ಸೋಮವಾರ, ಮಾರ್ಚ್ 1, 2021
28 °C
ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮ

ಮಾರಿದಿಬ್ಬ: ಯಾವುದೇ ಮನೆಯಲ್ಲಿ ಶೌಚಾಲಯವೇ ಇಲ್ಲ!

ಪ್ರಜಾವಾಣಿ ವಾರ್ತೆ/ಕೆ.ವಿ.ನಾಗರಾಜ್ Updated:

ಅಕ್ಷರ ಗಾತ್ರ : | |

ಮಾರಿದಿಬ್ಬ: ಯಾವುದೇ ಮನೆಯಲ್ಲಿ ಶೌಚಾಲಯವೇ ಇಲ್ಲ!

ಮಾರಿದಿಬ್ಬ (ಎನ್.ಆರ್.ಪುರ):   ಸರ್ಕಾರ  ಸಂಪೂರ್ಣ ಸ್ವಚ್ಛತಾ ಆಂದೋಲನದ ಮೂಲಕ ಶೌಚಾಲಯಗಳನ್ನು ನಿರ್ಮಿಸಿ ಕೊಳ್ಳಲು ಸಾಕಷ್ಟು ಅನುದಾನವನ್ನು ನೀಡುತ್ತಿದ್ದರು ಸಹ ತಾಲ್ಲೂಕಿನ ಮುತ್ತಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ ಮಾರಿದಿಬ್ಬ ಗ್ರಾಮದ ಯಾವುದೇ ಮನೆಗಳಲ್ಲೂ ಶೌಚಾಲ ಯವೇ ಇಲ್ಲದ ಸ್ಥಿತಿಯಿದೆ!ತಾಲ್ಲೂಕು ಕೇಂದ್ರದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ಮಾರಿದಿಬ್ಬ ಗ್ರಾಮದಲ್ಲಿ ಹೆಚ್ಚಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದವರೇ ಹೆಚ್ಚಾಗಿ ವಾಸವಾಗಿದ್ದಾರೆ.ಸುಮಾರು 100 ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರವು ಇದೆ.  ಇಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆಗಳಿದ್ದು ಯಾವುದೇ  ಮನೆಯವರು ಶೌಚಾಲಯ ಗಳನ್ನು ನಿರ್ಮಿಸಿಕೊಂಡಿಲ್ಲ.

ಈ ಹಿಂದೆ ಮಾಜಿ ಸಚಿವ ಗೋವಿಂದೇಗೌಡರ ಕಾಲದಲ್ಲಿ ಕೆಲವು ಮನೆಗಳಿಗೆ ಹಕ್ಕು ಪತ್ರ ನೀಡಿದ್ದು ಬಿಟ್ಟರೆ ಇತ್ತೀಚಿನ ಮನೆಗಳಿಗೆ ಹಕ್ಕುಪತ್ರವು ಇಲ್ಲವಾಗಿದೆ ಎನ್ನುತ್ತಾರೆ ಗ್ರಾಮಸ್ಥ ದೇವಪ್ಪ.ತಾಲ್ಲೂಕು ಕೇಂದ್ರದ ಗಡಿ ಪ್ರದೇಶ ದಲ್ಲಿರುವ ಈ ಗ್ರಾಮಕ್ಕೆ ಹೋಗುವ ಸುಮಾರು 2ಕಿ.ಮೀ ರಸ್ತೆ ಗೆ ಕಳೆದ 9 ವರ್ಷಗಳ ಹಿಂದೆ ಜಲ್ಲಿ ಹಾಕಲಾಗಿತ್ತು. ಅದು ಸಂಪೂರ್ಣವಾಗಿ ಕಿತ್ತು ಹೋಗಿರುವುದರಿಂದ ವಾಹನಗಳು ಸೇರಿದಂತೆ ಗ್ರಾಮಕ್ಕೆ ನಡೆದುಕೊಂಡು ಹೋಗುವುದೇ ದುಸ್ತರವಾಗಿದೆ.ಹಲವು ವರ್ಷಗಳಿಂದ ರಸ್ತೆ ದುರಸ್ತಿ ಪಡಿಸಿಕೊಡುವಂತೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮ ಸ್ಥರು. ಇಲ್ಲಿ ಯಾವುದೇ ಸಾರಿಗೆ ಸೌಲಭ್ಯ ವಿಲ್ಲದಿರುವುದರಿಂದ ಗ್ರಾಮಸ್ಥರು ಸಂಪೂರ್ಣವಾಗಿ ದ್ವಿಚಕ್ರವಾಹನಗಳು ಹಾಗೂ ಆಟೊಗಳನ್ನು ಅವಲಂಬಿಸಿ ದ್ದಾರೆ. ಕಚೇರಿ ಕೆಲಸವನ್ನು ಹೊರತು ಪಡಿಸಿ  ಬೇರೆಲ್ಲಾ ವ್ಯವಹಾರಗಳಿಗೂ ಈ ಗ್ರಾಮಸ್ಥರು  ಪಕ್ಕದ ಶಿವಮೊಗ್ಗ ನಗರ ವನ್ನು ಅವಲಂಬಿಸಿದ್ದಾರೆ.ವಿದ್ಯುತ್ ಹಾಗೂ ಕುಡಿಯುವ ನೀರಿನ ಸೌಲಭ್ಯವಿದೆ. ಆದರೆ ಕುಡಿಯುವ ನೀರಿಗೆ ಒಂದೇ ಮೋಟರ್ ಅಳವಡಿಸಿ ರುವುದರಿಂದ ಅದು ಕೈಕೊಟ್ಟರೆ ನೀರಿನ ಸಮಸ್ಯೆ ಕಟ್ಟಿಟ್ಟಬುತ್ತಿ. ಶಾಲಾ ಮಕ್ಕಳಿಗೆ ಬಿಸಿಯೂಟಕ್ಕೂ ನೀರಿರುವುದಿಲ್ಲ. ಗ್ರಾಮಕ್ಕೆ ಸಮೀಪವಿರುವ ಭದ್ರಾಹಿ ನ್ನೀರಿನ್ನು ಅವಲಂಭಿಸ ಬೇಕಾಗಿದೆ ಎನ್ನುತ್ತಾರೆ ಗ್ರಾಮಸ್ಥರು. ಚುನಾವಣೆ ಬಂದಾಗ ಮತಕ್ಕಾಗಿ ಇತ್ತ ಮುಖ ಹಾಕುವ ಜನಪ್ರತಿನಿಧಿಗಳು ನಂತರ ಈ ಗ್ರಾಮವನ್ನು ಮರೆತುಬಿಡುತ್ತಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.ನಾವು ಮನೆ ನಿರ್ಮಿಸಿಕೊಂಡ ಹತ್ತು ವರ್ಷಗಳಾಗಿವೆ ಶೌಚಾಲಯ ನಿರ್ಮಿಸಿ ಕೊಡಲು ಪಂಚಾಯಿತಿಯವರು ಈಗ ಮುಂದೆ ಬಂದಿದ್ದಾರೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಗ್ರಾಮಸ್ಥರೊಬ್ಬರು.ಈ ಗ್ರಾಮದಲ್ಲಿರುವ ಜನರು ವಲಸೆ ಜನರಾಗಿದ್ದು, 6 ತಿಂಗಳು ಇಲ್ಲಿ ಉಳಿದ 6 ತಿಂಗಳು ಬೇರೆ ಕಡೆ ವಲಸೆ ಹೋಗುತ್ತಾರೆ. ಅವರಿಗೆ ಶೌಚಾಲಯ ನಿರ್ಮಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸಲು ಸಿಕ್ಕುವುದೇ ಇಲ್ಲ. ಇರುವ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಶೌಚಾಲಯ ನಿರ್ಮಿಸಿಕೊಳ್ಳಲು ಮನ ವೊಲಿಸಿದರು ಆಸಕ್ತಿ ವಹಿಸುವುದಿಲ್ಲ ಎನ್ನುತ್ತಾರೆ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೈಯದ್ ಶಫೀರ್ ಅಹಮ್ಮದ್.ಸಂಬಂಧಪಟ್ಟವರು ಕೂಡಲೇ ಇತ್ತ ಗಮನಹರಿಸಿ ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸುವುದರ ಜತೆಗೆ  ಶೌಚಾಲಯ ನಿರ್ಮಿಸುವತ್ತಲೂ ಗಮನ ಹರಿಸಿದಾಗ ಮಾತ್ರ ಸರ್ಕಾರದ ಸಂಪೂರ್ಣ ಸ್ವಚ್ಛತಾ ಆಂದೋಲನ ಯಶಸ್ವಿಯಾಗಲು ಸಾಧ್ಯ ಎಂಬುದು ಸಾರ್ವಜನಿಕರು ಅಭಿಪ್ರಾಯಪಡುತ್ತಾರೆ.

                                                                                                                                                

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.