ಶನಿವಾರ, ಮೇ 8, 2021
26 °C

ಮಾನವ ಪರ ಸಮಾಜ ನಿರ್ಮಿಸೋಣ: ನ್ಯಾ. ಹೆಗ್ಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡುಬಿದಿರೆ: `ನಮ್ಮೊಳಗೆ ರಾಜಕೀಯ, ಸಾಮಾಜಿಕ, ಧಾರ್ಮಿಕ ಹೀಗೆ ಬೇರೆ ಬೇರೆ ಗುಂಪುಗಳಿದ್ದರೂ ಮೊದಲು ನಾವು ಮಾನವರು ಎಂಬ ಭಾವನೆ ನಮ್ಮಲ್ಲಿ ಬರಬೇಕು. ಆಗ ಇವೆಲ್ಲಾ ಒಂದೇ ಗುಂಪುಗಳಾಗುತ್ತವೆ. ಇಂತಹ ಮಾನವ ಸಮಾಜ ನಿರ್ಮಾಣ ವಾಗಬೇಕು~ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.ಇಲ್ಲಿನ ಸಮಾಜ ಮಂದಿರ ಸಭಾದ ವತಿಯಿಂದ ನಿರ್ಮಾಣವಾದ ವಾಣಿಜ್ಯ ಮಂದಿರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. `ಇತ್ತೀಚಿನ ದಿನಗಳಲ್ಲಿ ನಮ್ಮಳಗೆ ಸಾಮಾಜಿಕ ಕಾಳಜಿ ಕಡಿಮೆಯಾಗುತ್ತಿದೆ. ಕೈತುಂಬಾ ಸಂಬಳ ಪಡೆಯುವ ಸರಕಾರಿ ಅಧಿಕಾರಿಗಳು, ಸರಕಾರದ ಸೌಲಭ್ಯಗಳನ್ನು ಪಡೆಯುತ್ತಿರುವ ಜನಪ್ರತಿನಿಧಿಗಳು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿಲ್ಲ. ಈ ಮನೋಭಾವ ಇದೇ ರೀತಿ ಮುಂದು ವರಿದರೆ ಸಮಾಜದಲ್ಲಿ ಖಂಡಿತ ಗೊಂದಲದ ವಾತಾವರಣ ನಿರ್ಮಾಣ ವಾಗಬಹುದು~ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಭಾರತದಲ್ಲಿ ಒಳ್ಳೆಯ ಸಂವಿಧಾನ ವಿದೆ. ಸಮಾಜದ ಅತ್ಯಂತ ಕೆಳವರ್ಗದ ವನಿಗೂ ನ್ಯಾಯ ಸಿಗುವುದಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಆದರೆ ಭ್ರಷ್ಚಾಚಾರ, ಮಾನವೀಯ ಮೌಲ್ಯಗಳ ಕುಸಿತದಿಂದಾಗಿ ಬಡವರು ಬಡವ ರಾಗಿಯೆ ಉಳಿದರೆ  ಶ್ರೀಮಂತರು ಮತ್ತೆ ಮತ್ತೆ ಶ್ರೀಮಂತರಾಗುತ್ತಿದ್ದಾರೆ ಎಂದರು. ಭ್ರಷ್ಟರು ಮಾನವರಲ್ಲ. ಮಾನ ವರೆನಿಸಿಕೊಂಡವರು ಭ್ರಷ್ಟರಾಗುವುದಿಲ್ಲ. ಭ್ರಷ್ಟರನ್ನು ಹುಡುಕಲು ಕೇವಲ ಐದು ಬೆರಳುಗಳು ಸಾಕು ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಶಾಸಕ ಅಭಯಚಂದ್ರ ಜೈನ್ ಮೂಡುಬಿದಿರೆಯ ಅಭಿವೃದ್ಧಿಯಲ್ಲಿ ಸಮಾಜ ಮಂದಿರದ ಕೊಡುಗೆ ಅಪಾರವಾದುದು ಎಂದರು. ಸಮಾಜ ಮಂದಿರ ಸಭಾದ ಅಧ್ಯಕ್ಷ ಡಾ.ಎಲ್.ಸಿ ಸೋನ್ಸ್ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಮಾಜಿ ಸಚಿವ ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಪುಂಡಿಕಾಯ್ ಗಣಪಯ್ಯ ಭಟ್, ಸಂಪತ್ ಸಾಮ್ರಾಜ್ಯ ಇದ್ದರು.`ಪ್ರಾಮಾಣಿಕರು ಬರಲಿ~:

ಮೂಡುಬಿದಿರೆ: ಲೋಕಾಯುಕ್ತರಾಗಿ ಬರುವವರು ಪ್ರಾಮಾಣಿಕರು ಹಾಗೂ ಧೈರ್ಯಶಾಲಿಗಳಾಗಿರಬೇಕು. ಒತ್ತಡಕ್ಕೆ ಮಣಿಯದೆ, ಟೀಕೆ ಟಿಪ್ಪಣಿಗಳಿಗೆ ಅಂಜದೆ ಕೆಲಸ ಮಾಡುವಂತಿರಬೇಕು ಎಂದು  ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.ಪತ್ರಕರ್ತರ ಜತೆ ಮಾತನಾಡಿದ ಅವರು, `ನನ್ನ ವಿರುದ್ಧ ಐದು ಪ್ರಕರಣಗಳು ದಾಖಲಾಗಿವೆ. ನಾನು ಅಂತಹ ತಪ್ಪು ಮಾಡಿಲ್ಲ ಎಂಬ ವಿಶ್ವಾಸ ನನಗಿರುವುದರಿಂದ ನನ್ನ ಮೇಲಿನ ಪ್ರಕರಣಗಳ ಬಗ್ಗೆ ಭಯ ಇಲ್ಲ~ ಎಂದರು.ರಾಜ್ಯಕ್ಕೆ ಲೋಕಾಯುಕ್ತ ಅಗತ್ಯ ಇದೆ. ಲೋಕಾಯುಕ್ತ ಎಂದರೆ ಕೇವಲ ಭ್ರಷ್ಟರನ್ನು ಹಿಡಿಯುವುದಕ್ಲ್ಕೆ ಇರುವ ವ್ಯವಸ್ಥೆ ಅಲ್ಲ. ಆಡಳಿತದಲ್ಲಾಗುವ ನ್ಯೂನತೆಗಳನ್ನು ಸರಿಪಡಿಸುವ ಜವಬ್ದಾರಿಯೂ ಅದಕ್ಕಿದೆ. ಆದರೆ ಈ ಹುದ್ದೆಗೆ ನೇಮಕಾತಿಯ ಕ್ರಮದಲ್ಲಿ ಮತ್ತು ಪ್ರಾಮಾಣಿಕರನ್ನು ಆಯ್ಕೆ ಮಾಡುವಲ್ಲಿ ಸರಕಾರ ವಿಫಲವಾಗಿದೆ.ಸರಕಾರಕ್ಕೂ ಲೋಕಾಯುಕ್ತರು ಬೇಡವೆಂದು ಕಾಣಿಸುತ್ತದೆ. ಈ ಸಂಸ್ಥೆಯನ್ನು ಮುಚ್ಚುವ ಪ್ರಯತ್ನ ನಡೆಯುತ್ತಿದೆ. ಅದಕ್ಕಾಗಿ ನೇಮಕಾತಿಯನ್ನು ವಿಳಂಬ ಮಾಡುತ್ತಿದೆ ಎಂದರು. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅವಿಭಜಿತ ದ.ಕ. ಜಿಲ್ಲೆಯ ಜನ ಬುದ್ಧಿವಂತರು ಮತ್ತು ಪ್ರಜ್ಞಾವಂತರೆನಿಸಿಕೊಂಡಿದ್ದಾರೆ.ತಮಗಾದ ಅನ್ಯಾಯವನ್ನು ಪ್ರಶ್ನಿಸುವ ಧೈರ್ಯವನ್ನು ತೋರಿಸುತ್ತಿರುವುದರಿಂದ ಇಲ್ಲಿ ಭ್ರಷ್ಟಾಚಾರ ಕಡಿಮೆ ಇದೆ. `ಜನಪ್ರತಿನಿಧಿಗಳು ಜನರ ಕೆಲಸ  ಮಾಡುವಾಗ ರಾಜಕೀಯ ಮಾಡಬೇಡಿ. ಜನರ ಸಾಮಾಜಿಕ ಅಗತ್ಯಗಳಿಗೆ ಕೈಜೋಡಿಸಿ~ ಎಂದು ಸಲಹೆಯಿತ್ತರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.