂಕ ಎದುರಾಗಿದ್ದು, ಸೋಮವಾರ ಅಣೆಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿದ ಮೇಯರ್ ಗುಲ್ಜಾರ್ ಬಾನು, ಕಾಂಗ್ರೆಸ್ ಪಾಲಿಕೆ ಸದಸ್ಯರು ಮತ್ತು ಆಯುಕ್ತ ಹರೀಶ್ ಕುಮಾರ್ ಪರಿಸ್ಥಿತಿ ಅವಲೋಕಿಸಿದರು.`ನೀರು ಪ್ರಕೃತಿಯ ಕೊಡುಗೆ. ವರ್ಷ ಕಳೆದಂತೆ ನೀರಿನ ಬಳಕೆ ಜಾಸ್ತಿಯಾಗುತ್ತಿದೆ. ನದಿಯಲ್ಲಿ ನೀರು ಹರಿವಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಈ ಬಾರಿ ಈ ಹಿಂದೆಂದೂ ಕಾಣಿಸದ ನೀರಿನ ಕೊರತೆ ಎದುರಾಗಿದೆ.ಜನರು ಮಿತವಾಗಿ ನೀರು ಬಳಸಬೇಕು. ಜನ ಸಹಕರಿಸಿದರೆ ಇನ್ನು 45 ದಿನಗಳವರೆಗೆ ಮಿತವಾಗಿ ನೀರು ಪೂರೈಸುವುದು ಸಾಧ್ಯವಾಗಬಹುದು~ ಎಂದು ಮೇಯರ್ ಗುಲ್ಜಾರ್ ಬಾನು ಪತ್ರಕರ್ತರಿಗೆ ತಿಳಿಸಿದರು.`ತುಂಬೆ ಅಣೆಕಟ್ಟೆಯ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ 13 ಅಡಿ. ಮೇಲ್ಭಾಗದ ಎಎಂಆರ್ ಮತ್ತು ಎಂಆರ್‌ಪಿಎಲ್‌ನವರ ಅಣೆಕಟ್ಟೆಗಳಲ್ಲಿ ನೀರು ಹೆಚ್ಚುವರಿ ಇದ್ದಿದ್ದರೆ ತುಂಬೆಗೆ ಬರಬೇಕಿತ್ತು. ಆದರೆ ಅಲ್ಲೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸಂಗ್ರಹ ಇಲ್ಲ. ಹೀಗಾಗಿ ತುಂಬೆಯಲ್ಲೂ ನೀರಿನ ಕೊರತೆ ಕಾಣಿಸಿದೆ.ಉದ್ಯಮಗಳಿಗಿಂತಲೂ ಜನರ ಕುಡಿಯುವ ನೀರಿನ ಬವಣೆ ನೀಗಿಸುವುದಕ್ಕೆ ಆದ್ಯತೆ ನೀಡಬೇಕಾಗುತ್ತದೆ. ಹೀಗಾಗಿ ಅಗತ್ಯಬಿದ್ದರೆ ಎರಡೂ ಅಣೆಕಟ್ಟೆಗಳಿಂದ ಅಗತ್ಯದ ನೀರು ಬಿಡಿಸಿಕೊಳ್ಳಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬಹುದು~ ಎಂದು ಆಯುಕ್ತ ಹರೀಶ್ ಕುಮಾರ್ ತಿಳಿಸಿದರು.ಈಗಾಗಲೇ ಎಂಸಿಎಫ್‌ಗೆ ತುಂಬೆಯಿಂದ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಕುಡಿಯುವ ನೀರು ರೂಪದಲ್ಲಿ ದಿನಕ್ಕೆ 5 ಸಾವಿರ ಲೀಟರ್ ನೀರನ್ನು ಮಾತ್ರ ನೀಡಲಾಗುತ್ತಿದೆ. ಉಳ್ಳಾಲಕ್ಕೆ ನೀಡುತ್ತಿದ್ದ 2.5 ಎಂಎಲ್‌ಡಿ 1 ಎಂಎಲ್‌ಡಿಗೆ ಹಾಗೂ ಮೂಲ್ಕಿಗೆ ನೀಡುತ್ತಿದ್ದ 1 ಎಂಎಲ್‌ಡಿ ನೀರನ್ನು ಅರ್ಧ ಎಂಎಲ್‌ಡಿಗೆ ಇಳಿಸಲಾಗಿದೆ. ನಾಲ್ಕು ಗ್ರಾ.ಪಂ.ಗಳಿಗೆ ನೀಡುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದರು.`ಸದ್ಯ ತುಂಬೆಯಿಂದ 4 ಪಂಪ್‌ಗಳಲ್ಲಿ ಪ್ರತಿದಿನ 150 ಎಂಎಲ್‌ಡಿಯಷ್ಟು ನೀರನ್ನು ಮಂಗಳೂರಿಗೆ ಹರಿಸಲಾಗುತ್ತಿದೆ. ಇದೇ ಪ್ರಮಾಣದಲ್ಲಿ ನೀರು ಹರಿದರೆ ಪ್ರತಿದಿನ 4 ಇಂಚಿನಷ್ಟು ನೀರು ಕಡಿಮೆಯಾಗುತ್ತದೆ.ಹೀಗಾಗಿ ನೀರು ಎತ್ತುವ ಪ್ರಮಾಣವನ್ನು ಕಡಿತಗೊಳಿಸಿದರೆ ಅಣೆಕಟ್ಟೆಗೆ ನೀರು ಹರಿದುಬರದಿದ್ದರೂ 45 ದಿನಗಳ ವರೆಗೆ ಇರುವ ನೀರನ್ನೇ ಸುಧಾರಿಸುವುದು ಸಾಧ್ಯವಾಗಬಹುದು. ಇದಕ್ಕೆ ಜನತೆಯ ಸಹಕಾರ ಅಗತ್ಯ. ಒಂದು ವೇಳೆ ನೀರಿಗೆ ತೀರಾ ಕೊರತೆ ಎದುರಾದರೆ ನಗರದಲ್ಲಿರುವ 200 ಕೊಳವೆ ಬಾವಿಗಳಿಂದ ನೀರೆತ್ತುವ ಮತ್ತು ಟ್ಯಾಂಕರ್‌ಗಳಲ್ಲಿ ನೀರು ಪೂರೈಸುವ ವ್ಯವಸ್ಥೆ ಮಾಡಲಾಗುವುದು~ ಎಂದು ಆಯುಕ್ತರು ತಿಳಿಸಿದರು.ವಿಧಾನಸಭೆ ಉಪಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಅವರು ಭಾನುವಾರ ತುರ್ತು ಪತ್ರಿಕಾಗೋಷ್ಠಿ ಕರೆದು ಮಳೆ ಬಾರದೆ ಇದ್ದರೆ ಇನ್ನು 9 ದಿನಗಳಲ್ಲಿ ನೀರಿಗೆ ಹಾಹಾಕಾರ ಎದುರಾಗಬಹುದು ಎಂದು ಎಚ್ಚರಿಸಿದ್ದರು.

`ತುಂಬೆ ಹೊಸ ಕಿಂಡಿ ಅಣೆಕಟ್ಟೆ ಪೂರ್ಣಗೊಂಡರೆ ಸಮಸ್ಯೆ ಇಲ್ಲ~

ಮಳೆಗಾಗಿ ಎದುರು ನೋಡುವುದು ಬಿಟ್ಟರೆ ಮಂಗಳೂರು ಜನತೆ ನೀರಿಗಾಗಿ ಬೇರೆ ಯಾವ ಮೂಲವನ್ನೂ ಹುಡುಕುವುದು ಸದ್ಯಕ್ಕೆ ಸಾಧ್ಯವಿಲ್ಲ. ಆದರೆ ಇರುವ ವ್ಯವಸ್ಥೆಯಲ್ಲೇ ನೀರನ್ನು ಸಮರ್ಥವಾಗಿ ಬಳಸಿಕೊಳ್ಳುವುದೂ ಜಿಲ್ಲಾಡಳಿತ ಮತ್ತು ಪಾಲಿಕೆಗೆ ಸಾಧ್ಯವಿದೆ. ಮುಖ್ಯವಾಗಿ ಖಾಸಗಿ ಕಂಪೆನಿಗಳ ಮನವೊಲಿಸುವ ಕೆಲಸವನ್ನು ಜಿಲ್ಲಾಡಳಿತ ಸಮರ್ಥವಾಗಿ ಮಾಡಬೇಕಾಗುತ್ತದೆ ಎಂದು ಕೆಲವು ಪಾಲಿಕೆ ಸದಸ್ಯರು ತಿಳಿಸಿದರು.ಶಂಭೂರಿನಲ್ಲಿರುವ ಎಎಂಆರ್ ಅಣೆಕಟ್ಟೆಯಲ್ಲಿ ಸದ್ಯ 1.5 ಮೀಟರ್ ನೀರಿನ ಸಂಗ್ರಹ ಇದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ. 12 ಮೀಟರ್ ಎತ್ತರದ ಈ ಅಣೆಕಟ್ಟೆಯಲ್ಲಿ ಕಂಪೆನಿ ನೀರಿನ ಲಭ್ಯತೆ ಇದ್ದಾಗ ವಿದ್ಯುತ್ ಉತ್ಪಾದಿಸುತ್ತಿತ್ತು.ಸದ್ಯ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಅಲ್ಲಿ ಸಂಗ್ರಹವಾಗುವ ನೀರೇ ಅದರ ಮೇಲ್ಭಾಗದಲ್ಲಿರುವ ಸರಪಾಡಿಯ ಎಂಆರ್‌ಪಿಎಲ್ ಅಣೆಕಟ್ಟೆಗೂ ನೀರಿನ ಸಂಗ್ರಹವಾಗಿ ಮಾರ್ಪಡುತ್ತದೆ. ಎಎಂಆರ್ ಅಣೆಕಟ್ಟೆಯಲ್ಲಿ 1.5 ಮೀಟರ್ ಮಟ್ಟದಲ್ಲಿ ನೀರನ್ನು ಕಾಯ್ದುಕೊಳ್ಳುವ ಪರಿಪಾಠ ಇದ್ದು, ಮಂಗಳೂರು ನಗರಕ್ಕೆ ನೀರಿಗೆ ತೀವ್ರ ಕೊರತೆ ಎದುರಾದಾಗ ಅದೇ ನೀರನ್ನು ಬಿಡುವಂತೆ ಮಾಡಿ ತುಂಬೆಯಲ್ಲಿನ ನೀರಿನ ಪ್ರಮಾಣ ಹೆಚ್ಚಿಸಿಕೊಳ್ಳಬಹುದು ಎಂದು ಪಾಲಿಕೆ ಮೂಲಗಳು ತಿಳಿಸಿವೆ.ಮುಖ್ಯಮಂತ್ರಿ ಬಜೆಟ್‌ನಲ್ಲಿ ಪ್ರಕಟಿಸಿರುವ ದಿನದ 24 ಗಂಟೆಯೂ ನೀರು ಪೂರೈಸುವ ಯೋಜನೆಗೆ ನೀರು ಲಭ್ಯವಾದೀತೇ ಎಂದು ಪತ್ರಕರ್ತರು ಆಯುಕ್ತರನ್ನು ಕೇಳಿದಾಗ, ತುಂಬೆ ಹೊಸ ಕಿಂಡಿ ಅಣೆಕಟ್ಟೆ ಮುಂದಿನ ವರ್ಷ ಪೂರ್ಣಗೊಳ್ಳಬಹುದು. ಈಗಿನ ಸಾಮರ್ಥ್ಯಕ್ಕಿಂತ ಅಧಿಕ ಪ್ರಮಾಣದಲ್ಲಿ ನೀರು ಸಂಗ್ರಹವಾಗಲಿದೆ. ಹೀಗಾಗಿ ನೀರಿಗೆ ತೊಂದರೆ ಎದುರಾಗದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.