ಮಂಗಳವಾರ, ಮೇ 24, 2022
21 °C

ಮಾನವ ಜನುಮ ದೊಡ್ಡದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫುಟ್‌ಪಾತ್‌ನಲ್ಲಿ ಮಲಗಿದ ಜನ ಉದಾಸೀನತೆಯಿಂದ ನೋಡುತ್ತಾರೆ ಚಂದ್ರನನ್ನುಅವರ ಕಣ್ಣು ಹೊಂದಿಕೊಂಡಿರುತ್ತದೆ ಈ ಭೂಮಿಯ ಕತ್ತಲಿಗೆ

ಅಸ್ತಂಗತವಾದ ಎಲ್ಲ ಆಧಾರಗಳ ಪಳೆಯುಳಿಕೆ ಹುಡುಕುತ್ತಿದ್ದಾನೆ ಒಬ್ಬ ಏಕಾಂಗಿಸಂಜೆಯಾಯಿತು ಮನೆುಯಿದ್ದವರು ಮರುಳುತ್ತಿದ್ದಾರೆ ಮನೆಗೆ

ಯಾರ ದುಃಖವನ್ನು ಯಾರು ತಾನೇ ಇಲ್ಲಿ ಪಡೆಯುತ್ತಾರೆಸಿಕ್ಕರಷ್ಟೇ ಸುಖ ಒಂದು ಒಳ್ಳೆಯ ಹೃದಯ ನಾಲ್ಕು ಹೆಜ್ಜೆ ಜೊತೆಗೆ

ಒಂದು ಸಲ ಬಂದು ನನ್ನ ಕಲಾಕೃತಿ ಪೂರ್ಣಗೊಳಿಸಿ ಹೋಗುಅರ್ಧ ಕೃತಿಯೊಂದು ಶಾಪವಿದ್ದಂತೆ ಕಲಾವಿದನಿಗೆ

ನಿನ್ನೊಂದಿಗೆ ಮಹಾನಗರದಲ್ಲಿದ್ದ ನನಗಂತೂ ಅರಿವಾಗಿವೆ ಅಪರಾಧ ಅನಿವಾರ್ಯವೆಂದುದೇವರು ಸಿಟ್ಟಾಗಬಹುದೆಂಬ ಭಯ ಇಟ್ಟರೆ ಅಷ್ಟು ಕಡಿಮೆ ಬೆಲೆ ಅವನು ಕೊಟ್ಟ ಬದುಕಿಗೆ

-ರೇವಾ

(`ನಿಷೇಧಿತ ಹಾಡುಗಳು~ ಸಂಕಲನದಿಂದ)
ಭಾಷೆಯ ಹೊಸ ತಾಜಾತನವೇ ಅಪ್ಪಟ ಕಾವ್ಯದ ಮೂಲಗುಣ ಎನ್ನುವುದನ್ನು ಕವಯಿತ್ರಿ ಈವಾ ಅವರ ಈ ಕವನ ಸೂಚಿಸುತ್ತಿರುವಂತಿದೆ. ಆಧುನಿಕ ಬದುಕಿನ ಅಸಂಗತತೆಯನ್ನು, ದುರಂತದ ನೆಲೆಗಳನ್ನು ದಟ್ಟ ವಿಷಾದದಲ್ಲಿ ಮನದಟ್ಟು ಮಾಡಿಕೊಳ್ಳುವುದರಿಂದ ಆರಂಭವಾಗುವ ಈ ಕವನ, ಕೊನೆಗೂ ಬದುಕು ದೊಡ್ಡದು ಎನ್ನುವ ಜೀವನ ಶ್ರದ್ಧೆಯಲ್ಲಿ ಮುಕ್ತಾಯವಾಗುತ್ತದೆ. ಅಪರಿಮಿತದ ಕತ್ತಲೆಯ ಬದುಕಿನಲ್ಲಿ ಚಂದ್ರನ ಬಗೆಗೆ ಮೋಹ ಹುಟ್ಟುವುದು ಸಹಜವಲ್ಲ. ದೂರದ ಚಂದಿರ ಹುಟ್ಟಿಸುವುದು ಜತೆಗಿರುವನು ಚಂದಿರ ಎನ್ನುವ ಬೆಳಕಿನ ಭರವಸೆಯನ್ನಲ್ಲ, ದೂರದ ಅಸಾಧ್ಯತೆಯನ್ನು. ಚಂದ್ರನ ಬಗೆಗಿನ ಆಸೆಯೇ ಅವಾಸ್ತವಿಕ ಎನ್ನಿಸುವಷ್ಟು ಕತ್ತಲೆಯಲ್ಲಿ ಹುದುಗಿ ಹೋಗಿರುವ ಬದುಕಿಗೆ ಕಾಲಕ್ರಮೇಣ ಚಂದ್ರನ ಬಗೆಗೆ ಉಳಿಯುವುದು ಉದಾಸೀನವೇ.ಏನೆಲ್ಲ ಕಾಳಜಿಗಳಲ್ಲಿ, ಭರವಸೆಗಳಲ್ಲಿ, ಕೊಡು-ಕೊಳ್ಳುವಿಕೆಯಲ್ಲಿ ಜತನವಾಗಿ ಕಟ್ಟಿಕೊಂಡ ಸಂಬಂಧಗಳ ಜೊತೆಯಲ್ಲಿದ್ದು ಮನುಷ್ಯ ಏಕಾಂಗಿಯೇ. ಯಾರ ಬದುಕಿನ ದುಃಖವನ್ನು ಯಾರೂ ಹೊರಲಾರರು. ನಿಜವೇ.

 

ಆದರೆ ಹೊರೆಯನ್ನು ಸಹನೀಯವಾಗಿಸುವ, ನಾನಿದ್ದೇನೆ ಎಂದು ಅಭಯ ಕೊಡುವ ಹೃದಯದ ಜೊತೆಗಿನ ಸಹ ಪ್ರಯಾಣ ಮಾಡಬಲ್ಲ ಜೀವ ಚೈತನ್ಯವೊಂದು  ಬದುಕಿಗೆ ದಿವ್ಯತೆಯನ್ನು, ಪೂರ್ಣತೆಯನ್ನು ತಂದು ಕೊಡಬಲ್ಲದು. ಆದರೆ ಇದಾದರೂ ಸಿಕ್ಕಿತೆನ್ನುವ ಯಾವ ಖಾತರಿಯೂ ಇಲ್ಲ.ಹೀಗಿದ್ದೂ ಈ ಹುಡುಕಾಟವೇ, ನಿರೀಕ್ಷೆಯೇ ಬದುಕನ್ನು ಸದಾ ಚಲನಶೀಲವಾಗಿ, ಆಶಾಪೂರ್ಣವಾಗಿ ಇಡುತ್ತದೆ. `ಒಂದು ಸಲ ಬಂದು ನನ್ನ ಕಲಾಕೃತಿ ಪೂರ್ಣಗೊಳಿಸಿ ಹೋಗು~ ಎಂಬ ಸಾಲುಗಳು ಬದುಕಿನ ಕಲಾಕೃತಿಯನ್ನು ಪೂರ್ಣಗೊಳಿಸುವ ಸಂಗಾತಿ ಯಾರೂ, ಯಾವುದೂ, ಯಾವಾಗ ಬೇಕಾದರೂ ಆಗಬಹುದೆನ್ನುವ ಸಾಧ್ಯತೆಯನ್ನು ಮುಕ್ತವಾಗಿರಿಸುತ್ತದೆ.

 

ಬದುಕಿನ ಕೊನೆಯವರೆಗೂ, ಸಾವು ತಾನೇ ತಾನಾಗಿ ಬಂದು ಬದುಕು ಕೊನೆಯಾಗುವವರೆಗೂ ಅದಕ್ಕಾಗಿ ಕಾಯುತ್ತಲೇ ಇರುವ, ಸಿಕ್ಕಾಗ ಬದುಕಿನ ಸಾರ್ಥಕತೆಯನ್ನು ಅನುಭವಿಸುವ, ಅನೇಕ ಸರಿಗಳು ಮತ್ತು ತಪ್ಪುಗಳೊಂದಿಗೆ ಬದುಕುವುದು ಈ ಬದುಕಿಗೆ ತೋರಬೇಕಾದ ಕನಿಷ್ಠ ಮರ್ಯಾದೆ.ಕೊನೆಯ ಸಾಲುಗಳು ಆಸ್ತಿಕ-ನಾಸ್ತಿಕ ಭೇದವನ್ನು ಮೀರಿ ಬದುಕಿನ ನೆಲೆಯನ್ನು ಅದರ ಬೆಲೆಯನ್ನು, ಅದರ ಬೆಲೆ ಕಳೆಯುವ ಹಕ್ಕು ಯಾರಿಗೂ ಇಲ್ಲವೆನ್ನುವುದನ್ನು ಅಪೂರ್ವವಾಗಿ ಧ್ವನಿಸುತ್ತವೆ.

 

ಬದುಕನ್ನು ಕಲಾಕೃತಿಗೆ ಹೋಲಿಸುತ್ತಲೇ ಅದು ಅಪೂರ್ಣವಾಗಿ ಉಳಿಯಬಹುದಾದ ಪರಮ ವಾಸ್ತವವನ್ನು ಈ ಕವನ ಮುಖಾಮುಖಿಯಾಗಿಸು ಬಗೆಯೇ ಕುತೂಹಲ ಹುಟ್ಟಿಸುತ್ತದೆ. ಎದುರಿಸಲು ಅಥವಾ ಅನುಭವಿಸಲು ಅಸಾಧ್ಯವೆನಿಸುವಂತಹ ವಾಸ್ತವ ವಿವರಗಳನ್ನು ಬೆನ್ನಿಗಲ್ಲ, ಕಣ್ಣೆದುರಿಗಿಟ್ಟುಕೊಂಡೇ ಬದುಕನ್ನು ಗೌರವಿಸುವ ಅ ಮೂಲಕ ಮನುಷ್ಯ ಮತ್ತು ಮನುಷ್ಯ ಚೈತನ್ಯವನ್ನು ಎತ್ತಿ ಹಿಡಿಯುವ ಪ್ರಯತ್ನವನ್ನು ಮಾಡುತ್ತದೆ ಎಂದೇ ನನಗೆ ಇದು ಪ್ರಿಯವಾದ ಕವನವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.