ಮಂಗಳವಾರ, ಏಪ್ರಿಲ್ 20, 2021
32 °C

ಮಾನವತ್ವದಿಂದ ದೈವತ್ವದೆಡೆಗೆ ಸಾಗುವ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ: ಉಪವಾಸ ಎಲ್ಲಾ ಧರ್ಮಗಳಲ್ಲೂ ಕಂಡು ಬರುವ ವಿಶಿಷ್ಟ ಹಾಗೂ ವಿಶೇಷ ಆಚರಣೆ. ವಿವಿಧ ಧರ್ಮಗಳ ಉಪವಾಸದ ಪದ್ಧತಿ ಹಾಗೂ ಕ್ರಮಗಳಲ್ಲಿ ಭಿನ್ನತೆ ಕಂಡರೂ, ಉಪವಾಸ ಮೂಲ ಉದ್ದೇಶದಲ್ಲಿ ಯಾವುದೇ ಗುರುತರವಾದ ಬದಲಾವಣೆ ಕಾಣಲು ಸಾಧ್ಯವಿಲ್ಲ.



ರಂಜಾನ್ ಎಂದೊಡನೆ ರೋಝಾ (ಉಪವಾಸ) ಆಚರಣೆ ಎಂಬುದು ಸಾಮಾನ್ಯವಾಗಿ ಎಲ್ಲರಲ್ಲೂ ಮೂಡುವ ಕಲ್ಪನೆ. ರಂಜಾನ್ ಉದ್ದೇಶ ಕೇವಲ ರೋಝಾ ಆಚರಣೆ ಮಾತ್ರವಲ್ಲ. ಮಾನವ ತನ್ನ ಸತತ ಪ್ರಯತ್ನದಿಂದ ಮಾನವತ್ವದ ಪರಾಕಾಷ್ಠೆ ಅಥವಾ ಅದಕ್ಕಿಂತಲೂ ಎತ್ತರದ ದೈವತ್ವಮಟ್ಟಕ್ಕೆ ಏರಲು ಪ್ರೇರಣೆ ನೀಡುವ ಆಚರಣೆಯ ಒಂದು ಭಾಗ ಮಾತ್ರ.



ಇಸ್ಲಾಂ ಕ್ಯಾಲೆಂಡರ್ ಪ್ರಕಾರ ಪ್ರಸ್ತುತ ಹಿಜಿರಾ ಶಕೆ 1433 ನಡೆಯುತ್ತಿದೆ. ಪ್ರತಿಯೊಬ್ಬ ಇಸ್ಲಾಂ ಧರ್ಮದ ಅನುಯಾಯಿಗಳು ಕಲ್ಮಾ ಪಡನಾ, ನಮಾಜ್, ರೋಝಾ, ಜಕಾತ್ ಹಾಗೂ ಹಜ್ ಯಾತ್ರೆ ಎಂಬ ಪ್ರಮುಖವಾದ ಐದು ತತ್ವಗಳಗೆ ಬದ್ಧರಾಗಿಬೇಕು. ಪವಿತ್ರ ಕುರ್‌ಆನ್‌ನಲ್ಲಿರುವ ಆಯತ್‌ಗಳನ್ನು ಪಠಣ ಮಾಡುವುದು. ದಿನಂಪ್ರತಿ `ಫಝರ್~, `ಜೋಹರ್~, `ಅಸರ್~, `ಮಗ್‌ರೀಬ್~ ಹಾಗೂ `ಇಷಾ~ ಸಮಯದಲ್ಲಿ ನಮಾಜ್ ಮಾಡುವುದು ಪದ್ಧತಿಯಾಗಿದೆ.



ಇಸ್ಲಾಂ ಧರ್ಮದ ಹಿಜಿರಾ ಕ್ಯಾಲೆಂಡರ್‌ನ 9ನೇ ತಿಂಗಳಾದ ರಂಜಾನ್ ಸಮಯದಲ್ಲಿ ನಿರಂತರ 30ದಿನಗಳ ರೋಝಾ ಆಚರಣೆ. ರಂಜಾನ್ ಹಬ್ಬದಲ್ಲಿ ಇಸ್ಲಾಂ ಅನುಯಾಯಿಗಳು ವಾರ್ಷಿಕ ಸಂಪತ್ತಿನ ಆಧಾರದ ಮೇಲೆ ಶೇ. 2.5ರಷ್ಟು ಹಣವನ್ನು ಜಕಾತ್(ತೆರಿಗೆ) ರೂಪದಲ್ಲಿ ನೀಡಬೇಕು. ಹೀಗೆ ತೆಗೆದ ಜಕಾತ್ ಹಣವನ್ನು ಸಮಾಜದ ಒಳಿತಿಗಾಗಿ, ಬಡವರಿಗೆ ದಾನವಾಗಿ ಅಥವಾ ಉತ್ತಮ ಕಾರ್ಯಗಳಿಗೆ ಬಳಸಬೇಕು ಎಂಬುದು ನಿಯಮ. ಇಸ್ಲಾಂ ಧರ್ಮದಲ್ಲಿ ಹಜ್ ಯಾತ್ರೆ ಅತ್ಯಂತ ಪವಿತ್ರವಾದುದು. ಪ್ರತಿಯೊಬ್ಬ ಮುಸ್ಲಿಂ ತನ್ನ ಜೀವತಾವಧಿಯಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಮಾಡಬೇಕು ಎಂಬ ಹೆಬ್ಬಯಕೆ ಹೊಂದಿರುತ್ತಾರೆ.



ರಂಜಾನ್ ಹಬ್ಬದ ಪೂರ್ವದಲ್ಲಿ ಆಚರಿಸುವ ರೋಝಾ, ದೈಹಿಕ ಆರೋಗ್ಯ ಮಾತ್ರವಲ್ಲದೇ ಮಾನಸಿಕ ಆರೋಗ್ಯ, ಸಾಮಾಜಿಕ ಜವಾಬ್ದಾರಿ ಹೆಚ್ಚಿಸುತ್ತದೆ. ತಮಗಿಂತ ಕೆಳಸ್ತರದಲ್ಲಿರುವವರೂ ತಮ್ಮಂತೆ ಹಬ್ಬ ಆಚರಿಸಲು ಬೇಕಾದ ಕನಿಷ್ಠ ಅಗತ್ಯಗಳನ್ನು ಪೂರೈಸುವ ಮೂಲಕ ಸಾಮಾಜಿಕ ಕಳಕಳಿ ವ್ಯಕ್ತಪಡಿಸುತ್ತಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.