ಸೋಮವಾರ, ಮೇ 23, 2022
22 °C

ಮಾ... ಮಾ... ಮಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾ... ಮಾ... ಮಾವು

ಮೃಗಶಿರ ಮಳೆಯ ನಂತರ ಮಾವು ತಿನ್ನಬಾರದು ಅಂತ ಹೇಳ್ತಿದ್ರು. ಮಳೆಯಾದ ಮೇಲೆ ಮಾವಿಗೆ ಹುಳ ಬರುತ್ತೆ ಅನ್ನೋದು ಅದಕ್ಕೆ ಕಾರಣವಾಗಿತ್ತು. ಈಗ ಮೃಗಶಿರ ಮಳೆಯಲ್ಲ, ಆಷಾಢ ಆರಂಭವಾದರೂ ಮಾವಿನ ಮೇಳ ಮುಗಿಯುವುದಿಲ್ಲ.ನಗರದ ಟಿವಿ ಟವರ್ ಮುಂದೆ ಬಂದರೆ ಮಾವಿನ ಮೆರವಣಿಗೆಯೇ ಕಾಣಸಿಗುತ್ತದೆ.

ಸಣ್ಣ ಗಾತ್ರದ, ಮುಷ್ಟಿಯಲ್ಲಿ ಹಿಡಿದುಕೊಂಡು ರಸ ಹೀರುವ ಸಕ್ರೆಮಾವಿನಿಂದ ಬೊಗಸೆಯಲ್ಲಿ ಹಿಡಿದುಕೊಳ್ಳುವಷ್ಟು ದೊಡ್ಡ ಮಲಗೋವಾದವರೆಗೂ ಸಾಕಷ್ಟು ವಿಧದ ಹಣ್ಣುಗಳು ಇಲ್ಲಿವೆ.ಹುಳಿಯೇ ಬರದ ಮಲ್ಲಿಕಾ, ಮಾವಿನ ಸೀಸನ್ ಮುಗಿಯುವಾಗ ಕಾಣಿಸಿಕೊಳ್ಳುವ ನೀಲಂ, ಹುಳಿಯೊಗರಿನ ತೋತಾಪುರಿ, ಬಣ್ಣದಿಂದಲೇ ತನ್ನತ್ತ ಸೆಳೆಯುವ ಬೈಗನ್‌ಪಲ್ಲಿ.. ರುಚಿಗೆ ಹೆಸರಾದ ಕೇಸರ್ ಅಲ್ಲದೇ ಇನ್ನಷ್ಟು ಬಗೆಯ ಸ್ಥಳೀಯ ತಳಿಗಳೂ ಲಭ್ಯ ಇವೆ ಇಲ್ಲಿ.20ರಿಂದ 60 ರೂಪಾಯಿ ಕೆಜಿವರೆಗೂ ಬೆಲೆ ಇದೆ. `ಬಾರಕ್ಕ, ಹೆಚ್ಚಿ ಕೊಡ್ತೀನಿ, ಟೇಸ್ಟ್‌ನೋಡಿ ತೊಗೊಳ್ಳಿ~ ಎಂದು ಕೋಲಾರ ಜಿಲ್ಲೆಯಿಂದ ಬಂದಿರುವ ಭಾರತಿ ಎಂಬ ಯುವತಿ ಕರೆಯುತ್ತಾಳೆ.ಭಾರತಿಯೊಂದಿಗೆ ಸ್ಪರ್ಧೆಗಿಳಿಯುವಂತೆ ಅದೇ ಜಿಲ್ಲೆಯ ದೇವ್ರಾಜ ಕೂಗುತ್ತಾನೆ. `ಹೆಚ್ಚಿ ಕೊಡೋದೇನು ಬಂತು, ಬನ್ನಿ ಇಲ್ಲಿ, ಒಂದಿಡೀ ಹಣ್ಣು ತೊಗೊಳ್ಳಿ, ಕಚ್ಚಿ ತಿನ್ನಿ. ಯಾವುದಾದರೂ ಸರಿ... ನೀವೇ ತೊಗೊ ಬನ್ನಿ... ಒಂದೊಂದು ಬಂಗಾರ ಇದ್ದಂಗಿದೆ~ ಬೈಗನ್‌ಪಲ್ಲಿಯ ಹೊಂಬಣ್ಣದ ಹಣ್ಣು ಕೈಯಲ್ಲಿ ಹಿಡಿದು ಕರೆಯುತ್ತಿದ್ದ.`ಇದೀಗ ಒಂದು ತಿಂಗಳಾಯ್ತಕ್ಕ. ಇಲ್ಲೇ ಠಿಕಾಣಿ. ಮಾವಿನ ಸೀಸನ್‌ನಲ್ಲಿ ಇಲ್ಲೇ ಬಂದು ನೆಲೆಸಿಬಿಡ್ತೀವಿ. ಇನ್ನು ಈ ವರ್ಷ ಮಳೆ ಇಲ್ಲ. ಆದರೆ ವ್ಯಾಪಾರವೂ ಅಷ್ಟಕ್ಕಷ್ಟೆ ಇದೆ. ಮಾವಿನ ಬೆಳೆಯೂ ಕಡಿಮೆ ಇತ್ತಲ್ಲ. ಕಳೆದ ವರ್ಷ ರಸ್ತೆಯ ಎರಡೂ ಕಡೆ ಕೂರ್ತಿದ್ವಿ. ಈ ವರ್ಷ ಹೆಚ್ಚಿನ ಜನರು ಬಂದಿಲ್ಲ. ಅಷ್ಟೊಂದು ಇಳುವರಿಯೇ ಇಲ್ಲ...~ ಎಂದು ದೇವ್ರಾಜ ಒಂದೇ ಉಸುರಿನಲ್ಲಿ ಹೇಳ್ತಾನೆ.ಈ ಮಾವು ಮಾರುವವರ ಒಗ್ಗಟ್ಟು ಮಾತ್ರ ಮೆಚ್ಚುವಂಥದ್ದು. ಅವರತ್ತ ಹೆಜ್ಜೆ ಹಾಕಿದೊಡನೆ ಪೈಪೋಟಿಗೆ ಇಳಿದಂತೆ ಕೂಗಿ ಕರೆಯುತ್ತಾರೆ. ಆದರೆ ನೀವು ಒಬ್ಬರ ಬಳಿ ಹೋಗಿ ವ್ಯಾಪಾರಕ್ಕೆ ನಿಂತರೆ ಉಳಿದವರೆಲ್ಲ ಸುಮ್ಮನಾಗುತ್ತಾರೆ. ಇಲ್ಲವೇ ಬೇರೆ ಗ್ರಾಹಕರನ್ನು ಸೆಳೆಯುವಲ್ಲಿ ನಿರತರಾಗ್ತಾರೆ. ಭಾರತಿಯ ಬಳಿ ನೀವು ಹಣ್ಣು ಖರೀದಿಸುತ್ತಿದ್ದರೆ, ದೇವ್ರಾಜ ನಿಮ್ಮನ್ನು ಕೂಗಿ ಕರೆಯುವುದಿಲ್ಲ. ಆದರೆ ಅಲ್ಲಿಂದ ಮುಂದಕ್ಕೆ ಒಂದು ಹೆಜ್ಜೆ ಇಟ್ಟರೆ ಆತ ಕರೆಯದೇ ಇರಲಾರ.ಗಿಳಿಮೂತಿ ಮಾವು, ಹಸಿರು ಮೈಗೆ, ಕೆಂಪು ಮೂಗಿರುವ ಗಿಳಿಮಾವಿಗೆ ಗಾಢವಾದ ವಾಸನೆ. ಇದೇ ಕೊಳ್ಳಿ. ಇದಕ್ಕೆ ಪೌಡರ್ ಹಾಕಿ ಹಣ್ಣು ಮಾಡಲಾಗುವುದಿಲ್ಲ... ಕೆಟ್ಟು ಹೋಗುತ್ತವೆ. ವಾಸನೆ ನೋಡಿ... ಹಣ್ಣು ಮಾಡಿರೋದಲ್ಲ. ಕಾವಿಗೆ ಆಗಿರೋದು ಎಂದೆಲ್ಲ ವಿವರಣೆ ನೀಡ್ತಾರೆ.ಒಂದೆರಡು ಅಂಗಡಿಗಳಲ್ಲಿ ಮಾತ್ರ ಹಸಿರು ಬಣ್ಣದ ದಶೆಹರಿ ಕಂಡು ಬರುತ್ತವೆ. ನೋಡಲು ಆಕರ್ಷಕವಲ್ಲದ ಈ ಹಣ್ಣಿನ ಬೆಲೆ ಮಾತ್ರ ದುಬಾರಿ. ಕೆ.ಜಿಗೆ 70ರಿಂದ 80 ರೂಪಾಯಿ ಹೇಳುತ್ತಾರೆ. ಆದರೆ ದಶೇಹರಿ ತಿಂದವರು ಮಾತ್ರ ಬಲ್ಲರು, ತಿನ್ನುವ ಸುಖವ. ಇದರ ಬಣ್ಣ ಮತ್ತು ಆಕಾರ, ಗಾತ್ರವನ್ನು ನೋಡದೆ ಒಮ್ಮೆ ರುಚಿ ನೋಡಬೇಕು. ರಸ ಮಾಡಿದರೆ ಸಕ್ಕರೆಯೇ ಬೇಡ. ಹಣ್ಣು ತಿಂದರೆ, ನಂತರ ನೀರು ಕುಡಿಯಬೇಕು. ಅಷ್ಟು ಸಿಹಿ ಮತ್ತು ಸವಿ. ಈ ಹಣ್ಣನ್ನು ಸಹ ಕಾರ್ಬೈಡ್ ಬಳಸಿ ಹಣ್ಣು ಮಾಡಲಾಗುವುದಿಲ್ಲ. ಇವು ಕೆಟ್ಟೇ ಹೋಗುತ್ತವೆ.ಆಂಧ್ರಪ್ರದೇಶ, ಹೈದರಾಬಾದ್ ಕರ್ನಾಟಕದಿಂದ ದಶೇಹರಿಯನ್ನು ತರಿಸಿಕೊಳ್ಳಲಾಗುತ್ತದೆ. ಹೊಂಬಣ್ಣದ ರಸಪೂರಿತ ಈ ಹಣ್ಣಿನೊಳಗೆ ವಾಟೆ ಮಾತ್ರ ಹೆಬ್ಬೆರಳಿನ ಗಾತ್ರದ್ದಾಗಿರುತ್ತದೆ. ಅದೂ ಒಮ್ಮೆ ರಸ ಹೀರಿದರೆ, ಎಲ್ಲವೂ ಸ್ವಚ್ಛ.

 ದಶೇಹರಿಗೆ ದಶೇಹರಿಯೇ ಸಾಟಿ ಎಂಬಂತಿದೆ ಈ ಹಣ್ಣಿನ ರುಚಿ. ಇದು ನಾಟಿ ತಳಿ. ಇದಕ್ಕೆ ಸ್ಪರ್ಧೆಗಿಳಿಯುವಂತಿದ್ದರೆ ಅದು ಮಿಸ್ರಿ ಅಥವಾ ಕೇಸರ್‌ಗೆ ಮಾತ್ರ ಸಾಧ್ಯ. ಆದರೂ ಯಾವವೂ ಈ ತಳಿಯ ಹಣ್ಣನ್ನು ಹಿಂದಿಕ್ಕುವುದು ಮಾತ್ರ ಅಸಾಧ್ಯ.

ಇದಲ್ಲದೆ, ರಸಾಲು, ರಸಪುರಿ, ಅಲ್ಫೋನ್ಸಾ ಮಾವುಗಳೂ ಮಾರುಕಟ್ಟೆಯಲ್ಲಿನ್ನೂ ದೊರೆಯುತ್ತಿವೆ.ಮಾಧುರಿ ದೀಕ್ಷಿತ್ ಮಾವು ಪ್ರೀತಿ

ಮಾಧುರಿ ದೀಕ್ಷಿತ್ ಮುಂಬೈಗೆ ಬಂದು ನೆಲೆಸಿದ ನಂತರ ಇದು ಎರಡನೆಯ ಮಾವಿನ ಸೀಸನ್ ಅಂತೆ. ಪುಣೆ-ಮುಂಬೈ ಹೆದ್ದಾರಿಯ ಮೇಲೆ ಬುಟ್ಟಿಗಳಲ್ಲಿಟ್ಟು ಮಾರುವ ಸ್ಥಳೀಯ ತಳಿಗಳೆಂದರೆ ಬಲು ಇಷ್ಟವಂತೆ.ತಮ್ಮ ಮಕ್ಕಳೊಡಗೂಡಿ, ಮಾವನ್ನು ಹೀರಿಯೇ  ತಿಂದರಂತೆ. ಮಾವನ್ನು ಹೆಚ್ಚಿ, ತಿನ್ನುವುದರಲ್ಲಿ ಈ ಸುಖವಿಲ್ಲ. ಮಾವಿನ ರಸ, ಮೊಣಕೈಗುಂಟ ಇಳಿಯುವಂತಿರಬೇಕು. ಬಾಯಿಗೆಲ್ಲ ಅಂಟಿಕೊಳ್ಳಬೇಕು. ಆಗಲೇ ಮಕ್ಕಳು ಮಾವಿನ ಹಣ್ಣು ತಿಂದಂತೆ. ವಾಟೆಗಳನ್ನು ಎಣಿಸುತ್ತ, ತಮ್ಮ ಪರಾಕ್ರಮ ಹೇಳಬೇಕು. ಇದೆಲ್ಲವೂ ಮರೆತೆ ಹೋಗುತ್ತದೇನೋ ಎಂದುಕೊಂಡಿದ್ದೆ ಎಂದೂ ಮಾಧುರಿ ಹೇಳಿದ್ದರು. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.