ಮಂಗಳವಾರ, ಮೇ 24, 2022
31 °C
`ಜಿಲ್ಲಾ ಜೈನ ಡೈರೆಕ್ಟರಿ' ಬಿಡುಗಡೆಗೊಳಿಸಿದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ

`ಮಾನವ ಪಾಪಾತ್ಮನಾಗದೇ ಪರಮಾತ್ಮನಾಗಬೇಕು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: `ಮಾನವ ಜನ್ಮ ಶ್ರೇಷ್ಠವಾಗಬೇಕಾದರೆ ಆತ ಪಾಪಾತ್ಮನಾಗದೇ ಪರಮಾತ್ಮನಾಗ ಬೇಕು' ಎಂದು ಶ್ರೀಕ್ಷೇತ್ರ ಕನಕಗಿರಿಯ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.ಮಹಾವೀರ ಸಂಘ, ಪಾರ್ಶ್ವನಾಥ ಜಿನಮಂದಿರ ಟ್ರಸ್ಟ್, ಮಹಾವೀರ ಯುವಕರ ಸಂಘ, ಭಾರತೀಯ ಜೈನ ಮಿಲನ್, ಪದ್ಮಾಂಬಾ ಮಹಿಳಾ ಸಮಾಜ, ಮಹಾವೀರ ಯುವ ಮಂಚ್, ಜೈನ ಅಧ್ಯಯನ ಸಂಸ್ಥೆ ದಾವಣಗೆರೆ ಶಾಖೆ ನಗರದ ಎಂಸಿಸಿ `ಬಿ' ಬಡಾವಣೆಯಲ್ಲಿ ಜಿನಮಂದಿರದ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ `ಯಜಮಾನ ಸವಾಲು (ಇಂದ್ರ- ಇಂದ್ರಾಣಿ) ಬೋಲಿ' ಕಾರ್ಯಕ್ರಮದಲ್ಲಿ `ಜಿಲ್ಲಾ ಜೈನ ಡೈರೆಕ್ಟರಿ' ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.ಮಾನವನ ಆತ್ಮ ಪರಮಾತ್ಮನಾಗಬೇಕು ಎಂಬುದು ಎಲ್ಲ ದಾರ್ಶನಿಕರ ಆಶಯ. ಜ್ಞಾನ ಸಂಪಾದಿಸುತ್ತಾ ಮಾನವ ವಿಕಾಸ ಹೊಂದಬೇಕು. ದೀರ್ಘ ಇತಿಹಾಸ ಹೊಂದಿರುವ ಜೈನ ಸಮಾಜ ಇದೇ ತತ್ವ ಸಾರುತ್ತದೆ. ಯಾರಿಗೂ ಕೇಡು ಬಗೆಯಬಾರದು ಎಂದು ತಿಳಿಸುತ್ತದೆ ಎಂದರು.`ನಮ್ಮಷ್ಟು ಕಷ್ಟ ಯಾರಿಗೂ ಇಲ್ಲ ಎಂದು ಹೇಳುತ್ತಿರುತ್ತೇನೆ. ದೇವತೆಗಳಿಗೂ ಕಷ್ಟವಿದೆ ಎಂದು ಜೈನಶಾಸ್ತ್ರ ಹೇಳುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರಾಣಿ ಪಕ್ಷಿಗಳ ನೋವನ್ನು ಅರಿಯುವುದನ್ನು ಮಾನವ ಬಿಟ್ಟುಬಿಟ್ಟಿದ್ದಾನೆ. ಯಾವುದೇ ಪ್ರಾಣಿ ಪಕ್ಷಿಯೂ ದುಃಖ ಪಡಬಾರದು ಎಂಬುದಾಗಿ ಜೈನಧರ್ಮ ಬಯಸುತ್ತದೆ' ಎಂದು ತಿಳಿಸಿದರು.ಪರಿಸರ ಸಂರಕ್ಷಿಸಬೇಕು ಎಂದು ವಿಶ್ವದಾದ್ಯಂತ ನಿಯಮ ರೂಪಿಸಲಾಗುತ್ತಿದೆ. ಆದರೆ, ಇದನ್ನು ಹಿಂದೆಯೇ ಜೈನಧರ್ಮ ಹೇಳಿಬಿಟ್ಟಿದೆ. ಇನ್ನೊಂದು ಜೀವವನ್ನು ರಕ್ಷಿಸುವ ಕರ್ತವ್ಯ ನಿನ್ನದು ಎಂದು ಧರ್ಮ ಹೇಳುತ್ತದೆ. ಇದಕ್ಕಾಗಿ ಪರಮಾತ್ಮನ ದಾರಿಯಲ್ಲಿ ಸಾಗಬೇಕು ಎಂದು ಹೇಳಿದರು.ಜೈನ ಸಮಾಜದವರು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾರೆ. ಹೀಗಾಗಿ, ಬೆಂಗಳೂರಿನಂಥ ನಗರಗಳಲ್ಲಿ ಜೈನ ಸಮಾಜದವರ ಮನೆಗಳ ನಡುವೆ ವಾಸಿಸಲು ಇತರರು ಬಯಸುತ್ತಾರೆ ಎಂದರು.ಜಿನಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ನವೆಂಬರ್ 20ರಿಂದ 24ರವರೆಗೆ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವವನ್ನು ಅದ್ದೂರಿಯಾಗಿ ಆಯೋಜಿಸಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು. ಕರ್ನಾಟಕದ ಮಧ್ಯ ಭಾಗದಲ್ಲಿರುವ ದಾವಣಗೆರೆ ರಾಜ್ಯದ ರಾಜಧಾನಿಯಾಗಬೇಕಿತ್ತು ಎಂದು ಅಭಿಪ್ರಾಯಪಟ್ಟರು.`ನಮ್ಮ ಸಮಾಜ ಹೇಗಿದೆ, ಸತ್ವವೇನು ಎಂಬುದನ್ನು ನೋಡಿಕೊಳ್ಳಲು ಪತ್ರಿಕೆಗಳು ಬೇಕು. ಪತ್ರಿಕೆಗಳು ಸಮಾಜದ ಕನ್ನಡಿ ಇದ್ದಂತೆ. ಆಗು ಹೋಗುಗಳು, ಅಂಕುಡೊಂಕುಗಳು ಪತ್ರಿಕೆಗಳಿಂದ ಗೊತ್ತಾಗುತ್ತವೆ. ಹೀಗಾಗಿ, ಎಲ್ಲರೂ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸಮಾಜ ಉತ್ತಮಪಡಿಸಲು ಪ್ರಖರ ಮಾರ್ಗದರ್ಶನವನ್ನು ಪತ್ರಕರ್ತರು ಮಾಡುತ್ತಿದ್ದಾರೆ' ಎಂದು ಶ್ಲಾಘಿಸಿದರು.`ಗೊಮ್ಮಟವಾಣಿ' ಸಂಪಾದಕ ಎಸ್.ಎನ್.ಅಶೋಕ್ ಕುಮಾರ್, `ತೀರ್ಥಂಕರರು ನಡೆದ ಹಾದಿಯಲ್ಲಿ ನಾವು ಆಗಬೇಕು. ಅವರನ್ನು ನಿತ್ಯವೂ ಸ್ಮರಿಸಬೇಕು. ವಿಶ್ವದ ಚರಿತ್ರೆಯಲ್ಲಿ ಬಾಹುಬಲಿಯ ತ್ಯಾಗ, ವೈರಾಗ್ಯ ಅತ್ಯಂತ ದೊಡ್ಡ ಸ್ಥಾನ ಪಡೆದಿದೆ' ಎಂದರು. ಸುಧರ್ಮ ಸಾಗರ್ ನೇತೃತ್ವ ವಹಿಸಿದ್ದರು. ಮಹಾವೀರ ಸಂಘದ ಅಧ್ಯಕ್ಷ ಜಿ.ಎಸ್.ಅಜಿತ್‌ಕುಮಾರ್, ಕಾರ್ಯದರ್ಶಿ ಡಿ.ಸುನಿಲ್‌ಕುಮಾರ್, ಸುದರ್ಶನ ಕುಮಾರ್, ಎಸ್.ಬಿ.ಜಿನದತ್ತ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.