ಬುಧವಾರ, ಜೂನ್ 16, 2021
27 °C

ಮಹಿಳೆ ಇನ್ನೂ 2ನೇ ದರ್ಜೆ ಪ್ರಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ಮಹಿಳೆಗೆ ಉನ್ನತ ಸ್ಥಾನ ದೊರಕಿಸಿಕೊಡಲು ಅನೇಕ ಕಾನೂನು, ಶಾಸನಗಳಿದ್ದರೂ ಸಮಾಜದಲ್ಲಿ ಮಹಿಳೆಯನ್ನು ಇನ್ನೂ ಎರಡನೇ ದರ್ಜೆ ಪ್ರಜೆಯನ್ನಾಗಿ ಕಾಣಲಾಗುತ್ತಿದೆ ಎಂದು ಸೋಮವಾರ ಇಲ್ಲಿ ನ್ಯಾಯಾಧೀಶ ವಿ.ವೆಂಕಟೇಶಪ್ಪ ವಿಷಾದಿಸಿದರು.ತಾಲ್ಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕಾನೂನು ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ `ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ~ ಉದ್ಘಾಟಿಸಿ, ಹಲವು ಕ್ಷೇತ್ರಗಳಲ್ಲಿ ಪುರುಷನಷ್ಟೇ ಸಮರ್ಥಳಾಗಿ ಕಾರ್ಯನಿರ್ವಹಿಸುತ್ತಿದ್ದರೂ ಮೂಢನಂಬಿಕೆ ಮತ್ತಿತರೆ ಕಾರಣಗಳಿಂದಾಗಿ ಸಮಾಜದಲ್ಲಿ ಮಹಿಳೆಯನ್ನು ನಾಲ್ಕು ಗೋಡೆ ಮಧ್ಯೆ ಇಡುವ ಪ್ರಯತ್ನ ನಡೆಯುತ್ತಿದ್ದು, ಅದರ ವಿರುದ್ಧ ಮಹಿಳೆಯರಿಂದ ಸಂಘಟನಾತ್ಮಕ ಹೋರಾಟ ನಡೆಯಬೇಕಿದೆ ಎಂದರು.ಜಾತ್ಯತೀತ ರಾಷ್ಟ್ರದ ಪರಿಕಲ್ಪನೆ ಕುರಿತು ಅಭಿಪ್ರಾಯ ಹಂಚಿಕೊಂಡ ನ್ಯಾಯಾಧೀಶರು, ಭಾರತ ಮೇಲ್ನೋಟಕ್ಕೆ ಜಾತ್ಯತೀತ ರಾಷ್ಟ್ರ ಎಂದು ಕಂಡುಬಂದರೂ ಜಾತಿ ವ್ಯವಸ್ಥೆ ಒಳಗೊಳಗೇ ಗಂಭೀರವಾಗಿ ಕೆಲಸ ಮಾಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಅಮರೇಗೌಡ ಬಯ್ಯಾಪುರ, ಮಹಿಳಾ ಸಮಾನತೆ ಮಾತು ಕೇವಲ ಕಾನೂನಿನ ಚೌಕಟ್ಟಿನಲ್ಲಿದೆ ವಿನಃ ಆಚರಣೆಯಲ್ಲಿಲ್ಲ ಎಂಬುದು ಕಟುಸತ್ಯ. ಮೀಸಲಾತಿಯಿಂದ ರಾಜಕೀಯದಲ್ಲಿ ಮಹಿಳೆಯರಿಗೆ ಪಟ್ಟಕಟ್ಟಿದರೂ ವಾಸ್ತವದಲ್ಲಿ ಅವರ ಗಂಡಂದಿರು ಆಡಳಿತ ನಡೆಸುತ್ತಿದ್ದಾರೆ ಎಂದರು.ಅನಕ್ಷರತೆ ಮತ್ತು ಅರಿವಿನ ಕೊರತೆಯಿಂದಾಗಿ ಗ್ರಾ.ಪಂ ಮಟ್ಟದಲ್ಲಿ ಎಷ್ಟೋ ಜನ ಮಹಿಳಾ ಪ್ರತಿನಿಧಿಗಳು ಪಟ್ಟಭದ್ರರು ಹೇಳಿದ ಕಡೆಯಲ್ಲೆಲ್ಲ ಸಹಿ ಮಾಡಿ ಈಗ ಕ್ರಿಮಿನಲ್ ಮೊಕದ್ದಮೆ ಎದುರಿಸುವಂತಾಗಿದೆ ಎಂಬುದನ್ನು ನೆನಪಿಸಿದ ಬಯ್ಯಾಪುರ, ಮನೆಯಲ್ಲಿ ಗಂಡಂದಿರ ಸಲಹೆ ಕೇಳಿ ಆದರೆ ಆಡಳಿತದಲ್ಲಿ ಅವರನ್ನು ದೂರ ಇಡಬೇಕಾದರೆ ಮಹಿಳಾ ಪ್ರತಿನಿಧಿಗಳು ಆಡಳಿತ ವ್ಯವಸ್ಥೆಯ ಪ್ರತಿಯೊಂದು ವಿಷಯವನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು ಎಂದರು.ತಾ.ಪಂ ಸದಸ್ಯೆ ಸುವರ್ಣಮ್ಮ ಕುಂಬಾರ, ರಾಜಕೀಯದಲ್ಲಿನ ಮಹಿಳಾ ಮೀಸಲಾತಿ ದುರುಪಯೋಗ ತಡೆಯದಿದ್ದರೆ ನಿಮ್ಮ ಅಧಿಕಾರವನ್ನು ಬೇರೆಯವರು ಚಲಾಯಿಸುತ್ತಾರೆ ಎಂದು ಹೇಳಿದರು.

ಸಿಪಿಐ ನೀಲಪ್ಪ ಓಲೇಕಾರ ಕಾರ್ಯಕ್ರಮ ಕುರಿತು ಮಾತನಾಡಿದರು.ಜಿಲ್ಲಾ ಪಂಚಾಯಿತಿ ಸದಸ್ಯರಾದ ಹನಮಕ್ಕ ಚೌಡ್ಕಿ, ಅನ್ನಪೂರ್ಣಮ್ಮ ಕಂದಕೂರು, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಿವನಗೌಡ ಪಾಟೀಲ, ಸದಸ್ಯರಾದ ಶರಣಮ್ಮ ಅಂಗಡಿ, ಛತ್ರಮ್ಮ ಭಜಂತ್ರಿ, ವೇದಿಕೆಯಲ್ಲಿದ್ದರು.ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಸಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ವಿರಣ್ಣ ವಾಲಿ ಸ್ವಾಗತಿಸಿದರು. ಭೀಮಣ್ಣ ನಿರೂಪಿಸಿ, ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.