ಬುಧವಾರ, ಜೂನ್ 16, 2021
22 °C
‘ರಂಗೇರುತ್ತಿರುವ ಚುನಾವಣೆಗೆ ಇಬ್ಬರೂ ಅನಿವಾರ್ಯ’

ಮಹಿಳೆಯರು, ಮಕ್ಕಳಿಗೆ ಭರ್ಜರಿ ಬೇಡಿಕೆ?

ಪ್ರಜಾವಾಣಿ ವಾರ್ತೆ/ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ‘ಕಳೆದ ವಿಧಾನಸಭಾ ಚುನಾ­ವಣೆಯಲ್ಲಿ ನಮಗೆ ತುಂಬಾ ಬೇಡಿಕೆಯಿತ್ತು. ಪ್ರತಿ ದಿನ ಒಬ್ಬೊಬ್ಬ ರಾಜಕೀಯ ಮುಖಂಡರು ಮನೆಗೆ ಬಂದು ಸಮಾವೇಶಕ್ಕೆ ಕರೆದೊಯ್ಯು­ತ್ತಿದ್ದರು. ಈ ಬಾರಿ ಚುನಾವಣೆಯೂ ಅದೇ ರೀತಿಯಲ್ಲಿ ಇರುತ್ತಾ? ನಮ್ಮನ್ನು ಮತ್ತೆ ಕರೀತಾರಾ?’ಲೋಕಸಭಾ ಕ್ಷೇತ್ರ ವ್ಯಾಪ್ತಿ­ಯಲ್ಲಿ ನೆಲೆಸಿರುವ ಅಪಾರ ಸಂಖ್ಯೆಯ  ಸ್ತ್ರೀಶಕ್ತಿ ಸಂಘಟನೆ ಸದಸ್ಯರು, ಬಿಸಿಯೂಟದ ನೌಕರರು, ಆಶಾ ಕಾರ್ಯಕರ್ತೆಯರಿಗೆ ಈ ಪ್ರಶ್ನೆ ಗಾಢವಾಗಿ ಕಾಡುತ್ತಿದೆ.ಚುನಾವಣೆ ಖದರು ದಿನದಿಂದ ದಿನಕ್ಕೆ ಏರುತ್ತಿದ್ದು, ರಾಜಕೀಯ ಪಕ್ಷ­ಗಳು ಮತ್ತು ಮುಖಂಡರಿಂದ ತಮಗೆ ಕರೆಗಳು ಬರಬಹುದು. ಸಮಾವೇಶಕ್ಕೆ ಹೋಗಲು ವಾಹನದ ವ್ಯವಸ್ಥೆ­ಯಾಗಬಹುದು. ಸಮಾವೇಶದಲ್ಲೇ ಊಟದ ವ್ಯವಸ್ಥೆಯಾಗಬಹುದು ಎಂದೆಲ್ಲ ಕಲ್ಪನೆ ಮಾಡಿಕೊಳ್ಳುತ್ತಿದ್ದಾರೆ.ಆಸಕ್ತಿಕರ ಸಂಗತಿಯೆಂದರೆ, ಒಂದೆಡೆ ರಾಜಕೀಯ ಪಕ್ಷದವರು ಸಾಧ್ಯ­ವಾದಷ್ಟು ಹೆಚ್ಚು ಮತದಾರರನ್ನು ಸೆಳೆ­ಯಲು ಯತ್ನಿಸುತ್ತಿದ್ದಾರೆ. ಮತ್ತೊಂ­ದೆಡೆ  ಚುನಾವಣೆ ಆಯೋಗದ ಸೂಚನೆ ಮೇರೆಗೆ ಜಿಲ್ಲಾಡಳಿತದ ಅಧಿಕಾರಿಗಳು ಮತದಾನ ಪ್ರಮಾಣ ಹೆಚ್ಚಳ ಮಾಡಲು ಪಣ ತೊಟ್ಟಿದ್ದಾರೆ. ಅದಕ್ಕಾಗಿ ಅವರಿಬ್ಬರೂ ಮಹಿಳೆಯರು ಮತ್ತು ಮಕ್ಕಳನ್ನೇ ಅವಲಂಬಿಸಿದ್ದಾರೆ!ಮನೆಗೆ ಬಂದು ಕರೆಯುತ್ತಾರೆ:  ರಾಜ­ಕೀಯ ಸಮಾವೇಶಗಳಲ್ಲಿ ಹೇಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೋ ಹಾಗೆಯೇ ಮತದಾನಕ್ಕೆ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮಗಳಲ್ಲಿ  ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಸಮಾವೇಶಗಳಲ್ಲಿ ಭಾರಿ ಸಂಖ್ಯೆಯಲ್ಲಿ ಮಹಿಳೆಯರು ರಾಜಕೀಯ ಮುಖಂಡರ ಭಾಷಣ ಆಲಿಸುತ್ತಿರುವುದು ಕಂಡು ಬಂದರೆ, ಮತದಾನ ಜಾಗೃತಿ ಮತ್ತು ಚುನಾವಣೆ ಸಂಬಂಧಿಸಿದ ಕಾರ್ಯ­ಗಳಲ್ಲೂ ಮಹಿಳೆಯರದ್ದೇ ಪ್ರಮುಖ ಪಾತ್ರವಿರುತ್ತದೆ.‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲ ರಾಜಕಿಯ ಪಕ್ಷಗಳ ಮುಖಂಡರು ಮತ್ತು ಅಭ್ಯರ್ಥಿಗಳು ಸ್ತ್ರೀಶಕ್ತಿ ಸಂಘಗಳು, ಅಂಗನವಾಡಿ ನೌಕರರ ಮೇಲೆ ಕಣ್ಣಿಟ್ಟಿದ್ದರು. ದಿನ ಬೆಳಗಾದರೆ ಸಾಕು, ನಮ್ಮ ಪ್ರದೇಶದ ಮುಖಂಡರೊಬ್ಬರು ಮನೆಬಾಗಿಲಿಗೆ ಬಂದು ಪ್ರಚಾರ ಸಭೆಗಳಿಗೆ ಇಲ್ಲವೇ ಮೆರವಣಿಗೆಗೆ ಕರೆದೊಯ್ಯುತ್ತಿದ್ದರು. ಊಟ ಮತ್ತು ಹಣದ ಆಸೆ ತೋರಿಸುತ್ತಿದ್ದ ಕಾರಣ ಬೇರೆ ಮಾರ್ಗವಿಲ್ಲದೇ ಅವರು ಹೇಳಿದ ಸಭೆಗಳಲ್ಲಿ ಕೂರುತ್ತಿದ್ದೆವು’ ಎಂದು ಅಂಗನವಾಡಿ ನೌಕರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.ಅವರ ಹೇಳಿಕೆಗೆ ಪೂರಕ ಎಂಬಂತೆ ಯಾವುದೇ ರಾಜಕೀಯ ಸಮಾವೇಶಗಳಲ್ಲಿ ಅಥವಾ ಸಭೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಾಗಿ ಕಾಣುತ್ತಿದ್ದರೆ ಹೊರತು ಪುರುಷರ ಸಂಖ್ಯೆ ತುಂಬಾ ಕಡಿಮೆ ಕಾಣಿಸುತ್ತಿತ್ತು. ಊಟ ಮತ್ತು ಹಣದ ಆಸೆಯಲ್ಲದೇ ಬೇರೆ ಏನೇನೋ ಸೌಲಭ್ಯ ಕೊಡುತ್ತೇವೆ ಎಂದು ಮಹಿಳೆಯರನ್ನು ಕರೆತಂದ  ಸಮಾವೇಶದ ಆಯೋಜಕರು ಸೌಲಭ್ಯ ನೀಡಲಾಗದೇ ಪೇಚಿಗೆ ಸಿಲುಕಿ ಆಕ್ರೋಶಕ್ಕೆ ತುತ್ತಾದ ಘಟನೆಗಳು ಸಹ ನಡೆದಿವೆ.ಮಹಿಳೆಯರು, ಮಕ್ಕಳು ಅನಿವಾರ್ಯ: ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೌರಿಬಿದನೂರು, ಶಿಡ್ಲಘಟ್ಟ, ಬಾಗೇ­ಪಲ್ಲಿ ಮುಂತಾದ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ಮಹಿಳೆ­ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆಸಿಕೊಳ್ಳ­ಲಾಗಿತ್ತು. ಬೆಳಿಗ್ಗೆ 11ಕ್ಕೆ ನಿಗದಿಯಾಗುತ್ತಿದ್ದ ಸಮಾವೇಶ ಮಧ್ಯಾಹ್ನ 3ರವರೆಗೆ ನಡೆದರೂ ಮಹಿಳೆಯರು ಹಾಗೆಯೇ ಕೂತಿರು­ತ್ತಿದ್ದರು’ ಎಂದು ರಾಜಕೀಯ ಮುಖಂಡ­ರೊಬ್ಬರು ತಿಳಿಸಿದರು.‘ಒಂದೆರಡು ದಿನಗಳಲ್ಲಿಯೇ ಭಾರಿ ಸಂಖ್ಯೆಯಲ್ಲಿ ಜನರನ್ನು ಕರೆತರಲಾಗು­ವುದಿಲ್ಲ. ಒಂದು ವೇಳೆ ಕರೆ ತಂದರೂ ಅವರು ದೀರ್ಘ ಕಾಲ ಭಾಷಣ ಕೇಳುವಂತಹ ಸ್ಥಿತಿಯಲ್ಲಿ ಇರುವುದಿಲ್ಲ. ಪುರುಷರು ಸ್ವಲ್ಪ ಅವಕಾಶ ಸಿಕ್ಕರೂ ಸಾಕು, ಏನಾದರೂ ನೆಪ ಹೇಳಿ ಹೊರಟು ಬಿಡುತ್ತಾರೆ. ಆದರೆ ಮಹಿಳೆ­ಯರು ಮಾತ್ರ ನಿಷ್ಠೆಗೆ ಬದ್ಧರಾಗಿ ಮಕ್ಕಳ ಸಮೇತ ಸಮಾವೇಶ ಮುಗಿಯು­ವವರೆಗೆ ಕೂತಿರುತ್ತಾರೆ’ ಎಂದು ಅವರು ತಿಳಿಸಿದರು.ಇಬ್ಬರದ್ದೂ ದ್ವಿಪಾತ್ರ: ಚುನಾವಣಾ ಸಿದ್ಧತಾ ಕಾರ್ಯದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ನಡೆದ ಸಭೆಯಲ್ಲಿ  ಸ್ವೀಪ್‌ ಮತದಾನ ಜಾಗೃತಿ ಅಭಿಯಾನದ ಉಸ್ತುವಾರಿ ವಹಿಸಿ­ಕೊಂಡಿರುವ ಜಿಲ್ಲಾ ಪಂಚಾಯತಿ ಮುಖ್ಯ­ಕಾರ್ಯನಿರ್ವಹಣಾಧಿಕಾರಿ ನೀಲಾ ಮಂಜುನಾಥ್‌ ಅವರೇ ಅಂಗನ­ವಾಡಿ ನೌಕರರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು, ವಿವಿಧ ಸಂಘಟನೆಗಳ ಸದಸ್ಯರು ಮತ್ತು ಶಾಲಾ–ಕಾಲೇಜು ವಿದ್ಯಾರ್ಥಿಗಳನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಇಚ್ಛೆ ವ್ಯಕ್ತಪಡಿಸಿದ್ದರು. ಉದಾಹರಣೆಗೆ ಎಂಬಂತೆ ಸೋಮವಾರ ನಡೆದ ಮತ­ದಾನ ಜಾಗೃತಿ ಅಭಿಯಾನ ಜಾಥಾದಲ್ಲಿ ಶಾಲಾಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.‘ಕಳೆದ ವಿಧಾನಸಭಾ ಚುನಾವಣೆ­ಯಂತೆಯೇ ಈ ಸಲದ ಲೋಕಸಭಾ ಚುನಾವಣೆಯಲ್ಲೂ ಮಹಿಳೆಯರು ಮತ್ತು ಮಕ್ಕಳು ಚುನಾವಣೆಗೆ ಸಂಬಂಧಿ­ಸಿದ ಕೆಲಸಕಾರ್ಯಗಳಲ್ಲಿ ಅಥವಾ ಸಮಾವೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರೆ ಅಚ್ಚರಿಪಡಬೇಕಿಲ್ಲ. ಒಟ್ಟಾರೆ ಮಹಿಳೆಯರು ಮತ್ತು ಮಕ್ಕಳು ದ್ವಿಪಾತ್ರ ನಿಭಾಯಿಸುತ್ತಾರೆ. ರಾಜ­ಕೀಯ ಪಕ್ಷ ಅಥವಾ ಮುಖಂಡರ ಪರವಾಗಿ ಒಂದೆಡೆ ಮತಯಾಚಿಸಿದರೆ, ಮತ್ತೊಂದೆಡೆ ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಮನವಿಯೂ ಮಾಡಿ­ಕೊಳ್ಳುತ್ತಾರೆ. ಎಂತಹದ್ದೇ ಸಂದರ್ಭ­ದಲ್ಲೂಅವರನ್ನು ಕಡೆಗಣಿಸುವುದಿಲ್ಲ’ ಎಂದು ರಾಜಕೀಯ ಮುತ್ಸದ್ದಿಯೊಬ್ಬರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.