ಸೋಮವಾರ, ಸೆಪ್ಟೆಂಬರ್ 20, 2021
23 °C

ಮಳೆ: ರೈತರ ಮೊಗದಲ್ಲಿ ಕಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆ: ರೈತರ ಮೊಗದಲ್ಲಿ ಕಳೆ

ಹೊಳಲ್ಕೆರೆ: ತಾಲ್ಲೂಕಿನಾದ್ಯಂತ ಶನಿವಾರ ಮತ್ತು ಭಾನುವಾರ ಉತ್ತಮ ಮಳೆ ಸುರಿದಿದ್ದು, ರೈತರಲ್ಲಿ ಹರ್ಷ ಮೂಡಿದೆ.  ರಾಮಗಿರಿ, ಬಿ.ದುರ್ಗ, ತಾಳ್ಯ ಹೋಬಳಿಗಳಲ್ಲಿಯೂ ಉತ್ತಮ ಮಳೆ ಸುರಿದಿದೆ. ಬಿರುಸಿನ ಮಳೆಯಿಂದ ಚಿಕ್ಕಜಾಜೂರು ಭಾಗದ ಹಳ್ಳಗಳಲ್ಲಿ ನೀರು ಹರಿದಿದೆ. ಬಿಟ್ಟು, ಬಿಟ್ಟು ಬರುತ್ತಿದ್ದ ಮಳೆಯಿಂದ ತಾಲ್ಲೂಕಿನಲ್ಲಿ ಮಲೆನಾಡಿನ ಸನ್ನಿವೇಶ ಸೃಷ್ಟಿಯಾಗಿದೆ. ಜನ ಹೊರಬರಲಾರದೆ, ಮನೆಯಲ್ಲೇ ಕಾಲ ಕಳೆಯುವಂತಾಯಿತು.ಬಿತ್ತನೆಗೆ ಹೋಗಿದ್ದ ರೈತರೂ ಧಾರಾಕಾರ ಮಳೆಯಿಂದ ಕೃಷಿ ಚಟುವಟಿಕೆಗಳನ್ನು ಅರ್ಧಕ್ಕೇ ನಿಲ್ಲಿಸಿ ಮನೆಗೆ ಹಿಂತಿರುಗಬೇಕಾಯಿತು. ಪಟ್ಟಣದಲ್ಲಿಯೂ ಹಗಲಿಡೀ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಸಂತೆ ವ್ಯಾಪಾರಿಗಳು ಮತ್ತು ಗ್ರಾಹಕರು ಪರದಾಡಬೇಕಾಯಿತು.ರೈತರ ಮುಖದಲ್ಲಿ ಮಂದಹಾಸ: ಕಳೆದ ಒಂದು ವಾರದಿಂದ ಬಿತ್ತನೆಯಲ್ಲಿ ತೊಡಗಿದ್ದ ರೈತರು ಮಳೆಯಿಂದ ಸಂತಸಗೊಂಡಿದ್ದಾರೆ. ತಾಲ್ಲೂಕಿನ ಹಲವೆಡೆ ಮೆಕ್ಕೆಜೋಳ, ರಾಗಿ ಬಿತ್ತನೆ ಮಾಡಲಾಗಿದ್ದು, ಬೀಜ ಮೊಳೆಯಲು ಅನುಕೂಲವಾಗಲಿದೆ.

 

ಈಗಾಗಲೇ ಹುಟ್ಟಿರುವ ಬೆಳೆಗೂ ಈ ಮಳೆಯಿಂದ ಜೀವ ಬಂದಂತಾಗಿದೆ. ಮೃಗಶಿರ, ಆರಿದ್ರಾ, ಪುನರ್ವಸು ಮಳೆಗಳು ಕೈಕೊಟ್ಟಿದ್ದರಿಂದ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿತ್ತು. ಪುಷ್ಯ ಮಳೆ ಆರಂಭದಲ್ಲೇ ಉತ್ತಮ ಮಳೆ ಬರುವ ಲಕ್ಷಣ ತೋರುತ್ತಿದೆ.ತಾಲ್ಲೂಕಿನ ಉಪ್ಪರಿಗೇನಹಳ್ಳಿ, ತಾಳ್ಯ, ಚಿತ್ರಹಳ್ಳಿ ಭಾಗಗಳಲ್ಲಿ ಹೆಚ್ಚಾಗಿ ಹೈಬ್ರಿಡ್ ಹತ್ತಿ ಬೆಳೆಯುತ್ತಾರೆ. ಆದರೆ ಈ ಬಾರಿ ಮಳೆಯಿಲ್ಲದೆ ಈ ಭಾಗದಲ್ಲಿ ಹತ್ತಿ ಬಿತ್ತನೆ ಆಗಿಲ್ಲ. ರಾಮಗಿರಿ ಹೋಬಳಿಯ ಅಲ್ಲಿಲ್ಲಿ ಮಾತ್ರ ಹತ್ತಿ ಬಿತ್ತಲಾಗಿದ್ದು, ಈ ಮಳೆಯಿಂದ ಬೆಳೆ ಚೇತರಿಕೆ ಕಾಣಲಿವೆ. ತಾಲ್ಲೂಕಿನಲ್ಲಿ ಮೆಕ್ಕೆಜೋಳ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಚಿಕ್ಕಜಾಜೂರು, ಸಾಸಲು, ಬಿ. ದುರ್ಗ ಭಾಗಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಭಾಗದಲ್ಲಿ ಕಳೆದ ವಾರವಷ್ಟೇ ಮೆಕ್ಕೆಜೋಳ ಬಿತ್ತನೆ ಆರಂಭವಾಗಿದೆ. ಇಲ್ಲಿನ ರೈತರು ಪ್ರತಿ ವರ್ಷ ಮೃಗಶಿರ ಮಳೆಗೆ ಮೆಕ್ಕೆಜೋಳ ಬಿತ್ತನೆ ಮಾಡುತ್ತಿದ್ದರು. ಆದರೆ ಈ ಬಾರಿ ಇದರ ಮುಂದಿನ ಎರಡು ಮಳೆಗಳೂ ಬರದೆ ಬಿತ್ತನೆ ವಿಳಂಬವಾಗಿದೆ. ಆದರೂ ಮುಂದಿನ ಮಳೆಗಳ ಭರವಸೆಯೊಂದಿಗೆ, ರೈತರು ಬಿತ್ತನೆ ಮಾಡುತ್ತಿದ್ದಾರೆ.ರಾಗಿ ಬಿತ್ತನೆಯೂ ವಿಳಂಬ: ತಾಲ್ಲೂಕಿನಲ್ಲಿ ರಾಗಿ ಪ್ರಮುಖ ಆಹಾರ ಬೆಳೆ. ಸಾಮಾನ್ಯವಾಗಿ ಆರಿದ್ರಾ ಮಳೆಗೆ ಇಲ್ಲಿ ರಾಗಿ ಬಿತ್ತನೆ ಮಾಡಲಾಗುತ್ತದೆ. ಆದರೆ ಆರಿದ್ರಾ ಮತ್ತು ಪುನರ್ವಸು ಮಳೆಗಳು ಬರದೆ ಬಿತ್ತನೆಗೆ ಹಿನ್ನಡೆ ಉಂಟಾಗಿತ್ತು.ಮುಂದಿನ ಆಶ್ಲೇಷ, ಮಖ, ಪುಬ್ಬ, ಉತ್ತರಾ, ಹಸ್ತ, ಚಿತ್ತ ಮಳೆಗಳನ್ನು ನಂಬಿ ರಾಗಿ ಬಿತ್ತನೆ ಮಾಡುತ್ತಿದ್ದಾರೆ. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಈಗಿನ ಮಳೆಯಿಂದ ಹುಲ್ಲು ಬೆಳೆಯುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬಂದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.