ಸೋಮವಾರ, ಮೇ 17, 2021
23 °C

ಮಾಧ್ಯಮದ ಮುಸುಕು

ಓ.ಎಲ್. ನಾಗಭೂಷಣಸ್ವಾಮಿ Updated:

ಅಕ್ಷರ ಗಾತ್ರ : | |

ನಾವು ಯಾವುದನ್ನು ನಾಗರಿಕತೆಯ ವಿಕಾಸ ಅನ್ನುತ್ತೇವೋ ಅದು ಮನುಷ್ಯ ತಾನು ಕೇಳಿಕೊಳ್ಳಬೇಕಾದ ಪ್ರಶ್ನೆಗಳನ್ನು ಕೇಳಿಕೊಳ್ಳದಂತೆ ಮಾಡಲು ನಡೆಸಿರುವ ಹೋರಾಟದ ಕತೆ. ಇದು ಪಿ ಡಿ ಜೇಮ್ಸ ಎಂಬ ಹೆಸರಿನಿಂದ ಕಾದಂಬರಿಗಳನ್ನು ಬರೆದು ಪ್ರಸಿದ್ಧಳಾದ ಲೇಖಕಿಯ ಮಾತು.ನಮ್ಮನ್ನೆ ನಾವು ಕುರುಡಾಗಿಸಿಕೊಳ್ಳಲು ಕಂಡುಕೊಂಡಿರುವ ಅತ್ಯಂತ ಪ್ರಬಲವಾದ ಅಸ್ತ್ರವೆಂದರೆ ಟಿವಿ. ತೋರಿಕೆಯ ಭಾಷೆ, ತೋರಿಕೆಯ ದೃಶ್ಯಗಳು, ಕಲೆಯ ರೂಪಗಳು, ತಾಂತ್ರಿಕ ಆವಿಷ್ಕಾರಗಳು ಇವನ್ನೆಲ್ಲ ಬಳಸಿಕೊಂಡು `ಅವರು~ ತಮ್ಮಿಷ್ಟದ ತಮ್ಮ ಬಿಂಬಗಳನ್ನು ಮೂಡಿಸಿ, ವಸ್ತುಗಳ ಬಿಂಬವನ್ನು ಮೂಡಿಸಿ, ಸಂದರ್ಭಗಳನ್ನು ಕಲ್ಪಿಸಿ, ಐಡಿಯಾಗಳನ್ನು ಹುಟ್ಟುಹಾಕಿ, ಕಥೆ ಕಟ್ಟಿ ವಾಸ್ತವವೆಂದರೇ ಇದೇ ಎಂದು ನಂಬಿಸಿ ತಮ್ಮ ಅಧಿಕಾರ ಉಳಿಸಿಕೊಳ್ಳುತ್ತಾರೆ. ಸರಿ, `ಅವರು~ ಯಾರು? ಮರುಳುಮಾಡುವ ತೋರಿಕೆಗಳನ್ನು ಬಳಸಿಕೊಂಡು ಲಾಭಗಳಿಸುವ ಹಲವು ಗುಂಪುಗಳು ಸಮಾಜದಲ್ಲಿ ಕಾಣುತ್ತಿವೆ. ಅವುಗಳಲ್ಲಿ ಮುಖ್ಯವಾದದ್ದು ವ್ಯಾಪಾರ, ಮನರಂಜನೆ, ಧರ್ಮ, ರಾಜಕೀಯ ಮತ್ತು ವಾರ್ತೆಗಳ ವಲಯದಲ್ಲಿ ತೊಡಗಿರುವ ಗುಂಪುಗಳು.ಟಿವಿಗೆ ಕಣ್ಣು ಕೀಲಿಸಿರುವ ಅಕ್ಷರಶಃ ಕೋಟ್ಯಂತರ ಭಾರತೀಯರಲ್ಲಿ ಎಲ್ಲರೂ ಅಲ್ಲದಿದ್ದರೂ ಬಹುಸಂಖ್ಯೆಯ ಜನ ಮಾಮೂಲಿ ದಿನವೊಂದರ ಬಹುಪಾಲು ಸಮಯವನ್ನು ಈ ತೋರಿಕೆಯ ಸೃಷ್ಟಿಯ ಜಗತ್ತಿನಲ್ಲೇ ಕಳೆಯುತ್ತಾರೆ. ಈ ತೋರಿಕೆಯ ಜಗತ್ತು ಸೃಷ್ಟಿಯಾಗುವುದು ಕೂಡಾ ಜಗತ್ತಿನ ಬಗ್ಗೆ ಜನರಲ್ಲಿ ಸುಳ್ಳು ದೃಷ್ಟಿಕೋನವನ್ನು ಬೆಳೆಸಿ ಅವರ ವರ್ತನೆಯನ್ನು ನಿಯಂತ್ರಿಸುವ ಸಲುವಾಗಿಯೇ. ಮನುಷ್ಯ ಭಾಷೆಯೊಡನೆ ತಾಂತ್ರಿಕತೆಯ ಮೂಲಕ ಸಾಧ್ಯವಾಗಿರುವ ದೃಶ್ಯ ಭಾಷೆಯನ್ನೂ ಬೆರೆಸಿಕೊಂಡು ಟಿವಿ ಎಂಬ ಮಾಧ್ಯಮ ನಾವು ಏನನ್ನು ನೋಡಬೇಕು, ಹೇಗೆ ನೋಡಬೇಕು, ನೋಡಿದ್ದನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಅನ್ನುವುದನ್ನೆಲ್ಲ ನಿಯಂತ್ರಿಸುತ್ತಾ ಇರುತ್ತದೆ.ಮನುಷ್ಯ ಭಾಷೆಯೇ ಇರಲಿ, ದೃಶ್ಯಭಾಷೆಯೇ ಇರಲಿ ಅದು ಕಾಣಬೇಕಾದ್ದನ್ನು ಕಾಣದಂತೆ ಮಾಡುವ ಅದೃಶ್ಯ ತೆರೆಯಾಗಿಬಿಟ್ಟಿದೆ. ಕನ್ನಡದ ಬಹಳಷ್ಟು ವಾರ್ತಾವಾಹಿನಿಗಳು ರಾಜಕಾರಣಿಗಳ ಒಡೆತನಕ್ಕೆ ಒಳಪಟ್ಟಿರುವುದು ಆಕಸ್ಮಿಕವಲ್ಲ.ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ನಮ್ಮ ದೇಶದಲ್ಲಿ ಅನಕ್ಷರಸ್ಥರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈಗ ಅನಕ್ಷರಸ್ಥರ ಸಂಖ್ಯೆ ಕಡಿಮೆಯಾಗಿದೆ. ಆದರೆ ನಮ್ಮನ್ನು ಆವರಿಸಿಕೊಂಡಿರುವ ಮಾಧ್ಯಮಗಳ ಬಗ್ಗೆ ಮಾತ್ರ ಅಕ್ಷರಸ್ಥರೂ ಅನಕ್ಷರಸ್ಥರೇ.ಮಾಧ್ಯಮದ ಬಗ್ಗೆ ತಿಳಿವಳಿಕಸ್ಥರಾಗಲು ಕೆಲವು ಮುಖ್ಯ ಅಂಶಗಳನ್ನು ಮನದಟ್ಟು ಮಾಡಿಕೊಳ್ಳುವುದು ಅಗತ್ಯ. ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುವ ಎಲ್ಲ `ಮೆಸೇಜು~ಗಳೂ, ಅವು ದೃಶ್ಯರೂಪದಲ್ಲೇ ಇರಲಿ ಅಥವಾ ವಾಕ್ಯರೂಪದಲ್ಲೇ ಇರಲಿ, ಉದ್ದೇಶಪೂರ್ವಕವಾಗಿ ರಚನೆಗೊಂಡವು. ಆದ್ದರಿಂದಲೇ ಈ ಮೆಸೇಜನ್ನು ಸೃಷ್ಟಿಮಾಡಿದವರು ಯಾರು ಅನ್ನುವ ಪ್ರಶ್ನೆಯನ್ನು ಕೇಳಿಕೊಳ್ಳಬೇಕು.ಮಾಧ್ಯಮಗಳಲ್ಲಿನ ಎಲ್ಲ ಮೆಸೇಜುಗಳೂ ಭಾಷೆಯ ಸೃಜನಶೀಲ ಬಳಕೆಯ ಮೂಲಕವೇ ತಯಾರಾಗುತ್ತವೆ. ಆದ್ದರಿಂದ `ನನ್ನ ಗಮನವನ್ನು ಸೆಳೆಯಲು ಯಾವ ತಂತ್ರಗಳನ್ನು ಬಳಸಿಕೊಂಡಿದ್ದಾರೆ ಇಲ್ಲಿ~ ಅನ್ನುವ ಪ್ರಶ್ನೆಯನ್ನು ಕೇಳಲೇಬೇಕು.ಮಾಧ್ಯಮದ `ಮೆಸೇಜ~ನ್ನು ನಾವು ಅರ್ಥಮಾಡಿಕೊಂಡ ಹಾಗೆಯೇ ಬೇರೆಯವರೂ ಅರ್ಥಮಾಡಿಕೊಳ್ಳುತ್ತಾರೆ ಅನ್ನುವುದು ಸರಿಯಲ್ಲ. ಒಂದೇ ಮೆಸೇಜನ್ನು ಒಬ್ಬೊಬ್ಬರು ಒಂದೊಂದು ಥರ ಅರ್ಥಮಾಡಿಕೊಳ್ಳುತ್ತಾರೆ. ಆದ್ದರಿಂದ ನಾನು ನೋಡುತ್ತಿರುವ ಈ ದೃಶ್ಯವನ್ನು ಯಾರು ಹೇಗೆ ಅರ್ಥಮಾಡಿಕೊಳ್ಳಬಹುದು ಅನ್ನುವ ಪ್ರಶ್ನೆ ಮುಖ್ಯವಾಗುತ್ತದೆ.

 

ಅತ್ಯಾಚಾರಕ್ಕೆ ಗುರಿಯಾದ ಹೆಣ್ಣುಮಕ್ಕಳ ಬಗ್ಗೆ ದಿನನಿತ್ಯವೂ ಒಂದಲ್ಲ ಒಂದು `ಸ್ಟೋರಿ~ ಪ್ರಸಾರವಾಗುತ್ತಲೇ ಇರುತ್ತದಲ್ಲ, ಅಂಥವುಗಳ ಬಗ್ಗೆ ಈ ಪ್ರಶ್ನೆ ಅಗತ್ಯವಾಗುತ್ತದೆ. 

ಮಾಧ್ಯಮವು ನಮ್ಮ ಮುಂದೆ ತಂದು ಸುರಿಯುವ ದೃಶ್ಯಾವಳಿಗಳಲ್ಲಿ ನಿರ್ದಿಷ್ಟ ಜೀವನ ಮೌಲ್ಯ ಮತ್ತು ಬದುಕನ್ನು ಕುರಿತ ನಿರ್ದಿಷ್ಟ ದೃಷ್ಟಿಕೋನ ಅಡಗಿರುತ್ತದೆ.ಆದ್ದರಿಂದ ನಮ್ಮ ಕಣ್ಣೆದುರಿಗೆ ಕಾಣುತ್ತಿರುವ ಚಿತ್ರದಲ್ಲಿ, ಮೆಸೇಜಿನಲ್ಲಿ, ಯಾವ ಮೌಲ್ಯ, ಯಾವ ಬದುಕಿನ ಶೈಲಿ, ಯಾವ ದೃಷ್ಟಿಕೋನವಿದೆ, ಯಾವ ದೃಷ್ಟಿಕೋನ, ಮೌಲ್ಯಗಳು ಇಲ್ಲ ಅನ್ನುವ ಪ್ರಶ್ನೆಯನ್ನಂತೂ ಕೇಳಿಕೊಳ್ಳಲೇಬೇಕು.ಮಾಧ್ಯಮದಲ್ಲಿ ಕಾಣಿಸಿಕೊಳ್ಳುವ ಬಹಳಷ್ಟು ಮೆಸೇಜುಗಳು, ಸುಮಾರು ನೂರಕ್ಕೆ ತೊಂಬತ್ತರಷ್ಟು, ಲಾಭಗಳಿಕೆಯ ಅಥವ ಅಧಿಕಾರ ಗಳಿಕೆಯ, ಇಲ್ಲವೇ ಅಧಿಕಾರ ಸಮರ್ಥನೆಯ ಉದ್ದೇಶದಿಂದ ರೂಪುಗೊಂಡಿರುತ್ತವೆ. ಆದ್ದರಿಂದಲೇ ಈ ಮೆಸೇಜನ್ನು ಬಿತ್ತರಿಸುತ್ತಿರುವುದು ಯಾಕೆ ಅನ್ನುವ ಪ್ರಶ್ನೆ ನಮ್ಮನ್ನು ಕಾಡಲೇಬೇಕು.ಟಿವಿಯಂಥ ಸಮೂಹಮಾಧ್ಯಮ ಇರದಿದ್ದ ಕಾಲದಲ್ಲಿ ನಮ್ಮ ಮನಸ್ಸು ಸಾಹಿತ್ಯದ ಕಲ್ಪನೆಯನ್ನೂ ಬದುಕಿನ ನಿಜವನ್ನೂ ಪ್ರತ್ಯೇಕವೆಂದು ಗ್ರಹಿಸುವ ಸಾಮರ್ಥ್ಯ ಹೊಂದಿತ್ತು. ಕಾವ್ಯಮೀಮಾಂಸೆಯಲ್ಲಿ ನಾಟ್ಯಧರ್ಮ ಮತ್ತು ಲೋಕಧರ್ಮ ಅನ್ನುವ ಪದಗಳಿವೆ.ಲೋಕದಲ್ಲಿ ನಿಜವಾಗಿ ನಡೆಯುವುದು, ನಿಜ ಮನುಷ್ಯರ ವರ್ತನೆ, ಇವೆಲ್ಲ ಲೋಕಧರ್ಮ; ಕೋತಿ ಸಮುದ್ರವನ್ನು ಹಾರಿದ್ದು, ನಾಯಕ ನಾಯಕಿಯರು ಹಾಡು ಹೇಳಿಕೊಂಡು, ಕುಣಿಯುತ್ತಾ ಪ್ರೀತಿಯನ್ನು ಅನುಭವಿಸುವುದು ಲೋಕಧರ್ಮವಲ್ಲ, ನಾಟ್ಯಧರ್ಮ. ಅದು ಕಲ್ಪನೆಯ ನಾಟ್ಯದಲ್ಲಿ, ನಾಟ್ಯವೆಂದರೆ ಇಡೀ ಸಾಹಿತ್ಯ, ಮಾತ್ರ ಸಾಧ್ಯ. ಭಾಷೆಯ ಬೇರೆ ಬೇರೆ ವಲಯಗಳನ್ನು, ಆಯಾ ವಲಯದ ನಿಜ ಮತ್ತು ಸುಳ್ಳುಗಳನ್ನು ಗ್ರಹಿಸುವ ಶಕ್ತಿ ಬೆಳೆದಿತ್ತು.ಮಾಧ್ಯಮಗಳ ಸರ್ವವ್ಯಾಪಿ ಸಾಮರ್ಥ್ಯದ ಈ ಕಾಲದಲ್ಲಿ ನಿಜ-ಸುಳ್ಳುಗಳ, ವಾಸ್ತವ-ಕಲ್ಪನೆಗಳ, ಖಾಸಗಿ-ಸಾರ್ವಜನಿಕಗಳ ಗಡಿಗೆರೆ ಮಸುಕಾಗುತ್ತ ಅಳಿಸಿಯೇ ಹೋಗಿದೆ. ಅಷ್ಟೇ ಅಲ್ಲ ಮನರಂಜನೆ, ಕ್ರೀಡೆ, ಮಾಹಿತಿ, ಸುದ್ದಿ ಇವುಗಳ ಗಡಿಗೆರೆಗಳೂ ಮಬ್ಬು ಮಸುಕು.ಆಟ ಇವತ್ತು ಕೇವಲ ಆಟವಲ್ಲ. ಕ್ರಿಕೆಟ್, ಫುಟ್‌ಬಾಲ್, ಟೆನಿಸ್ ಇಂಥ ಆಟಗಳ ನೇರ ಪ್ರಸಾರವೆಲ್ಲ ಸಹಸ್ರಾರು ಕೋಟಿ ರೂಪಾಯಿಗಳ ವ್ಯವಹಾರ. ಆಟದ ಪಟ್ಟು, ಚಲನೆ, ವೇಗ ಎಲ್ಲವೂ ಟಿವಿಯ ಅಗತ್ಯಕ್ಕೆ ತಕ್ಕಂತೆ ನಿಯಂತ್ರಿತವಾಗುತ್ತವೆ. ಐಪಿಲ್ ಪ್ರಸಾರದಲ್ಲಿ ಸ್ಟ್ರಾಟಜಿಕ್ ಟೈಮ್ ಔಟ್ ಅನ್ನುವ ವಿರಾಮ ಆಟಗಾರರಿಗೆ ಬೇಡದಿದ್ದರೂ, ಪ್ರೇಕ್ಷಕರಿಗೆ ಬೇಡದಿದ್ದರೂ ಜಾಹಿರಾತಿಗೆ ಬೇಕು, ವ್ಯವಹಾರಕ್ಕೆ ಬೇಕು.

 

ಮನರಂಜನೆ ಮನರಂಜನೆಯಲ್ಲ. ಅದು ಉದ್ರೇಕಿಸುವ, ಕೆರಳಿಸುವ, ಭಯಗೊಳಿಸುವ, ಮನಸ್ಸನ್ನು ಉಲ್ಲಾಸಗೊಳಿಸುವ ನೆಪದಲ್ಲಿ ಜಡಗೊಳಿಸುವ ಕೋಟಿಗಟ್ಟಲೆಯ ವ್ಯವಹಾರ. ವಾರ್ತೆಗಳು ಕೇವಲ ವಾರ್ತೆಗಳಲ್ಲ, ಇರುವ ಅಧಿಕಾರ ವ್ಯವಸ್ಥೆಯನ್ನು ಪೋಷಿಸುತ್ತ ಬದಲಾವಣೆಯ ಭ್ರಮೆ ಹುಟ್ಟಿಸಿ ಇರುವ ಸ್ಥಿತಿಯನ್ನೇ ಮುಂದುವರೆಸುವ ಜಾಣತನ. ಇದಕ್ಕೆಲ್ಲ ಬಳಕೆಯಾಗುವ ಮನುಷ್ಯ ಭಾಷೆ ಮತ್ತು ದೃಶ್ಯಭಾಷೆ ನಿಜದ ದರ್ಶನವಾಗದಂತೆ ಅಡ್ಡವಾಗಿ ಎಳೆದ ತೆರೆ.ಕ್ರೀಡೆ, ವಾರ್ತೆ, ನೇರಪ್ರಸಾರವೇ ಇರಲಿ ಎಲ್ಲವೂ ಮೂಲತಃ ಮನರಂಜನೆಯೇ ಆಗಿದೆ ನಮ್ಮ ಮಾಧ್ಯಮಗಳಲ್ಲಿ. ಮನರಂಜನೆ ಅನ್ನುವುದು ಮನಸ್ಸಿಗೆ ವಿರಾಮ ನೀಡುವ, ಸುಖ ಕೊಡುವ, ಅಸಂದಿಗ್ಧವಾದ ಕಾಲ್ಪನಿಕ ಲೋಕವೊಂದರ ನಿರ್ಮಾಣ.ಮನರಂಜನೆ ಅನ್ನುವುದು ಸರ್ವಸಮರ್ಪಕವಾದ ಆದರ್ಶಲೋಕವೊಂದರ ಹಂಬಲ. ಮನುಷ್ಯರ ಬದುಕು ಹೀಗೆ ವ್ಯವಸ್ಥೆಗೊಂಡರೆ ಎಷ್ಟು ಚೆನ್ನ ಎಂಬ, ನಿಜವನ್ನು ಮರೆಯಲು ಬಯಸುವ, ದಿನನಿತ್ಯದ ಮಾಮೂಲಿಗಿಂತ ಬೇರೆಯಾದ್ದು ಬೇಕು ಅನ್ನುವ ಹಳಹಳಿಕೆ.ಸಮಾಜದಲ್ಲಿ ನಿಜವಾಗಿ ಇರುವ ಸಂಘರ್ಷಗಳನ್ನು, ಬದುಕಿನ ನಿಜವಾದ ಕೊರತೆಗಳನ್ನು ಪರಿಹರಿಸಿಕೊಳ್ಳಲು ಮನುಷ್ಯ ಮನಸ್ಸು ಕಂಡುಕೊಂಡಿರುವ ಒಂದು ದಾರಿ ಸಮೂಹಮಾಧ್ಯಮದ್ದು. ಈ ನಿಜದಿಂದ ಪಾರಾಗುವ ಆಸೆಯನ್ನು ತೃಪ್ತಿಪಡಿಸುತ್ತದೆಂದೇ ಟಿವಿ ಅಷ್ಟೊಂದು ಪ್ರಬಲವಾದ ಶಕ್ತಿಯಾಗಿ ಬೆಳೆದಿರುವುದು.ದಣಿವು, ದುಡಿಮೆಯ ಗಾಣ, ಏಕಾಂಗಿತನ, ನಗರ ಬದುಕಿನ ಒತ್ತಡ ಇವೆಲ್ಲ `ನಿಜ~. ಇದಕ್ಕೆ ಆದರ್ಶಮಯವಾದ ಪರಿಹಾರವೆಂದರೆ ಚೈತನ್ಯಶೀಲತೆ, ದಣಿವೇ ಇಲ್ಲದ ಕ್ರಿಯಾಶೀಲತೆ, ಮನುಷ್ಯ ಶಕ್ತಿಯ ಪೂರ್ಣ ಬಳಕೆ ಮತ್ತು ಕ್ರಿಯೆಯಲ್ಲಿ ತೊಡಗುವ ಮಗ್ನತೆ.

 

ಒಂದು ಬಾಟಲಿ ತಂಪು ಪಾನೀಯಕ್ಕೆ ಬೆಟ್ಟದ ತುದಿಯಿಂದ ಹಾರುವ, ಮನೆಗಳ ಚಾವಣಿಗಳನ್ನು ನೆಗೆದು ದಾಟುವ ಹುಡುಗರ ಜಾಹಿರಾತು ಮನಸ್ಸಿಗೆ ತಂದುಕೊಳ್ಳಿ. ಫುಟ್‌ಬಾಲ್ ಆಟದಲ್ಲೋ ಕ್ರಿಕೆಟ್ಟಿನಲ್ಲೋ ಆಟಗಾರರ ಶಕ್ತಿ, ಸಾಮರ್ಥ್ಯ, ಕೌಶಲ, ಅವು ಬಳಕೆಯಾದ ಕ್ಷಣಗಳನ್ನು ತಕ್ಷಣ ತಕ್ಷಣವೇ ಮತ್ತೆ ಮತ್ತೆ ನಿಧಾನವಾಗಿ ತೋರಿಸುವ ರಿಪ್ಲೇಗಳನ್ನು ನೆನೆದುಕೊಳ್ಳಿ.ನಿಜವಾದ ಏಕಾಂಗಿತನಕ್ಕೆ ಪ್ರತಿಯಾಗಿ ಆಟಗಾರರನ್ನು ಮೈಮರೆತು ಪ್ರೋತ್ಸಾಹಿಸುವ ಕುಣಿದು ಕುಪ್ಪಳಿಸುವ ಜನಸಮೂಹವನ್ನು ಟಿವಿ ತೋರುವುದನ್ನು ನೆನೆದುಕೊಳ್ಳಿ. ವಾರ್ತೆಗಳಲ್ಲಿ ಚುಟುಕಾಗಿ ಬರುವ ಸುದ್ದಿಗಳು, ಘಟನೆಗಳ ನೇರ ಪ್ರಸಾರಗಳನ್ನು ನೆನೆದುಕೊಳ್ಳಿ. ದಣಿವಿನಿಂದ ಹುಟ್ಟುವ ಮನದ ಗಸಣೆಗೆ ಇವೆಲ್ಲ ಪರಿಹಾರವೇ?ಸಮಾಜದ ವಾಸ್ತವದಲ್ಲಿ ಕೊರತೆ ಇದೆ, ನಿಜವಾದ ಬಡತನವಿದೆ, ಸಂಪತ್ತಿನ ಅಸಮಾನ ಹಂಚಿಕೆ ಇದೆ. ಇದಕ್ಕೆ ಪ್ರತಿಯಾದ ಆದರ್ಶದ ಹಂಬಲವೆಂದರೆ ಸಮೃದ್ಧಿಯದು, ಕೊರತೆ ಇಲ್ಲದ ಬದುಕಿನದು, ಲೋಕದ ಸುಖಗಳನ್ನು ಅನುಭವಿಸುವುದಕ್ಕೆ ಸಾಕಷ್ಟು ದುಡ್ಡು ಮತ್ತು ವಿರಾಮ ಇರುವ ಸ್ಥಿತಿಯದು. ಟಿವಿಯ ಜಾಹಿರಾತುಗಳ ಲೋಕ ಇಂಥ ಸಮೃದ್ಧಿಯದು.

 

ಅಲ್ಲಿ ಎಲ್ಲರೂ ಆರೋಗ್ಯವಂತರು, ರೂಪವಂತರು, ಸುಖಿಗಳು, ಅಪಾರವಾದ ಬಿಡುವು ಇರುವವರು, ಹೊಳಪು ಕೂದಲು, ಹೊಳಪು ಹಲ್ಲು, ಹೊಳಪು ಉಡುಪು- ಜಾಹಿರಾತುಗಳು ಕಟ್ಟಿಕೊಡುವ ಲೋಕದ ಮುಂದೆ ಪಂಪ ಹೇಳುವ ಉತ್ತಮಭೋಗಭೂಮಿ ಏನೇನೂ ಅಲ್ಲ. ಇನ್ನು ಕ್ರೀಡೆಗಳ ಪ್ರಸಾರವನ್ನು ನೆನಪು ಮಾಡಿಕೊಳ್ಳಿ.

 

ಎಷ್ಟೊಂದು ಬಣ್ಣಗಳು, ತಂಡವನ್ನು ಹುರಿದುಂಬಿಸಲು ಕುಣಿಯುವ ಬಾಲೆಯರು, ಆಟವಾಡುವುದಕ್ಕೇ ಕೋಟಿ ಕೋಟಿ ಸಂಬಳ ಪಡೆಯುವ ಆಟಗಾರರು ಕಣ್ಣು ತುಂಬಿ ಮೈಮರೆಸುತ್ತಾರೆ.ಇನ್ನು ವಾರ್ತೆಗಳಲ್ಲಿ ನಡೆದ ಘಟನೆಯನ್ನು ನಡೆಯುತ್ತಿರುವ ಕ್ಷಣದಲ್ಲೇ ಸರೆಹಿಡಿದು ತೋರುವ ತಾಂತ್ರಿಕತೆ, ಜಾತ್ರೆ ಉತ್ಸವ ಮೆರವಣಿಗೆ ಪ್ರತಿಭಟನೆಗಳ ದೃಶ್ಯಾವಳಿ, ಅಥವಾ ವಿನಾಶದ `ಸುಂದರ~ ಚಿತ್ರಣ. ನಿಜದ ಕೊರತೆಗೂ ಬಡತನಕ್ಕೂ ಅಸಮಾನತೆಗೂ ಇವೆಲ್ಲ ಪರಿಹಾರವೇ?ನಿಜದ ಬದುಕಿನಲ್ಲಿ ಡಲ್ ಆದ ಕ್ಷಣಗಳದ್ದೇ ಕಾರುಬಾರು; ಏಕತಾನತೆ, ಇಂದಿನಂತೆಯೇ ನಾಳೆಯೂ ಎಂಬಂತೆ ಎರಕ ಹೊಯ್ದ ಬಾಳಿನ ರೀತಿ, ಯಾಂತ್ರಿಕವಾಗಿ ಸಾಗುವ ದಿನ ನಿತ್ಯದ ವರ್ತನೆ ಇವಕ್ಕೆ ಪ್ರತಿಯಾದ ಆದರ್ಶವೆಂದರೆ ಭಾವತೀವ್ರತೆಯದ್ದು, ಭಾವಗಳನ್ನು ನೇರವಾಗಿ ಅನುಭವಿಸುವ, ವ್ಯಕ್ತಪಡಿಸುವ ಅವಕಾಶವಿರುವ ಲೋಕದ್ದು.

 

ಟಿವಿ ಜಾಹಿರಾತಿನಲ್ಲಿ ವ್ಯಕ್ತವಾಗುವಂಥ ಮುಕ್ತ ಆನಂದ; ಮೂರೂವರೆ ಗಂಟೆಗಳ ಅವಧಿಯಲ್ಲಿ ನಡೆಯುವ ಐಪಿಲ್ ಆಟಗಳ ಪ್ರಸಾರದಲ್ಲಿ ಕಾಣುವ ಸ್ಪರ್ಧೆ, ಕಿರು ಅವಧಿಯಲ್ಲಿ ಮನಸ್ಸು ಅನುಭವಿಸುವ ಕುತೂಹಲ, ನಿರೀಕ್ಷೆ, ಸಮಾಧಾನ, ನಿರಾಸೆ; ವಾರ್ತೆಗಳ ಪ್ರಸಾರದಲ್ಲಿ ಹಿಂಸೆ ಅಪಘಾತಗಳು ಪ್ರಮುಖವಾದ ಸುದ್ದಿಗಳ ಆಯ್ಕೆ, ಘಟನೆಗಳ ನಾಟಕೀಯತೆಗೆ ಒತ್ತುಕೊಡುವ ದೃಶ್ಯಾವಳಿ ಇವೆಲ್ಲ ನೀರಸ ಬದುಕಿನ ಏಕತಾನಕ್ಕೆ ಪರಿಹಾರವೇ?ನಿಜದ ಬದುಕಿನಲ್ಲಿ ಹುನ್ನಾರಗಳು ಇರುತ್ತವೆ. ಆದರ್ಶಲೋಕವೆಂದರೆ ಮುಕ್ತಮನಸ್ಸಿನ, ಪ್ರಾಮಾಣಿಕ ಸಂಬಂಧಗಳ, ವಿಶ್ವಾಸ ಮತ್ತು ಪ್ರೀತಿಯ ಲೋಕ. ಕ್ರೀಡೆಗಳ ಪ್ರಸಾರ ನೋಡಿದರೆ ಅಲ್ಲಿ ತಂಡದ ಐಕ್ಯತೆ, ತಮ್ಮ ತಂಡವನ್ನು ಪ್ರಾಮಾಣಿಕವಾಗಿ ಬೆಂಬಲಿಸುವ ಪ್ರೇಕ್ಷಕರು, ಆಟಗಾರರ ಸಾಧನೆಗಳ ಪ್ರಾಮಾಣಿಕ ಅಂಕಿಅಂಶ ಇವು ಸಹಜ ಸಮಾನತೆಯ ಭ್ರಮೆಯನ್ನು ಹುಟ್ಟಿಸುತ್ತವೆ.ಇನ್ನು ವಾರ್ತೆಗಳಂತೂ ಎಲ್ಲ ಘಟನೆಗಳನ್ನೂ ತೀರ ಸರಳಗೊಳಿಸಿ, ಸುಲಭಗೊಳಿಸಿ ಬದುಕಿನ ನಿಜ ಸಂಕೀರ್ಣತೆಯೇ ಸುಳ್ಳು ಅನ್ನುವ ಹಾಗೆ ಬಿಂಬಿಸುತ್ತವಲ್ಲವೇ?

ಕೇಳಬೇಕಾದ್ದನ್ನು ಕೇಳದಂತೆ ಮಾಡುವ, ನೋಡಬೇಕಾದ್ದನ್ನು ನೋಡದಂತೆ ತಡೆಯುವ, ಅಧಿಕಾರವುಳ್ಳ ಸಮೂಹ ಯಾವುದನ್ನು ಹೇಗೆ ನೋಡಬೇಕೆಂದು ಬಯಸುತ್ತದೋ ಹಾಗೆ ಮಾತ್ರ ನೋಡಿ ಅರಿಯಲು ಒತ್ತಾಯಿಸುವ ಸಮೂಹಮಾಧ್ಯಮದ ಭಾಷೆಯ ಬಗ್ಗೆ ಎಚ್ಚರವಿರುವುದು ಅಗತ್ಯವಲ್ಲವೇ? olnswamy@gmail.com

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.