ಸೋಮವಾರ, ಆಗಸ್ಟ್ 10, 2020
24 °C

ಮಾತಿನ ಆಲಾಪ...

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

ಮಾತಿನ ಆಲಾಪ...

ಹುಬ್ಬಳ್ಳಿಯ ದೇಶಪಾಂಡೆ ನಗರದ 3ನೇ ತಿರುವಿನಲ್ಲಿರುವ `ಗಾನ ಲಹರಿ~ಯ ಮುಂದೆ ಸುಮ್ಮನೇ ಒಂದು ಹೆಜ್ಜೆ ಹಾಕಿದರೆ ಸಾಕು. ಮನೆಯೊಳಗೂ, ಗೇಟಿನ ಹೊರಗೂ ಗಿಜಿಗುಟ್ಟುವ ಜನ, ಕಾರುಗಳ ಸಾಲು, ತಂಬೂರಿ ನಾದದ ಜೊತೆಗೆ ಮನಮಿಡಿಯುವ ಆಲಾಪ... ಸಂಗೀತದ ಗಂಧ-ಗಾಳಿ ಗೊತ್ತಿಲ್ಲದವರೂ ಕ್ಷಣ ನಿಂತು ತಲೆದೂಗುವಂತೆ ಮಾಡುವ ಮಾಂತ್ರಿಕ ದನಿಯದು.ಏನೂ ಅರ್ಥವಾಗದಿದ್ದರೂ ಇನ್ನೊಂದಿಷ್ಟು ಕೇಳಿಸಿಕೊಳ್ಳುವ ಭಾವ, ಅಳುವ ಮಕ್ಕಳನ್ನು ಆ ಕ್ಷಣಕ್ಕೆ ಸುಮ್ಮಗಾಗಿಸಿ ಬಿಡುವ ದನಿ, ಎದೆ ತುಂಬಿದ ನೋವಿನ ಮೋಡ ಕರಗಿಸಿ ಕಣ್ಣೀರ ಮಳೆಯಾಗಿಸುವ ಅದ್ಭುತ ದನಿ. ಆ ದನಿ ಶಾಶ್ವತ ಮೌನವನ್ನಪ್ಪಿದೆ. ನೆನೆದರೆ ಗಂಗಜ್ಜಿ ನಿನ್ನೆ-ಮೊನ್ನೆಯವರೆಗೂ ಇಲ್ಲೇ ನಮ್ಮ ನಡುವೆಯೇ ಕುಂತು ಮಾತನಾಡಿದಂತೆನಿಸುತ್ತದೆ...

                                         ---

`ಆಗ ಪಾಕಿಸ್ತಾನದಲ್ಲಿ ರೂಲು (ಕಾನೂನು) ಭಾರೀ ಜೋರಿದ್ವು, ಹೆಣ್ಮಕ್ಳೆಲ್ಲ ಮನಿ ಬಿಟ್ಟು ಹೊರಗ ಬರೂದ ಕಷ್ಟದ ಕಾಲ. ನಮಗೇನ್ ಗೊತ್ತು. ನಾವ ಹುಬ್ಬಳ್ಯಾಗ ಭಾಳ ಆನಂದದಿಂದ ಓಡಾಡಿದವ್ರ.ಹಂಗ ಹಾಡಕ್ಕ ಅಂತ ಪಾಕಿಸ್ತಾನಕ್ಕೆ ಹೋಗಿದ್ದಾಗ ಒಂದಿನ ತಲೆ ಮ್ಯೋಲ ಜಳಕಾ ಮಾಡಿ, ಕೂದಲು ಆರಿಸಿಕೊಳ್ಳುದಿಕ್ಕ ಅಂತ ಹೊರಗ ಗ್ಯಾಲರಿಗೆ ಬಂದು ನಿಂತಿದ್ಯಾ, ಜವಾನ ಓಡಿ ಬಂದು ಹಿಂದಿನೋ/ ಉರ್ದುನೋ ಅದೆಂಥಾದ್ದೊ ಭಾಷೆದಾಗ ಏನೆನೋ ಹೇಳಿಕ್ಹತ್ತಿದ್ದಾ.ಏನು ಅಂತ ನಂಗಂತೂ ಅರ್ಥ ಆಗಲಿಲ್ಲ, ಬ್ಯಾರೆಯವರೊಬ್ಬರು ಬಂದು ಅದನ್ನ ತಿಳಿಸಿ ಹೇಳಿದ್ರು. `ಇಲ್ಲಿ ಹಿಂಗೆಲ್ಲ ಹೊರಗ ಬಂದು ಕೂದಲಾ ಆರಿಸಿಕೊಳ್ಳುವಂಗಿಲ್ರಿ ಅಂತ. ನಮಗ ಗಾಬರಿ ಆಗಿ ಒಳಗ ಓಡಿ ಬಂದು ಕುಂತ್ವಿ...~ ಎಳೆ ಮಗುವಿನಂಥ ಬೊಚ್ಚು ಬಾಯಿ ಬಿಚ್ಚಿ ನಕ್ಕರು ಗಂಗಜ್ಜಿ.ನಿಜ, ಅಜ್ಜಿಗೆ ತಮ್ಮ ಬದುಕಿನ ಸಣ್ಣ-ಪುಟ್ಟ ಘಟನೆಗಳನ್ನೂ ಸಂಭ್ರಮದಿಂದ ನೆನೆಯುವ ಅದ್ಭುತ ಗುಣವಿತ್ತು. ಅವರ ಇಂಪಾದ ಹಾಡಿನಂತೆಯೇ ಮಗುವಿನಂತಹ ಅವರ ಮಾತಿನ ಹದವೂ ಪ್ರಿಯವಾಗುತ್ತಿತ್ತು. ಮಾತನಾಡಲು ಅವರಿಗೆ ಇಂಥವರೇ ಆಗಬೇಕು, ಇಂಥದ್ದೇ ವಿಷಯ ಇರಬೇಕು ಎಂದೇನೂ ಇರಲಿಲ್ಲ.ಮೊಮ್ಮಗ ವಿದೇಶದಿಂದ ತಂದಿದ್ದ ಚಾಕೊಲೇಟು ಹಿಡಿದು, ತಮ್ಮನ್ನು ಕೃಶಗೊಳಿಸುತ್ತಿದ್ದ ಕಾಯಿಲೆಯ ಮೇಲೆ ದೂರು ಹೇಳುವಂತಹ ಸಣ್ಣ ಸಣ್ಣ ಸಂಗತಿಯನ್ನೂ ಅವರು ಅಷ್ಟೇ ಮಜವಾಗಿ ಹೇಳಿಕೊಳ್ಳುತ್ತಿದ್ದರು.ಕುಳಿತು ಸುಮ್ಮನೇ ಗಂಗಜ್ಜಿಯ ಮಾತು ಕೇಳುತ್ತಾ ಹೋಗುವುದು ಕೆಲವೊಮ್ಮೆ ಅವರ ಹಾಡು ಕೇಳುವುದಕ್ಕಿಂತ ಹೆಚ್ಚು ಸಂತೋಷ ನೀಡುವ ಸಂಗತಿಯಾಗಿತ್ತು.ಪತ್ರಕರ್ತರೆದುರು, ವಿದ್ವಾಂಸರೆದುರು, ಸಮವಯಸ್ಕ/ ಸಮಭಿರುಚಿಯ ಜನರು, ಸಂಗೀತದ ಗಂಧ ಗಾಳಿಯೂ ಗೊತ್ತಿಲ್ಲದವರು, ಅಷ್ಟೇ ಏಕೆ ಆಗ ತಾನೇ ಮಾತು ಕಲಿತ ಮಕ್ಕಳ ಎದುರು ಕೂಡ ಗಂಗಜ್ಜಿ ಅಷ್ಟೇ ಉತ್ಸಾಹದಿಂದ ಮಾತನಾಡುತ್ತಿದ್ದರು.

ಯಾವುದಾದರೂ ನೆನಪಿನ ಒಂದೆಳೆ ಸಿಕ್ಕರೆ ಸಾಕು.

 

ಅಜ್ಜಿ, ದಶಕಗಳ ಆ ಹಳೆಯ ನೆನಪನ್ನು ನಿನ್ನೆ ಮೊನ್ನೆಯಷ್ಟೇ ನಡೆದಿದೆಯೇನೋ ಎಂಬಂತೆ ಸವಿವರವಾಗಿ ಬಿಚ್ಚಿಡುತ್ತಾ ಹೋಗುತ್ತಿದ್ದರು. ನಗುವ ಪ್ರಸಂಗಗಳನ್ನು ಹೇಳುವಾಗಲಂತೂ ಪುಟ್ಟ ಮಗುವಿನಂತೆ ಜೋರು ದನಿಯಲ್ಲಿ ನಕ್ಕು ಬಿಡುತ್ತಿದ್ದರು.ಇನ್ನು ಕೆಲವು ಪ್ರಸಂಗಗಳನ್ನು ಹೇಳುವಾಗ ಅವರು ತುಸು ತಡವರಿಸುತ್ತಿದ್ದರು. ಆ ಯಾತನೆ ಅವರಿಗೆ ಬಹಳ ನೋವುಂಟು ಮಾಡುತ್ತಿತ್ತೇನೋ, ಅದಕ್ಕಾಗೇ ಅಂತಹ ಪ್ರಸಂಗಗಳನ್ನು ಅವರು ಅಷ್ಟು ಸರಳವಾಗಿ ಹೇಳಿಕೊಳ್ಳುತ್ತಿರಲಿಲ್ಲ.ಅಂತಹ ಸಂಗತಿಗಳೆಂದರೆ ತಾಯಿಯ, ಪತಿಯ ಹಾಗೂ ಮುದ್ದಿನ ಮಗಳ ಮರಣದ ಕಹಿ ಘಟನೆಗಳು. ಈ ಮೂವರ ಬಗ್ಗೆ ಅವರು ಮಾತನಾಡುತ್ತಿದ್ದುದೇ ಕಡಿಮೆ. ಮಾತನಾಡಲು ಹೋದರೆ ಕಣ್ಣ ಹನಿಗಳೇ ಮಾತಾಗಿ, ಮಾತು ಮೌನವಾಗಿ ತುಟಿಯ ಮೇಲೆ ಸಣ್ಣ ಕಂಪನವೊಂದೇ ಉಳಿದುಕೊಳ್ಳುತ್ತಿತ್ತು.ಗಂಗಜ್ಜಿಯ ಮನಸ್ಸು ಎಷ್ಟೇ ಪ್ರಖರವಾಗಿದ್ದರೂ ಕೊನೆಕೊನೆಗೆ ವಯಸ್ಸು ಅವರ ದೇಹದ ಚೈತನ್ಯವನ್ನು ಇಷ್ಟಿಷ್ಟೇ ಉಡುಗಿಸುತ್ತಾ ಹೊರಟಿತ್ತು. ಹೆಚ್ಚು ಹೊತ್ತು ಕುಳಿತು ಮಾತನಾಡಲು ದೇಹ ಅವಕಾಶ ಕೊಡುತ್ತಿರಲಿಲ್ಲ.

 

ಆದರೂ ಮನೆಗೆ ಬಂದವರೆದುರು ಮಾತನಾಡುತ್ತಾ ಕುಳಿತರೆ ಅವರು ಎಂದೂ ತಾವಾಗೇ ಮಾತು ಸಾಕು ಎಂದು ಎದ್ದು ಹೋದವರಲ್ಲ. ಮಗ-ಮೊಮ್ಮಗ ಅವರನ್ನು ಎಬ್ಬಿಸಲು ಹರಸಾಹಸ ಪಡಬೇಕಿತ್ತು. `ನಿಂದ್ರಪ್ಪಾ, ಏಳ್ತಿನಿ, ಅಂದಂಗ...~ ಎನ್ನುತ್ತಲೇ ಮತ್ತೆ ಮಾತು ಮುಂದುವರಿಸುತ್ತಿದ್ದ ಅಜ್ಜಿಯ ಮಾತು ಕೇಳುವುದೇ ಆನಂದ.ಆದರೆ ವೇದಿಕೆಯ ಮೇಲೆ ಮಾತಿಗೆ ಮೈಕು ಕೊಟ್ಟರೆ ಮಾತ್ರ ಅವರಿಗೆ ತುಸು ಕೋಪ, ಒಂದಿಷ್ಟು ಇರುಸು ಮುರುಸು. `ಮೈಕ್ ಕೊಟ್ರ ನನಗ ಹಾಡೂದಷ್ಟ ಗೊತ್ತು, ಮಾತಾಡಾಕ ಬರೂದಿಲ್ಲ, ಏನ್ರಪಾ...~ ಎಂಬಂತಹ ಒಂದೆರಡು ಮಾತನಾಡಿ, ಮೈಕು ಬಿಡುವ ಮುನ್ನ ಆಯಾ ಸಂದರ್ಭ, ಸಮಯ, ಸಮಾರಂಭಕ್ಕೆ ಹೊಂದುವಂಥ ನಾಲ್ಕು ನುಡಿಗಳನ್ನು ಗುನುಗುತ್ತಿದ್ದುದು ಭಾಷಣದ ವಿಶೇಷ.ಇಂತಹ ಗಂಗಜ್ಜಿ ಇಲ್ಲದ ಹುಬ್ಬಳ್ಳಿಯ ದೇಶಪಾಂಡೆ ನಗರ ಈಗ ಸೊರಗಿದಂತೆ ಕಾಣುತ್ತಿದೆ. ಆದರೂ ನೆನೆವವರಿಗೆ ಅವರ ಸಂಗೀತದ ಘಮ ಮಾತ್ರ ಅಲ್ಲೇ ಗಾಳಿಯಲ್ಲಿ ಸೇರಿ ಸುತ್ತುವರಿದಂತೆ ಅನಿಸದಿರದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.