ಮಂಗಳವಾರ, ಮೇ 17, 2022
23 °C

ಮಾತಿನಲ್ಲಿ ನಮ್ಮದೇ ಬಿಂಬ

ನಿರೂಪಣೆ: ರೋಹಿಣಿ ಮುಂಡಾಜೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣದಿಂದ 12 ಕಿ.ಮೀ. ದೂರದಲ್ಲಿರುವ ಹನಿಯೂರು ನನ್ನೂರು. ಮೊದಲ ಮಾತು ಹೇಗಿತ್ತೋ ಕಾಣೆ. ಆದರೆ ಕಂಡದ್ದೆಲ್ಲವನ್ನೂ ಮಾತಿನ ರೂಪದಲ್ಲಿ ಅನುಭವಿಸುವ, ತಿಳಿದದ್ದೆಲ್ಲವನ್ನೂ ಕಂಡವರಿಗೆ ವಿವರಿಸುವ ಬಾಲ್ಯದಲ್ಲೇ ನಾನು ಮಾತಿನ ಮಲ್ಲನಾಗಿದ್ದೆನಂತೆ. ಅಪ್ಪ-ಅಮ್ಮ ಇಬ್ಬರೂ ಅನಕ್ಷರಸ್ಥರಾದರೂ ನನಗೆ ಸಂಭಾವಿತನಾಗಿರುವ ಸಂಸ್ಕೃತಿ, ಸಂಸ್ಕಾರವನ್ನು ಕಲಿಸಿಕೊಟ್ಟರು. ನಮ್ಮ ಕಷ್ಟ ಏನೇ ಇರಲಿ ಅದನ್ನು, ಅದಕ್ಕೆ ಸಂಬಂಧಪಡದವರ ಮುಂದೆ ತೋರಿಸಿಕೊಳ್ಳುವುದು ಸಭ್ಯತೆ ಅಲ್ಲ ಎಂಬ ಮೂಲಪಾಠವನ್ನು ಇಬ್ಬರೂ ತಾವು ಬದುಕುವ ರೀತಿಯಿಂದಲೇ ತಿಳಿಸಿಕೊಟ್ಟರು. ಮಾತು ನನ್ನ ಕೈಹಿಡಿಯಿತೋ, ನಾನೇ ಅದರ ಚುಂಗು ಹಿಡಿದು ನಡೆದೆನೋ ಗೊತ್ತಿಲ್ಲ. ಮಾತನ್ನು ಒಲಿಸಿಕೊಳ್ಳುವ ಬಗೆಯನ್ನು ಮಾತ್ರ ಹೇಳಿಕೊಟ್ಟವರು ಅಪ್ಪ- ಅಮ್ಮ.ಮಾತು ನಮ್ಮ ವ್ಯಕ್ತಿತ್ವಕ್ಕೆ ಕನ್ನಡಿ. ಅಂದರೆ ಮಾತು ನಮ್ಮದೇ ಪ್ರತಿಬಿಂಬ. ಈಗ ನಾನು ಇದನ್ನು ಹೀಗಂತ ವ್ಯಾಖ್ಯಾನಿಸಬಲ್ಲೆ. ಆದರೆ ಅಪ್ಪ- ಅಮ್ಮನಿಗೆ ಅದನ್ನು ಶ್ರವಣಮಧುರವಾಗಿ ವಿವರಿಸಲು ಗೊತ್ತಿರಲಿಲ್ಲ. ಅವರಿಗೆ ತೋಚಿದಂತೆ ಹೇಳಿಕೊಟ್ಟರು. ತೋರಿಸಿಕೊಟ್ಟರು. ಆದರೆ ಅವರ ಭಾವವನ್ನು ಗ್ರಹಿಸಿ ಅದರಂತೆ ನಡೆದೆ. ಮಾತು ಒಲಿಯಿತು.ಕೆಲವರು ಬಾಯಿ ತೆಗೆದರೆ ಯಾರನ್ನೋ ಹಳಿಯುವುದು, ಹಂಗಿಸುವುದು, ದೂರುವುದು, ಚಾಡಿ ಮಾತು ಹೇಳುವುದನ್ನು ಕಾಣುತ್ತೇವೆ. ಅದರಿಂದ ಸ್ವತಃ ಅವರಿಗೇ ಸುಖವಿರುವುದಿಲ್ಲ, ಲಾಭವೂ ಇರುವುದಿಲ್ಲ. ಮನುಷ್ಯನಿಗೆ ದೇವರು ಕೊಟ್ಟ ವರವೆಂದರೆ ಮಾತು. ಸಂವೇದನೆಗಳನ್ನು ಹೊರಜಗತ್ತಿಗೆ ತಲುಪಿಸಲು ಇರುವ ಮಾಧ್ಯಮ ಮಾತು. ಅದನ್ನು ಸದುದ್ದೇಶಕ್ಕಾಗಿ ಬಳಸಿದರೆ ನಮಗೂ ಶೋಭೆ. ಬೇರೆಯವರಿಗೂ ಒಳಿತು. ಇತರರ ಬಗ್ಗೆ ಕೆಟ್ಟದ್ದನ್ನು ಹೇಳುತ್ತಾ ಹೋದರೆ ಒಂದಷ್ಟು ದಿನ ಜನ ಕೇಳಿಸಿಕೊಂಡಾರು. ಆದರೆ ಅದೇ ಜನ ಒಂದು ದಿನ ನಮ್ಮ ಸಣ್ಣಬುದ್ಧಿಯನ್ನು ಅರ್ಥೈಸಿಕೊಳ್ಳುತ್ತಾರೆ ಎಂಬುದನ್ನು ಮರೆಯಬಾರದು.ನಾನು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಶಾಲಾ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದೆ. ಹನಿಗವನಗಳನ್ನು ಬರೆಯುವುದು, ಶಾಲಾ ಕಾರ್ಯಕ್ರಮಗಳನ್ನು ವರದಿಮಾಡುವುದು ನನಗೆ ಹವ್ಯಾಸವಾಗಿತ್ತು.ದ್ವಿತೀಯ ಪಿಯುಸಿಯಲ್ಲಿರುವಾಗ ಗೋಡೆ ಪತ್ರಿಕೆಯನ್ನು ಶುರು ಮಾಡಿದೆವು. ಅದು ನನ್ನಲ್ಲಿ ಇನ್ನಷ್ಟು ಸೃಜನಾತ್ಮಕ ಚಿಂತನೆಗೆ, ಚಟುವಟಿಕೆಗೆ ವೇದಿಕೆಯಾಯಿತು. ಅದನ್ನು ನನ್ನ ಸಾಹಿತ್ಯಿಕ ಬರವಣಿಗೆಗಳಿಗೆ ಬಳಸಿಕೊಂಡೆ. ಚನ್ನಪಟ್ಟಣ, ರಾಮನಗರದ ಜಾನಪದ ಕಲಾವಿದರ ಸಂದರ್ಶನ ಲೇಖನಗಳನ್ನು ಬರೆದೆ. ಆ ಸಂದರ್ಭದಲ್ಲಿ ನಮಗೆ ಹೊರಜಗತ್ತಿನೊಂದಿಗೆ ಇದ್ದ ಪ್ರಮುಖ ಸಂಪರ್ಕ ಸೇತುವೆ ಎಂದರೆ `ಪ್ರಜಾವಾಣಿ'. ಊರಿನ ಸಮಸ್ಯೆಗಳನ್ನು ಕುಂದು-ಕೊರತೆ ರೂಪದಲ್ಲಿ ಬರೆದು ಕಳುಹಿಸುತ್ತಿದ್ದೆ. ನನ್ನ ಹೆಸರನ್ನು ಪತ್ರಿಕೆಯಲ್ಲಿ ಕಂಡ ದಿನ ಪುಳಕವಾಗುತ್ತಿತ್ತು. ಊರಿನಲ್ಲಿ ಹೀರೊ ಆಗುತ್ತಿದ್ದೆ. ಅದೇ ಸಂದರ್ಭದಲ್ಲಿ ನನ್ನ ಹನಿಗವನಗಳ ಸಂಕಲನ ಬಂತು.ಪದವಿ, ಸ್ನಾತಕೋತ್ತರ ಪದವಿ ಓದುತ್ತಿರುವಾಗಲೂ ಸಾಹಿತ್ಯಿಕ, ಸಾಂಸ್ಕೃತಿಕ ಬರವಣಿಗೆಗಳನ್ನು ನಿಲ್ಲಿಸಲಿಲ್ಲ. ಓದು ಮತ್ತು ಬರವಣಿಗೆ ನನಗೆ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಅವಕಾಶ ಕಲ್ಪಿಸುತ್ತಿದ್ದವು. ಸ್ಪಷ್ಟವಾದ ಮಾತು, ವಿಷಯಗಳನ್ನು ಪ್ರಸ್ತುತಪಡಿಸುವ ಶೈಲಿಯಿಂದಾಗಿ ಚನ್ನಪಟ್ಟಣದ ಸ್ಥಳೀಯ ಕೇಬಲ್ ಟಿವಿ `ಕೆಂಗಲ್ ಕೇಬಲ್ ನೆಟ್‌ವರ್ಕ್'ನಲ್ಲಿ ನ್ಯೂಸ್ ರೀಡರ್ ಆಗಿ ನೇಮಕಗೊಂಡೆ. ಊರಲ್ಲಿ ಅನೇಕ ಕಾರ್ಯಕ್ರಮಗಳನ್ನು ನಿರೂಪಿಸುವ ಜವಾಬ್ದಾರಿ ಸಿಗುತ್ತಿತ್ತು. ಬೇರೆ ಊರುಗಳಿಗೂ ಇದೇ ಕಾರಣಕ್ಕೆ ಆಹ್ವಾನ ಸಿಗುತ್ತದೆ. ಇವೆಲ್ಲವೂ ಮಾತಿನ ಓಘ ಮತ್ತು ಶೈಲಿಗೆ ಸಿಕ್ಕ ಬೆಲೆ.ಶಿಕ್ಷಕನಾಗಬೇಕೆಂಬುದು ನನ್ನ ಹೆತ್ತವರ ಆಸೆ. ಕನ್ನಡ ಪ್ರಾಧ್ಯಾಪಕನಾಗುವ ಮೂಲಕ ಅವರ ಆಸೆ ಈಡೇರಿದೆ. ಆದರೂ ಎಫ್‌ಎಂ ಸ್ಟೇಷನ್‌ಗಳು ನನ್ನನ್ನು ಸದಾ ಆಕರ್ಷಿಸುತ್ತಿದ್ದವು. ಸಿಕ್ಕಿದ ಅವಕಾಶವನ್ನು ಬಿಡಬಾರದು ಎಂದು ಆರ್‌ಜೆ ಹುದ್ದೆಗೆ ಅರ್ಜಿ ಸಲ್ಲಿಸಿ ಆಕಾಶವಾಣಿಗೆ ಆಯ್ಕೆಯಾದೆ. ನನ್ನನ್ನು ನಾನು ತಿಳಿದುಕೊಳ್ಳಲು, ಮಾತುಗಾರಿಕೆಯನ್ನು ಇನ್ನಷ್ಟು ಪಳಗಿಸಿಕೊಳ್ಳಲು, ಶ್ರೋತೃಗಳ ಮುಂದೆ ನನ್ನನ್ನು ನಾನು ಪ್ರಸ್ತುತಪಡಿಸಿಕೊಳ್ಳಲು ಆರ್‌ಜೆ ಅತ್ಯುತ್ತಮ ವೇದಿಕೆ ಎಂಬುದು ಅರ್ಥವಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.