ಶನಿವಾರ, ಮೇ 15, 2021
25 °C

ಮಹಿಳೆಯನ್ನು ಬೆದರಿಸಿ ಚಿನ್ನದ ಸರ ದರೋಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರೆದಿದ್ದು ಇಂದಿರಾನಗರ ಮತ್ತು ಎಚ್‌ಎಸ್‌ಆರ್ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಮಹಿಳೆಯರ ಚಿನ್ನದ ಸರಗಳನ್ನು ದುಷ್ಕರ್ಮಿಗಳು ಶನಿವಾರ ಬೆಳಿಗ್ಗೆ ದೋಚಿದ್ದಾರೆ.ಮಹಿಳೆಗೆ ಚಾಕುವಿನಿಂದ ಬೆದರಿಸಿ ಸರ ದರೋಡೆ ಮಾಡಿರುವ ಘಟನೆ ಎಚ್‌ಎಎಲ್ ಎರಡನೇ ಹಂತದ 13ನೇ ಮುಖ್ಯರಸ್ತೆಯಲ್ಲಿ ನಡೆದಿದೆ.ಶಾರದಮ್ಮ ಎಂಬುವರು ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ಮನೆಯ ಸಮೀಪವೇ ನಡೆದು ಹೋಗುತ್ತಿದ್ದಾಗ ಹಿಂದಿನಿಂದ ಬಂದ ವ್ಯಕ್ತಿ ಅವರ ಬೆನ್ನಿಗೆ ಹೊಡೆದಿದ್ದಾನೆ. ಚಾಕುವಿನಿಂದ ಬೆದರಿಸಿದ ಆತ 48 ಗ್ರಾಂ ತೂಕದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಇಂದಿರಾನಗರ ಪೊಲೀಸರು ತಿಳಿಸಿದ್ದಾರೆ.ಹಾಲು ತರಲು ಹೋಗುತ್ತಿದ್ದ ಡಾ.ಚಿತ್ತಮ್ಮ ಎಂಬುವರ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಎಚ್‌ಎಸ್‌ಆರ್ ಲೇಔಟ್‌ನ ಎರಡನೇ ಸೆಕ್ಟರ್‌ನಲ್ಲಿ ನಡೆದಿದೆ.ಚಿತ್ತಮ್ಮ ಅವರು ಬೆಳಿಗ್ಗೆ ಹಾಲು ತರಲು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು 25 ಗ್ರಾಂ ತೂಕದ ಸರ ದೋಚಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ, ಎಚ್‌ಎಸ್‌ಆರ್ ಲೇಔಟ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಹೆಬ್ಬೆಟ್ಟು ಮಂಜನ ಸಹಚರರ ಬಂಧನ

ಕೊಲೆ ಮತ್ತು ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪದ ಮೇಲೆ ರೌಡಿ ಹೆಬ್ಬೆಟ್ಟು ಮಂಜನ ನಾಲ್ಕು ಮಂದಿ ಸಹಚರರನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಜ್ಞಾನಭಾರತಿಯ ಮುನೇಶ್ವರನಗರದ ನಂದೀಶ (20), ಸುಂಕದಕಟ್ಟೆಯ ಅಂಜನಾನಗರದ ಧನಂಜಯ (24), ಚನ್ನಪಟ್ಟಣದ ರಾಜೇಶ (21) ಮತ್ತು ಬ್ಯಾಟರಾಯನಪುರದ ಆವಲಹಳ್ಳಿಯ ಪ್ರಮೋದ್ (19) ಬಂಧಿತರು.ಹನುಮಂತನಗರ ಸಮೀಪ ಇರುವ ಮದ್ದೂರಮ್ಮ ಆಟದ ಮೈದಾನದ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಯಿತು. ಕಿರಣ, ಚಂದ್ರ ಮತ್ತು ರಮೇಶ್ ಎಂಬುವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಧಾರವಾಡದಲ್ಲಿ ದರೋಡೆ ಮಾಡಲು ಯತ್ನಿಸಿದ್ದ ತಂಡದಲ್ಲಿದ್ದ ನಂದೀಶ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ. ಉಳಿದ ಆರೋಪಿಗಳ ಮೇಲೂ ಸಹ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಪರಾಧ ಪ್ರಕರಣಗಳಿವೆ ಎಂದು ಪೊಲೀಸರು ಹೇಳಿದ್ದಾರೆ.|ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.ವರದಕ್ಷಿಣೆ ಕಿರುಕುಳ: ಆತ್ಮಹತ್ಯೆ

ಪತಿ ನೀಡುತ್ತಿದ್ದ ವರದಕ್ಷಿಣೆ ಕಿರುಕುಳ ತಾಳಲಾರದೆ ಮಹಿಳೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾಲಕ್ಷ್ಮಿಲೇಔಟ್‌ನ ಜೆ.ಸಿ.ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.ಕಾವ್ಯಾ (22) ಆತ್ಮಹತ್ಯೆ ಮಾಡಿಕೊಂಡವರು. ಅವರ ಪತಿ ರವಿಶಾಸ್ತ್ರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ರವಿಶಾಸ್ತ್ರಿ ಅವರನ್ನು ಕಾವ್ಯಾ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಅವರಿಗೆ ತನ್ಮಯ್ ಎಂಬ ಒಂದೂವರೆ ವರ್ಷದ ಮಗನಿದ್ದಾನೆ.ಮದ್ಯ ವ್ಯಸನಿಯಾಗಿದ್ದ ರವಿಶಾಸ್ತ್ರಿ ಹಣ ತರುವಂತೆ ಪತ್ನಿಗೆ ಪೀಡಿಸುತ್ತಿದ್ದರು. ಆಗಾಗ್ಗೆ ಮಾನಸಿಕ- ದೈಹಿಕ ಹಿಂಸೆಯನ್ನೂ ನೀಡುತ್ತಿದ್ದರು. ಶುಕ್ರವಾರ ರಾತ್ರಿ ಸಹ ಪಾನಮತ್ತರಾಗಿ ಬಂದು ಪತ್ನಿಯ ಜತೆ ಜಗಳವಾಡಿದ್ದರು. ಇದರಿಂದ ಮನನೊಂದ ಅವರು ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಕಾವ್ಯಾ ಅವರ ತಾಯಿ ನಾಗಮಣಿ ಅವರು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಬೆಂಕಿ: ಆತಂಕ

ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಸಿಗ್ಮಾ ಮಾಲ್‌ನ ನೆಲ ಮಹಡಿಯ ಡಕ್ಟ್‌ನಲ್ಲಿ (ವಿದ್ಯುತ್ ವಯರ್‌ಗಳಿರುವ ಸ್ಥಳ) ಬೆಂಕಿ ಹೊತ್ತಿಕೊಂಡ ಪರಿಣಾಮ ಶನಿವಾರ ಬೆಳಿಗ್ಗೆ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಮೂರು ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಶಾರ್ಟ್ ಸರ್ಕಿಟ್‌ನಿಂದ ಸಣ್ಣ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿತ್ತು ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ಬೆಂಕಿ ಹೊತ್ತಿಕೊಂಡ ತಕ್ಷಣ ಮಾಲ್‌ನಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಯಿತು. ಬೆಂಕಿ ನಂದಿಸಿದ ನಂತರ ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.