ಬುಧವಾರ, ಆಗಸ್ಟ್ 4, 2021
21 °C

ಮಾಜಿ ಸ್ಪೀಕರ್ ವೆಂಕಟಪ್ಪ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ವಿಧಾನ ಪರಿಷತ್ ಮಾಜಿ ಸಭಾಪತಿ ಮತ್ತು ವಿಧಾನಸಭೆ ಮಾಜಿ ಸ್ಪೀಕರ್ ಎಂ.ವಿ.ವೆಂಕಟಪ್ಪ (81) ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಂಗಳವಾರ ಬೆಳಿಗ್ಗೆ 5 ಗಂಟೆ ವೇಳೆಯಲ್ಲಿ ನಿಧನರಾದರು.ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಮೋತಕಪಲ್ಲಿಯವರಾದ ಅವರು, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. 15 ದಿನದ ಹಿಂದೆ ಸ್ನಾನಗೃಹದಲ್ಲಿ ಬಿದ್ದು ಆಂತರಿಕ ರಕ್ತಸ್ರಾವವಾಗಿ ಪ್ರಜ್ಞಾಹೀನ ಸ್ಥಿತಿ ತಲುಪಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಮಂಗಳವಾರ ಬೆಳಿಗ್ಗೆ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.ಮೃತರಿಗೆ ಪತ್ನಿ ಸುಭದ್ರಮ್ಮ ಮತ್ತು ಮಕ್ಕಳಾದ ಎಂ.ವಿ.ರಾಜೀವಗೌಡ, ಡಾ.ಸಿದ್ಧಾರ್ಥ ಇದ್ದಾರೆ.

ಅಂತ್ಯಕ್ರಿಯೆ: ಬೆಂಗಳೂರಿನಿಂದ ಮಂಗಳವಾರ ಮಧ್ಯಾಹ್ನ ಮುಳಬಾಗಲಿಗೆ ಬಂದ ಪಾರ್ಥಿವ ಶರೀರರಕ್ಕೆ ತಾಲ್ಲೂಕಿನ ಸಾವಿರಾರು ಮಂದಿ ಅಂತಿಮ ನಮನ ಸಲ್ಲಿಸಿ ಕಂಬನಿ ಮಿಡಿದರು. ಮೃತರ ಹುಟ್ಟೂರಾದ ಮೋತಕಪಲ್ಲಿಯಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಿತು.ಪರಿಚಯ: 1932ರ ಏಪ್ರಿಲ್ 12ರಂದು ಮೋತಕಪಲ್ಲಿಯಲ್ಲಿ ಜನಿಸಿದ ಎಂ.ವಿ.ವೆಂಕಟಪ್ಪ, 1947ರಲ್ಲಿ 15ರ ಬಾಲಕನಾಗಿದ್ದಾಗಲೇ ಮೈಸೂರು ಸತ್ಯಾಗ್ರಹ ಚಳವಳಿ ಅಂಗವಾಗಿ ರಾಜ್‌ಪೇಟೆಯಲ್ಲಿ ಸಂಘಟನೆ ನಡೆಸಿ ಬಂಧನಕ್ಕೆ ಒಳಗಾಗಿದ್ದರು.ತಲಾ ಎರಡು ಬಾರಿ ವಿಧಾನಸಭೆ (1989 ಮತ್ತು 1999) ಮತ್ತು ವಿಧಾನ ಪರಿಷತ್‌ಗೆ (1966 ಮತ್ತು 1972) ಅವರು ಆಯ್ಕೆಯಾಗಿದ್ದರು.1974ರ ಆ.30ರಿಂದ 1978ರವರೆಗೆ ವಿಧಾನ ಪರಿಷತ್ ಸಭಾಪತಿಯಾಗಿದ್ದರು.1999ರ ಅ.26ರಂದು ವಿಧಾನಸಭೆ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.