ಶನಿವಾರ, ಮಾರ್ಚ್ 6, 2021
21 °C

ಮಾವಿಗೆ ಮಾರಕ ಕಪ್ಪು ಸುತ್ತು ರೋಗ

ಪ್ರಜಾವಾಣಿ ವಾರ್ತೆ/ಆರ್.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

ಮಾವಿಗೆ ಮಾರಕ ಕಪ್ಪು ಸುತ್ತು ರೋಗ

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಾವಿನ ಮರಗಳಿಗೆ ಕಪ್ಪು ಸುತ್ತು ರೋಗ ಕಾಣಿಸಿ ಕೊಂಡಿದೆ. ಇದರಿಂದ ಮಾವಿನ ಕಾಯಿ ಇಳುವರಿ ಕಡಿಮೆಯಾಗುವ ಹಾಗೂ ಮರಗಳ ಬೆಳವಣಿಗೆ ಕುಂಠಿತಗೊಳ್ಳುವ ಭಯ ಬೆಳೆಗಾರರನ್ನು ಕಾಡುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ಮಾವಿನ ಮರಗಳ ಆರೋಗ್ಯ ಏರುಪೇರಾಗಿದೆ. ಯಾವುದೇ ರಕ್ಷಣಾ ಕ್ರಮ ಕೈಗೊಳ್ಳದಿದ್ದರೂ ಫಸಲು ನೀಡುತ್ತಿದ್ದ ಮಾವಿನ ಮರಗಳಿಗೆ ಹಲವು ರೋಗ ಸುತ್ತಿಕೊಂಡಿವೆ. ಈಗ ಮರಗಿಡಗಳನ್ನು ಕಪ್ಪು ಸುತ್ತು ರೋಗ ಕಾಡುತ್ತಿದೆ. ರೆಂಬೆ ಕೊಂಬೆಗಳ ಸುತ್ತ ಕಪ್ಪು ಪಟ್ಟಿಯೊಂದು (ಬ್ಲಾಕ್ ಬ್ಯಾಂಡ್) ನಿರ್ಮಾಣವಾಗಿದ್ದು, ಕೊಂಬೆಗಳ ಅಂದಗೆಟ್ಟಿದೆ. ಸಧ್ಯಕ್ಕೆ ಈ ರೋಗ ಅಧಿಕ ಬೇಡಿಕೆಯುಳ್ಳ ಬಾದಾಮಿ ಜಾತಿಯ ಮಾವಿನ ಗಿಡ ಮರಗಳಲ್ಲಿ ಹೆಚ್ಚಾಗಿ ಕಂಡುಬಂದಿದೆ.ಈ ರೋಗ ಮಾವಿನ ಫಸಲಿನ ಮೇಲೆ  ದುಷ್ಟರಿಣಾಮ ಬೀರುತ್ತದೆ. ರೋಗದ ಪ್ರಾರಂಭದಲ್ಲಿ ಫಸಲು ಕಡಿಮೆಯಾಗುತ್ತದೆ. ಅದನ್ನು ಹಾಗೆಯೇ ಬಿಟ್ಟರೆ ಮರಗಿಡಗಳ ಬೆಳವಣಿಗೆ ನಿರೀಕ್ಷಿತ ಪ್ರಮಾಣದಲ್ಲಿ ಆಗುವುದಿಲ್ಲ ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಎಂ.ಮಲ್ಲಿಕಾರ್ಜುನ ಬಾಬು `ಪ್ರಜಾವಾಣಿ~ಗೆ ತಿಳಿಸಿದರು.ಈ ರೋಗ ಸಿಲೀಂದ್ರದಿಂದ ಬರುವಂತಹುದು. ಕೊಂಬೆಗಳ ಮೇಲೆ ಕಪ್ಪು ಸುತ್ತು ಕಾಣಿಸಿಕೊಂ ಡಲ್ಲಿ ಬೈಟಾಕ್ಸ್ ಔಷಧಿಯನ್ನು ಸಿಂಪಡಿಸ ಬೇಕು. ಬಟ್ಟೆಯಿಂದ ಕಪ್ಪು ಸುತ್ತನ್ನು ಒರೆಸಿ ಔಷಧಿ ಸಿಂಪರಣೆ ಮಾಡುವುದು ಹೆಚ್ಚು ಪರಿಣಾಮಕಾರಿ ಎಂದು ಅವರು ಸಲಹೆ ಮಾಡಿದ್ದಾರೆ.ಇದೊಂದೇ ಅಲ್ಲ. ಬಾದಾಮಿ ಜಾತಿ ಮಾವಿನ ಮರಗಳ ಕಾಂಡ ಒರಟಾಗಿ ಸೀಳುತ್ತಿದ್ದು, ಕಾಂಡ ಕೊರಕ ಹುಳುಗಳ ಬಾಧೆ ಹೆಚ್ಚುತ್ತಿದೆ. ಕೊಂಬೆ ಕೊರಕ ಹುಳುವಿನ ಹಾವಳಿ ಮಿತಿ ಮೀರಿರುವುದು ಬೆಳೆಗಾರರನ್ನು ಚಿಂತೆಗೀಡುಮಾಡಿದೆ. ಆದರೆ ಬೆಳೆಗಾರರು ಅವುಗಳ ನಿವಾರಣೆಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಹಾಗಾಗಿ ಹಾವಳಿ ಹೆಚ್ಚುತ್ತಿದೆ. ಹೀಗೆಯೇ ಮುಂದುವರಿದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ತೋಟಗಾರಿಕಾ ತಜ್ಞರು ಅಭಿಪ್ರಾಯಪಡುತ್ತಾರೆ.ಈ ಬಾರಿ ಸಕಾಲಕ್ಕೆ ಮಳೆಯಾಗದ ಪರಿಣಾಮವಾಗಿ ಮಾವಿನ ಫಸಲು ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ವಾತಾವರಣದಲ್ಲಿ ಅಧಿಕ ಉಷ್ಣತೆಯಿಂದ ಬಹಳಷ್ಟು ಹೀಚು ಉದುರಿ ನೆಲ ಕಚ್ಚಿತು. ಇರುವ ಹೀಚು ಬಹುತೇಕ ಮರಗಳಲ್ಲಿ ಬೆಳವಣಿಗೆ ಇಲ್ಲದೆ ತೀರಾ ಚಿಕ್ಕ ಗಾತ್ರದಲ್ಲಿಯೆ ಉಳಿದಿದೆ.ಇದು ಮಾವಿನ ಆವಕದ ಪ್ರಮಾಣದ ಮೇಲೆ ದುಷ್ಟರಿಣಾಮ ಬೀರಲಿದೆ. ಮಾವಿನ ಮರಗಳು ಎಂದೂ ಒಣಗಿದ್ದಿಲ್ಲ. ಅದರೆ ಈ ಬಾರಿ ಮಾತ್ರ ಅಲ್ಲಲ್ಲಿ ತೇವಾಂಶದ ಕೊರತೆಯಿಂದಾಗಿ ಕೊಂಬೆಗಳು ಒಣಗಿ ನಿಂತಿವೆ. ಕೆಲವು ಕಡೆ ಎಲೆ ಉದುರಿ ಬರಲಾಗಿವೆ. ಎಲೆ ಉದುರಿದ ಮರಗಳಲ್ಲಿ ಫಸಲು ಬಂದಿಲ್ಲ.ಸರಾಸರಿ ಶೇ. 20 ಫಸಲಷ್ಟೇ ಮರಗಳಲ್ಲಿ ಉಳಿದಿದೆ ಎಂದು ಬೆಳೆಗಾರರು ಹೇಳುತ್ತಾರೆ. ತಾಲ್ಲೂಕಿನ ಬಹುತೇಕ ಗ್ರಾಮಿಣರ ಆರ್ಥಿಕ ಸ್ಥಿತಿ ಮಾವಿನ ಫಸಲನ್ನೇ ಅವಲಂಬಿಸಿರುತ್ತದೆ. ಆದರೆ ಮಾವಿನ ಬೆಳೆ ಹದಗೆಟ್ಟು ಬದುಕು ಸಹ ಹದಗೆಡುತ್ತಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.