ಸೋಮವಾರ, ಮೇ 23, 2022
28 °C

ಮಹಿಳೆಗೆ ಮಹಿಳೆಯೇ ವಿರೋಧಿಯಲ್ಲ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಂದೆ ತಾಯಿ ಊರು ಕೊಡಗಿನ ಶುಂಠಿಕೊಪ್ಪವಾದರೂ ಹುಟ್ಟಿದ್ದು ಚಿನ್ನದ ನಾಡು ಕೋಲಾರದಲ್ಲಿ. ಮನಸ್ಸು ಅದೇ ರೀತಿ ಪರಿಶುದ್ಧತೆಯಿಂದ ಹೊಳೆಯುತ್ತಿದೆಯಲ್ಲಾ ಎಂದರೆ ತುಟಿಯಂಚಿನಲ್ಲಿ ಫಳ್ಳನೆ ನಗು. ತಲೆಯ ಕೂದಲೂ ಬೆಳ್ಳಗಾಗುತ್ತಿದ್ದರೇನು ಯೋಚಿಸುವ ಮನಸ್ಸು, ಪ್ರೀತಿಸುವ ಹೃದಯಕ್ಕೆ ಇನ್ನೂ ಹದಿನಾರರ ಹರೆಯ. ಹೊಸ ಚಿಂತನೆಗಳೇ ತಲೆ ತುಂಬ ಓಡಾಡುತ್ತಿರುವಾಗ ಎಲ್ಲಿನ ಮುಪ್ಪು ಎಂದು ನಕ್ಕು ಹಗುರಾಗುತ್ತಾರೆ 62ರ ಹರೆಯದ ರೀಟಾ ನೊರೊನ್ಹಾ. ತನ್ನ ಬಾಲ್ಯ ಮದುವೆ, ಜೀವನ ಮೊದಲಾದ ವೈಯಕ್ತಿಕ/ಸಾಂಪ್ರದಾಯಿಕ ಪ್ರಶ್ನೆಗಳನ್ನು ನಯವಾಗಿಯೇ ತಳ್ಳಿ ಹಾಕಿದ ಇವರು ಸಮಾಜದ ನಾಲ್ಕು ಮಂದಿಗೆ ಉಪಯೋಗವಾಗುವ ಮಾಹಿತಿ ನೀಡಿ ಎನ್ನುತ್ತಾ ಮಾತಿಗೆ ತೊಡಗಿದರು...4ಸಮಾಜಸೇವೆ ಕನಸು ಕಾಣಲು ಆರಂಭಿಸಿದ್ದು ಎಂದು...

ಒಂದರಿಂದ ಮೂರನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿ ಓದಿದ್ದರಿಂದ ವಿವಿಧ ವಯೋಮಾನದ ಮಕ್ಕಳೊಂದಿಗೆ ಬೆರೆಯುವ ಅವಕಾಶ ದೊರೆಯಿತು. ಅಲ್ಲಿ ಎಸ್ಟೇಟ್ ಕೂಲಿ ಕಾರ್ಮಿಕರ ಮಕ್ಕಳು ಬಡತನದಿಂದ ಬಳಲುತ್ತಿದ್ದರು. ಹಲವು ಬಡ ಮಹಿಳೆಯರು ತಮ್ಮ ಸಮಸ್ಯೆಗಳನ್ನು ತಾಯಿ ಬಳಿ ಹಂಚಿಕೊಳ್ಳುತ್ತಿದ್ದರು. ಆಕೆಯೂ ತನ್ನ ಕೈಲಾದ ಸಹಾಯ ಮಾಡುತ್ತಿದ್ದಳು. ಆವಳ ಸಂವೇದನಾಶೀಲ ವ್ಯಕ್ತಿತ್ವವೇ ನನಗೆ ಸ್ಪೂರ್ತಿ. ಇನ್ನೊಬ್ಬರ ಸಂಕಷ್ಟದಲ್ಲಿ ಸಹಭಾಗಿಯಾಗುವುದು ನನಗಾಗ ಆಕರ್ಷಕವಾಗಿ ಕಾಣುತ್ತಿತ್ತು. ಬಳಿಕ ನಾನು ಕಾನ್ವೆಂಟ್ ಸೇರಿದೆ. ನಂತರ ಬೋರ್ಡಿಂಗ್ ಸ್ಕೂಲ್. ಹಾಸ್ಟೆಲ್‌ನಲ್ಲಿ ಒಂದೊಂದು ವಿದ್ಯಾರ್ಥಿಗಳದ್ದೂ ಒಂದೊಂದು ಕಥೆ ಇರುತ್ತಿತ್ತು. ಎಲ್ಲದಕ್ಕೂ ದನಿಯಾದ ತಾನು ಒಂದರ್ಥದಲ್ಲಿ ಗಟ್ಟಿಯಾಗುತ್ತಾ ಹೋದೆ.4ಶಿಕ್ಷಣದ ಹಾದಿಯಲ್ಲಿ...


ಜೋಸೆಫ್ ಕಾನ್ವೆಂಟ್‌ನಲ್ಲಿ ಎಸ್‌ಎಸ್‌ಎಲ್‌ಸಿ, ತೆರೇಸಾ ಕಾಲೇಜಿನಲ್ಲಿ ಪದವಿ. ಕಾಲೇಜು ದಿನಗಳಲ್ಲಿ ಎನ್‌ಎಸ್‌ಎಸ್, ಎನ್‌ಸಿಸಿಗಳಲ್ಲಿ ಸಕ್ರಿಯಳಾಗಿದ್ದೆ. ನನ್ನ ಆಸಕ್ತಿ ಸದಭಿರುಚಿಗಳನ್ನು ಗುರುತಿಸಿದ ಅಧ್ಯಾಪಕರು ಮುಂಬೈಯ ನಿರ್ಮಲನಿಕೇತನ ಎಂಎಸ್‌ಡಬ್ಲ್ಯೂ ಕಾಲೇಜಿಗೆ ಸೇರಿಕೊಳ್ಳಲು ಸೂಚಿಸಿದರು. ಆರ್ಥಿಕವಾಗಿ ಅಷ್ಟೊಂದು ಬಲಿಷ್ಠವಾಗಿರದ ನನಗೆ ಸ್ಕಾಲರ್‌ಶಿಪ್ ದೊರೆತಿದ್ದು ಆನೆಬಲ ನೀಡಿತು. ಬಳಿಕ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್‌ನಲ್ಲಿ ಪಿಎಚ್.ಡಿ ಪಡೆದೆ. ಅಲ್ಲಿ ‘ವೈವಾ’ ನಡೆಸಲು ಬಂದಿದ್ದ ಉಪನ್ಯಾಸಕರೊಬ್ಬರು ಮಂಗಳೂರಿನ ರೋಶನಿ ನಿಲಯದಲ್ಲಿ (1971) ಶಿಕ್ಷಕರನ್ನಾಗಿ ನೇಮಿಸಿಕೊಂಡರು. ಹೀಗೆ 35 ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಸಮುದಾಯ ಅಭಿವೃದ್ಧಿಗೆ ಸಂಬಂಧಿಸಿದ ತರಗತಿಗಳನ್ನು ನೀಡಿದೆ. 2007ರಲ್ಲಿ ನಿವೃತ್ತಿ. ಬಳಿಕ ಎರಡು ವರ್ಷ ವಿಭಾಗದ ಡೀನ್. ಕಳೆದ ಜನವರಿಯಿಂದ ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದೇನೆ.4ಅಧ್ಯಾಪಕಿಯಾಗಿ...


ಅಧ್ಯಾಪನ ನೀಡುವ ಅನುಭವವೇ ವಿಶಿಷ್ಟ. ಇಂದು ನನ್ನ ವಿದ್ಯಾರ್ಥಿಗಳು ಉನ್ನತ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಮಹಿಳೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ವಿದ್ಯಾಕ್ಷೇತ್ರದಿಂದ ಸಮಾಜ ವಿಶ್ಲೇಷಿಸುವ ವಿಭಿನ್ನ ಅವಕಾಶವೂ ನನಗೆ ದೊರೆಯಿತು. ವಿದ್ಯಾರ್ಥಿಗಳ ಸಹಭಾಗಿತ್ವದೊಂದಿಗೆ ಅಸಂಘಟಿತ, ಆದಿವಾಸಿ, ದಲಿತ ಮಹಿಳೆಯರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಿದ್ದೆವು. ಜಾತಿ, ಮತ, ಧರ್ಮದ ಹೊರತಾಗಿ ಮಹಿಳಾ ಸಮಸ್ಯೆಗೆ ಉತ್ತರ ನೀಡಬೇಕು ಎನ್ನುವುದೇ ನಮ್ಮ ಗುರಿಯಾಗಿತ್ತು.4ಶಿಕ್ಷಣ ವ್ಯವಸ್ಥೆ ಬದಲಾಗುತ್ತಿದೆಯೇ...


ಹೌದು. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲೇ ಅಮೂಲಾಗ್ರ ಬದಲಾವಣೆಯಾಗಬೇಕಿದೆ. ಹಿಂದೆಲ್ಲ ಉದ್ಯೋಗಕ್ಕೋಸ್ಕರ ಓದು ಎಂಬ ಮನೋಭಾವ ಇರಲಿಲ್ಲ. ಮಾಹಿತಿಗಾಗಿ, ಜ್ಞಾನವೃದ್ಧಿಗಾಗಿ ಶಿಕ್ಷಣ ಪಡೆಯುವವರ ಸಂಖ್ಯೆಯೂ ದೊಡ್ಡದಿತ್ತು. ಆದರೆ ಇಂದು ಕಾಲ ಬದಲಾಗಿದೆ. ನಾವು ಕಾರ್ಪೊರೇಟ್ ಜಗತ್ತಿಗೆ ಅಗತ್ಯವಿರುವ ಗುಲಾಮರನ್ನು ತಯಾರು ಮಾಡುತ್ತಿದ್ದೇವೆ. ಹಣವೇ ಮುಖ್ಯವಾಗಿ ವಿದ್ಯೆ-ಜ್ಞಾನ ಮೂಲೆಗುಂಪಾಗುತ್ತಿದೆ. ಅಷ್ಟೇ ಆಕೆ ಮಹಿಳೆಯ ಸಶಕ್ತೀಕರಣ ಎಂಬುದನ್ನೂ ಆರ್ಥಿಕವಾಗಿ ಅಳೆಯಲಾಗುತ್ತಿದೆ. ಹಣ ಕೇಂದ್ರಿತ ದೃಷ್ಟಿಕೋನ ಬೆಳೆಯುತ್ತಿರುವುದು ಶ್ರೇಯೋಭಿವೃದ್ಧಿಗೆ ಸಹಕಾರಿಯಲ್ಲ. ಈ ನಿಟ್ಟಿನಲ್ಲಿ ಸಮಾಜ ಗಂಭೀರ ಚಿಂತನೆ ನಡೆಸಬೇಕಿದೆ.4ಸಮಾಜ ಸೇವಕಿಯಾಗಿ...


ನನ್ನ ಮೂಲ ಉದ್ದೇಶ ಅಸಂಘಟಿತ ವಲಯದ ಮಹಿಳೆಯರನ್ನು ಒಗ್ಗೂಡಿಸುವುದು. ಅದಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ರೈತ ಮಹಿಳಾ ಸಂಘಟನೆ, ಗ್ರಾಮೀಣ ಮಹಿಳೆಯರ ಸಹಕಾರ ಸಂಘ, ಮಹಿಳಾ ಬರಹಗಾರರ ಸಂಘ, ಹಾಲು ಉತ್ಪಾದಕರ ಸಮಿತಿ ಮೊದಲಾದ ಸಂಘಟನೆಗಳನ್ನು ರಚಿಸುವ ಮೂಲಕ ಆಕೆಯನ್ನು ಸಮಾಜಕ್ಕೆ ಪರಿಚಯಿಸುವ ಪ್ರಯತ್ನ ನಡೆಸಿದೆ. ಮಂಗಳೂರು ಮಹಿಳಾ ಸಂಘಗಳ ಜಾಲದಲ್ಲಿ ಎಲ್ಲಾ ಮಹಿಳಾ ಸಂಘಟನೆಗಳನ್ನು ಒಂದೇ ಸೂರಿನಡಿ ತರಲಾಯಿತು. ಗೂಗಲ್ ನೀಡಿದ ಉತ್ತಮ ಪಂಚಾಯಿತಿ ಅವಾರ್ಡ್ ಆಯ್ಕೆ ಸಮಿತಿಗೆ ಕರ್ನಾಟಕದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದೆ.4ಏನಿದು ತಲೆಹೊರೆ ಹಾಗೂ ತರಕಾರಿ ಮಾರಾಟಗಾರರ ಸಂಘ...?


ಸೆಂಟ್ರಲ್ ಮಾರ್ಕೆಟ್‌ನಲ್ಲಿ ಮಧ್ಯಭಾಗದ ಜಾಗವನ್ನು ಮಹಿಳೆಯರಿಗೆಂದೇ ಮೀಸಲಿಡಲಾಗಿತ್ತು. ಬೆಳಿಗ್ಗೆ 10ರೊಳಗೆ ಅಲ್ಲಿ ಮಹಿಳೆಯರು ತರಕಾರಿ ವ್ಯಾಪಾರ ಮುಗಿಸಿ ಹೊರಡುತ್ತಿದ್ದರು. ಕ್ರಮೇಣ ಆ ಸ್ಥಳವನ್ನು ಪುರುಷರು, ಮಧ್ಯವರ್ತಿಗಳು ಆಕ್ರಮಿಸಿಕೊಂಡರು. ಮಹಿಳೆಯರು ಯಾವುದೋ ಮೂಲೆಗಳಲ್ಲಿ ಅಸ್ತಿತ್ವ ಕಂಡುಕೊಳ್ಳಬೇಕಾಯಿತು. ಈ ಸಮಸ್ಯೆ ನನ್ನ ಕಿವಿಗೂ ಬಿತ್ತು. ಅದಕ್ಕಾಗಿ ತರಕಾರಿ ಮಾರಾಟಗಾರರ ಸಭೆ ನಡೆಸಿ ಸಂಘವೊಂದನ್ನು ಜಾರಿಗೆ ತರಲಾಯಿತು. ಹೊಸ ಮಾರ್ಕೆಟ್ ನಿರ್ಮಾಣವಾದ ಬಳಿಕ ಮಹಿಳೆಯರಿಗೆ ಸ್ಥಳ ಒದಗಿಸುವುದಾಗಿ ಡಿಸಿಯಿಂದ ಭರವಸೆ ದೊರೆತಿದೆ.4ಮಹಿಳೆಗೆ ಮಹಿಳೆಯೇ ವಿರೋಧಿಯೇ...


ಇದು ಪುರುಷ ಪ್ರಧಾನ ಸಮಾಜ ಸೃಷ್ಟಿಸಿರುವ ಅರ್ಥಹೀನ ಮಾತು. ಒಬ್ಬ ಮಹಿಳೆ ತನ್ನ ಮನೆ ಅಥವಾ ಸಮಾಜದಲ್ಲಿ ಶೋಷಣೆಗೊಳಗಾದಾಗ ನೋವನ್ನು ಮೊದಲು ಗೆಳತಿ ಅಥವಾ ತಾಯಿಯೊಂದಿಗೆ ಹಂಚಿಕೊಳ್ಳುತ್ತಾಳೆ. ಹೀಗಿದ್ದಾಗ ಆಕೆಗೆ ಮಹಿಳೆಯೇ ಹೇಗೆ ದ್ವೇಷಿಯಾಗುತ್ತಾಳೆ? ಅತ್ತೆಯಿಂದ ಕಿರುಕುಳಕ್ಕೊಳಗಾಗುವ ಮಹಿಳೆಯರನ್ನು ಕೇಂದ್ರೀಕರಿಸಿ ಈ ಮಾತು ಬಂದಿರಬಹುದು. ಅದಕ್ಕೆ ಕಾರಣ ಬೇರೆಯಿದೆ... ಅತ್ತೆಯೂ ತನ್ನ ಗಂಡನಿಂದ ಸಾಕಷ್ಟು ಹಿಂಸೆ ಅನುಭವಿಸಿರುತ್ತಾಳೆ. ಮುಂದೆ ಮಗನಾದರೂ ನನ್ನನ್ನು ಚೆನ್ನಾಗಿ ನೋಡುಕೊಳ್ಳುವನೆಂಬ ಕನಸು ಇರುತ್ತದೆ. ಸೊಸೆ ಬಂದು ಎಲ್ಲಿ ನನ್ನ ಜಾಗವನ್ನು ಆಕ್ರಮಿಸಿಕೊಳ್ಳುವಳೋ, ತಾನೆಲ್ಲಿ ಮೂಲೆಗುಂಪಾಗಿ ಬಿಡುವೆನೋ ಎಂಬ ಭಯದಿಂದ ಆಕೆಯನ್ನು ದೂಷಿಸುತ್ತಾಳೆ. ಹೊಸದಾಗಿ ಬಂದ ಸೊಸೆ ಆಕೆಯನ್ನು ತನ್ನ ತಾಯಿಯಂತೆ ನೋಡಿಕೊಂಡರೆ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ.4ಪ್ರಸ್ತುತ ನೀವು ನಡೆಸುತ್ತಿರುವ ಅಧ್ಯಯನ ಕುರಿತು...


ಇದೊಂದು ಯುಜಿಸಿ ಪ್ರಾಯೋಜಿತ ಅಧ್ಯಯನ. ವಿಷಯ: ಮಹಿಳಾ ಸಶಕ್ತೀಕರಣದಲ್ಲಿ ಲಿಂಗ ಸೂಕ್ಷ್ಮತಾ ಆಂದೋಲನದ ಪರಿಣಾಮ. ಅಧ್ಯಯನ ಆರಂಭಿಸಿದಾಗ ಜಿಲ್ಲೆಯಲ್ಲಿ ಮಹಿಳಾ ಸ್ಥಿತಿಗತಿ ಅತ್ಯುತ್ತಮವಾಗಿದೆ ಎಂಬ ಮಾತು ಕೇಳಿಬಂದವು. ಪ್ರಗತಿಪರ ಎಂದು ಗುರುತಿಸಿಕೊಂಡ ದ.ಕ ಜಿಲ್ಲೆಯೊಂದರಲ್ಲೇ 2001ರಿಂದ 2009ರವರೆಗೆ ಹುಟ್ಟಿದ ಮಕ್ಕಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ 1000 ಗಂಡುಮಕ್ಕಳಿಗೆ 948ಕ್ಕಿಂತಲೂ ಕಡಿಮೆ ಇದೆ. ಅಂದರೆ ಪ್ರತೀವರ್ಷ 1000ಕ್ಕೂ ಹೆಚ್ಚು ಹೆಣ್ಣು ಶಿಶುಗಳು ಅದೃಶ್ಯವಾಗುತ್ತಿರುವುದು ಮುಂಬರಲಿರುವ ಭಯಾನಕ ಭವಿಷ್ಯದ ಸೂಚಕವಲ್ಲವೇ? ಅದರೊಂದಿಗೆ ಮಾನಸಿಕ ಅಸ್ವಸ್ಥತೆಗೆ ಬಲಿಯಾಗುತ್ತಿರುವ ಮಹಿಳೆಯರ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಈ ಎಲ್ಲಾ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಅಧ್ಯಯನ ನಡೆಸುತ್ತಿದ್ದೇನೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.