ಶುಕ್ರವಾರ, ಜೂನ್ 18, 2021
28 °C

ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಮುಂದುವರಿದ ದೇಶಗಳಿಗಿಂತ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೇ ಮಹಿಳೆಯರಿಗೆ ಹೆಚ್ಚಿನ ರಾಜಕೀಯ ಸ್ಥಾನಮಾನಗಳನ್ನು ಕಲ್ಪಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು.ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಗುರುವಾರ ವೀರಸೌಧದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳೆಯರ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬಲಿಷ್ಠ ಅಮೆರಿಕಾದಲ್ಲಿ ಇದುವರೆಗೆ ಒಬ್ಬ ಮಹಿಳೆಯೂ ಅಧ್ಯಕ್ಷರಾಗಿ ಆಯ್ಕೆಯಾಗಿಲ್ಲ. ಇದೇ ರೀತಿ ಮುಂದುವರಿದ ರಾಷ್ಟ್ರಗಳಲ್ಲಿ ಉನ್ನತ ಸ್ಥಾನಗಳನ್ನು ನೀಡಿರುವುದು ಕಡಿಮೆ ಎಂದರು.ಭಾರತದಲ್ಲಿ ಮೀಸಲಾತಿ ಇಲ್ಲದೆಯೂ ಸಾಮರ್ಥ್ಯದ ಮೇಲೆ ಉನ್ನತ ಸ್ಥಾನಮಾನಗಳನ್ನು ಪಡೆದಿರುವ ಹಲವಾರು ಉದಾಹರಣೆಗಳಿವೆ. ಆದರೆ, ಮೀಸಲಾತಿ ಅನ್ವಯ ಸ್ಥಳೀಯ ಸಂಸ್ಥೆಗಳಿಗೆ ಅಧ್ಯಕ್ಷರಾದರೂ ಆಡಳಿತದಲ್ಲಿ ತಮ್ಮ ಗಂಡಂದಿರಿಗೆ ಅವಕಾಶ ನೀಡುತ್ತಿರುವುದು ವಿಷಾದಕರ. ಆದ್ದರಿಂದ ಮೀಸಲಾತಿ ಇಲ್ಲದೆಯೂ ಮಹಿಳೆಯರಿಗೆ ಇನ್ನೂ ಹೆಚ್ಚಿನ ರಾಜಕೀಯ ಸ್ಥಾನಮಾನ ನೀಡುವ ವಾತಾವರಣ ನಿರ್ಮಾಣವಾಗುವುದು ಅಗತ್ಯವಿದೆ ಎಂದರು.ವರದಕ್ಷಿಣೆಗಾಗಿ ಸೊಸೆಗೆ ಅತ್ತೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿವೆ. `ಇಂದಿನ ಸೊಸೆ, ನಾಳಿನ ಅತ್ತೆ~ ಎನ್ನುವುದನ್ನು ಮರೆಯದೆ ಎಲ್ಲರನ್ನೂ ಗೌರವಯುತವಾಗಿ ಕಾಣಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ಪಂಚಾಯ್ತಿ ಸದಸ್ಯ ಡಿ. ರಮೇಶ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಆರ್. ಪರಮೇಶ್, ಉಪಾಧ್ಯಕ್ಷೆ ಎಸ್. ಪ್ರತಿಭಾ ರಮೇಶ್, ಜಯಸ್ವಾಮಿ ಹಾಜರಿದ್ದರು.ತಿರುಮಲಾಪುರ ಸ್ತ್ರೀಶಕ್ತಿ ಸಂಘಕ್ಕೆ ಪ್ರಶಸ್ತಿ

ತಾಲ್ಲೂಕುಮಟ್ಟದ ಉತ್ತಮ ಸ್ತ್ರೀಶಕ್ತಿ ಸಂಘದ ಪ್ರಶಸ್ತಿಗೆ ಆಯ್ಕೆಯಾದ ತಿರುಮಲಾಪುರದ ಶಾರದ ಸ್ತ್ರೀ ಶಕ್ತಿ ಸಂಘಕ್ಕೆ ಗುರುವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಬಹುಮಾನ ನೀಡಲಾಯಿತು. ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಬಹುಮಾನ ವಿತರಿಸಿದರು.ಅಧಿಕ ಉಳಿತಾಯ ಪ್ರಶಸ್ತಿಯನ್ನು ಪಿಳ್ಳೆಕೇರನಹಳ್ಳಿಯ ಸರಸ್ವತಿ ಸ್ತ್ರೀ ಶಕ್ತಿ ಸಂಘಕ್ಕೆ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಚಿತ್ರದುರ್ಗ ತಾಲ್ಲೂಕಿನ ಸ್ತ್ರೀಶಕ್ತಿ ಒಕ್ಕೂಟಕ್ಕೆ ನೀಡಲಾಯಿತು. ಉತ್ತಮ ಅಂಗನವಾಡಿ ಕಾರ್ಯಕರ್ತೆಯರ 2009-10ನೇ ಸಾಲಿನ ಪ್ರಶಸ್ತಿಯನ್ನು ಹುಲ್ಲೂರು ನಾಯಕರಹಟ್ಟಿ ಕಮಲಮ್ಮ, 2010-11 ನೇ ಸಾಲಿನ ಪ್ರಶಸ್ತಿಯನ್ನು ಅವಳೇನಹಳ್ಳಿಯ ಅನಸೂಯಮ್ಮ ಅವರಿಗೆ ನೀಡಲಾಯಿತು.ಜಿಲ್ಲಾ ಪಂಚಾಯ್ತಿ ಸದಸ್ಯರಾದ ರಮೇಶ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಆರ್. ಪರಮೇಶ್, ಉಪಾಧ್ಯಕ್ಷೆ  ಎಸ್. ಪ್ರತಿಭಾ ರಮೇಶ್, ತಾ.ಪಂ. ಸದಸ್ಯರಾದ ಭಾಗ್ಯಮ್ಮ, ಆಶಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಂ.ಎಸ್. ಜಯಸ್ವಾಮಿ, ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಕೊಲ್ಲಿಲಕ್ಷ್ಮೀ ಹಾಜರಿದ್ದರು.ಅಪರಾಧಶಾಸ್ತ್ರ ಪ್ರಾಧ್ಯಾಪಕ ಡಾ.ನಟರಾಜ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಜಯಮ್ಮ ಉಪನ್ಯಾಸ ನೀಡಿದರು. ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಸುಧಾ ಸ್ವಾಗತಿಸಿದರು.ಹಿರಿಯೂರು ವರದಿ

ಮಹಿಳೆಯರ ಜನಸಂಖ್ಯೆ ಪ್ರಮಾಣ ಆಧರಿಸಿ ಶಿಕ್ಷಣ,ಉದ್ಯೋಗ, ರಾಜಕೀಯ ಮೊದಲಾದ ಕ್ಷೇತ್ರಗಳಲ್ಲಿ ಮೀಸಲಾತಿ ಜಾರಿಗೊಳಿಸಬೇಕು ಎಂದು ಶಾಸಕ ಡಿ. ಸುಧಾಕರ್ ಒತ್ತಾಯ ಮಾಡಿದರು.ನಗರದ ನೆಹರು ಮೈದಾನದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ತಾಲ್ಲೂಕಿನಲ್ಲಿ ಮಹಿಳೆಯರ ಸಂಘಟನೆಗೆ ಒತ್ತು ನೀಡಲು ಪ್ರತೀ ಹಳ್ಳಿಯಲ್ಲಿಯೂ ಮಹಿಳಾ ಭವನ ನಿರ್ಮಿಸಲಾಗಿದೆ. ಹಿರಿಯೂರಿನಲ್ಲಿ ್ಙ 20 ಕೋಟಿ  ವೆಚ್ಚದಲ್ಲಿ ಮಹಿಳಾ ಬ್ಯಾಂಕ್ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ. ಮಹಿಳಾ ಸಬಲೀಕರಣಕ್ಕೆ ತಾಲ್ಲೂಕಿಗೆ ್ಙ 15 ಕೋಟಿ ನೀಡಲಾಗಿದೆ. ನಿವೃತ್ತಿ ಹೊಂದಿರುವ ಅಂಗನವಾಡಿ ಸಹಾಯಕಿಯರಿಗೆ 2 ತಿಂಗಳಲ್ಲಿ ಮನೆ ಅಥವಾ ನಿವೇಶನ ನೀಡಲಾಗುವುದು ಎಂದು ಅವರು ಹೇಳಿದರು.ಹಿರಿಯ ವಕೀಲರಾದ ಡಿ.ಕೆ. ಶೀಲಾ ಮಾತನಾಡಿ, ಲಿಂಗಭೇದದ ಆಧಾರ ಪಡೆದು ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ ಕಾನೂನು ಬದ್ಧ ಸವಲತ್ತುಗಳನ್ನು ಕಿತ್ತುಕೊಳ್ಳುವುದರ ವಿರುದ್ಧ ಜಯ ಸಾಧಿಸಿದ ಕಾರಣಕ್ಕೆ ಮಹಿಳಾ ದಿನ ಆಚರಣೆ ಮಾಡಲಾಗುತ್ತಿದೆ. ಕಾನೂನು ಸಮಾನತೆಯ ಹಕ್ಕು ನೀಡಿದ್ದರೂ ವಾಸ್ತವಿಕವಾಗಿ ಸಮಾನತೆಯಿಲ್ಲ. ಕಾಣಸಿಗುವ ಅನಾಥ ಹಸುಗೂಸುಗಳು ಬಹುತೇಕ ಹೆಣ್ಣೇ ಆಗಿರುತ್ತವೆ. ಸ್ವೇಚ್ಛಾ ಪ್ರವೃತ್ತಿಯ ಸಮಾನತೆಯ ಹಕ್ಕು ಯಾವ ಮಹಿಳೆಗೂ ಬೇಡ ಎಂದು ಅವರು ತಿಳಿಸಿದರು.ತಾ.ಪಂ. ಸದಸ್ಯೆ ಡಾ.ಸುಜಾತಾ ಮಾತನಾಡಿ, ಪುರುಷರನ್ನು ತುಳಿದು ಮಹಿಳೆ ಮುಂದೆ ಬರುವುದು ಬೇಡ. ಪರಿತ್ಯಕ್ತ ಮಹಿಳೆಯರಿಗೆ ಸರ್ಕಾರ ಗೌರವಧನ ನೀಡುವ ನಿಟ್ಟಿನಲ್ಲಿ ಚಿಂತಿಸಬೇಕು ಎಂದು ಒತ್ತಾಯಿಸಿದರು.

ಜಿ.ಪಂ. ಸದಸ್ಯೆ ಕರಿಯಮ್ಮ ಶಿವಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ, ಎಚ್.ಪಿ. ಗೋಪಿನಾಥ್ ಮಾತನಾಡಿದರು.

 

ಪುರಸಭಾಧ್ಯಕ್ಷೆ ಮಂಜುಳಾ ವೆಂಕಟೇಶ್, ಜ್ಯೋತಿಲಕ್ಷ್ಮೀ, ಪುಷ್ಪಾ, ಎಚ್.ಪಿ. ರವೀಂದ್ರನಾಥ್, ಚೇತನಾ ರುದ್ರಮುನಿ, ಟಿ. ರಂಗನಾಥ್, ನಾಗಭೂಷಣ್, ಎಲ್. ಆನಂದಶೆಟ್ಟಿ, ಟಿ. ಮಲ್ಲೇಶಪ್ಪ, ಸುಚಿತ್ರಾ,  ತಿಮ್ಮಯ್ಯ, ಸುರೇಶ್‌ಬಾಬು, ಬಿ.ವಿ. ಮಾಧವ, ಜಿ.ಪಿ. ಶೈಲಜಾ, ಲಕ್ಷ್ಮೀದೇವಿ ಮತ್ತಿತರರು ಹಾಜರಿದ್ದರು.

ಸಿಡಿಪಿಒ ಎಂ.ಸಿ. ರುದ್ರಮುನಿ ಸ್ವಾಗತಿಸಿದರು. ಗಾಯತ್ರಿದೇವಿ ವಂದಿಸಿದರು. ತೇಜು ಕಾರ್ಯಕ್ರಮ ನಿರೂಪಿಸಿದರು.ಮಹಿಳಾ ಬ್ಯಾಂಕ್ ಸ್ಥಾಪನೆ

ಚಳ್ಳಕೆರೆ: ಹಿರಿಯೂರು ಮತ್ತು ಚಳ್ಳಕೆರೆ ತಾಲ್ಲೂಕಿನ ಮಹಿಳಾ ಸ್ವಸಹಾಯ ಸಂಘಗಳ ಅಭಿವೃದ್ಧಿಗೆ ಅನುಕೂಲ ಆಗುವಂತೆ ಶೀಘ್ರದಲ್ಲಿಯೇ ಮಹಿಳಾ ಬ್ಯಾಂಕ್ ಪ್ರಾರಂಭಿಸಲಾಗುವುದು ಎಂದು ಮಾಜಿ ಸಚಿವ ಹಾಗೂ ಶಾಸಕ ಡಿ. ಸುಧಾಕರ್ ಭರವಸೆ ನೀಡಿದರು.ತಾಲ್ಲೂಕಿನ ನಗರಂಗೆರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ಆಯ್ದ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬರಗಾಲದ ಪರಿಸ್ಥಿತಿಯಲ್ಲಿ ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ಸಾಗಿಸಲು ಸ್ವಯಂ ಉದ್ಯೋಗ ಕೈಗೊಳ್ಳಲು ಈ ಸಾಲ ಸೌಲಭ್ಯ ನೀಡಲಾಗಿದೆ. ಇಡೀ ರಾಜ್ಯದಲ್ಲಿ ಮಹಿಳಾ ಸಂಘಗಳು ಸ್ವಯಂ ಉದ್ಯೋಗ ಮಾಡಿಕೊಂಡು ಸುಮಾರು ್ಙ 2 ಸಾವಿರ ಕೋಟಿ ಹಣವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಉಳಿತಾಯ ಮಾಡಿವೆ ಎಂದು ವಿವರಿಸಿದರು.ಹಿರಿಯೂರು ಕ್ಷೇತ್ರದಲ್ಲಿ ಪ್ರತಿ ಗ್ರಾಮದಲ್ಲಿರುವ ಮಹಿಳಾ ಸಂಘಗಳಿಗೆ ಮಹಿಳಾ ಭವನ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಕಳೆದ 3 ವರ್ಷದ ಅವಧಿಯಲ್ಲಿ ಸುಮಾರು ್ಙ 18 ಕೋಟಿ ಹಣವನ್ನು ಮಹಿಳಾ ಸಂಘಗಳಿಗೆ ಸಹಾಯಧನವನ್ನಾಗಿ ವಿತರಿಸಲಾಗಿದೆ ಎಂದು ತಿಳಿಸಿದರು.ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಟಿ. ರವಿಕುಮಾರ್ ಮಾತನಾಡಿ, ಮಹಿಳೆಯರ ದಿನ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಸಾಲ ಸೌಲಭ್ಯ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ನುಡಿದರು.ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಪಿ. ತಿಪ್ಪೇಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಹಿಳೆಯರು, ತಮ್ಮ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದರು.ಜಿಲ್ಲಾ ಪಂಚಾಯ್ತಿ ಸದಸ್ಯ ಎ. ಅನಿಲ್‌ಕುಮಾರ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ. ಕುಮಾರಸ್ವಾಮಿ, ಟಿಎಪಿಎಂಸಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಮಾತನಾಡಿದರು.ಭಾಗ್ಯಲಕ್ಷ್ಮೀ, ಗೊರವಿನಹಳ್ಳಿ ಮಹಾಲಕ್ಷ್ಮೀ, ವಾಲ್ಮೀಕಿ, ಕರಿಬಸವೇಶ್ವರ, ಗಂಗಾಜಲ ಹಾಗೂ ಸಂಜೀವಿನ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಒಟ್ಟು ್ಙ 8.30 ಲಕ್ಷ ಸಾಲದ ಚೆಕ್‌ಗಳನ್ನು ವಿತರಿಸಲಾಯಿತು.  ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಎಸ್. ಹೇಮಲತಾ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಾರದಮ್ಮ, ನಿರ್ದೇಶಕರಾದ ಕೆ.ಸಿ. ನಾಗರಾಜಪ್ಪ, ಸಣ್ಣಬೋರಪ್ಪ, ಓಬಣ್ಣ ನಾಯಕ ಹಾಗೂ ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಮೃತ್ಯುಂಜಯಪ್ಪ, ಜೆಡಿಎಸ್ ಕಾರ್ಯಾಧ್ಯಕ್ಷ ಹೆಗ್ಗೆರೆ ಆನಂದಪ್ಪ, ಚೆನ್ನಿಗರಾಮಯ್ಯ, ಸಿದ್ದಾಪುರ ರುದ್ರಮುನಿ, ಸಿ.ಎನ್. ಯರ‌್ರಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.