ಸೋಮವಾರ, ಏಪ್ರಿಲ್ 19, 2021
23 °C

ಮಾನಸಿಕ ಶ್ರಮ-ಮನೋರೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: `ಯಂತ್ರಗಳು ದೈಹಿಕ ಶ್ರಮವನ್ನು ಮಾನಸಿಕ ಶ್ರಮವನ್ನಾಗಿ ಪರಿವರ್ತಿಸಿವೆ. ಮಾನಸಿಕ ಶ್ರಮ ಸೃಷ್ಟಿಸುವ ಒತ್ತಡದಿಂದ ಮನುಷ್ಯರು ಕ್ರಮೇಣ ಮನೋರೋಗಿಗಳಾಗುವ ಅಪಾಯವಿದೆ~ ಎಂದು ಹಿರಿಯ ರಂಗಕರ್ಮಿ, ಸಾಹಿತಿ ಪ್ರಸನ್ನ ಹೆಗ್ಗೋಡು ಎಚ್ಚರಿಸಿದರು.ಪತ್ರಕರ್ತರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಇಲ್ಲಿನ ರೋಶನಿ ನಿಲಯ ಕಾಲೇಜಿನಲ್ಲಿ ಶನಿವಾರ ನಡೆದ ಕನ್ನಡ ಪತ್ರಿಕೋದ್ಯಮ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.`ದೈಹಿಕ ಶ್ರಮ ಪ್ರಕೃತಿ ಸಹಜವಾದುದು. ಹಿಂದಿನವರು ದೈಹಿಕ ಶ್ರಮದ ಕೆಲಸಕ್ಕೆ ಆದ್ಯತೆ ನೀಡುತ್ತಿದರು. ಅದರಿಂದ ರಾತ್ರಿ ನೆಮ್ಮದಿಯ ನಿದ್ದೆ ಬರುತ್ತಿತ್ತು. ಹಿಂದಿನವರು ನಿಧಾನವಾಗಿ ಬದುಕುತ್ತಿದ್ದರು.ಇಂದಿನವರು ಅವಸರದಿಂದ ಬದುಕುತ್ತಿದ್ದಾರೆ. ಬದುಕನ್ನು ಯಾಂತ್ರೀಕರಣಗೊಳಿಸಿದ ಫಲವಾಗಿ ಜೀವನ ಸುಲಭಗೊಂಡಿದೆ ಎಂಬ ಭ್ರಮೆಯಲ್ಲಿ ನಾವಿದ್ದೇವೆ. ಯಂತ್ರ ಬಳಕೆ ಹೆಚ್ಚಿದಂತೆ ಮನುಷ್ಯರ ಚಡಪಡಿಕೆಯೂ ಹೆಚ್ಚಿದೆ. ನಾವು ಮತ್ತೆ ಹಿಂದಿನ, ನೆಮ್ಮದಿಯ ಬದುಕಿಗೆ ಮರಳುವ ನಿರ್ಧಾರ ತಳೆಯಬೇಕಿದೆ~ ಎಂದರು.`ಪತ್ರಕರ್ತ ಮಾನವೀಯತೆಯಲ್ಲಿ, ಪ್ರಾಮಾಣಿಕತೆಯಲ್ಲಿ ನಂಬಿಕೆ ಇಟ್ಟುಕೊಂಡು ಆ ಕ್ಷಣದ ಬೆಳವಣಿಗೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾನೆ ಎನ್ನುವುದು ಮುಖ್ಯ. ರಂಗ ಕಲಾವಿದನ ಮೂಲಕ ಪಾತ್ರ ಮಾತನಾಡುವಂತೆ ಪತ್ರಕರ್ತನ ಮೂಲಕ ವರದಿಗಳು ಸಂವಹನ ನಡೆಸಬೇಕು. ಪ್ರತಿ ವರದಿಯಲ್ಲೂ ಪತ್ರಕರ್ತನ ಮಾನವೀಯ ಮುಖ ವ್ಯಕ್ತವಾಗಬೇಕು~ ಎಂದರು.ಹಿರಿಯ ಪತ್ರಕರ್ತ ಶಶಿಧರ ಭಟ್ ಮಾತನಾಡಿ, `ಪತ್ರಕರ್ತರಲ್ಲಿ ಇಂದು ಪ್ರತಿಭಟನೆಯ ಧ್ವನಿ ಮರೆಯಾಗುತ್ತಿದೆ. ಪ್ರತಿ ಪತ್ರಕರ್ತನಲ್ಲಿ ಸಿಟ್ಟು ಇರಬೇಕು. ಅದು ಆಂತರ್ಯದಿಂದ ಹುಟ್ಟುವಂತಹದ್ದು. ಅದಕ್ಕೆ ನೈತಿಕತೆ ಬೇಕಾಗುತ್ತದೆ. ಈ ಸಾತ್ವಿಕ ಪ್ರತಿಭಟನೆ ಯಂತ್ರಗಳ ಪ್ರಾಧಾನ್ಯತೆಯನ್ನು ಕಡಿಮೆ ಮಾಡುತ್ತದೆ~ ಎಂದರು.

`ಮಾಧ್ಯಮಗಳ ಆದ್ಯತೆಗಳು ಇಂದು ಬದಲಾಗಿವೆ. ಪ್ರಭುತ್ವವನ್ನು ಪ್ರಶ್ನಿಸುವ ದಿಟ್ಟತನ ಇಂದು ಉಳಿದಿಲ್ಲ.ಈ ಬೆಳವಣಿಗೆ ಬಗ್ಗೆ ಪತ್ರಕರ್ತರು ಸಿನಿಕರಾಗದೆ ಬಹುಜನರ ಹಿತಕ್ಕಾಗಿ ದುಡಿಯುವ ಬದ್ಧತೆ ಉಳಿಸಿಕೊಂಡು ಆಶಾವಾದ ಹೊಂದಬೇಕು~ ಎಂದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಆಶಾ ನಾಯಕ್ ಮಾತನಾಡಿ, `ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಕಾನೂನಿನ ಬಗ್ಗೆ ಬಹುತೇಕರಿಗೆ ಪರಿಜ್ಞಾನ ಇಲ್ಲ. ಮಕ್ಕಳನ್ನೂ ಸರಕಿನಂತೆ ಕಾಣುವ ಪ್ರವೃತ್ತಿ ಹಲವರಲ್ಲಿದೆ. ಮಕ್ಕಳು ಹಿರಿಯರಿಂದ ಪ್ರೀತಿ ವಾತ್ಸಲ್ಯ ಬಯಸುತ್ತಾರೆ.ಹಿರಿಯರು ಮಕ್ಕಳ ಭಾವನೆಗೆ ಸ್ಪಂದಿಸಬೇಕು. ಮಕ್ಕಳ ಹಕ್ಕುಗಳು ಉಲ್ಲಂಘನೆ ಆಗುವ ಪ್ರಸಂಗಗಳು ಕಂಡುಬಂದರೆ ಮಕ್ಕ ಸಹಾಯವಾಣಿ 1098ಕ್ಕೆ ಕರೆ ಮಾಡಬಹುದು. ಅಥವಾ ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೆ ತರಬಹುದು~ ಎಂದರು.ಸಂವಾದದಲ್ಲಿ ಪತ್ರಕರ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಪಾಲ್ಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.